For the best experience, open
https://m.samyuktakarnataka.in
on your mobile browser.

ಪೇಜಾವರ ಶ್ರೀಗೆ ಸಂವಿಧಾನ ಬೇಕಿಲ್ಲ, ಮನುಸ್ಮೃತಿ ಬೇಕಿದೆ

03:04 PM Nov 26, 2024 IST | Samyukta Karnataka
ಪೇಜಾವರ ಶ್ರೀಗೆ ಸಂವಿಧಾನ ಬೇಕಿಲ್ಲ  ಮನುಸ್ಮೃತಿ ಬೇಕಿದೆ

ಕೊಪ್ಪಳ: ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎನ್ನುವ ಪೇಜಾವರ ಶ್ರೀಗೆ ಸಂವಿಧಾನ ಬೇಕಾಗಿಲ್ಲ. ಬದಲಾಗಿ ಮನುಸ್ಮೃತಿ ಬೇಕಾಗಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ ಹೊಸಪೇಟೆ ರಸ್ತೆ ಮೇಘರಾಜ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಛಲವಾದಿ ಜಾಗೃತಿ ವೇದಿಕೆ ಮತ್ತು ಛಲವಾದಿ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘದ ಆಶ್ರಯದಲ್ಲಿ ಸಂವಿಧಾನ ಸಮರ್ಪಣಾ ದಿನದ ನಿಮಿತ್ತ ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.೬೦ಕ್ಕಿಂತ ಹೆಚ್ಚು ಅಂಕ ಪಡೆದ ಛಲವಾದಿ ಸಮಾಜದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೇಜಾವರ ಶ್ರೀಗಳಿಗೆ ಇತಿಹಾಸ ಗೊತ್ತಿಲ್ಲ. ಸ್ವಾತಂತ್ರ್ಯ ಸಿಗುವ ಮೊದಲು ದೇಶದಲ್ಲಿ ೫೪೩ ಸಂಸ್ಥಾನಗಳಿದ್ದವು ಎನ್ನುವ ಪರಿಕಲ್ಪನೆ ಅವರಿಗಿಲ್ಲ. ಮೊದಲು ಹಿಂದೂರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಜಾತ್ಯಾತೀತ ರಾಷ್ಟ್ರವಾಗಿದೆ ಎನ್ನುತ್ತಿದ್ದಾರೆ. ನಮ್ಮದು ಬಹುಸಂಸ್ಕೃತಿ, ಬಹುಭಾಷೆ, ಬಹುಧರ್ಮಗಳ ದೇಶವಾಗಿದ್ದು, ದೇಶದ ಸಂಪನ್ಮೂಲ ಎಲ್ಲರಿಗೂ ಸಮಾನವಾಗಿ ಪಾಲು ಸಿಗಬೇಕು ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಆಶಯವಾಗಿದೆ ಎಂದರು.

ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಕೆಲವು ಅರೆಹುಚ್ಚರು ಮಾತನಾಡುತ್ತಿರುತ್ತಾರೆ. ಅವರ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು. ಮನುವಾದಿಗಳಿಗೆ ಸಂವಿಧಾನ ಬೇಕಾಗಿಲ್ಲ. ಪೇಜಾವರ ಶ್ರೀಗಳಿಗೆ ನಮ್ಮನ್ನು ಗುಲಾಮರನ್ನಾಗಿ ನೋಡಬೇಕು ಎನ್ನುವ ಮನಸ್ಥಿತಿ ಇದೆ.‌ ಹಾಗಾಗಿ ನೀವು ಎಚ್ಚೆತ್ತುಕೊಳ್ಳಬೇಕು. ಸಂವಿಧಾನ ಉಳಿಸಲು ನಾವು ಬಂದಿದ್ದೇವೆ. ಕೆಲವರು ಸಂವಿಧಾನ ಬದಲಾವಣೆ ಮಾಡಲು ಬಂದಿದ್ದಾರೆ. ಯಾರಿಂದಲೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಛಲವಾದಿ ಜಾಗೃತಿ ವೇದಿಕೆದ ಸಂಚಾಲಕ ಕೃಷ್ಣ ಇಟ್ಟಂಗಿ ಮತ್ತು ಛಲವಾದಿ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ಬೆಲ್ಲದ್ ಜಂಟಿ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಎಂಎಲ್ಸಿ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಸಿದ್ದು ಮ್ಯಾಗೇರಿ, ರಾಜಶೇಖರ ಆಡೂರು, ಭಾಗ್ಯನಗರ ಪ.ಪಂ.ಸದಸ್ಯೆ ಸರಸ್ವತಿ ಇಟ್ಟಂಗಿ ಇದ್ದರು.