For the best experience, open
https://m.samyuktakarnataka.in
on your mobile browser.

ಅಡಕತ್ತರಿಯಲ್ಲಿ ಮೋದಿ ಗ್ಯಾರಂಟಿಗಳು

03:15 AM Jun 10, 2024 IST | Samyukta Karnataka
ಅಡಕತ್ತರಿಯಲ್ಲಿ ಮೋದಿ ಗ್ಯಾರಂಟಿಗಳು

ಈ ಬಾರಿಯ ಚುನಾವಣೆ ಪ್ರಕ್ರಿಯೆಯೇ ಒಂದು ರೀತಿಯಲ್ಲಿ ನೀರಸವಾಗಿತ್ತು. ಬರೋಬ್ಬರಿ ಎರಡೂವರೆ ತಿಂಗಳು ನಡೆದ ಚುನಾವಣೆ ಒಂದು ರೀತಿ ಟೆಸ್ಟ್ ಮ್ಯಾಚ್‌ಗಳಂತೆ ಭಾಸವಾಗುತ್ತಿತ್ತು. ಚುನಾವಣೆಗಳ ನಂತರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ ಹೆಚ್ಚು ಬಿಸಿಲಿದ್ದದ್ದು ಸ್ವಲ್ಪ ತೊಡಕಾಗಿ ಪರಿಣಮಿಸಿತು, ಇದು ನಮಗೆ ಕಲಿಕೆ ಇದ್ದಂತೆ ಎಂದು ಹೇಳಿದ್ದು ನಿಜಕ್ಕೂ ಹಾಸ್ಯಾಸ್ಪದವಾಗಿತ್ತು, ಭಾರತದಂಥ ಭೌಗೋಳಿಕ ಭಿನ್ನತೆಯನ್ನು ಹೊಂದಿರುವ ದೇಶದಲ್ಲಿ ಚುನಾವಣಾ ಆಯೋಗಕ್ಕೆ ಮಳೆ, ಬಿಸಿಲು, ಚಳಿಗಾಲ ಹಾಗೂ ಮಳೆಗಾಲದ ಅರಿವಿಲ್ಲವೆಂದರೆ ಹೇಗೆ? ಕರ್ನಾಟಕದಂತಹ ರಾಜ್ಯದಲ್ಲಿ ಎರಡು ಚರಣ ತಮಿಳುನಾಡಿನಂತಹ ರಾಜ್ಯದಲ್ಲಿ ಒಂದೇ ಚರಣದಲ್ಲಿ ಚುನಾವಣೆ ಹೀಗೆ ಚುನಾವಣಾ ಆಯೋಗದ ನಿರ್ಧಾರ ತರ್ಕಕ್ಕೆ ನಿಲುಕದ ವಿಷಯ. ಇದೇ ರೀತಿ ಹಲವು ಸಂಸ್ಥೆಗಳು ನಡೆಸಿದ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಪರ ತೋರಿದ ಸಂಖ್ಯಾ ಧಾರಾಳತನ ನಿಜಕ್ಕೂ ಅಚ್ಚರಿಯೇ ಸರಿ. ಎರಡನೇ ಚರಣದ ನಂತರವೇ ಅಲ್ಲಲ್ಲಿ ಇದು ಇಂಡಿಯಾ ಶೈನಿಂಗ್ ರೀತಿಯ ಚುನಾವಣೆ ಆಗುತ್ತಿದೆ ಎಂದು ಹಲವಾರು ಹಿರಿಯ ಪತ್ರಕರ್ತರು ಅಭಿಪ್ರಾಯಪಟ್ಟಾಗ ಎಕ್ಸಿಟ್ ಪೋಲ್ ಸಂಸ್ಥೆಗಳು ಕ್ಯಾರೇ ಅನ್ನಲಿಲ್ಲ. ಎಲ್ಲರೂ ಕುದುರೆಯಂತೆ ೩೭೦ ಪ್ಲಸ್ ಜಪ ಮಾಡಿದರು. ಸಾಮಾನ್ಯವಾಗಿ ೧೦ ಭಿನ್ನ ಭಿನ್ನ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದರೆ ಅವುಗಳಲ್ಲಿ ೫ ರಿಂದ ೭ ಒಂದು ದಿಶೆಯನ್ನು ತೋರಿಸಿದರೆ ಇನ್ನುಳಿದ ಮೂರು ಸಮೀಕ್ಷೆಗಳು ಇನ್ನೊಂದು ದಿಶೆ ತೋರಿಸುತ್ತಿದ್ದವು. ಆದರೆ ಈ ಬಾರಿ ಎಲ್ಲವೂ ಒಂದೇ ದಿಶೆಯಲ್ಲಿದ್ದವು, ಸಮೀಕ್ಷೆಗಳು ನಿಖರವಾಗಿರಬೇಕೆಂದು ಯಾರು ಬಯಸುವುದಿಲ್ಲ. ಆದರೆ ಅವುಗಳು ಫಲಿತಾಂಶದ ಆಸುಪಾಸಾದರೂ ಇರಬೇಕಲ್ಲವೇ ಹಾಗಿರಬೇಕೆಂದು ಬಯಸುವುದಕ್ಕೂ ಕಾರಣಗಳಿವೆ. ಇದು ಟೆಕ್ನಾಲಜಿ ಯುಗ, ಚುನಾವಣಾ ಸಮೀಕ್ಷೆಗಳು ವೈಜ್ಞಾನಿಕವಾಗಿ ಹಾಗೂ ಪ್ರಾಮಾಣಿಕವಾಗಿ ನಡೆದಾಗ ನಿಖರವಾಗಿರದಿದ್ದರೂ ಸನಿಹಕ್ಕಂತೂ ಇರಲೇಬೇಕು. ಚುನಾವಣೋತ್ತರ ಸಮೀಕ್ಷೆಗಳು ಬಂದಾಗ ಷೇರು ಮಾರುಕಟ್ಟೆ ೨೫೦೦ ಪಾಯಿಂಟ್ಸಗಳಷ್ಟು ಪುಟಿದೇಳುತ್ತದೆ, ಅದೇ ರೀತಿ ಫಲಿತಾಂಶ ಬಂದಾಗ ೪೦೦೦ ಪಾಯಿಂಟ್ಸಗಳಷ್ಟು ಧರೆಗಿಳಿಯುತ್ತದೆ ಎಂದರೆ ಸಮೀಕ್ಷೆಗಳ ಪರಿಣಾಮಗಳೇನೆಂದು ನೀವೇ ಊಹಿಸಿ.
ಇದು ಚುನಾವಣೆ ನಡೆದ ರೀತಿ ಹಾಗೂ ಸಮೀಕ್ಷೆಗಳ ಸಂಗತಿಯಾದರೆ ಭಾರತದ ರಾಜಕೀಯ ಮತ್ತೆ ವಾಜಪೇಯಿ ಯುಗದತ್ತ ತಿರುಗುತ್ತಿದೆ. ಮೇಲ್ನೋಟಕ್ಕೆ ಎನ್‌ಡಿಎ ಸರ್ಕಾರ ರಚಿಸುತ್ತಿದೆ. ಆದರೆ ಹೀಗೆ ರಚನೆಯಾದ ಸರ್ಕಾರ ಎಷ್ಟು ದಿನ ಬಾಳುವುದು ಎಂಬುದು ಮಾತ್ರ ನಿತೀಶ್ ಬಾಬು ಹಾಗೂ ಚಂದ್ರಬಾಬು ಇವರಿಬ್ಬರ ಮರ್ಜಿಯ ಮೇಲೆ ನಿರ್ಧಾರಿತವಾಗುತ್ತದೆ, ಹಾಗೆ ನೋಡಿದರೆ ಈ ಇಬ್ಬರು ಬಾಬುಗಳಿಗೆ ಸಮ್ಮಿಶ್ರ ಸರ್ಕಾರಗಳು ಮತ್ತು ಅದರ ಕಾರ್ಯವೈಖರಿ ಯಾವುದೂ ಹೊಸದಲ್ಲ. ಆದರೆ ಮೋದಿಯವರಿಗೆ ಇದು ಹೊಸ ಅಧ್ಯಾಯ, ಕಾರಣವಿಷ್ಟೇ. ಗುಜರಾತಿನಿಂದಾದಿಯಾಗಿ ದೆಹಲಿಯವರೆಗೆ ಮೋದಿ ಆಡಳಿತ ನಡೆಸಿದ್ದು ಪರಿಪೂರ್ಣ ಬಹುಮತದಲ್ಲಿ. ಆದರೆ ಇದೀಗ ಬೆಳಗಾಗೆದ್ದು ಬಾಬುಗಳಿಗೆ ಹಲೋ ಹೇಳಬೇಕು, ಮೋದಿಜಿ ಬಾಬುಗಳಿಗಿರಲಿ ತಮ್ಮ ಪಕ್ಷದವರಿಗೆ ಹಲೋ ಹೇಳುವುದಿಲ್ಲ ಎಂಬುದು ಅವರ ಮೇಲಿರುವ ಅಪವಾದ. ಇದು ಸುಳ್ಳೇ ಆಗಿದ್ದರೂ ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ಈ ರೀತಿಯ ಅಭಿಪ್ರಾಯಗಳು ರೂಪುಗೊಳ್ಳುತ್ತಿರುತ್ತವೆ. ಪ್ರಸ್ತುತ ಸನ್ನಿವೇಶದಲ್ಲಂತೂ ಅದನ್ನು ಬದಲಾಯಿಸುವುದು ಬಲು ಕಷ್ಟ, ಅಷ್ಟಲ್ಲದೇ ಅಟಲ್ ಜಿ ಕಾಲದ ಎನ್‌ಡಿಎ ಮಿತ್ರಪಕ್ಷಗಳಿಗೂ ಈಗಿನ ಎನ್‌ಡಿಎ ಮಿತ್ರಪಕ್ಷಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಆಗ ಏನಕೇನ ಅಕಾಲಿ ದಳ, ಬಾಳಸಾಹೇಬರ ಶಿವಸೇನಾ ಇವರೆಲ್ಲರೂ ನ್ಯಾಚುರಲ್ ಅಲಯನ್ಸ್ನಂತೆ ಇದ್ದವರು. ಅಂದರೆ ಸ್ವಾಭಾವಿಕ ಮಿತ್ರರು ಅವರು ಅಧಿಕಾರ ಇದ್ದರೂ ಇಲ್ಲದಿದ್ದರೂ ಜೊತೆಗಾರರಾಗಿದ್ದವರು. ಆದರೆ ಇಂದಿನ ಜೊತೆಗಾರರು ಇಡಿ ಅಥವಾ ಇನ್ಯಾವುದೋ ತನಿಖಾ ಸಂಸ್ಥೆಯ ಹಂಗಿಗೆ ಬೆಸುಗೆಗೊಂಡವರು, ಬಲವಂತದ ಬೆಸುಗೆಗೆ ಬಿರುಕನ್ನು ತಾಳುವ ಶಕ್ತಿಯಿರುವುದಿಲ್ಲ ಹಾಗೂ ಬೆಸುಗೆಯ ಮುನ್ನ ಕಬ್ಬಿಣವನ್ನು ಕಾಯಿಸಿದ ಪರಿ ಬಹಳ ಮುಖ್ಯ. ಆ ಜೊತೆಗಾರರಿಗೆ ಆ ನೆನಪು ಮಾಸಿದ್ದರೆ ಚಿಂತೆಯಿಲ್ಲ, ಅದೇನಾದರೂ ಮಾಸದೆ ಬೆಸುಗೆಯ ಗಾಯಗಳು ತಾಜಾ ಇದ್ದರೆ ಎನ್‌ಡಿಎ ಸರ್ಕಾರ ಹಾಗೂ ಮೋದಿ ಗ್ಯಾರಂಟಿಗಳು ಅಡಕತ್ತರಿಯಲ್ಲಿ ಸಿಕ್ಕು ಒದ್ದಾಡಲಿವೆ. ಬಾಬುಗಳ ಮರ್ಜಿಯಲ್ಲಿ ಮೋದಿ ಗ್ಯಾರಂಟಿಗಳು ಮರೆಯಾಗಿ ಕಾಮನ್ ಮಿನಿಮ್ ಗ್ಯಾರಂಟಿಗಳು ತಲೆಯೆತ್ತಲಿವೆ, ಇದಿಷ್ಟೇ ಆದರೆ ತೊಂದರೆಯಿಲ್ಲ, ಇಬ್ಬರು ಬಾಬುಗಳು ಒಳ್ಳೆಯ ಚೌಕಾಸಿ ನಿಪುಣರೆ, ಆದ್ದರಿಂದ ಯಾರು ಯಾವ ವಿಷಯದಲ್ಲಿ ತಗಾದೆ ತೆಗೆಯುತ್ತಾರೆ ಎಂದು ಹೇಳುವುದು ಕಷ್ಟ. ಹಿಂದೊಮ್ಮೆ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಚಂದ್ರಬಾಬು ನಾಯ್ಡು ಎನ್‌ಡಿಎ ಸಂಚಾಲಕರಾಗಿದ್ದ ನೆನಪು. ಆಗ ಚಂದ್ರಬಾಬು ನಾಯ್ಡು ೧೧೮ ಬೇಡಿಕೆಗಳನ್ನು ಅಟಲ್ ಜಿ ಮುಂದೆ ಇಟ್ಟಿದ್ದರಂತೆ, ಅದರಲ್ಲಿ ೧೧೮ನೆಯ ಬೇಡಿಕೆ ಇನ್ಶೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫೀಸ್ ಹೈದರಾಬಾದ್‌ನಲ್ಲೇ ಸ್ಥಾಪನೆಯಾಗಬೇಕೆಂಬ ಬೇಡಿಕೆಯಾಗಿತ್ತಂತೆ, ಇನ್ಶೂರೆನ್ಸ್ ಕಂಪನಿಗಳ ಆಫೀಸ್‌ಗಳು ಮುಂಬೈನಲ್ಲಿದ್ದರೆ ಅವುಗಳನ್ನು ನಿಯಂತ್ರಿಸುವ ರೆಗ್ಯುಲೇಟರಿ ಸಂಸ್ಥೆ ಮಾತ್ರ ಹೈದರಾಬಾದ್‌ನಲ್ಲೆ ಆಗಬೇಕು. ಅದಕ್ಕೆ ಕೊಟ್ಟ ಕಾರಣಗಳು ಇಂಟರೆಸ್ಟಿಂಗ್. ಇನ್ಶೂರೆನ್ಸ್ ಕಂಪನಿಗಳ ಆಫೀಸರ್‌ಗಳು ಆಗಾಗ ಹೈದರಾಬಾದ್‌ಗೆ ಹೋಗಿ ಬರುವುದರಿಂದ ವಿಮಾನಯಾನ ಸಂಸ್ಥೆಗಳಿಗೆ ಒಂದಿಷ್ಟು ವ್ಯಾಪಾರ ಆಗುತ್ತದೆ ಮತ್ತು ಸಂಬಂಧಪಟ್ಟ ವ್ಯಾಪಾರ ವಹಿವಾಟಿಗೂ ಪ್ರೋತ್ಸಾಹ ದೊರೆಯುತ್ತದೆ. ಹೀಗೆ ಅವರದೇ ವಾದ ಮಂಡಿಸಿದ್ದರು. ಅಟಲ್ ಜಿ ಆ ೧೧೮ ಬೇಡಿಕೆಗಳಲ್ಲಿ ಬಾಬುಗಾರು ನಿಮ್ಮ ೧೧೮ನೇ ಬೇಡಿಕೆಗೆ ಒಪ್ಪಿಗೆ ಕೊಟ್ಟಿದ್ದೇವೆ ಅಂದಿದ್ದರಂತೆ, ಆಗ ಚಂದ್ರಬಾಬು ನೂರಾ ಹದಿನೆಂಟು ಬೇಡಿಕೆಗಳಿಗೂ ಅಸ್ತು ಎಂದಿದ್ದಾರೆ ಎಂದೇ ಭಾವಿಸಿದ್ದರಂತೆ.
ಇನ್ನು ನಿತೀಶ್ ಕುಮಾರ್ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆಯಿಲ್ಲ, ಇತ್ತೀಚಿನ ದಿನಗಳಲ್ಲಿ ಯುವಕರಿಂದಾದಿಯಾಗಿ ಹಿರಿಯರವರೆಗೂ ಎಲ್ಲರೂ ನಿತೀಶ್ ಕುಮಾರ್‌ರನ್ನು ಪಲ್ಟು ಚಾಚಾ, ಜಂಪಿಂಗ್ ಸ್ಟಾರ್ ಎಂದು ಆಡಿಕೊಂಡಿದ್ದೇ ಆಡಿಕೊಂಡಿದ್ದು. ಆದರೆ ಇದೀಗ ನೋಡಿ ಜಗತ್ತಿನ ಅತ್ಯಂತ ಪ್ರಭಾವಿ ನಾಯಕ ಇಂದು ನಿತೀಶ್ ಹಂಗಿನಲ್ಲಿ ಸರ್ಕಾರ ರಚಿಸಬೇಕು. ಸರಿಸುಮಾರು ಇಪ್ಪತ್ತು ವರ್ಷಗಳಿಂದ ನಿತೀಶ್ ಕುಮಾರ್ ತಾವೇ ಆಡಳಿತ ನಡೆಸುತ್ತಿದ್ದರು, `ಹಮ್ ಬಿಹಾರ್ ಮೆ ಜಂಗಲ್ ರಾಜ್ ಕೋ ಹಠಾನೆ ಕೇಲಿಯೆ ಮೈತ್ರಿ ಮಾಡಿಕೊಂಡಿದ್ದೇವೆ' ಎಂದು ಹೇಳುತ್ತಿರುತ್ತಾರೆ. ಡೆಲ್ಲಿಯ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತುವಾಗ ಎನ್‌ಡಿಎ ಕಾಮನ್ ಮಿನಿಮ್ ಗ್ಯಾರಂಟಿಗಳ ಬಗ್ಗೆ ಮಾತನಾಡಿ ವಿಮಾನ ಹತ್ತಿದೊಡನೆ ಜಾತಿ ಗಣತಿ, ಜೆಪಿ, ಲೋಹಿಯಾ ಹಾಗೂ ಸಮಾಜವಾದದ ನೆನಪಾಗಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಇಂಡಿಯಾ ಮೈತ್ರಿಕೂಟಕ್ಕೆ ಚಾಲನೆ ಕೊಟ್ಟು ಅರ್ಧ ದಾರಿಯಲ್ಲಿ ಬಿಟ್ಟು ಬಂದ ಪಶ್ಚಾತ್ತಾಪದ ಬೇಗೆಯಲ್ಲಿ ಬೆಂದು ಅವರ ಕಚೇರಿ ತಲುಪುವುದರೊಳಗೆ ಇಂಡಿಯಾ ಕೂಟದ ಶರದ್ ಪವಾರ್‌ರನ್ನು ಸಂಪರ್ಕಿಸುವ ಸಾಧ್ಯತೆಗಳಿರುತ್ತವೆ. ಇದೆಲ್ಲದರ ಪರಿಣಾಮವಾಗಿ ಇಷ್ಟವಿದೆಯೋ ಇಲ್ಲವೋ ಮೋದಿಜಿ ಬಾಬುಗಳಿಗೆ ಹಲೋ ಹೇಳುವ ಮೂಲಕ ದಿನಚರಿ ಪ್ರಾರಂಭಿಸಬೇಕು. ಸ್ವಲ್ಪ ಏಮಾರಿದರೂ ಮತ್ತೊಂದು ಚುನಾವಣೆಗೆ ಸಿದ್ಧರಾಗಬೇಕು, ಹಾಗೇನಾದರೂ ಮತ್ತೆ ಚುನಾವಣೆ ಆಗುವುದಾದರೆ ಮ್ಯಾನ್ ಆಫ್ ದಿ ಮ್ಯಾಚ್ ಎಂದು ಘೋಷಿತರಾದರು ಕಪ್ ಪಡೆದುಕೊಳ್ಳಲಾಗದೆ ಚಡಪಡಿಸುತ್ತಿರುವ ಅಖಿಲೇಶ್ ಕಪ್ ಹಾಗೂ ಮ್ಯಾನ್ ಒಫ್ ದಿ ಮ್ಯಾಚ್ ಎರಡು ನಿಮಗೆ ಬಂದು ಬಿಡಿ ಬೇಗ ಎಂಬ ರೆಕಾರ್ಡೆಡ್ ಮೆಸೇಜ್ ಅನ್ನು ಸದಾ ಕೇಳಿಸುವ ಸಂಭವವಿರುತ್ತದೆ. ಆದ್ದರಿಂದ ಮನ್ ಕಿ ಬಾತ್ ಕೇಳುವ ಮುನ್ನ ಬಾಬುಗಳಿಬ್ಬರ ದಿಲ್ ಕಿ ಬಾತ್ ಕೇಳುವದು ಅನಿವಾರ್ಯ.

ಕಾರ್ತಿಕ್ ಎಸ್ ಬಾಪಟ್