ಅಕ್ರಮ ಮರಳು ದಂಧೆ: ರೈತನ ಮೇಲೆ ಹಲ್ಲೆ
ರಾಣೇಬೆನ್ನೂರ: ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದ ದಂಧೆಕೋರರು ರೈತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ರಾಣೇಬೆನ್ನೂರ ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ತುಂಗಭದ್ರ ನದಿ ಪಾತ್ರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಯುವ ರೈತನನ್ನು ಗ್ರಾಮದ ಗೋಪಾಲಕೃಷ್ಣ ನಾಗಪ್ಪ ಐರಣಿ(33)ಎಂದು ಗುರುತಿಸಲಾಗಿದೆ.
ರಾತ್ರಿಯ ವೇಳೆ ಸುಮಾರು ಹತ್ತಕ್ಕೂ ಅಧಿಕ ಟ್ರ್ಯಾಕ್ಟರ್ ಗಳು ತುಂಗಭದ್ರ ನದಿ ಪಾತ್ರದಲ್ಲಿ ಅಕ್ರಮ ಮರಳು ತುಂಬಲು ತೊಡಗಿದ್ದವು. ಮರಳು ತುಂಬಲು ಹಾವೇರಿ ತಾಲೂಕಿನ ಹಾಂವಶಿ, ಹಾವನೂರು ಹಾಗೂ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಒಟ್ಟು 30ಕ್ಕೂ ಅಧಿಕ ಹಮಾಲರು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದರು.
ಈ ಸಂದರ್ಭದಲ್ಲಿ ರೈತ ಗೋಪಾಲಕೃಷ್ಣ ಅಕ್ರಮ ಮರಳು ದಂಧೆಕೋರರನ್ನು ತಡೆದು ನೀವು ಪದೆಪದೆ ಮರಳು ಗಣಿಗಾರಿಕೆ ನಡೆಸುತ್ತಿರುವುದರಿಂದ ನಮ್ಮ ಪೈಪ್ ಲೈನ್ ಒಡೆದು ಹಾಳಾಗುತ್ತಿವೆ. ದಯವಿಟ್ಟು ಇಲ್ಲಿ ಅಕ್ರಮ ಮರಳನ್ನು ತುಂಬುವುದು ಹಾಗೂ ಸಾಗಾಟ ಮಾಡುವುದನ್ನು ಮಾಡಬೇಡಿ ಎಂದು ಹೇಳುತ್ತಿರುವಾಗಲೇ ದಂಧೆ ಕೋರರು ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅಕ್ರಮ ಮರಳು ತುಂಬಲು ಬಂದ ಟ್ರ್ಯಾಕ್ಟರ್ ಗಳಿಗೂ ಸಹ ನಂಬರ್ ಇಲ್ಲ. ಇಲ್ಲಿ ದಿನನಿತ್ಯ ರಾತ್ರಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಆದರೂ ಗಣಿ ಇಲಾಖೆ ಮತ್ತು ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮೌನವಹಿಸಿ ಅಕ್ರಮ ಮರಳು ದಂಧೆಗೆ ಮತ್ತಷ್ಟು ಪುಷ್ಟಿ ನೀಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಲ್ಲೆ ಮಾಡಿದ ಅಕ್ರಮ ಮರಳು ದಂಧೆಕೋರರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಗೊಂಡಿದೆ.