For the best experience, open
https://m.samyuktakarnataka.in
on your mobile browser.

ಇಂದು ಹುಬ್ಬಳ್ಳಿಯಲ್ಲಿ ಸುರ್ಜೇವಾಲಾ ಅಧ್ಯಕ್ಷತೆಯಲ್ಲಿ ಕೈ ನಾಯಕರ ಸಭೆ

12:01 AM Jan 18, 2025 IST | Samyukta Karnataka
ಇಂದು ಹುಬ್ಬಳ್ಳಿಯಲ್ಲಿ ಸುರ್ಜೇವಾಲಾ ಅಧ್ಯಕ್ಷತೆಯಲ್ಲಿ ಕೈ ನಾಯಕರ ಸಭೆ

ಧಾರವಾಡ: ಗಾಂಧಿ ಭಾರತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿ. ೧೮ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯ ಕ್ಯುಬಿಕ್ಸ್ ಹೊಟೇಲ್‌ನಲ್ಲಿ ಪಕ್ಷದ ಮುಖಂಡರ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಜಾನೆ ೧೧ಕ್ಕೆ ಧಾರವಾಡ, ಬೆಳಗಾವಿ, ಗದಗ, ಹಾವೇರಿ, ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಪಕ್ಷದ ಮುಖಂಡರ ಸಭೆ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಅವರು ಪಾಲ್ಗೊಳ್ಳಲಿದ್ದಾರೆ. ಪಕ್ಷದ ಮುಖಂಡರ ಆಂತರಿಕ ಸಭೆ ಇದಾಗಿದ್ದು, ಮಧ್ಯಾಹ್ನ ೨ಕ್ಕೆ ಸಾರ್ವಜನಿಕರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದರು.
ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬೆಳಗಾವಿಯಲ್ಲಿ ನಡೆಸಿದ ಮೊದಲ ಅಧಿವೇಶನಕ್ಕೆ ನೂರು ವರ್ಷ ಪೂರೈಸಿದ್ದು, ಇದರ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮವನ್ನು ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಘೋಷವಾಕ್ಯದೊಂದಿಗೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಕೇಂದ್ರ ಬಿಜೆಪಿ ಸರಕಾರದಿಂದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಇದರಲ್ಲಿ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ವಿವಿಯಲ್ಲಿ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟçಪತಿಗಳು ಮಾತನಾಡುತ್ತ ೪೦ ವರ್ಷಗಳಲ್ಲಿ ಕಾಣದ ಅಭಿವೃದ್ಧಿಯನ್ನು ಈಗ ಕಾಣುತ್ತಿದ್ದೇವೆ ಎಂದೆಲ್ಲ ಹೇಳಿದರು. ಆದರೆ, ದೇಶದ ಶೇ. ೫೦ರಷ್ಟು ಆಸ್ತಿ ಕೇವಲ ಶೇ. ೧ರಷ್ಟು ಜನರ ಕೈಯಲ್ಲಿ ಇರುವುದನ್ನು ಯಾಕೆ ಹೇಳುತ್ತಿಲ್ಲ..? ಹಿಂದುತ್ವದ ಪ್ಲೇಕಾರ್ಡ್ ಬಳಸಿ ಜನರ ಭಾವನೆ ಜೊತೆಗೆ ಆಟವಾಡುತ್ತಿದ್ದಾರೆ. ಎಷ್ಟು ಹಿಂದುಗಳನ್ನು ಬಡತನ ರೇಖೆಗಿಂತ ಮೇಲೆತ್ತಿದ್ದಾರೆ ಎಂದು ಪ್ರಶ್ನಿಸಿದರು.