ಸುರಕ್ಷಿತ ಆಟ, ಕಾದು ನೋಡುವ ತಂತ್ರದ ಫಲ
ಸುಮಾರು ೪೫ ವರ್ಷದ ಹೆಣ್ಣು ಮಗಳು ಕವಿತಾ, ಮನೆ ಕಚೇರಿಗೆ ಗಂಡನ ಜೊತೆ ಬಂದಳು. ನ್ಯಾಯಾಲಯದಿಂದ ಬಂದ ಸಮನ್ಸ್ ನೋಟಿಸನ್ನು ನನ್ನ ಕೈಗೆ ಕೊಟ್ಟು, ನನ್ನ ಅಭಿಪ್ರಾಯ, ಸಲಹೆ, ಸೂಚನೆ ಏನೆಂದು ನಿರೀಕ್ಷಿಸುತ್ತ ಕುಳಿತುಕೊಂಡಳು. ಅವಳ ಮುಖದಲ್ಲಿ ಯಾವುದೇ ಸಂದಿಗ್ಧತೆ, ಕಳವಳ, ದುಗುಡ, ಭಯ, ಕಾತರ ಇರಲಿಲ್ಲ. ಸಮಾಧಾನದಿಂದ ಕಾಗದ ಪತ್ರಗಳನ್ನು ಪರಿಶೀಲಿಸಿದೆ. ಕವಿತಾಳ ಸಹೋದರ ಸಾಯಿನಾಥನ ಹೆಂಡತಿ ಸುಮತಿ ಮತ್ತು ಇಬ್ಬರು ಮೈನರ್ ಮಕ್ಕಳು ವಾದಿಯರು, ಮನೆತನದ ಆಸ್ತಿಗಳಲ್ಲಿ ಹಿಸ್ಸೆ ವಿಭಜಿಸಿ ಪ್ರತ್ಯೇಕ ಸ್ವಾಧೀನ ಕೊಡಲು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಮಾಡಿದ್ದರು.
ಕವಿತಾಳ ತಂದೆ ತಾಯಿಗೆ ಸಾಯಿನಾಥ, ಪ್ರೇಮನಾಥ ಇಬ್ಬರು ಗಂಡು ಮಕ್ಕಳು ಇವಳೊಬ್ಬಳೇ ಮಗಳು. ಇವರೆಲ್ಲರೂ ಈ ದಾವೆಯಲ್ಲಿ ಪ್ರತಿವಾದಿಯರು. (ಎಲ್ಲ ಹೆಸರುಗಳನ್ನು ಬದಲಾಯಿಸಲಾಗಿದೆ). ಸಾಯಿನಾಥ ಸುಮತಿಯನ್ನು ಅಂತರ್ಜಾತಿ ವಿವಾಹ ಆಗಿದ್ದಾನೆ. ಇವರ ವಿವಾಹಕ್ಕೆ ಮನೆತನದಲ್ಲಿ ಯಾರದೂ ಸಮ್ಮತಿ ಇರಲಿಲ್ಲ. ಎಲ್ಲರನ್ನೂ ಧಿಕ್ಕರಿಸಿ ಸಾಯಿನಾಥ ಸುಮತಿಯನ್ನು ಲಗ್ನವಾಗಿದ್ದ. ಸಾಯಿನಾಥನಿಗೆ, ನೀನು ಅಂತರ್ಜಾತಿ ವಿವಾಹವಾದರೆ ನಿನಗೆ ಮನೆತನದ ಆಸ್ತಿಗಳಲ್ಲಿ ಪಾಲು ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ತಂದೆ-ತಾಯಿ ತಿಳಿಸಿದ್ದರು. ನಿಮ್ಮ ಮನೆತನದಲ್ಲಿ ಯಾವುದು ಹಿಸ್ಸೆ ಬೇಡ, ನಾನು ಸುಮತಿಯನ್ನು ಪ್ರೀತಿಸಿದ್ದೇನೆ ಅವಳನ್ನೇ ಲಗ್ನವಾಗುತ್ತೇನೆ ಎಂದು ಎಲ್ಲರ ವಿರೋಧವನ್ನು ಲೆಕ್ಕಿಸದೆ, ಪ್ರೀತಿಯ ಸೆಳೆತಕ್ಕೆ, ಮನೆಯವರ ಸಂಬಂಧ ಕಳೆದುಕೊಂಡು ಮದುವೆಯಾದ. ಸಾಯಿನಾಥಾನಿಗೆ ರವಿ ಮತ್ತು ಸೂರ್ಯ ಇಬ್ಬರು ಮಕ್ಕಳು ಹುಟ್ಟಿರುತ್ತಾರೆ. ಸಾಯಿನಾಥ ಮನೆ ಬಿಟ್ಟು ಹೋಗಿ ಹತ್ತು ವರ್ಷಗಳು ಗತಿಸಿವೆ. ಸಾಯಿನಾಥ ತನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ವಾಸವಾಗಿದ್ದಾನೆ. ವಾದಿಯರಿಗೆ ಪಾಲು ದೊರೆಯದಂತೆ, ಗಂಡ ಹಾಗೂ ಅವನ ತಂದೆ ತಾಯಿ ಮೋಸತನದಿಂದ ಪಾಲು ಪತ್ರ ಮಾಡಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ತನ್ನ ಗಂಡನಿಗೆ ಕೇವಲ ೪ ಲಕ್ಷ ರೂಪಾಯಿಗಳು ಮಾತ್ರ ಹಿಸ್ಸೆಗೆ ಬಂದಿವೆ ಎಂದು ತೋರಿಸಿದ್ದಾರೆ. ಎಲ್ಲ ಸ್ವತ್ತುಗಳನ್ನು ಪ್ರೇಮನಾಥನ ಪಾಲಿಗೆ ಕೊಟ್ಟಿದ್ದಾರೆ. ಪ್ರೇಮಾನಾಥನ ಹೆಸರಿಗೆ ಖರೀದಿಸಿ ಜಮೀನು ಪತ್ರದಲ್ಲಿ ಸೇರಿಸಿಲ್ಲ. ಪಾಲು ಪತ್ರ ವಾದಿಯರಿಗೆ ಬಂಧನಕಾರಕ ಇಲ್ಲ ಎಂದು ವಾದಿಸಿದ್ದಾರೆ. ವಾದಿಯರು ಸಾಯಿನಾಥ, ತಂದೆ ತಾಯಿ, ಪ್ರೇಮನಾಥ, ಮಗಳು ಕವಿತಾ ಮೇಲೆ ಈ ದಾವೆ ಮಾಡಿದ್ದಾಳೆ. ಕೇಸಿನ ಸಂಪೂರ್ಣ ಚಿತ್ರಣವನ್ನು ಅವಳ ಮುಂದೆ ಬಿಡಿಸಿ ಇಟ್ಟೆನು. ಕವಿತಾ ನಿಶಬ್ದವಾಗಿ ನಾನು ಹೇಳುವುದನ್ನು ಕೇಳುತ್ತಾ, ಯಾವುದೇ ಪ್ರಕ್ರಿಯೆ ನೀಡದೆ ಸುಮ್ಮನೆ ಕುಳಿತಿದ್ದಳು. ನಾನೇ ಮುಂದುವರೆದು, ನೀವು ಕೂಡ ಪಾಲು ಪತ್ರವನ್ನು ಪ್ರಶ್ನಿಸಿ, ಕೌಂಟರ್ ಕ್ಲೈಮ ಕೈಫಿಯತ್ ದಾಖಲಿಸಿ, ಹಿಸ್ಸೆ ಪಡೆಯಬಹುದು ಎಂದು ಸಲಹೆ ನೀಡಿದೆ. ಏನು ನಿಲುವು ತೆಗೆದುಕೊಳ್ಳಬೇಕೆಂದು ತಿಳಿಯದೆ ಸುಮ್ಮನೆ ಕುಳಿತುಕೊಂಡಿದ್ದಳು. ಗಂಡ ಅವಳನ್ನೊಮ್ಮೆ ನನ್ನೊಮ್ಮೆ ನೋಡುತ್ತಾ ಅವಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದ. ಅವಳು ಹೇಳಿದ್ದು ಒಂದೇ ಮಾತು "ಸರ್, ಸಾಯಿನಾಥ ಹೆಂಡತಿ ಮಕ್ಕಳಿಂದ ಈ ದಾವೆ ಮಾಡಿಸಿದ್ದಾನೆ" ಇಷ್ಟು ಹೇಳಿ ಮೌನಕ್ಕೆ ಶರಣಾದಳು. ನಾನೇ ಮುಂದುವರೆದು, ನೋಡಿ ನಾಳೆ ದಾವೆಯಲ್ಲಿ ನಿಮ್ಮ ಪರವಾಗಿ ನಾನು ವಕಾಲತ್ ಸಲ್ಲಿಸಿ ಹಾಜರಾಗುತ್ತೇನೆ. ಮುಂದೆ ನೀವು ಆರಾಮವಾಗಿ ಯೋಚಿಸಿ ನಿಮ್ಮ ನಿಲುವು ಏನು ಎಂದು ತಿಳಿಸಿ, ಆ ರೀತಿ ಮುಂದುವರಿಯೋಣ ಅಂದಾಗ, ಹಾಗೆ ಆಗಲಿ ಸರ್ ಎಂದಳು.
ಮರುದಿನ ನ್ಯಾಯಾಲಯದಲ್ಲಿ ವಾದಿ ಹಾಜರಾದಳು. ನಿರೀಕ್ಷೆಯಂತೆ ಸಾಯಿನಾಥ ಗೈರುಹಾಜರು ಉಳಿದ. ನನ್ನ ಕಕ್ಷಿದಾರಳನ್ನು ಪ್ರತಿನಿಧಿಸಿ ವಕಾಲತ್ ಪತ್ರ ಸಲ್ಲಿಸಿದೆ. ತಂದೆ ತಾಯಿ ಇನ್ನೋರ್ವ ಸಹೋದರ ಪ್ರೇಮನಾಥನ ಪರವಾಗಿ ಇನ್ನೋರ್ವ ನ್ಯಾಯವಾದಿ ಹಾಜರಾದರು. ಪ್ರಕರಣ ನಿಯಮಾವಳಿಯಂತೆ ಮಂದುವರೆಯಿತು. ಹಲವು ಮುದ್ದತ್ತಿನಗಳ ನಂತರ ತಂದೆ ತಾಯಿ ಪ್ರೇಮನಾಥ ತಮ್ಮ ಕೈಫಿಯತ್ತ/ರಿಟನ್ ಸ್ಟೇಟ್ಮೆಂಟ್‌ನ್ನು ಸಲ್ಲಿಸಿದರು. ಅದರಲ್ಲಿ ನಮ್ಮ ಮನೆತನದ ಎಲ್ಲ ಪಿತ್ರಾರ್ಜಿತ ಆಸ್ತಿಗಳನ್ನು ವಿಭಜಿಸಿಕೊಂಡಿದ್ದೇವೆ. ಇನ್ನೊಂದು ಜಮೀನನ್ನು ಪ್ರೇಮನಾಥ ತನ್ನ ಸ್ವಂತ ಸಂಪಾದನೆಯಿಂದ ಖರೀದಿಸಿದ್ದಾನೆ, ಅದನ್ನು ಪಾಲು ಮಾಡಿಕೊಳ್ಳುವ ಪ್ರಸಂಗ ಇಲ್ಲ. ನೋಂದಾಯಿತ ಪಾಲು ಪತ್ರಕ್ಕೆ ಪತ್ರಕ್ಕೆ ಒಬ್ಬಳೇ ಮಗಳು ಕವಿತಾ ಸಮ್ಮತಿಸಿ ಸಹಿ ಮಾಡಿದ್ದಾಳೆ. ಆ ವಿಭಜನೆ ಪತ್ರದ ಪ್ರಕಾರ ಸಾಯಿನಾಥ ರೂಪಾಯಿ ನಾಲ್ಕು ಲಕ್ಷ ಪಡೆದುಕೊಂಡು ಮನೆತನದ ಆಸ್ತಿಗಳಲ್ಲಿ ತನ್ನ ಎಲ್ಲಾ ಹಕ್ಕನ್ನು ಕಳೆದುಕೊಂಡಿದ್ದಾನೆ. ಆದ್ದರಿಂದ ಸಾಯಿನಾಥನ ಹೆಂಡತಿ ಮಕ್ಕಳು ವಾದಿಯರಿಗೆ ದಾವೆ ಆಸ್ತಿಯಲ್ಲಿ ಯಾವುದೇ ಹಕ್ಕು ಇಲ್ಲ. ಅಲ್ಲದೆ ಈ ದಾವೆಯನ್ನು ಸಾಯಿನಾಥ ಮಾಡಿಸಿದ್ದಾನೆ ಎಂದು ದಾವೆ ವಜಾ ಮಾಡಲು ವಿನಂತಿಸಿಕೊಂಡರು.
ನನ್ನ ಕಕ್ಷಿದಾರ ಕವಿತಾ ಮನವಿಯಂತೆ ಅವಳ ಪರವಾಗಿ ಕೈಫಿಯತ್/ರಿಟನ್ ಸ್ಟೇಟ್ಮೆಂಟ್ ದಾಖಲಿಸದೆ ಕಾದು ನೋಡುವ ತಂತ್ರವನ್ನು ಅನುಸರಿಸಿದೆ. ಹೀಗಾಗಿ ನ್ಯಾಯಾಲಯವು ಕವಿತಾ ಪ್ರತಿವಾದಿಯ ಕೈಫಿಯತ್ ಇಲ್ಲ ಎಂದು ಆದೇಶ ಮಾಡಿತು.
ಹೋಗುವದಾದರೆ, ದಾರವೂ ಕೂಡ ಹೂವಿನ ಜೊತೆಗೆ ಸ್ವರ್ಗ ಸೇರಲಿ ಅನ್ನುವ ಸುರಕ್ಷಿತ ಆಟ ನನ್ನ ಕಕ್ಷಿದಾರ ಕವಿತಾಳದು ಆಗಿತ್ತು. ತನ್ನ ತಂದೆ ಹಾಗೂ ಅಣ್ಣ ತಮ್ಮಂದಿರಲ್ಲಿ ವಿಭಜನೆಗೆ ಸಹಮತ ಇದ್ದವಳು. ಈಗ ಮತ್ತೆ ಅದು ಮರಳಿ ತೆರೆದರೆ ನನಗೂ ಲಾಭ ಆದರೆ ಆಗಲಿ ಎನ್ನುವ ನಿಷ್ಕಲ್ಮಶ ಆಶೆ. ಪ್ರಕರಣದಲ್ಲಿ ನನ್ನದು ಮೂಕ ಪ್ರೇಕ್ಷಕನ ಪಾತ್ರ, ನೋಡುವುದಷ್ಟೆ, ಪ್ರತಿಕ್ರಿಯೆ ಇಲ್ಲ. ಇದೊಂದು ಪಾತ್ರ ವೃತ್ತಿಯಲ್ಲಿ ಉಳಿದಿತ್ತೇನೋ?. ಇದೊಂದು ಆಗಲಿ ಬಿಡಿ, ಮುಂದುವರೆದೆ.
ವಾದಿ ಪ್ರತಿವಾದಿಯರು ತಮ್ಮ ಲಿಖಿತ ದಾಖಲಾತಿ ಹಾಜರುಪಡಿಸಿದರು. ವಾದಿ ಪ್ರತಿವಾದಿಯರು ತಮ್ಮ ಹಾಗೂ ತಮ್ಮ ಪರ ಸಾಕ್ಷಿದಾರರನ್ನು ಸಾಕ್ಷಿ ಮಾಡಿಸಿದರು. ನನ್ನ ಕಕ್ಷಿದಾರ ಹೊರತುಪಡಿಸಿ ಪಾಟಿ ಸವಾಲುಗಳಾದವು. ವಾದಿ ಪರ ವಕೀಲರು, ಪ್ರತಿವಾದಿಯರು ಸಾಯಿನಾಥ ಅಂತರ್ಜಾತಿ ವಿವಾಹ ಆಗಿರುವುದರಿಂದ ಅವನಿಗೆ ಆಸ್ತಿ ದೊರೆಯಬಾರದು ಎಂದು ನೋಂದಾಯಿತ ಪಾಲು ಪತ್ರ ಮಾಡಿದ್ದು, ಪ್ರೇಮನಾಥ ಹೆಸರಿಗೆ ಕ್ರಯ ಮಾಡಿಕೊಂಡ ಜಮೀನನ್ನು ಪಾಲುಪತ್ರದಲ್ಲಿ ಸೇರಿಸಿಲ್ಲ, ಈ ಕಾರಣಗಳಿಂದ ಪಾಲು ಪತ್ರ ವಾದಿಯರಿಗೆ ಬಂಧಕಾರಕ ಇಲ್ಲವೆಂದು, ಸುಮತಿಯ ಗಂಡನಿಗೆ ಬರಬೇಕಾದ ಪಾಲಿನಲ್ಲಿ ಅವಳಿಗೆ, ಮಕ್ಕಳಿಗೆ ಹಿಸ್ಸೆ ವಿಭಜಿಸಿ ಕೊಡಲು ಪ್ರಾರ್ಥಿಸಿ ವಾದ ಮಂಡಿಸಿದರು. ಪ್ರತಿವಾದಿ ಪರ ವಕೀಲರು, ಪಾಲು ಪತ್ರವಾದ ಸಮಯದಲ್ಲಿ ಸಾಯಿನಾಥನ ಮಕ್ಕಳು ಹುಟ್ಟಿರಲಿಲ್ಲ, ಆದ್ದರಿಂದ ಮಕ್ಕಳಿಗೆ ಹಿಸ್ಸೆ ಇಲ್ಲ, ಹೆಂಡತಿ ಗಂಡನ ಮೇಲೆ ಪಾಲು ಕೇಳಲಾಗದು. ಇನ್ನೊಂದು ಜಮೀನು ಪ್ರೇಮನಾಥನ ಸ್ವಯಾರ್ಜಿತ ಆಸ್ತಿ ಇದ್ದು ಅದನ್ನು ಪಾಲು ಪತ್ರದಲ್ಲಿ ಸೇರಿಸಿರುವುದಿಲ್ಲ, ವಾದಿಯರಿಗೆ ಏನಾದರು ಪಾಲು ಇದ್ದರೆ, ಸಾಯಿನಾಥನ ಪಾಲಿಗೆ ಬಂದ ೪ ಲಕ್ಷ ಹಣದಲ್ಲಿ ಮಾತ್ರ ಎಂದು ವಾದಿಸಿ ವಾದ ಮಂಡಿಸಿ ದಾವೆ ವಜಾಗೊಳಿಸಲು ಪ್ರಾರ್ಥಿಸಿದರು. ನಾನು, ಕಕ್ಷಿದಾರಳು ವೀಕ್ಷಿಸುತ್ತ, ಕೇಳುತ್ತ ಕುಳಿತುಕೊಂಡೆವು.
ನ್ಯಾಯಾಲಯವು, ವಾದಿಯರ ದಾವೆಯನ್ನು ಭಾಗಶಃ ಡಿಕ್ರಿಗೊಳಿಸಿ, ಪ್ರೇಮನಾಥನ ಹೆಸರಿನಲ್ಲಿ ಕ್ರಯ ಮಾಡಿಕೊಂಡ ಜಮೀನಿನಲ್ಲಿ ಮಾತ್ರ ವಾದಿಯರಿಗೆ ಹಿಸ್ಸೆ ಇದೆ, ಮಗಳು ಕವಿತಾ ಸಮೇತ ಪ್ರತಿ ವಾದಿಯರಿಗೆ ಸಮ ಹಿಸ್ಸೆ, ಸಾಯಿನಾಥನ ಹಿಸ್ಸೆಯಲ್ಲಿ ವಾದಿಯರಿಗೆ ಸಮ ಹಿಸ್ಸೆ ಇದೆ ಎಂದು ತೀರ್ಪು ನೀಡಿತು. ತೀರ್ಪಿನಲ್ಲಿ, ಕಾರಣ ನೀಡುತ್ತಾ, ಪಾಲು ಪತ್ರ ಆದ ಸಮಯದಲ್ಲಿ ಮೈನರ್ ರವಿ, ಸೂರ್ಯ ಹುಟ್ಟಿರಲಿಲ್ಲ, ಪಾಲು ಪತ್ರ ಮುಂಚೆ ಜಂಟಿ ಕುಟುಂಬದಲ್ಲಿ, ಪ್ರೇಮನಾಥನ ಹೆಸರಿನಲ್ಲಿ ಜಮೀನು ಖರೀದಿಸಿದ್ದು, ಅದನ್ನು ಪಾಲು ಪತ್ರದಲ್ಲಿ ಸೇರಿಸಿಲ್ಲ, ಅದು ಜಂಟಿ ಕುಟುಂಬದ ಆಸ್ತಿ, ಅದರಲ್ಲಿ ಪ್ರತಿವಾದಿಯರಿಗೆ ಸಮಪಾಲು ಎಂದು ಅಭಿಪ್ರಾಯಕ್ಕೆ ಬಂದಿತು.
ನನ್ನ ಕಕ್ಷಿದಾರಳು, ತಂದೆ ತಾಯಿ, ಸಹೋದರರನ್ನು ಎದುರು ಹಾಕಿಕೊಳ್ಳದೆ ಕಾಯ್ದು ನೋಡುವ ತಂತ್ರ ಅನುಸರಿಸಿ, ಪ್ರೇಮನಾಥ ಖರೀದಿಸಿದ ಜಮೀನಿನಲ್ಲಿ ಹಿಸ್ಸೆ ಪಡೆದಳು. ಸುರಕ್ಷಿತ ಆಟಗಳನ್ನು ವೃತ್ತಿಯಲ್ಲಿ ಕಕ್ಷಿದಾರರ ಹಿತಕ್ಕಾಗಿ ಆಡಬೇಕಾಗುವದು.