ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅಜ್ಜನ ಉತ್ತರಾಧಿಕಾರಿಗಳು ಮೊಮ್ಮಕ್ಕಳ ಹಕ್ಕು

04:00 AM Nov 30, 2024 IST | Samyukta Karnataka

ಅಂದು ನ್ಯಾಯಾಲಯದಲ್ಲಿ ಎದುರುದಾರ ತಾಯಿ ಇಬ್ಬರು ಮಕ್ಕಳ ಪರವಾಗಿ ವಕಾಲತ್ ಪತ್ರ ದಾಖಲಿಸಿದೆ. ಕಕ್ಷಿದಾರರಿಗೆ ನಿಗದಿತ ಸಮಯ ನೀಡಿ ಹೋಮ್ ಆಫೀಸಿಗೆ ಬರಲು ತಿಳಿಸಿದೆ. ಮೇಲ್ಮನವಿಯ ಅಂಶಗಳನ್ನು ಕೆಳ ನ್ಯಾಯಾಲಯದ ತೀರ್ಪನ್ನು ಅಭ್ಯಸಿಸಿದೆ. ವಾದಿ ಮಗಳು, ಕೆಳ ನ್ಯಾಯಾಲಯದಲ್ಲಿ ತನ್ನ ಹಿಸ್ಸೆ ವಿಂಗಡಣೆ ಮತ್ತು ಪ್ರತ್ಯೇಕ ಸ್ವಾಧೀನ ಕುರಿತು ಸಿವಿಲ್ ದಾವೆಯನ್ನು ತನ್ನ ತಂದೆ ತಾಯಿ ಹಾಗೂ ತಂದೆಯ ಎರಡನೆ ಹೆಂಡತಿ, ಮಕ್ಕಳು, ಮೇಲ್ಮನವಿದಾರ/ಖರೀದಿದಾರನ ಮೇಲೆ ದಾಖಲಿಸಿದ್ದಳು. ವಾದ ಪತ್ರದಲ್ಲಿ ದಾವೆ ಜಮೀನು ಪಿತ್ರಾರ್ಜಿತ ಜಂಟಿ ಕುಟುಂಬದ ಆಸ್ತಿ. ಆದ್ದರಿಂದ ದಾವೆ ಆಸ್ತಿಗಳಲ್ಲಿ ಕಾನೂನುಬದ್ಧ ಹಿಸ್ಸೆ ಬೇಡಿಕೊಂಡಿದ್ದಳು. ಕೆಳ ನ್ಯಾಯಾಲಯವು ವಾದಿಯ ದಾವೆಯನ್ನು ಡಿಕ್ರಿಗೊಳಿಸಿ, ಕಾನೂನುಬದ್ಧ ಹಿಸ್ಸೆಯನ್ನು ಮಂಜೂರು ಮಾಡಿ, ಪ್ರತ್ಯೇಕ ಹಿಸ್ಸೆ ಕೊಡಲು ಆದೇಶ ಮಾಡಿತು. ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಖರೀದಿದಾರ ಈ ಮೇಲ್ಮನವಿಯನ್ನು ದಾಖಲಿಸಿದ್ದಾನೆ.
ಕಕ್ಷಿದಾರಳು ನನ್ನ ಸಲಹೆಯಂತೆ ಹೋಮ್ ಆಫೀಸಿಗೆ ಬಂದಳು. ಮೇಲ್ಮನವಿಯ ಸಾರಾಂಶಗಳನ್ನು ವಿವರವಾಗಿ ಹೇಳಿ, ಅವಳ ಪ್ರತಿಕ್ರಿಯೆಗಾಗಿ ಸುಮ್ಮನೆ ಕುಳಿತೆನು. "ಸರ್, ನಾನು ನನ್ನ ಗಂಡನ ಎರಡನೆಯ ಹೆಂಡತಿ. ನನಗೆ ಇಬ್ಬರು ಮಕ್ಕಳು. ಮೊದಲನೆಯ ಹೆಂಡತಿಗೆ ವಾದಿ ಒಬ್ಬಳೆ ಮಗಳು. ಮೊದಲ ಹೆಂಡತಿ ಮಗು ಹೆತ್ತ ನಂತರ ಗಂಡ ಹೆಂಡತಿ ನಡುವೆ ವೈವಾಹಿಕ ನ್ಯಾಯ ಬಂದಿತು. ಹೆಂಡತಿ ತನ್ನ ಹಾಗೂ ಮಗಳ ಜೀವನಾಂಶಕ್ಕಾಗಿ ದಾವೆ ಮಾಡಿದ್ದಳಂತೆ. ದಾವೆ ರಾಜಿ ಆಗಿ ತನ್ನ ಮತ್ತು ಮಗಳ ಜೀವನಾಂಶ, ಹಿಸ್ಸೆ ಎಂದು ಮೂರು ಲಕ್ಷ ಹಣ ಪಡೆದಳು. ಅದರಂತೆ ರಾಜಿ ಡಿಕ್ರಿ ಆಯಿತು. ನನ್ನ ತಂದೆ ತಾಯಿ ಅನಕ್ಷರಸ್ಥರು, ಬಡವರು ಯಾವುದೇ ವರದಕ್ಷಿಣೆ ಕೊಡುವ ಹಾಗಿಲ್ಲ ಅನ್ನುವುದರಿಂದ ರಾಜಿ ಡಿಕ್ರಿ ನೋಡಿ ನನಗೆ ಮದುವೆ ಮಾಡಿಕೊಟ್ಟರು. ನನಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ನಂತರ ನನ್ನ ಗಂಡ ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಆರೈಕೆ ನಾನೇ ಮಾಡುತ್ತಿರುವೆ. ಲಕ್ಷಾಂತರ ಹಣ ಖರ್ಚಾಗಿದೆ. ಸಾಲ ಪಡೆದಿದ್ದೇವೆ. ಅನಿವಾರ್ಯವಾಗಿ ದಾವೆ ಜಮೀನು ಮೇಲ್ಮನವಿದಾರನಿಗೆ ಮಾರಾಟ ಮಾಡಿದ್ದೇವೆ. ಸಾಲ ತೀರಿಸಿ ಉಳಿದ ಹಣದಲ್ಲಿ ಗಂಡನನ್ನು ಆರೈಕೆ ಮಾಡಿ, ಹೊಟ್ಟೆ ತುಂಬಿಕೊಳ್ಳುತ್ತಿದ್ದೇವೆ. ಈಗ ಮೊದಲ ಹೆಂಡತಿ ಮಗಳು ದಾವೆ ಮಾಡಿದ್ದಾಳೆ. ಸರ್ ನಮ್ಮನ್ನು ನಂಬಿ, ಸಹಾಯ ಮಾಡಲು ಯೋಗ್ಯ ಮೌಲ್ಯ ಕೊಟ್ಟು ದಾವೆ ಜಮೀನು ಖರೀದಿಸಿದ ಮೇಲ್ಮನವಿದಾರನಿಗೆ ಅನ್ಯಾಯ ಆಗಬಾರದು ಎಂದು ವಿವರವಾಗಿ ಹೇಳಿದಳು. ಅವಳಿಂದ ಇನ್ನಷ್ಟು ವಿವರಣೆ ಅವಶ್ಯ ಇತ್ತು. ದಾವೆ ಆಸ್ತಿ ಹೇಗೆ ಬಂತು, ಯಾವಾಗ ಬಂತು ಕೇಳಿದೆ. "ಸರ್, ನನ್ನ ಮಾವನು ೧೯೭೦ರಲ್ಲಿ ಮೃತನಾಗಿದ್ದಾನೆ. ಅವನು ಮೃತನಾದ ಎರಡು ವರ್ಷಕ್ಕೆ ಅತ್ತೆ ಮೃತಳಾದಳು. ಅತ್ತೆ ಮಾವನವರಿಗೆ ನನ್ನ ಗಂಡ, ಇನ್ನೊಬ್ಬ ಮಗ ವಾರಸುದಾರರು, ಹೆಣ್ಣುಮಕ್ಕಳು ಇಲ್ಲ. ಮನೆತನಕ್ಕೆ ಎರಡು ಜಮೀನುಗಳು. ಅಣ್ಣ ತಮ್ಮರಲ್ಲಿ ವ್ಯಾಜ್ಯ ಉಂಟಾಗಿ ಆಸ್ತಿಗಳನ್ನು ವಿಭಜಿಸಿ ರಾಜಿ ಡಿಕ್ರಿ ಮಾಡಿಕೊಂಡರು. ದಾವೆ ಜಮೀನು ಗಂಡನ ಪಾಲಿಗೆ, ಇನ್ನೊಂದು ತಮ್ಮನ ಪಾಲಿಗೆ ಬಂದಿದೆ. ಈಗ ಅಣ್ಣ ತಮ್ಮ ಅನ್ಯೋನ್ಯದಿಂದ ಇದ್ದಾರೆ. ನನ್ನ ಮಾವ ಮೃತನಾದಾಗ ವಾದಿ ಮೊಮ್ಮಗಳು ಹುಟ್ಟಿರಲಿಲ್ಲ". ಕೊನೆಯ ವಿವರಣೆ, ಮೇಲ್ಮನವಿಯನ್ನು ಪುರಸ್ಕರಿಸಿ, ಮಗಳು ವಾದಿ ಮಾಡಿದ ದಾವೆಯನ್ನು ವಜಾಗೊಳಿಸಲು ಕಾನೂನಾತ್ಮಕ ಅಂಶ ಇದೆ ಎಂದು ಅಭಿಪ್ರಾಯಪಟ್ಟೆನು.
ಮೇಲ್ಮನವಿಯ ವಿಚಾರಣೆ ಪ್ರಾರಂಭವಾಯಿತು. ಮೇಲ್ಮನವಿ ಪ್ರಕ್ರಿಯೆಯಲ್ಲಿ ಕೆಳ ನ್ಯಾಯಾಲಯದ ತೀರ್ಪಿನ ಕಾನೂನು, ಸಂಗತಿಗಳ ಅವಲೋಕನೆ ಬಗ್ಗೆ ವಾದ ಆಗುತ್ತದೆ. ಅನಿವಾರ್ಯ ಪ್ರಸಂಗಗಳಲ್ಲಿ ಹೆಚ್ಚಿನ ಸಾಕ್ಷ್ಯಾಧಾರ ನ್ಯಾಯಾಲಯ ಆದೇಶಿಸಿದರೆ ಹಾಜರುಪಡಿಸಲು ಅವಕಾಶ ಇದೆ.
ಮೊದಲಿಗೆ ಮೇಲ್ಮನವಿದಾರ/ಖರೀದಿದಾರನ ಪರ ವಕೀಲರು ಕೆಳ ನ್ಯಾಯಾಲಯದಲ್ಲಿ ವಾದಿ ದಾಖಲಿಸಿದ ದಾವೆ ಸಂಗತಿ ಹೇಳುತ್ತ, ವಾದಿಯ ತಂದೆಯ ಆಸ್ತಿಯು ಅವನ ಸ್ವಂತ ಆಸ್ತಿಯೆಂದು ಪರಿಗಣಿಸಲ್ಪಡು ತ್ತದೆ. ತಂದೆ ಮೇಲ್ಮನವಿದಾರನಿಗೆ ಮಾರಾಟ ಮಾಡಿದ ಕ್ರಿಯೆಯನ್ನು ವಾದಿ ಮಗಳು ಪ್ರಶ್ನಿಸಲಾಗದು. ಹಿಂದೂ ಉತ್ತರಾಧಿಕಾರಿ ಕಾನೂನಿನ ಕಲಂ ೮ರಲ್ಲಿ ಒಬ್ಬ ಹಿಂದೂ ಪುರುಷ ಮೃತನಾದರೆ ಯಾರು ಉತ್ತರಾಧಿಕಾರಿ ಅನ್ನುವುದನ್ನು ವರ್ಗೀಕರಣ ಮಾಡಿ ಹೇಳಲಾಗಿದೆ. ಹೆಂಡತಿ, ಮಕ್ಕಳು ಇತರನ್ನು ಮೊದಲ ವರ್ಗದ ನೇರ ವಾರಸುದಾರರು. ಅವರ ಸ್ವತಂತ್ರ ದಾಯಾದಿಗಳಾಗಿ ಆಸ್ತಿಯ ಸಮಭಾಗಿಗಳಾಗುತ್ತಾರೆ. ಈ ಪ್ರಕರಣದಲ್ಲಿ ವಾದಿಯ ಅಜ್ಜ ತೀರಿಕೊಂಡಾಗ ಮೊಮ್ಮಗಳು ವಾದಿ ಹುಟ್ಟಿರಲಿಲ್ಲ ಆದ್ದರಿಂದ ಅಜ್ಜನ ಉತ್ತರಾಧಿಕಾರಿ ಆಗುವದಿಲ್ಲ. ತಂದೆಯ ಸ್ವತಂತ್ರ ಆಸ್ತಿ. ತಂದೆ ಜೀವಂತ ಇರುವಾಗ ಪಾಲು ಕೇಳಲಾಗದು. ತಂದೆ ಮೃತ್ಯು ಪತ್ರ ಬರೆಯದೆ, ಹಸ್ತಾಂತರ ಮಾಡದೆ ಆಸ್ತಿ ಉಳಿಸಿ ಮೃತನಾಗಿದ್ದರೆ ಆಸ್ತಿಗೆ ಹಕ್ಕುದಾರ ಆಗುತ್ತಾಳೆ. ತಂದೆ ತನ್ನ ಸ್ವತಂತ್ರ ಆಸ್ತಿಯನ್ನು ಇಚ್ಛೆಯಂತೆ ಅನುಭವಿಸಿ ಮಾರಾಟ ಮಾಡುವ ಹಕ್ಕು ಹೊಂದಿದ್ದಾನೆ. ಇದನ್ನು ಪ್ರಶ್ನಿಸುವ ಮತ್ತು ತಂದೆಯ ಜೀವಿತ ಅವಧಿಯಲ್ಲಿ ಪಾಲು ಕೇಳುವ ಹಕ್ಕು ವಾದಿಗೆ ಇಲ್ಲ. ಈ ನ್ಯಾಯತತ್ವದ
ಅಡಿಯಲ್ಲಿ ಕೆಳನ್ಯಾಯಾಲಯ ದಾವೆ ವಜಾಗೊಳಿಸಬೇಕಿತ್ತು ಆದರೆ ಪಾಲು ನೀಡಿದ್ದು ಸರಿ ಅಲ್ಲವೆಂದು, ಸರ್ವೋಚ್ಚ, ಉಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ಉಲ್ಲೇಖಿಸಿ ಹಾಜರುಪಡಿಸಿ ಮೇಲ್ಮನವಿ ಪುರಸ್ಕರಿಸಿ ದಾವೆ ವಜಾಗೊಳಿಸಲು ವಿನಂತಿಸಿಕೊಂಡರು. ಎರಡನೆ ಹೆಂಡತಿ, ಮಕ್ಕಳ ಪರವಾಗಿ ಮೇಲ್ಮನವಿದಾರನ ವಾದವನ್ನು ಅಳವಡಿಸಿಕೊಂಡೆನು. ವಾದಿಯ ವಕೀಲರು ಕೆಳನ್ಯಾಯಾಲಯದಲ್ಲಿ ಮಂಡಿಸಿದ ವಾದ ಪುನರುಚ್ಚ್ಚರಿಸಿದರು. ನ್ಯಾಯಾಲಯವು ಮೇಲ್ಮನವಿಯನ್ನು ಪುರಸ್ಕರಿಸಿ, ಕೆಳ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿ, ವಾದಿಯ ದಾವೆಯನ್ನು ವಜಾಗೊಳಿಸಿ ತೀರ್ಪು ನೀಡಿತು. ತೀರ್ಪಿನಲ್ಲಿ ಅಜ್ಜ ಮೃತನಾದ ನಂತರ ಹೆಂಡತಿ, ಮಕ್ಕಳು ಇತರರು ಮೊದಲ ವರ್ಗದ ಉತ್ತರಾಧಿಕಾರಿಗಳು, ಪಿತ್ರಾರ್ಜಿತ ಆಸ್ತಿ, ಏಕತ್ರ ಕುಟುಂಬ ಅಂತ್ಯವಾಯಿತು, ಸ್ವತಂತ್ರ ಆಸ್ತಿಯಾಗಿ ಪರಿಗಣಿಸಲ್ಪಡುತ್ತದೆ. ಮೊಮ್ಮಗಳಿಗೆ ತಂದೆಯ ಜೀವಿತ ಅವಧಿಯಲ್ಲಿ ಪಾಲು ಕೇಳಲು ಹಕ್ಕಿಲ್ಲವೆಂದು ಅಭಿಪ್ರಾಯಪಟ್ಟಿತು. ಸರ್ವೋಚ್ಚ, ಉಚ್ಚ ನ್ಯಾಯಾಲಯಗಳು, ಕಾನೂನಿನ ದ್ವಂದ್ವ ಅಂಶಗಳನ್ನು ಪರಿಹರಿಸಿ ತೀರ್ಪು ನೀಡಿ ನ್ಯಾಯದಾನ ಪ್ರಕ್ರಿಯೆ ಸರಳೀಕರಿಸುತ್ತವೆ.

Next Article