ಅಕ್ರಮವೂ ನಿಮ್ಮದೇ, ಸಕ್ರಮವೂ ನಿಮ್ಮದೇ
ನಿಮ್ಮ ಪಂಪ್‌ಸೆಟ್‌ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದೀರಾ. ಹಾಗಾದರೆ ಕಂಬ, ಟ್ರಾನ್ಸ್‌ಫಾರ್ಮರ್, ವೈರು ಎಲ್ಲವನ್ನೂ ನೀವೇ ತಂದುಕೊಡಿ. ಹಾಕಿಕೊಡುತ್ತೇವೆ ಎಂದು ವಿದ್ಯುತ್ ಕಂಪನಿಗಳವರು ರೈತರಿಗೆ ಹೇಳಲು ಆರಂಭಿಸಿದ್ದಾರೆ.
ಹಿಂದೆ ಈ ರೀತಿ ಇರಲಿಲ್ಲ. ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದವರು ಪ್ರತಿ ಅಶ್ವಶಕ್ತಿಗೆ ದುಪ್ಪಟ್ಟು ಶುಲ್ಕ ನೀಡಿದರೆ ಸಾಕು ಕಂಪನಿಯವರೇ ಸರ್ಕಾರದ ಹಣದಲ್ಲಿ ಕಂಬ, ಟ್ರಾನ್ಸ್‌ಫಾರ್ಮರ್ ವೈರು ಎಲ್ಲವನ್ನೂ ತಂದು ಹಾಕಿಕೊಡುತ್ತಿದ್ದರು. ಈಗ ಸರ್ಕಾರದಲ್ಲಿ ಹಣವಿಲ್ಲ. ಕರೆಂಟ್ ಮಾತ್ರ ಉಚಿತ. ಉಳಿದ ಎಲ್ಲದ್ದಕ್ಕೂ ರೈತರು ಹಣ ಕೊಡಬೇಕಾದ ಪರಿಸ್ಥಿತಿ ಬಂದಿದೆ.
ಅಕ್ರಮ-ಸಕ್ರಮ ಎಂದರೇನು
ಕೆಇಆರ್‌ಸಿ ನಿಯಮಗಳ ಪ್ರಕಾರ ವಿದ್ಯುತ್ ಸಂಪರ್ಕ ಕೇಳಿದವರಿಗೆ ನಿಗದಿತ ಸಮಯದಲ್ಲಿ ನೀಡಲೇಬೇಕು. ಅನಧಿಕೃತವಾಗಿ ಯಾರೂ ವಿದ್ಯುತ್ ಸಂಪರ್ಕ ಪಡೆಯಲು ಬರುವುದಿಲ್ಲ. ನೀರಾವರಿ ಪಂಪ್‌ಸೆಟ್‌ಗಳು ಮಾತ್ರ ಇದಕ್ಕೆ ಅಪವಾದ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದು ಜಾರಿಗೆ ಬಂದಿತು. ಆಗ ರೈತರು ಐಪಿ ಸೆಟ್‌ಗಳಿಗೆ ಹಾಕಿದ್ದ ಮೀಟರ್ ಕಿತ್ತು ಹಾಕಿದರು. ಅಂದಿನಿಂದ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಅಲ್ಲದೆ ಮೀಟರ್ ಹಾಕಲು ಯಾವ ಸರ್ಕಾರವೂ ಮುಂದೆ ಬಂದಿಲ್ಲ. ರೈತರ ಕೆಂಗಣ್ಣಿಗೆ ಗುರಿಯಾಗಲು ಯಾರೂ ಸಿದ್ಧರಿಲ್ಲ. ಪಂಪ್‌ಸೆಟ್‌ಗಳ ಸಂಖ್ಯೆ ಅಧಿಕಗೊಂಡಂತೆ ಕಂಪನಿಗಳಿಗೆ ಸಂಪರ್ಕಕೊಡುವುದು ನಿಧಾನವಾಯಿತು. ಆಗ ಕಂಪನಿಗಳು ರೈತರಿಗೆ ನೇರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದು ಎಂದು ಹೇಳಿತು. ಆಗ ಆರಂಭವಾಗಿದ್ದೇ ಅಕ್ರಮ ಪಂಪ್‌ಸೆಟ್.
ಈ ರೀತಿ ವಿದ್ಯುತ್ ಸಂಪರ್ಕ ಪಡೆದುಕೊಂಡವರು ಮತ್ತೆ ಅರ್ಜಿ ಸಲ್ಲಿಸಿ ದಂಡ ಕಟ್ಟಿ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಬಹುದು. ಇದಕ್ಕೆ ಹೆಚ್ಚುವರಿ ವಿದ್ಯುತ್ ಕಂಬ, ವೈರು, ಟ್ರಾನ್ಸ್‌ಫಾರ್ಮರ್‌ಗಳು ಬೇಕು. ಸರ್ಕಾರ ಇವುಗಳಿಗೆ ನೆರವು ನೀಡಲು ಆರಂಭಿಸಿದ ಮೇಲೆ ಎಲ್ಲ ಕಡೆ ಅಕ್ರಮ-ಸಕ್ರಮ ಕಾರ್ಯಕ್ರಮ ಆರಂಭವಾಯಿತು. ೧೦ ಅಶ್ವಶಕ್ತಿವರೆಗೆ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದರಿಂದ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸದೆ ಇದ್ದಲ್ಲಿ ಸರ್ಕಾರದಿಂದ ಸಹಾಯಧನ ಬರುತ್ತಿರಲಿಲ್ಲ. ಅದರಿಂದ ಎಲ್ಲ ವಿದ್ಯುತ್ ಕಂಪನಿಗಳು ಅಕ್ರಮ-ಸಕ್ರಮ ಯೋಜನೆ ಕೈಗೊಂಡವು.
ಪ್ರತಿ ವರ್ಷ ಹಂತಹಂತವಾಗಿ ಅಕ್ರಮ-ಸಕ್ರಮ ಕಾರ್ಯ ನಡೆಯುತ್ತ ಬಂದಿತು. ಈಗಲೂ ಇದು ಮುಂದುವರಿದಿದೆ. ಇದುವರೆಗೆ ಸರ್ಕಾರವೇ ಹೆಚ್ಚುವರಿ ಕಂಬ, ಟ್ರಾರ್ನ್ಸ್ಫಾರ್ಮರ್, ವೈರುಗಳನ್ನು ಒದಗಿಸುತ್ತಿತ್ತು. ಈಗ ಎಲ್ಲ ಗ್ರಾಹಕರಿಗೆ ಪ್ರತಿ ತಿಂಗಳು ೨೦೦ ಯೂನಿಟ್ ಉಚಿತ ಎಂದು ಸರ್ಕಾರ ಘೋಷಿಸಿದ ಮೇಲೆ ರೈತರ ಪಂಪ್‌ಸೆಟ್‌ಗಳ ಅಕ್ರಮ-ಸಕ್ರಮಕ್ಕೆ ಹಣವಿಲ್ಲದಂತಾಗಿದೆ. ಅದರಿಂದ ರೈತರನ್ನೇ ಎಲ್ಲವನ್ನೂ ತರುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಇನ್ನೂ ೧.೫೦ ಲಕ್ಷ ರೈತರು ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ.
ಟ್ರಾನ್ಸ್‌ಫಾರ್ಮರ್
ರೈತರಿಗೆ ವಿದ್ಯುತ್ ಒದಗಿಸಲು ಗ್ರಾಮೀಣ ಪ್ರದೇಶದಲ್ಲಿ ವಿತರಣ ಟ್ರಾನ್ಸ್‌ಫಾರ್ಮರ್‌ಗಳನ್ನು ನಿರ್ವಹಣೆ ಮಾಡುವುದು ಬಹಳ ಮುಖ್ಯ. ನಗರ ಪ್ರದೇಶಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳಿರುತ್ತವೆ. ಹಳ್ಳಿಗಳಲ್ಲಿ ಯಾವಾಗಲೂ ಟ್ರಾನ್ಸ್‌ಫಾರ್ಮರ್‌ಗಳ ಕೊರತೆ ಇದ್ದೇ ಇರುತ್ತದೆ. ಪ್ರತಿಯೊಂದು ಟ್ರಾನ್ಸ್‌ಫಾರ್ಮರ್ ಕೆಲಸ ಮಾಡುವಾಗ ಸ್ವಲ್ಪ ಭಾಗ ವಿದ್ಯುತ್ ಬಳಸಿಕೊಳ್ಳುತ್ತದೆ. ಅದರಿಂದ ವಿದ್ಯುತ್ ನಷ್ಟವಾಗುವುದು ಖಚಿತ. ಟ್ರಾನ್ಸ್‌ಫಾರ್ಮರ್‌ಗಳನ್ನು ಅದರ ಸಾಮರ್ಥ್ಯಕ್ಕೆ ತಕ್ಕಂತೆ ಪರಿಪೂರ್ಣವಾಗಿ ಬಳಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ವಿದ್ಯುತ್ ವಿತರಣೆಗಿಂತ ವಿದ್ಯುತ್ ನಷ್ಟ ಅಧಿಕಗೊಳ್ಳುತ್ತದೆ.
ನಗರಗಳಲ್ಲಿ ಪ್ರತಿ ಟ್ರಾನ್ಸ್‌ಫಾರ್ಮರ್ ಸಾಮರ್ಥ್ಯ ಶೇ.೫೦ ರಷ್ಟು ಮಾತ್ರ ಬಳಕೆಯಾಗುತ್ತಿರುತ್ತದೆ. ಓವರ್ ಲೋಡ್ ಆಗುವುದಿಲ್ಲ. ಇದಕ್ಕೆ ತದ್ವಿರುದ್ಧ ಹಳ್ಳಿಗಳಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳು ಓವರ್ ಲೋಡ್ ಆಗುವುದು ಸಾಮಾನ್ಯ. ಹೀಗಾಗಿ ರೈತರನ್ನೇ ಟಿಸಿ ತನ್ನಿ ಎಂದು ಅಧಿಕಾರಿಗಳು ಹೇಳುವುದು ಸಾಮಾನ್ಯ ಸಂಗತಿಯಾಗಿದೆ. ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಅತಿ ಚಿಕ್ಕದಿಂದ ಹಿಡಿದು ಬೃಹತ್ ಗಾತ್ರದ ಟಿಸಿಗಳಿವೆ. ರೈತರ ಪಂಪ್‌ಸೆಟ್‌ಗಳಿಗೆ ಸೂಕ್ತ ಎಂದರೆ ೨೫ ಕೆವಿಎ ಟಿಸಿ. ಇದು ಉತ್ತಮ ಸೇವೆ ನೀಡುವುದಲ್ಲದೆ ದುರಸ್ತಿ ಮಾಡುವುದು ಸುಲಭ. ಇದರಿಂದ ೨೫ ಅಶ್ವಶಕ್ತಿಯವರೆಗೆ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಬಹುದು. ಸಾಮಾನ್ಯವಾಗಿ ಈಗ ೫ ಎಕರೆಗಿಂತ ಹೆಚ್ಚು ಭೂಮಿ ಇರುವ ರೈತರ ಸಂಖ್ಯೆ ಕಡಿಮೆ. ಅದರಿಂದ ೨೫ ಕೆವಿಎ ಟಿಸಿ ಅಳವಡಿಸಿದರೆ ಸಾಕು ೨೫ ಹೆಚ್.ಪಿವರೆಗೆ ವಿದ್ಯುತ್ ಬಳಸಿಕೊಳ್ಳಬಹುದು. ಅಂದರೆ ೫ ಎಚ್.ಪಿಯ ೫ ಪಂಪ್‌ಸೆಟ್ ಏಕಕಾಲದಲ್ಲಿ ಕೆಲಸ ಮಾಡಬಹುದು. ೨೫ ಕೆವಿಎ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸೇರಿದಂತೆ ಎಲ್ಲವನ್ನೂ ಖರೀದಿ ಮಾಡಲು ೨ ಲಕ್ಷ ರೂ. ವೆಚ್ಚವಾಗುತ್ತದೆ. ಇದನ್ನು ರೈತರು ಭರಿಸುವುದು ಕಷ್ಟ.
ರೈತರಲ್ಲಿ ವೈಮನಸ್ಯ
ಟಿಸಿ ನೀವೇ ತಂದು ಹಾಕಿಕೊಳ್ಳಿ ಎಂದರೆ ರೈತರಲ್ಲಿ ವೈಮನಸ್ಯ ತರುವುದು ಗ್ಯಾರಂಟಿ. ಒಬ್ಬ ರೈತ ಹಣ ಹಾಕಿ ೨೫ ಕೆವಿಎ ಟಿಸಿ ತಂದು ಅಳವಡಿಸಿದರೆ ಅದರಿಂದ ಬೇರೆ ರೈತರ ಪಂಪ್‌ಸೆಟ್‌ಗಳಿಗೆ ಸಂಪರ್ಕ ನೀಡಿದರೆ ಗಲಾಟೆಗೆ ಕಾರಣವಾಗುತ್ತದೆ. ಒಂದು ವೇಳೆ ಟಿಸಿ ಕೆಟ್ಟರೆ ಯಾರು ದುರಸ್ತಿ ಮಾಡಿಸಬೇಕು ಎಂಬ ಪ್ರಶ್ನೆಯೂ ಬರುತ್ತದೆ. ವಿದ್ಯುತ್ ಕಂಪನಿಯೇ ಟಿಸಿ ಹಾಕಿದರೆ ಈ ಸಮಸ್ಯೆ ಬರುವುದಿಲ್ಲ. ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸ್ವಂತ ಟಿಸಿ ಹೊಂದುವ ಯೋಜನೆ ಆರಂಭಿಸಲಾಗಿತ್ತು. ಅದು ಸಫಲವಾಗಲಿಲ್ಲ. ರೈತ ಸ್ವಂತ ಟಿಸಿ ಹಾಕಿಸಿಕೊಂಡರೆ ಅದು ಯಾರ ಆಸ್ತಿಯಾಗುತ್ತದೆ? ಕಂಪನಿಯವರು ಒಂದು ವರ್ಷದನಂತರ ನಮ್ಮದು ಎಂದು ಹೇಳುತ್ತಾರೆ. ಅದನ್ನು ರೈತ ಒಪ್ಪುವುದು ಕಷ್ಟ. ಟಿಸಿ ಓವರ್ ಲೋಡ್ ಆದರೆ ಯಾರು ಹೊಣೆ?
ತ್ರಿಫೇಸ್
ಮೊದಲಿನಿಂದಲೂ ಹಳ್ಳಿಗಳಲ್ಲಿ ತ್ರಿಫೇಸ್ ವಿದ್ಯುತ್ ನೀಡುವುದು ದೊಡ್ಡ ಸಮಸ್ಯೆ. ರೈತರ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಬೇಕೇ ಬೇಕು. ವಿದ್ಯುತ್ ಕಂಪನಿಗಳು ಇದಕ್ಕಾಗಿ ನಿರಂತರ ಜ್ಯೋತಿ ಕಾರ್ಯಕ್ರಮ ಜಾರಿಗೆ ತಂದು ಪ್ರತ್ಯೇಕ ವಿದ್ಯುತ್ ಜಾಲ ನಿರ್ಮಿಸಿತು. ಇದು ಫಲಕಾರಿಯಾಗಲಿಲ್ಲ. ಇದರಿಂದ ವಿದ್ಯುತ್ ನಷ್ಟ ಅಧಿಕಗೊಂಡಿತು. ಅಲ್ಲದೆ ನಮ್ಮ ರೈತರು ಎರಡು ಫೇಸ್ ವಿದ್ಯುತ್ತನ್ನು ಮೂರು ಫೇಸ್‌ಗೆ ಪರಿವರ್ತಿಸುವ ವಿಧಾನ ಕಂಡುಕೊಂಡಿದ್ದಾರೆ. ಈಗಲೂ ಹಳ್ಳಿಗಳಿಗೆ ೬-೮ ಗಂಟೆ ಮೂರು ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಸೌರಶಕ್ತಿ ಅಧಿಕವಾಗಿ ಬರುತ್ತಿರುವುದರಿಂದ ಪಂಪ್‌ಸೆಟ್‌ಗಳಿಗೆ ಹಗಲು ವಿದ್ಯುತ್ ನೀಡುವುದು ಕಷ್ಟವಾಗಿಲ್ಲ.
೩೪.೧೦ ಲಕ್ಷ ಪಂಪ್‌ಸೆಟ್
ಈಗ ಸರ್ಕಾರದ ಅಂಕಿಅಂಶದ ಪ್ರಕಾರ ೩೪,೧೦೦೫೦ ಪಂಪ್‌ಸೆಟ್‌ಗಳಿವೆ. ಆಗಸ್ಟ್೧, ೨೦೦೮ ರಿಂದ ಐಪಿ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ೨೧೫೨೫ ದಶಲಕ್ಷ ಯೂನಿಟ್ ಐಪಿ ಸೆಟ್‌ಗಳಿಗೆ ಹೋಗುತ್ತಿದೆ. ಅಂದರೆ ಶೇ.೪೦ ವಿದ್ಯುತ್ ಬಳಕೆಯಾಗುತ್ತಿದೆ. ಇದಕ್ಕೆ ಸರಾಸರಿ ವೆಚ್ಚ ಪ್ರತಿ ಯೂನಿಟ್‌ಗೆ ೭.೬೮ ರೂ.