ಅಡ್ಡ ಮತ ಅಂದರೇನು..?
ಇನ್ನು ಮುಂದೆ ನಾನು ಎಂದೆಂದಿಗೂ ಅಡ್ಡ ಮತ ಹಾಕುವುದಿಲ್ಲ. ನಾನೇನಿದ್ದರೂ ಉದ್ದ ಮತವನ್ನೇ ಹಾಕುವುದು ಎಂದು ತಿಗಡೇಸಿಯ ದೊಡ್ಡಪ್ಪನ ಮಗ ತಿರುಕೇಸಿ ಶಪಥ ಮಾಡಿದನೋ ಆವಾಗಿನಿಂದ ಊರಿನವರು ಎಲ್ಲರೂ ಅಡ್ಡಮತ ಎಂದರೇನು ಎಂದು ಗಾಬರಿಯಾಗಿದ್ದಾರೆ. ಒಂದೇ ಒಂದು ಅಡ್ಡ ಮತ ಹಾಕಿದ್ದಕ್ಕೆ ಅವರು ಅಲ್ಲಿಗೆ ಹೋಗುವ ಹಾಗೆ ಆಯಿತು. ಅವರು ಬಂದು ನಿಜಕ್ಕೂ ಚೆಂಡುವಿನ ಹಾರ ಹಾಕಿ ಅಭಿನಂದನೆ ಸಲ್ಲಿಸಬೇಕಿತ್ತು. ಎಂದು ಎಂಥೆಂಥವೋ ಮಾತುಗಳು ಕೇಳಿ… ಕೇಳಿ ತಲೆಕೆಡೆಸಿಕೊಂಡಿದ್ದ ಬುಸ್ಯವ್ವ…. ಕೊನೆಗೆ ತಿಗಡೇಸಿಯನ್ನು ಹಿಡಿದು ಅಡ್ಡ ಮತ ಎಂದರೇನು? ಅದು ಹೇಗಿರುತ್ತದೆ? ಅದನ್ನು ಓಟಿನ ಡಬ್ಬದಲ್ಲಿ ಹಾಕಬೇಕೋ ಹೇಗೆ? ಒಂದು ವೇಳೆ ಹಾಗೆ ಹಾಕಿದರೆ ಡಬ್ಬ ಸಾಲುತ್ತದೆಯೇ? ಎಂಬ ನೂರಾರು ಪ್ರಶ್ನೆಗಳನ್ನು ಕೇಳಿದಳು. ಆಗ ತಿಗಡೇಸಿ ನನಗೂ ಅದೇ ಡೌಟು… ಅಮವಾಸ್ಯೆವರೆಗೆ ಸಮಯ ಕೊಡು ಅಷ್ಟರಲ್ಲಿ ನಾನು ತಿಳಿದುಕೊಂಡು ನಿನಗೆ ಹೇಳುತ್ತೇನೆ ಎಂದು ಹೇಳಿದ. ದಿನ ಕಳೆದಂತೆಲ್ಲ ತಿಗಡೇಸಿಗೆ ಭಯ ಶುರುವಾಯಿತು. ಈ ಬುಸ್ಯವ್ವ ಸುಮ್ಮನೇ ಬಿಡುವವಳಲ್ಲ… ಈ ಬಗ್ಗೆ ಕೇಳಬೇಕು ಅಂದರೆ ಯಾರೂ ಫ್ರೀ ಇಲ್ಲ. ಮತ ಹಾಕಿದವರನ್ನೇ ಕೇಳೋಣ ಎಂದು ಸೀದಾ ತಿರುಕೇಸಿಯ ಮನೆಗೆ ಹೋದ. ಅಲ್ಲಿ ಅರಾಮ ಕುರ್ಚಿಯಲ್ಲಿ ಕುಳಿತಿದ್ದ ತಿರುಕೇಸಿಯನ್ನು ಕಂಡು ಅಣ್ಣಾ ಎಂದು ಮಾತನಾಡಿಸಿದ ತಿಗಡೇಸಿ… ಸ್ವಲ್ಪ ಹೊತ್ತಾದ ಅಣ್ಣಾ ಮೊನ್ನೆ ಮೊನ್ನೆ ಅಡ್ಡಮತದಾನದ ಬಗ್ಗೆ ರಾಜ್ಯದ ತುಂಬೆಲ್ಲ ಚರ್ಚೆ ಆಯಿತು. ನೀನೂ ಸಹ ಅಡ್ಡಮತದಾನದ ಬಗ್ಗೆ ಭಾಷಣ ಮಾಡಿದ್ದೆ. ನಿಜವಾಗಿಯೂ ನನಗೆ ಅಡ್ಡ ಮತದಾನ ಎಂದರೇನು ಎಂದು ಗೊತ್ತಿಲ್ಲ.
ತಿಳಿಸಿಕೊಡುವೆಯಾ? ಎಂದು ಗೋಗೆರೆದ. ಆಗ ತಿರುಕೇಸಿಯು ಕೆಮ್ಮಿ… ಕೆಮ್ಮಿ… ತಡಿ ಎಂದು ಹೇಳಿ ಒಳಗೆ ಹೋಗಿ ಬಂದು… ಮೊಬೈಲ್ ಕೈಯಲ್ಲಿ ಹಿಡಿದು ಆ ನಂಬರ್…. ಈ ನಂಬರ್ ನೋಡಿದ ಹಾಗೆ ಮಾಡಿದ. ನಿಜ ಹೇಳಲಾ ತಿಗಡೇಸಿ… ನಿಜವಾಗಿಯೂ ನನಗೆ ಗೊತ್ತಿಲ್ಲ. ನೀನು ತಳವಾರ್ಕಂಟಿಯ ಹತ್ತಿರ ಹೋಗಿ ಕೇಳು ಅಂದ. ತಿಗಡೇಸಿಯು ತಳವಾರ್ಕಂಟಿ ಹತ್ತಿರ ಹೋಗಿ… ಇಂಗಿಂಗೆ ನಿನಗೆ ಗೊತ್ತಿದೆಯಂತಲ್ಲ ಅಡ್ಡ ಮತದಾನದ್ದು ಅದನ್ನು ಬಿಡಿಸಿ ಹೇಳು ಅಂದ. ಮೊದಲೇ ಭಲೇ ಚಾಲು ಇದ್ದ ತಳವಾರ್ಕಂಟಿ ಅಯ್ಯೋ ಅದರಲ್ಲೇನು ಎಂದು ಸೀದಾ ಶೇಷಮ್ಮನ ಹೋಟೆಲ್‌ಗೆ ಹೋಗಿ ತನಗೆ ಏನು ಬೇಕೋ ಅದನ್ನು ತಿಂದು ಚಹ ಕುಡಿದು… ತಿಗಡೇಸಿಯ ಕೈಗೆ ಬಿಲ್ಲು ಇಟ್ಟು ಹೊರಗೆ ಬಂದು ಪಾನ್ ಕಟ್ಟಿಸಿಕೊಳ್ಳುತ್ತಿದ್ದ. ಬಿಲ್ ಕೊಟ್ಟು ಹೊರಗೆ ಬಂದ ತಿಗಡೇಸಿಯು ಈಗಲಾದರೂ ಹೇಳಪ್ಪ ಅಂದ… ಅದಕ್ಕೆ ತಳವಾರ್ಕಂಟಿ ನೀನು ಈಗ ನನ್ನದು ಬಿಲ್ ಕೊಟ್ಟಿಯಲ್ಲ ಅದೇ ನಿನಗೆ ನಾನು ಅಡ್ಡಮತ ಹಾಕುತ್ತೇನೆ ಅಷ್ಟೇ…. ಅಂದ… ತಿಗಡೇಸಿ ತಲೆ ಕೆರೆದುಕೊಂಡು ನಿಂತ.