ಅತ್ಯಾಚಾರ ಪ್ರಕರಣ: ಮೂರನೇ ಆರೋಪಿ ಬಂಧನ
ಕಾರ್ಕಳ: ಕಾರ್ಕಳ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಬಂಧಿತನನ್ನು ಕಾರ್ಕಳದ ಅಭಯ್ (೨೩) ಎಂದು ಗುರುತಿಸಲಾಗಿದೆ. ಈಗಾಗಲೇ ಆರೋಪಿಗಳಾದ ಅಲ್ತಾಫ್ ಹಾಗೂ ರಿಚರ್ಡ್ ಝೇವಿಯರ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿ ಅಲ್ತಾಫ್‌ಗೆ ಮಾದಕ ವಸ್ತು ನೀಡಿರುವುದು ಅಭಯ್ ಎಂಬುದು ಪ್ರಥಮ ತನಿಖೆಯಲ್ಲಿ ಕಂಡುಬಂದಿದೆ. ಕೃತ್ಯ ಎಸಗಿದ ಮೇಲೆ ಅಲ್ತಾಫ್ ತಪ್ಪಿಸಿಕೊಳ್ಳಲು ಅಭಯ್ ಸಹಕಾರ ನೀಡಲು ಪ್ರಯತ್ನಿಸಿರುವುದು ಕೂಡ ತನಿಖೆಯಿಂದ ತಿಳಿದು ಬಂದಿದೆ. ಇದೀಗ ಬಂಧಿಸಿರುವ ಅಭಯ್‌ನನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಕಸ್ಟಡಿಗೆ ಪಡೆದುಕೊಂಡು, ಹೆಚ್ಚಿನ ತನಿಖೆ ನಡೆಸಲಾಗುವುದು. ಆ ಮೂಲಕ ಮುಂದೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಎಸ್.ಪಿ. ಡಾ. ಕೆ. ಅರುಣ್ ತಿಳಿಸಿದ್ದಾರೆ.
ಇದೇ ರೀತಿಯಲ್ಲಿ ಎನ್‌ಡಿಪಿಎಸ್ ಪ್ರಕರಣದಲ್ಲಿ ಅಭಯ್‌ನನ್ನು ಬಂಧಿಸಲಾಗಿದೆ. ಅಲ್ಲದೆ ಇನ್ನಿಬ್ಬರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿ ಅವರ ಪಾತ್ರದ ಕುರಿತು ತನಿಖೆ ನಡೆಸಿ, ಆದಷ್ಟು ಬೇಗನೆ ಪ್ರಕರಣವನ್ನು ಮುಕ್ತಾಯಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಎಸ್‌ಪಿ ತಿಳಿಸಿದ್ದಾರೆ.