For the best experience, open
https://m.samyuktakarnataka.in
on your mobile browser.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಸಾಹಿತ್ಯ ಸಹವಾಸ’ ಕ್ಕೆ ಚಾಲನೆ

07:53 PM Mar 24, 2024 IST | Samyukta Karnataka
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಸಾಹಿತ್ಯ ಸಹವಾಸ’ ಕ್ಕೆ ಚಾಲನೆ

ಬೇಂದ್ರೆಯವರ ಬರೆಹಗಳ ಸಾಮಾಜಿಕ ಬದ್ದತೆಯ ಹಿನ್ನೆಲೆಯಲ್ಲಿ ಅವುಗಳ ಮರು ಓದಿನ ಮಹತ್ವ

ಧಾರವಾಡ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ʼಸಾಹಿತ್ಯ ಸಹವಾಸʼ ಕಾರ್ಯಕ್ರಮ ಸರಣಿಗೆ ಧಾರವಾಡದಲ್ಲಿ ಚಾಲನೆ ನೀಡಿತು.
ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜ್ಞಾನಪೀಠ ಪ್ರಶಸ್ತಿ ವಿಜೇತ ದಿ. ಯು ಆರ್ ಅನಂತಮೂರ್ತಿಯವರು ಕನ್ನಡದ ವರಕವಿ ದ. ರಾ. ಬೇಂದ್ರೆ ಮತ್ತು ಕನ್ನಡ ಭಾಷೆಯ ಸವಾಲು ಮತ್ತು ಸಾಧ್ಯತೆಗಳ ಕುರಿತು ನೀಡಿರುವ ಉಪನ್ಯಾಸಗಳನ್ನು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಯೂಟ್ಯೂಬ್ ವಾಹಿನಿಯ ಮೂಲಕ ಬಿಡುಗಡೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಈ ವಿದ್ವತ್ಪೂರ್ಣ ಉಪನ್ಯಾಸಗಳು ಪಾಡ್ಕಾಸ್ಟ್ ರೂಪದಲ್ಲಿಯೂ ಎಲ್ಲ ಆಸಕ್ತರಿಗೆ ಲಭ್ಯವಾಗಲಿವೆ.
ವಿಡಿಯೊ ಸರಣಿಯನ್ನು ಬಿಡುಗಡೆಗೊಳಿಸಿ, ಬೇಂದ್ರೆಯವರ ಜೀವನದ ಬಗೆಗಿನ ಕಲೆ ಮತ್ತು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ಹುಬ್ಬಳ್ಳಿಯ ಬೇಂದ್ರೆ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಕೆ. ಎಸ್. ಶರ್ಮಾರವರು ಬೇಂದ್ರೆಯವರ ಕೃತಿಗಳಲ್ಲಿ ಸಾಹಿತ್ಯಕ ಅಂಶಗಳಲ್ಲದೆ ವೈಜ್ಞಾನಿಕ ಮತ್ತು ತಾತ್ವಿಕ ವಿಚಾರಗಳನ್ನು ಪರಿಗಣಿಸಬೇಕಿದೆ. ಅಲ್ಲದೆ ಬೇಂದ್ರೆಯವರ ಬರೆಹಗಳಲ್ಲಿ ಇರುವ ಸಾಮಾಜಿಕ ಬದ್ದತೆಯ ಹಿನ್ನೆಲೆಯಲ್ಲಿ ಅವುಗಳ ಮರುಓದಿನ ಮಹತ್ವವನ್ನು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಸರಾಂತ ಸಾಹಿತಿ ವಿವೇಕ ಶಾನಭಾಗ ಅವರು ಎಲ್ಲರನ್ನೂ ಒಳಗೊಂಡು ಒಂದು ವಿಷಯದ ಬಗೆಗೆ ಆಳವಾಗಿ ಪರ್ಯಾಲೋಚಿಸುವ ಗುಣವನ್ನು ಬೆಳೆಕೊಳ್ಳಬೇಕೆಂದು ಕರೆ ನೀಡಿದರು. ಹಿರಿಯ ಕವಿ ಮತ್ತು ವಿಮರ್ಶಕ ಆನಂದ್ ಝುಂಜರವಾಡ, ಶ್ರೀಮತಿ ಪುನರ್ವಸು ಬೇಂದ್ರೆ ಉಪಸ್ಥಿತರಿದ್ದರು. ಅಜೀಂ ಪ್ರೇಮ್‌ಜಿ ಫೌಂಡೇಷನ್ ನ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬೇಂದ್ರೆಯವರ ಕಾವ್ಯ, ಗದ್ಯ ಮತ್ತು ನಾಟಕಗಳ ಕುರಿತ ವಿದ್ವತ್‌ಗೋಷ್ಠಿಯಲ್ಲಿ ಅವರ ಸಾಹಿತ್ಯವು ಸಮಾಜದಿಂದಲೇ ಪ್ರೇರಣೆಗೊಂಡು ವೈಜ್ಞಾನಿಕ ಮತ್ತು ತಾತ್ವಿಕ ನೆಲೆಗಳಲ್ಲಿ ಅವರ ಚಿಂತನೆಗಳು ಅಂತರ್ಗತವಾಗಿರುವುದನ್ನು ಗುರುತಿಸಿಲಾಯಿತು.
ಕನ್ನಡ ಭಾಷೆಯ ಪ್ರಸ್ತುತತೆ ಮತ್ತು ಸವಾಲುಗಳ ಸುತ್ತ ನಡೆದ ಗೋಷ್ಠಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭ್ಯಾಸ ಮಾಡುವ ಅವಕಾಶಗಳ ಕೊರತೆ, ಮತ್ತು ಉನ್ನತ ಶಿಕ್ಷಣ ಹಂತದಲ್ಲಿ ಭಾಷೆಯನ್ನು ಔಪಚಾರಿಕ ವಿಧಾನದಲ್ಲಿ ಬೋಧಿಸುತ್ತಿರುವುದರಿಂದ ಭಾಷೆಯ ಬೆಳವಣಿಗೆಗೆ ಉಂಟಾಗುತ್ತಿರುವ ತೊಡಕಿನ ಬಗ್ಗೆ ಚರ್ಚಿಸಲಾಯಿತು.
ಬೇಂದ್ರೆ ಕಾವ್ಯವಾಚನ, ಬೇಂದ್ರೆಯವರೊಂದಿಗಿನ ಒಡನಾಟದ ನೆನಪುಗಳ ಹಂಚಿಕೆ ಕಾರ್ಯಕ್ರಮಕ್ಕೆ ಮೆರುಗನ್ನು ತಂದವು.
ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ಡಾ. ಡಿ. ಎಂ. ಹಿರೇಮಠ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹನಿರ್ದೇಶಕ ಎಸ್.ವಿ.ಮಂಜುನಾಥ್ ಮತ್ತು ಧಾರವಾಡದ ಮನೋಹರ ಗ್ರಂಥ ಮಾಲಾದ ಸಮೀರ ಜೋಷಿ ಉಪಸ್ಥಿತರಿದ್ದರು.