ಸಾಹೇಬರ ಲೆಕ್ಕಕ್ಕೆ ಹಚ್ಚಿಕೊಳ್ಳಿ
ಮಟಮಟ ಮಧ್ಯಾಹ್ನದೊಳಗೆ ಯಾರು ಗೆದ್ದರು ಯಾರು ಸೋತರು ಎಂದು ಗೊತ್ತಾಗಿ ಬಿಡುತ್ತದೆ. ಗ್ಯಾರಂಟಿ ನಮದೇ ಗೆಲುವಾಗುತ್ತದೆ ಎಂದು ತಿಗಡೇಸಿಯು ಅಡ್ವಾನ್ಸಾಗಿ ಗುಲಾಲು-ಪಟಾಕಿ ತಂದಿಟ್ಟುಕೊಳ್ಳಬೇಕು. ಶೇಷಮ್ಮನ ಹೋಟೆಲ್‌ಗೆ ಮಂಡಾಳೊಗ್ಗಣ್ಣಿಗೆ ಆರ್ಡರ್ ಕೊಡಬೇಕು, ಪೆಂಡಾಲ್‌ನವರಿಗೆ ಹೇಳಿ ಪೆಂಡಾಲ್ ಹಾಕಿಸಬೇಕು. ಮೆರವಣಿಗೆ ಮಾಡಲು ಟ್ರ್ಯಾಕ್ಟರ್ ಹೇಳಬೇಕು. ಬ್ಯಾಂಡ್ ಬಾಜಾದವರಿಗೆ ಹೇಳಬೇಕು. ಡಾನ್ಸ್ ಮಾಡಲು ಹುಡುಗರಿಗೆ ತಿಳಿಸಬೇಕು ಎಂದು ಕಾರ್ಯತತ್ಪರನಾದ. ಕುಂಟ್ನಾಗನ ಬೈಕ್ ಇಸಿದುಕೊಂಡು ಶೇಷಮ್ಮನ ಹೋಟೆಲ್‌ಗೆ ಬಂದು ಹಿಂಗಿಂಗೆ ನಾಳೆ ನಮ್ಮ ಕ್ಯಾಂಡಿಡೇಟ್ ಗೆಲುವು ಗ್ಯಾರಂಟಿ ಅದಕ್ಕಾಗಿ ಮುಂಜಾನೆಯಿಂದ ಸಂಜೆಯವರೆಗೆ ಮಂಡಾಳೊಗ್ಗಣ್ಣಿ ಹಾಕುತ್ತಿರು. ಲೆಕ್ಕವನ್ನು ಸಾಹೇಬರ ಹೆಸರಿಗೆ ಹಚ್ಚಿಕೋ ಎಂದು ಹೇಳಿದ. ಅಲ್ಲಿಂದ ಅಂಗಡಿಗೆ ಹೋಗಿ ಸಾಹೇಬರ ಲೆಕ್ಕಕ್ಕೆ ಎಂದು ಹೆಚ್ಚು ಅನ್ನುವಷ್ಟು ಗುಲಾಲು-ಪಟಾಕಿ ತಂದಿಟ್ಟುಕೊಂಡ. ಪೆಂಡಾಲ್‌ನವರ ಹತ್ತಿರ ಹೋಗಿ… ನೋಡಪಾ ಊರ ಮುಂದಿನ ಗದ್ದೆಯಲ್ಲಿ ಅರ್ಧಕ್ಕರ್ಧ ಬಣ್ಣಬಣ್ಣದ ಪೆಂಡಾಲ್ ಹಾಕಬೇಕು. ಇಲ್ಲಿಯೇ ಬಹಿರಂಗ ಭಾಷಣ ನಡೆಯಲಿದೆ ಎಂದು ತಿಳಿಸಿ ಅಲ್ಲಿಯೂ ಸಾಹೇಬರ ಹೆಸರು ಹೇಳಿದ. ಬ್ಯಾಂಡ್ ಬಾಜಾದವರಿಗೆ, ಜಾಂಜ್ ಮೇಳದವರನ್ನು ಭೇಟಿಯಾಗಿ ನಾಳೆ ಮುಂಜಾನೆ ೮ ರೊಳಗೆ ಮತ ಎಣಿಕೆ ಕೇಂದ್ರಕ್ಕೆ ಬಂದುಬಿಡಿ ಎಂದು ತಿಳಿಸಿದ. ಅವರು ಸಾಹೇಬರೇ ಅಡ್ವಾನ್ಸ್ ಎಂದು ಕೇಳಿದಾಗ… ಅಯ್ಯೋ ನೀವ್ಯಾಕೆ ಚಿಂತೆ ಮಾಡುತ್ತೀರಿ..? ನಮ್ಮ ಸಾಹೇಬರು ನೀವು ಕೇಳಿದ್ದಕ್ಕಿಂತ ಡಬಲ್ ಕೊಡುತ್ತಾರೆ ಎಂದು ಹೇಳಿದಾಗ ಅವರೂ ಖುಷಿಯಾಗಿ ಹೂಂ ಅಂದರು. ಊರ ಹುಡುಗರನ್ನು ಭೇಟಿಯಾಗಿ ನೋಡ್ರಪಾ ನಾಳೆ ಭರ್ಜರಿ ಕುಣಿಯಬೇಕು ಎಂದು ಹೇಳಿದಾಗ ಅವರು ಹಾಗೆ ಕುಣಿಯಲು ಎಲ್ಲಿ ಆಗುತ್ತದೆ ಹೇಳಿ ನೋಡೋಣ… ಅದಕ್ಕಾಗಿ ಅದು ಅಂದರು. ಅವರನ್ನೆಲ್ಲ ಕರೆದುಕೊಂಡು ಆ ಅಂಗಡಿಗೆ ಹೋಗಿ ನೋಡಿ… ನಾಳೆ ಇವರಿಗೆ ಎಷ್ಟು ಬೇಕೋ ಅಷ್ಟು ಕೊಡಿ. ಸಾಹೇಬರ ಅಕೌಂಟಿಗೆ ಹಚ್ಚಿ ಎಂದು ಹೇಳಿದ. ಆ ಹುಡುಗರೂ ಖುಷಿ ಆದರು.
ಸೂರ್ಯ ಎದ್ದಿರಲಿಲ್ಲ ಆಗಲೇ ಶೇಷಮ್ಮನ ಹೋಟೆಲ್‌ನಲ್ಲಿ ಮಂಡಾಳೊಗ್ಗಣ್ಣಿಗೆ ಮಂದಿ ಪಾಳೆ ಹಚ್ಚಿದ್ದರು. ಊರ ಮುಂದಿನ ಗದ್ದೆಯಲ್ಲಿ ದೊಡ್ಡ ಪೆಂಡಾಲ್ ಹಾಕುತ್ತಿದ್ದರು. ಸಿಕ್ಕಸಿಕ್ಕವರು ಗುಲಾಲು ಹಚ್ಚಿಕೊಂಡು ಪಟಾಕಿ ಹೊಡೆಯತೊಡಗಿದರು. ಡಾನ್ಸ್ ಮಾಡುವ ಹುಡುಗರು ಮುಂಜಾನೆಯಿಂದಲೇ ತೂರಾಡ ತೊಡಗಿದರು. ಬ್ಯಾಂಡ್ ಬಾಜಾದವರು ಸುಮ್ಮಸುಮ್ಮನೇ ಬಾರಿಸತೊಡಗಿದರು. ಒಂದೊಂದೇ ಸುತ್ತು ಮತ ಎಣಿಕೆ ಮುಗಿಯುತ್ತಿತ್ತು. ತಿಗಡೇಸಿಯ ಸಾಹೇಬ ಯಾವ ಸುತ್ತಿನಲ್ಲಿಯೂ ಮುಂದೆ ಹೋಗಲಿಲ್ಲ. ಕೊನೆಗೆ ಫಲಿತಾಂಶ ಬಂದಾಗ ಆತ ಡಿಪಾಜಿಟ್ ಕಳೆದುಕೊಂಡಿದ್ದ. ಇನ್ನು ನನಗೆ ಉಳಿಗಾಲವಿಲ್ಲ ಎಂದು ತಿಗಡೇಸಿ ಊರುಬಿಟ್ಟ.