For the best experience, open
https://m.samyuktakarnataka.in
on your mobile browser.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ ಇಂದಿನಿಂದ ಆರಂಭ

12:04 AM Jan 18, 2025 IST | Samyukta Karnataka
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ ಇಂದಿನಿಂದ ಆರಂಭ

ಬೆಂಗಳೂರು: ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೇಜವು ಹರಡಲಿ ಎಂಬ ಸದಾಶಯದೊಂದಿಗೆ ವಿಶ್ವದೆಲ್ಲೆಡೆ ಬೆಳಕು ಪಸರಿಸುವ ಹಾಗೂ ಒಳಿತು ಬಯಸುವ ವಿಪ್ರ ಬಂಧುಗಳ ೧೧ನೇ ಮಹಾ ಸಂಗಮ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರು ನಗರದಲ್ಲಿ ನಡೆಯಲಿದೆ.
ಕಳೆದ ಐವತ್ತು ವರುಷಗಳ ಹಿಂದೆ ಕೆಲವು ಬ್ರಾಹ್ಮಣ ಹಿತ ಚಿಂತಕರು, ಹಿರಿಯ ಮುತ್ಸದ್ದಿಗಳು ಸೇರಿ ದ್ವಿಜ ಶಕ್ತಿ- ರಾಷ್ಟç ಶಕ್ತಿ' ಎಂಬ ಪರಿಕಲ್ಪನೆಯೊಂದಿಗೆ ೧೯೭೪ರಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧಿಕೃತ ನೋಂದಣಿಯಾದ ಸಂಸ್ಥೆಯಾಯಿತು. ವಿನಾಕಾರಣ ಬ್ರಾಹ್ಮಣ ಸಮಾಜವನ್ನು ನಿಂದಿಸುವವರ ವಿರುದ್ಧ ಹೋರಾಡಲು ಸಮರ್ಥ ವೇದಿಕೆಯಾದ ಮಹಾಸಭೆ ಇದೀಗ ಐವತ್ತು ವಸಂತಗಳನ್ನು ಪೂರೈಸಿ ಹೊಸ ಸಾಧ್ಯತೆಗಳತ್ತ ದಾಪುಗಾಲಿಡುತ್ತಿದೆ. ಇಂದಿನಿಂದ ಅರಮನೆ ಮೈದಾನ ತ್ರಿಪುರವಾಸಿನಿ ಸಭಾಂಗಣದಲ್ಲಿ ೫೦ನೇ ಸುವರ್ಣ ಸಂಭ್ರಮವುವಿಶ್ವಾಮಿತ್ರ' ಘೋಷ ವಾಕ್ಯದೊಂದಿಗೆ ಸಮ್ಮೇಳನ ನಡೆಯಲಿದೆ. ಬೆಳಗ್ಗೆ ೫.೩೦ ರಿಂದ ಗಾಯತ್ರಿ ಮಹಾಯಾಗ, ಗಾಯತ್ರಿ ಜಪಯಜ್ಞ ಹಾಗೂ ಯತಿ ಸಮಾಗಮ ಕಾರ್ಯಕ್ರಮಗಳೊಂದಿಗೆ ಚಾಲನೆ ದೊರೆಯಲಿದೆ. ನಂತರ ೭.೩೦ಕ್ಕೆ ಸಮ್ಮೇಳನ ಧ್ವಜಾರೋಹಣ, ೮.೩೦ ರಿಂದ ಗಾಯತ್ರಿ ಮಹಾಯಾಗ ಪೂರ್ಣಹುತಿ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಉಪಸ್ಥಿತಿಯನ್ನು ಶೃಂಗೇರಿ ಮಠದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿಗಳ ನೇತೃತ್ವದಲ್ಲಿ ಸಮ್ಮೇಳನ ಉದ್ಘಾಟನೆ ಹಾಗೂ ಅನುಗ್ರಹ ಭಾಷಣ ಜರುಗಲಿದೆ. ೧೧.೩೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರ್‌ಸ್ವಾಮಿ, ರಾಜಸ್ಥಾನ ಸಿಎಂ ಭಜನ್‌ಲಾಲ್ ಶರ್ಮಾ, ರಾಜ್ಯ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಂಸದ ಎಲ್.ಎಸ್.ತೇಜಸ್ವಿ ಸೂರ್ಯ ಸೇರಿದಂತೆ ವಿವಿಧ ಗಣ್ಯರ ಸಹಭಾಗಿತ್ವದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ ಸ್ಮರಣ ಸಂಚಿಕೆ ಲೋಕಾರ್ಪಾಣೆ, ಪಾಣಿಗ್ರಾಹಿ ವೇದಿಕೆ ಉದ್ಘಾಟನೆ, ಕೃತಿ ಲೋಕಾರ್ಪಣೆ, ವಾಣಿಜ್ಯ ಮೇಳ, ಆಹಾರ ಮೇಳೆ ಉದ್ಘಾಟನಾ ಕಾರ್ಯಕ್ರಮ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರು ಅಶೋಕ ಹಾರನಹಳ್ಳಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂಜೆ ನಾದ ಬ್ರಹ್ಮರಿಗೆ ನಮನ, ಐವತ್ತು ಯುವ ಕಲಾವಿದರಿಂದ ನಾದ ನಮನ, ಬ್ರಹ್ಮತೇಜಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಜ.೧೯ ರಂದು ಬೆಳಗ್ಗೆ ೮ ರಿಂದ ೧೦ವರೆಗೆ ವಿವಿಧ ಕಲಾತಂಡದವರಿಂದ ಸಾಂಸ್ಕೃತಿಕ ಕಲರವ, ಸನಾತನ ಧರ್ಮಕ್ಕೆ ಆಚಾರ್ಯತ್ರಯರ ಕೊಡುಗೆ ಕುರಿತು ವಿಚಾರಗೋಷ್ಠಿ ನಡೆಯಲಿದೆ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇತರನ್ನು ಒಳಗೊಂಡ ಮುಖ್ಯ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಂಜೆ ಧರ್ಮಸಭೆ, ಅಗ್ನಿಹೋತ್ರಿಗಳಿಗೆ ಗೌರವ ಸಮರ್ಪಣೆ, ವಾಣಿಜ್ಯ ಸಮಾವೇಶ, ಯಶಸ್ವಿ ಉದ್ಯಮಕ್ಕೆ ಸರಳ ಸೂತ್ರಗಳ ಕುರಿತು ಪ್ರಥಮ ಸಭೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಹೀಗೆ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಹಾಸಭಾದ ಸಮ್ಮೇಳನದಲ್ಲಿ ನಡೆಯಲಿದೆ.

ಪುಣ್ಯಾಹವಾಚದೊಂದಿಗೆ ಗಾಯತ್ರಿ ಮಹಾಯಾಗ ಕಲಶ ಸ್ಥಾಪನೆ
ಗುರು ಪ್ರಾರ್ಥನೆ, ಗಣಪತಿ ಪೂಜೆ, ಗೋಪೂಜೆ, ಮಹಾ ಸಂಕಲ್ಪ, ಪುಣ್ಯಾಹವಾಚದೊಂದಿಗೆ ಶುಕ್ರವಾರ ಸಂಜೆ ಗಾಯತ್ರಿ ಮಹಾಯಾಗ ಕಲಶ ಸ್ಥಾಪನೆ ನಡೆಯಿತು. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಗಣ್ಯರು ಗಾಯತ್ರಿ ಜಪದೊಂದಿಗೆ ಸಮ್ಮೇಳಕ್ಕೆ ಚಾಲನೆ ನೀಡಿದರು.