ಅತಿಥಿ ಉಪನ್ಯಾಸಕರ ನೇಮಕಾತಿಗೆ ಬ್ರೇಕ್
ರವಿ ನಾಯಕ್
ಬೆಂಗಳೂರು: ರಾಜ್ಯದಲ್ಲಿರುವ ೪೩೨ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ಪದವಿ ವಿದ್ಯಾರ್ಥಿಗಳು, ಪೋಷಕರು ಗೋಳಾಡುತ್ತಿರುವ ಬೆನ್ನಲ್ಲೇ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿಯೂ ತೀರ ಗೊಂದಲವುಂಟಾಗಿದೆ.
ಉಪನ್ಯಾಸಕರ ಕೊರತೆ ಮನಗಂಡ ಸರ್ಕಾರ ೧೦,೬೫೦ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅಸ್ತು ಎಂದಿತ್ತು. ಕಾಲೇಜು ಶಿಕ್ಷಣ ಇಲಾಖೆ ಎಲ್ಲ ಪ್ರಕ್ರಿಯೆ ಮುಗಿಸಿ ಇನ್ನೇನು ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ದೊಡ್ಡಲೋಪ ಹೊರಬಿದ್ದಿದೆ. ಅರ್ಜಿ ಸಲ್ಲಿಸಿದ ಅರ್ಧದಷ್ಟು ಅಭ್ಯರ್ಥಿಗಳು ಸ್ನಾತಕೋತ್ತರ, ಪಿ.ಎಚ್‌ಡಿ, ಎಂಫಿಲ್‌ಗಳ ನಕಲಿ ಅಂಕಪಟ್ಟಿ ನೀಡಿರುವುದು ಬೆಳಕಿಗೆ ಬಂದಿದೆ. ಇದು ಗೊತ್ತಾಗಿ ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದು ಇದೀಗ ಉಚ್ಛನ್ಯಾಯಾಲಯ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿದೆ.
೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ೪೩೨ ಪದವಿ ಕಾಲೇಜುಗಳಿಗೆ ೧೦,೬೫೦ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಕುರಿತು ಜನವರಿ ೩ ರಂದು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜ.೧೧ ನಿಗದಿಪಡಿಸಿತ್ತು. ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲು ಜ.೧೩ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಜ.೨೦ ರಿಂದ ೨೯ರವರೆಗೆ ಪೂರ್ಣಗೊಳಿಸಿ ಆಯ್ಕೆಗೊಂಡ ಅತಿಥಿ ಉಪನ್ಯಾಸಕರನ್ನು ದಿ. ೩೦ ರಿಂದ ಬೋಧನಾ ಕಾರ್ಯಕ್ಕೆ ಕಳುಹಿಸಲು ಮುಂದಾಗಿತ್ತು. ಆದರೆ ಇದೀಗ ಹೈಕೋರ್ಟ್ ಆದೇಶ ನೀಡಿರುವುದರಿಂದ ಕೌನ್ಸೆಲಿಂಗ್ ತಯಾರಿಯಲ್ಲಿದ್ದ ಸಾವಿರಾರು ಅತಿಥಿ ಉಪನ್ಯಾಸಕರು ಪರದಾಡುವಂತಾಗಿದೆ.
ಮೂರು ವಿವಿಗಳ ಪಿಎಚ್‌ಡಿ ನೋಂದಣಿಗೂ ತಡೆ
ನಕಲಿ ಪಿಎಚ್‌ಡಿ ಸರ್ಟಿಫಿಕೇಟ್‌ಗಳನ್ನು ಪಡೆಯಲಾಗುತ್ತಿದೆ ಎಂಬ ಕುರಿತು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಮೂರು ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ೨೦೨೫-೨೬ ರಿಂದ ೨೦೨೯-೩೦ ರವರೆಗೆ ಓಂ ಪ್ರಕಾಶ್ ಜೋಗಿಂದರ್ ಸಿಂಗ್' ವಿಶ್ವವಿದ್ಯಾಲಯ,
ಅಲ್ದಾರ್ ಸನ್‌ರೈಸ್' ವಿಶ್ವವಿದ್ಯಾಲಯ ಹಾಗೂ `ಸಿಂಘಾನಿಯಾ' ವಿಶ್ವವಿದ್ಯಾಲಯ ರಾಜಸ್ಥಾನ ಈ ಅವಧಿಯಲಿ ಪಿಎಚ್‌ಡಿ ಕೋರ್ಸ್ಗಳಿಗೆ ಯಾವುದೇ ನೋಂದಣಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದೆ. ದೇಶದ ಇನ್ನೂ ಹಲವು ವಿಶ್ವವಿದ್ಯಾಲಯ ಡೇಟಾವನ್ನು ತನಿಖೆ ನಡೆಸಲು ಯುಜಿಸಿ ಮುಂದಾಗಿದೆ.