For the best experience, open
https://m.samyuktakarnataka.in
on your mobile browser.

ಅಜೇಯಕ್ಕೆ ಐವತ್ತು, ಕನ್ನಡನಾಡಿನ ಸಂಪತ್ತು

04:00 AM Aug 16, 2024 IST | Samyukta Karnataka
ಅಜೇಯಕ್ಕೆ ಐವತ್ತು  ಕನ್ನಡನಾಡಿನ ಸಂಪತ್ತು

ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯಲ್ಲಿ ಜಗತ್ತಿನ ಮನಸೂರೆಗೈದ ಕನ್ನಡ ನೆಲ ವಿಶ್ವಹಿತದ ತವರುಮನೆಯೂ ಹೌದು. ಭಾರತಾಂತರ್ಗತ ಕರ್ನಾಟಕದ ಸಚ್ಚಿಂತನೆ, ಸಚ್ಚಾರಿತ್ರ್ಯವು ಲೋಕಕ್ಕೆ ಸದಾ ಬೆಳಕು. ಇಲ್ಲಿ ನಡೆದಷ್ಟು ವಿಸ್ತಾರವಾದ ಜ್ಞಾನಸತ್ರ ಪ್ರಾಯಶಃ ಬೇರೆಲ್ಲೂ ನಡೆದಿಲ್ಲ. ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿ, ವಚನಗಳ ಮೂಲಕ ವೇದಸುಧೆಯನ್ನೇ ಹರಿಸಿ, ಸರಳಸಾಲುಗಳ ಮೂಲಕ ಭಗವಂತನನ್ನೇ ಭುವಿಗಿಳಿಸಿದ ಪುಣ್ಯಭೂಮಿಯಿದು. ವಿಶ್ವವೇ ಗುರುತಿಸಿ, ಗೌರವಿಸಿ, ಕೊಂಡಾಡುವ ಆಚಾರ್ಯತ್ರಯರ ಕರ್ಮಭೂಮಿಯಾಗಿ ಕಂಗೊಳಿಸಿದ ಕನ್ನಡನಾಡು ಕವಿ, ಸಾಹಿತಿಗಳ ಕಾರ್ಯಕ್ಷೇತ್ರ. ಅಕ್ಷರಗಳು ಸೃಷ್ಟಿಯಾದ ಮೊದಲ ದಿನದಿಂದಲೂ ಸಾಹಿತ್ಯದ ಔನ್ನತ್ಯವನ್ನು ಮುಟ್ಟಿ, ಭಕ್ತಿಭಾವದ ಜೊತೆಜೊತೆಗೆ ತೇಜಸ್ವೀ ರಾಷ್ಟ್ರೀಯ ಚಿಂತನೆಗಳ ಮಹಾಪರ್ವಕ್ಕೆ ಸಾಕ್ಷಿಯಾದ ಸಿರಿಚಾವಡಿಯಲ್ಲಿ ಸ್ವಾತಂತ್ರ್ಯಾನಂತರ ನಡೆದ ಆಳುವರಸರ ಅಧ್ವಾನಕ್ಕೆ ಮೊದಲು ಬಲಿಯಾದುದೇ ರಕ್ತಚರಿತ್ರೆಯ ಜ್ವಾಜ್ವಲ್ಯಮಾನ ಪ್ರಖರ ರಾಷ್ಟ್ರೀಯತೆ. ಸ್ವಾತಂತ್ರ್ಯ ಸಂಘರ್ಷದ ಉದಾತ್ತ ಚಿಂತನೆಗಳನ್ನು, ಮಹತ್ವಪೂರ್ಣ ಘಟ್ಟಗಳನ್ನು, ದಾಸ್ಯಮುಕ್ತಿಗಾಗಿ ನಡೆದ ವೀರೋಚಿತ ಕ್ರಾಂತಿಕಾರಿ ಸಂಗತಿಗಳನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟು ಆಕ್ರಮಣಕಾರರನ್ನೇ ಹಾಡಿ ಹೊಗಳುವ ಕೃತಿಗಳು ನಿರ್ಮಾಣಗೊಂಡದ್ದೂ ಇದೇ ಅಪಸವ್ಯ ಕಾಲದಲ್ಲಿ.
ನಮ್ಮ ನೆಲದ ಮಕ್ಕಳು ಘಜನಿ, ಘೋರಿ, ಕುತ್ಬುದ್ದೀನ್, ಲೋಧಿ, ಬಾಬರ್, ಅಕ್ಬರ್, ಔರಂಗಜೇಬರನ್ನು ಓದಿದಷ್ಟು ದಾಹಿರ, ಪೃಥ್ವಿರಾಜ, ರಾಣಾಸಂಗ, ರಾಣಾಹಮ್ಮೀರ, ರಾಣಾಪ್ರತಾಪ, ಛತ್ರಸಾಲ, ಛತ್ರಪತಿ ಶಿವಾಜಿ, ಅಬ್ಬಕ್ಕನ ಬಗ್ಗೆ ಅಧ್ಯಯನ ನಡೆಸಲು ಅವಕಾಶವೇ ಲಭ್ಯವಾಗದ್ದು ದುರಂತವೋ, ಕುಹಕವೋ, ನೋವಿನ ಸಂಗತಿಯೋ ಗೊತ್ತಿಲ್ಲ. ಮರಾಠಾ ಸಾಮ್ರಾಜ್ಯದ ವೈಭವವನ್ನು ವಿಶಾಲ ದೃಷ್ಟಿಯಿಂದ ಚಿತ್ರಿಸದೆ ಅಫಜಲನ ವಧೆಗೆ ಬೇರೆಯೇ ಬಣ್ಣ ಕೊಡಲು ನಡೆದ ಒಳಸಂಚು, ೧೮೫೭ರ ಸ್ವಾತಂತ್ರ್ಯ ಸಂಗ್ರಾಮವನ್ನು ಸಿಪಾಯಿ ದಂಗೆ'ಗೆ ಸೀಮಿತಗೊಳಿಸಿ ನಾನಾ-ತಾತ್ಯಾ-ಲಕ್ಷ್ಮೀಬಾಯಿ-ಮಂಗಲಪಾಂಡೆ-ಕುವರಸಿಂಹರ ತ್ಯಾಗವನ್ನು ರಾಜ್ಯ ಉಳಿಸುವ ಸಹಜ ಪ್ರತಿಕ್ರಿಯೆಯೆಂದು ಚಿತ್ರಿಸಿದ ರೀತಿ, ಬ್ರಿಟಿಷ್ ಆಧಿಪತ್ಯದ ಬುಡವನ್ನೇ ಅಲುಗಾಡಿಸಿದ ಸೂರ್ಯಸೇನರ ಚಿತ್ತಗಾಂಗಿನ ಸ್ವಾತಂತ್ರ್ಯ ಘೋಷವನ್ನು ಹೋರಾಟವೆಂದೇ ಪರಿಗಣಿಸದ ದಾರ್ಷ್ಟ್ಯ, ವೀರ ಸಾವರ್ಕರ್ ಕುಟುಂಬದ ತ್ಯಾಗವನ್ನು ಅನುಮಾನದ ದೃಷ್ಟಿಯಿಂದ ನೋಡಿ ಅವಮಾನಿಸಿದ ವಿತಂಡವಾದವೇ ಮೊದಲಾದ ಪ್ರಕ್ರಿಯೆಗಳು ಸ್ವಾತಂತ್ರ್ಯದ ಬಳಿಕವೇ ವೇಗ ಪಡೆಯಿತೆಂಬುದು ಅಸಹ್ಯದ ಪರಮಾವಧಿ. ಗಾಂಧಿ, ನೆಹರು ಹೊಗಳಿಕೆಗಳಿಗಷ್ಟೇ ಮೀಸಲಾದ ತಥಾಕಥಿತ ಸಂಶೋಧನಾ ಕೃತಿಗಳು ವಿಶ್ವವಿದ್ಯಾಲಯಗಳ ಒಳಹೊಕ್ಕು ತನ್ಮೂಲಕ ಸತ್ಯದರ್ಶನಕ್ಕೆ ಅವಕಾಶ ಶೂನ್ಯವಾದುದನ್ನು ಇತಿಹಾಸ ಮರೆದೀತೇ? ಸರ್ವಸ್ವವನ್ನೂ ದೇಶಹಿತಕ್ಕಾಗಿ ಸಮರ್ಪಿಸಿದ ಕ್ರಾಂತಿಕಾರಿಗಳ ಹೆಸರು ಹೇಳುವುದನ್ನೇ ಅಪರಾಧವೆಂದು ಪರಿಗಣಿಸುವ ವ್ಯವಸ್ಥೆಗೂ ಭಾರತ ಸಾಕ್ಷಿಯಾಗಿತ್ತೆಂಬ ಸತ್ಯವನ್ನು ಅರಗಿಸಲು ಎಂಟೆದೆಯೇ ಬೇಕು. ಪತ್ರಿಕೆ, ಆಕಾಶವಾಣಿಯೇ ಮೊದಲಾದ ಬಹುಪಾಲು ಮಾಧ್ಯಮಗಳು ಸರಕಾರಿ ಅಧೀನದಲ್ಲಿದ್ದುದರಿಂದ ಅಲ್ಲಿಂದ ಬಂದ ಸೂಚನೆಯನ್ನಷ್ಟೇ ಪಾಲಿಸಬೇಕಾದ ಅನಿವಾರ್ಯತೆ ಸಿಬ್ಬಂದಿಗಳಿಗಿದ್ದು, ಸಾವಿರ ವರ್ಷಗಳ ಖಡ್ಗದ ಠೇಂಕಾರದ ಸಣ್ಣಧ್ವನಿಯೂ ಹೊರಬರಲಿಲ್ಲವೆಂದರೆ ನಂಬಲಾದೀತೇ? ದೇಶದ ಅನ್ನ ತಿಂದು, ಚೀನೀಯರಿಗೆ ನಿಷ್ಠೆ ತೋರುತ್ತಿದ್ದ ಬುದ್ಧಿಜೀವಿಗಳ ಕೈಗೆ ಸಿಕ್ಕು ನರಳಾಡಿದ ಭಾರತೀಯ ಶಿಕ್ಷಾವ್ಯವಸ್ಥೆಯು, ಸುಳ್ಳಿನ ಸರಮಾಲೆಯನ್ನು ಭಾರತಮಾತೆಯ ಕೊರಳಿಗೆ ಉರುಳಾಗಿ ತೊಡಿಸಲು ಸಿದ್ಧವಾಗಿದ್ದಾಗ ಅದಕ್ಕೆ ಉತ್ತರವೆಂಬಂತೆ ಕ್ರಾಂತಿಕಹಳೆ ಮೊಳಗಿದ್ದು ಕನ್ನಡದ ಅಂಗಳದಲ್ಲೆಂಬುದು ನಮ್ಮ ಹೆಮ್ಮೆ. ವಾಸುದೇವ ಬಲವಂತ ಫಡಕೆಯಿಂದಾರಂಭಿಸಿ ನೇತಾಜಿ ಸುಭಾಷಚಂದ್ರ ಬೋಸರವರೆಗೆ ನಡೆದ ಏಳೂವರೆ ದಶಕಗಳ ಕ್ರಾಂತಿಕಾರ್ಯ ಕಣ್ಮರೆಯಾಯಿತೆಂಬ ಆತಂಕ ಸಜ್ಜನ ಸಮಾಜವನ್ನು ಕಾಡುತ್ತಿದ್ದಾಗಲೇ ಹೊರಹೊಮ್ಮಿದ ಅಜೇಯ ಮತ್ತು ಅದಮ್ಯ ಕೃತಿಗಳು ಭರತಭೂಮಿಯ ಕ್ಷಾತ್ರತೇಜಸ್ಸನ್ನು ತೆರೆದಿಟ್ಟ ರೀತಿ ಅನನ್ಯ, ಅದ್ಭುತ, ಸರ್ವೋತ್ಕ್ರಷ್ಟ ಮತ್ತು ಸರ್ವೋಪರಿ. ಓಡಾಟ, ಸಂವಹನ, ಮಾಹಿತಿ ಸಂಗ್ರಹ ಕಷ್ಟವಾಗಿದ್ದ ಕಾಲಘಟ್ಟದಲ್ಲಿ ಭಾವರಾದಿಂದ ಅಲ್ಫೆçಡ್ ಉದ್ಯಾನದವರೆಗೆ ಓಡಾಡಿ, ನೂರಾರು ಮಂದಿಯನ್ನು ಸಂಪರ್ಕಿಸಿ, ಅಳಿದುಳಿದ ಹತ್ತಾರು ಕ್ರಾಂತಿಕಾರಿಗಳ ಜೀವನಾನುಭವ ದಾಖಲಿಸಿ ನಿಗಿನಿಗಿ ತಾರುಣ್ಯದ ತುರೀಯಾವಸ್ಥೆಯಲ್ಲಿ ಹೌತಾತ್ಮ್ಯದ ರಜತಗಿರಿಯೇರಿದ ಕ್ರಾಂತಿಸೂರ್ಯ ಚಂದ್ರಶೇಖರ ಆಜಾದರ ಜೀವನವನ್ನು ಮೂರಕ್ಷರದ ಶಕ್ತಿಪುಂಜಅಜೇಯ'ದಲ್ಲಿ ಕಟ್ಟಿಕೊಟ್ಟ ಡಾ. ಬಾಬು ಕೃಷ್ಣಮೂರ್ತಿಯವರ ಸಾಹಸ ಶ್ಲಾಘನೀಯ. ಅದುವರೆಗೆ ಭಾರತೀಯ ಸಾಹಿತ್ಯಲೋಕದಲ್ಲಿ ದಾಖಲಾಗದ ಆಜಾದರ ಜೀವನೇತಿಹಾಸ, ಸಹವರ್ತಿಗಳ ಅತುಲ್ಯ ಪರಾಕ್ರಮ ಕನ್ನಡದ ಮನಮನೆಗಳಲ್ಲಿ ಪಾರಾಯಣಯೋಗ್ಯ ಗ್ರಂಥವಾಗಿ ರೂಪುಗೊಂಡದ್ದೇ ಅಜೇಯದ ಶಕ್ತಿ. ವಿಕ್ರಾಂತ ಭಾರತದ ಮೂಲಕ ಜಂಬೂದ್ವೀಪದ ಸಿಂಹಸಾಹಸಿಕತೆಯನ್ನು ತೆರೆದಿಟ್ಟ ತಿರುಮಲೆ ತಾತಾಚಾರ್ಯ ಶರ್ಮ ಮತ್ತು ಮಧ್ವರಾಯರ ಪ್ರೇರಣೆಯೊಂದಿಗೆ ಅರಳಿದ ಅಜೇಯ'ವು ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯ ಚಿಂತನೆಗಳಿಗೆ ನವದಿಶೆಯಿತ್ತ ಭಾರತಾರಾಧಕರ ಸ್ಫೂರ್ತಿಮಂತ್ರ. ಬಡತನದ ಕುಟುಂಬದಲ್ಲಿ ಜನಿಸಿದ ಚಂದ್ರಶೇಖರ ಸಂಸ್ಕೃತ ಕಲಿಯಲೆಂದು ಕಾಶಿಗೆ ಬಂದದ್ದು, ತನ್ನ ಗುರುಗಳನ್ನು ಹಿಂಸಿಸಿದ ಅಧಿಕಾರಿಗೆ ಗುರಿಯಿಟ್ಟದ್ದು, ತುಂಬಿದ ನ್ಯಾಯಾಲಯದಲ್ಲಿ ತನ್ನನ್ನು ತಾನು ಆಜಾದನೆಂದು ಉದ್ಘೋಷಿಸಿದ್ದು, ಮೈಚರ್ಮ ಕಿತ್ತುಬರುವ ಒಂದೊಂದು ಛಡಿಯೇಟಿಗೂ ವಂದೇ ಮಾತರಮ್ ರಣಘೋಷ ಮೊಳಗಿಸಿದ್ದು, ಮತ್ತೆಂದೂ ಆಂಗ್ಲರ ಕೈಗೆ ಸಿಕ್ಕಿಹಾಕಿಕೊಳ್ಳನೆಂದು ಪ್ರತಿಜ್ಞೆ ಸ್ವೀಕರಿಸಿದ್ದು, ಪಂಡಿತ್ ಬಿಸ್ಮಿಲ್ಲರ ಸಖ್ಯ-ಭಗತ್ ಸಿಂಹನ ಗೆಳೆತನದಿಂದ ಬ್ರಿಟಿಷ್ ಮುಕ್ತ ಭಾರತದ ಕನಸಿನ ನನಸಿಗೆ ಸಂಘಟನೆಯನ್ನು ಬಲಪಡಿಸಿದ್ದು, ಸಂನ್ಯಾಸಿ ವೇಷದಲ್ಲಿ ಓಡಾಡುತ್ತಲೇ ಕ್ರಾಂತಿಕಾರ್ಯವನ್ನು ದೇಶದಾದ್ಯಂತ ಪಸರಿಸಿದ್ದು, ಮಾನವೇ ಮಹದ್ಧನವೆಂದು ಸಾರಿ ಮಹಾತ್ಮನಾದದ್ದು, ದೇಶಕ್ಕಾಗಿ ನಡೆದ ಕಾಕೋರಿ ದರೋಡೆಯ ಸಮಗ್ರ ನೇತೃತ್ವ ವಹಿಸಿದ್ದು, ಶಾಸನ ಸಭೆಯ ಮೇಲೆ ಬಾಂಬ್ ದಾಳಿಗೈಯುವ ಮೂಲಕ ಇಂಗ್ಲೆಂಡ್‌ನ ರಾಣಿಗೇ ಸವಾಲೆಸೆದದ್ದು, ಸ್ನೇಹಿತನ ವಿದ್ರೋಹಕ್ಕೆ ಬಲಿಯಾದೆನೆಂಬ ಅರಿವಾದ ತಕ್ಷಣವೇ ಆವೇಶಗೊಳ್ಳದೆ ಹುಲಿಯಂತೆ ಹೋರಾಡಿದ್ದು, ತನ್ನ ಶರೀರ ಶತ್ರುಗಳ ಪಾಲಾಗಬಾರದೆಂಬ ಬಾಲ್ಯದ ಸಂಕಲ್ಪವನ್ನು ನೆನೆಯುತ್ತಲೇ ಆತ್ಮಾಹುತಿಗೈದ ಭಾವಪೂರ್ಣ ಸಂಗತಿಗಳ ಸಹಿತ ಪರದೆಯೊಳಗೆ ಬಂಧಿಯಾಗಿದ್ದ ಅಸಂಖ್ಯ ಚೇತೋಹಾರಿ ಚರಿತ್ರೆಯನ್ನು ಎಳೆಎಳೆಯಾಗಿ ವಿವರಿಸಿದಅಜೇಯ', ಸರ್ವೇಸಾಮಾನ್ಯ ವ್ಯಕ್ತಿಯೊಬ್ಬ ದೇಶಕಟ್ಟುವ ದೀಕ್ಷೆ ತೊಟ್ಟು ಅಸಾಮಾನ್ಯ ನಾಯಕನಾಗಿ ಬೆಳೆದ ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಟ್ಟ ಸಾರ್ವಕಾಲಿಕ ಮಹೋನ್ನತ ಕೃತಿರತ್ನ.
ಬಾಬು ಕೃಷ್ಣಮೂರ್ತಿಯವರ ಅದಮ್ಯ' ಕೃತಿಯು ಭಾರತದ ಮಣ್ಣಿನಲ್ಲಡಗಿದ ಅಸ್ಖಲಿತ ಸತ್ ಶಕ್ತಿಯ ಪ್ರತೀಕ. ಅಂಕುರ, ಆಸ್ಫೋಟ, ಆಹುತಿಯೆಂಬ ಮೂರು ಭಾಗಗಳಲ್ಲಿ ಮೂಡಿಬಂದಅದಮ್ಯ'ವು ಆದ್ಯ ಕ್ರಾಂತಿಕಾರಿ ಮತ್ತು ಸಶಸ್ತç ಕ್ರಾಂತಿಯ ಪಿತಾಮಹ ವಾಸುದೇವ ಫಡಕೆಯ ಜೀವನಗಾಥೆ. ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಿ ಭಾರತವನ್ನು ಗೆದ್ದೆವೆಂದು ಬೀಗಿದ ಕೆಂಪಂಗಿಗಳ ಪಕ್ಕೆಲುಬು ಮುರಿದ ಫಡಕೆಯವರ ಶಿರಢೋಣ-ಏಡನ್ ಪಯಣವನ್ನು ವಿವರಿಸುವ ಪರಿಪೂರ್ಣ ಹೊತ್ತಗೆಯು ಕನ್ನಡದಲ್ಲೇ ಮೊದಲು ಪ್ರಕಾಶಗೊಂಡದ್ದೆಂಬುದು ಹಿರಿಮೆಗೊಂದು ಗರಿ. ಇತಿಹಾಸದ ಪುಟಗಳಿಂದ ಅಕ್ಷರಶಃ ಮರೆಯಾಗಿದ್ದ ಫಡಕೆಯ ಕ್ಷಾತ್ರವರ್ಚಸ್ಸನ್ನು ಅಕ್ಷರರೂಪಕ್ಕಿಳಿಸಿದ ಕೃಷ್ಣಮೂರ್ತಿಯವರ ಸಾಹಿತ್ಯ ಪರಿಕರ ಸಂಗ್ರಹವೇ ಒಂದು ಅಚ್ಚರಿ. ಬಾಲಗಂಗಾಧರ ತಿಲಕ್, ಛಾಪೇಕರ್ ಸಹೋದರರು, ವೀರ ಸಾವರ್ಕರರೇ ಮೊದಲಾಗಿ ಸಾವಿರಾರು ತರುಣರಿಗೆ ಸ್ಫೂರ್ತಿಯಿತ್ತ ಮಹಾಚೇತನ ಫಡಕೆಯವರ ಕ್ರಾಂತಿಯಾನವನ್ನು ಒಂದು ಪುಟದಲ್ಲಿ ಕಟ್ಟಿಕೊಟ್ಟ ಪ್ರಯತ್ನ ಅವರ್ಣನೀಯ. ಮರಾಠಾ ಸೈನ್ಯದ ಭಾಗವಾಗಿದ್ದರೂ ಕಾಲಾಂತರದಲ್ಲಿ ಬ್ರಿಟಿಷರ ಕುತಂತ್ರದಿಂದಾಗಿ ಕಾಡುಪಾಲಾಗಿ, ದರೋಡೆಕೋರರೆಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದ ರಾಮೋಶಿಗಳನ್ನು ಸಂಪರ್ಕಿಸಿ, ಅವರಲ್ಲಿ ಸುಪ್ತವಾಗಿದ್ದ ರಾಷ್ಟçನಿಷ್ಠೆಯನ್ನು ಬಡಿದೆಚ್ಚರಿಸಿ, ಆ ಕಾಲಕ್ಕೇ ಸುಸಜ್ಜಿತ ಸೇನೆ ಮತ್ತು ಬಂದೂಕುಗಳನ್ನು ಹೊಂದಿದ್ದ ಬ್ರಿಟಿಷರ ವಿರುದ್ಧ ಸಶಸ್ತç ಕ್ರಾಂತಿಯ ಪಾಂಚಜನ್ಯ ಮೊಳಗಿಸುವುದು ಸಾಮಾನ್ಯ ವಿಷಯವಲ್ಲ. ಊಹಿಸಲಸಾಧ್ಯವಾದ ಕಾರ್ಯಗಳನ್ನೆಲ್ಲ ಸಾಧ್ಯವಾಗಿಸಿದ ಫಡಕೆಯವರನ್ನು ಮೋಸದಿಂದ ಬಂಧಿಸಿದ ಬ್ರಿಟಿಷರು ದೂರದ ಏಡನ್ ಜೈಲಿಗಟ್ಟಿದ ಸನ್ನಿವೇಶ, ಹೇಗಾದರೂ ಮಾಡಿ ಭಾರತ ಸೇರಬೇಕೆಂದು ಹಾತೊರೆದು ನರಸಿಂಹ ರೂಪ ತಳೆದು ಜೈಲಿನ ಕಂಬಿಗಳನ್ನೇ ಕಿತ್ತು ಹೊರಬಂದ ಸಾಹಸ, ಶರೀರ ದುರ್ಬಲಗೊಂಡು ಸಾವು ಕಣ್ಣೆದುರು ಕುಣಿಯುತ್ತಿದ್ದರೂ ಅದಾವುದನ್ನೂ ಲೆಕ್ಕಿಸದೆ ಮಾತೃಭುವಿಯ ಬಂಧಮೋಚನಕ್ಕಾಗಿ ಹಾತೊರೆದ ದಧೀಚಿಜೀವನದ ಅನಾವರಣವೇ ಅದಮ್ಯ'ದ ಹೂರಣ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆಯೆಂಬ ಕಾರಣಕ್ಕಾಗಿ ಆ ಕೃತಿಗಳನ್ನು ನೆನೆಯುವುದಲ್ಲ. ಯಾವ ಪುಸ್ತಕವನ್ನು ಓದಿದ ತಂದೆ- ತಾಯಂದಿರು ತಮ್ಮ ಮಕ್ಕಳಿಗೆ ಪುಸ್ತಕದ ಹೆಸರನ್ನಿಟ್ಟು ಆನಂದಿಸಿದರೋ, ಯಾವ ಹೊತ್ತಗೆಯನ್ನು ಓದುತ್ತಲೇ ಸಾವಿರಾರು ಯುವ ಮುಂದಾಳುಗಳು ದೇಶರಕ್ಷೆಗಾಗಿ ಮುನ್ನುಗ್ಗುವ ಛಲ ತೋರಿದರೋ, ಯಾವ ಗ್ರಂಥವನ್ನು ಪಠಿಸುತ್ತಲೇ ಅಗಣಿತ ಸಂಖ್ಯೆಯ ರಾಷ್ಟ್ರೀಯವಾದಿ ಲೇಖಕರು, ಉಪನ್ಯಾಸಕರು ಹುಟ್ಟಿಕೊಂಡರೋ, ಆಅಜೇಯ'ಕ್ಕೆ ಐವತ್ತರ ಸಂಭ್ರಮ. ಯಾವಾತನ ಜೀವನ ಚರಿತ್ರೆಯನ್ನು ಓದುತ್ತಲೇ ಆಬಾಲವೃದ್ಧರು ಕಣ್ಣೀರು ಸುರಿಸಿ ನೊಂದರೋ, ಆ ಮಹಾವೀರ ಫಡಕೆಯ ಬ್ರಹ್ಮತೇಜಸ್ಸು ಮತ್ತು ಕ್ಷಾತ್ರವೃತ್ತಿಯನ್ನು ಲೋಕಕ್ಕೆ ಪರಿಚಯಿಸಿದ 'ಅದಮ್ಯ'ಕ್ಕೆ ನಲ್ವತ್ತರ ಸಡಗರ. ರಾಷ್ಟ್ರೀಯ ಚಿಂತನೆಗಳ ಪುಸ್ತಕವನ್ನು ಓದುವ ಅಭ್ಯಾಸವನ್ನು ಬೆಳೆಸಿ, ಕನ್ನಡ ನಾಡಿನಲ್ಲಿ ದೇಸೀ ನೆಲೆಗಟ್ಟಿನ ಗಟ್ಟಿ ಧ್ವನಿಯಾಗಿ ಕಂಗೊಳಿಸಿದ ಅಜೇಯ ಮತ್ತು ಅದಮ್ಯದ ಲೋಕಾರ್ಪಣೆಯ ಮಹತ್ವದ ಮೈಲುಗಲ್ಲು ರಾಷ್ಟ್ರಜಾಗರಣೆಯ ದಿಶೆಯಲ್ಲಿ ನಮ್ಮೆಲ್ಲರನ್ನು ಪ್ರೇರೇಪಿಸಲಿ.