For the best experience, open
https://m.samyuktakarnataka.in
on your mobile browser.

ಅಧ್ಯಾತ್ಮ ವಿದ್ಯೆ ಶ್ರೇಷ್ಠ ವಿದ್ಯೆ

05:19 AM Jun 11, 2024 IST | Samyukta Karnataka
ಅಧ್ಯಾತ್ಮ ವಿದ್ಯೆ ಶ್ರೇಷ್ಠ ವಿದ್ಯೆ

ಭಗವಂತನು ಹೇಳಿದ ಪ್ರಸಿದ್ಧವಾದ ಮಾತು ಅಧ್ಯಾತ್ಮ ವಿದ್ಯಾ ವಿದ್ಯಾನಾಮ್' ಎಲ್ಲ ವಿದ್ಯೆಗಳಲ್ಲಿ ಅಧ್ಯಾತ್ಮ ವಿದ್ಯೆ ಶ್ರೇಷ್ಠವಾದದ್ದು. ಅದು ಭಗವಂತನ ಒಂದು ವಿಭೂತಿ. ಅಂದರೆ ಭಗವಂತನ ಒಂದು ರೂಪ. ಅಧ್ಯಾತ್ಮ ವಿದ್ಯೆ ಶ್ರೇಷ್ಠ ವಿದ್ಯೆ ಎಂದು ಹೇಳಲು ಕಾರಣವೇನು? ಮುಂಡಕೋಪನಿಷತ್ತು ಅಧ್ಯಾತ್ಮ ವಿದ್ಯೆಯನ್ನು ಪರವಿದ್ಯೆ ಎಂದು ಕರೆಯುತ್ತದೆ. ಪರವಿದ್ಯೆ ಎಂದರೆ ಶ್ರೇಷ್ಠ ವಿದ್ಯೆ ಎಂಬುದಾಗಿಯೇ ಅರ್ಥ. ಇದನ್ನು ಸ್ಪಷ್ಟಪಡಿಸಲು ಅಪರ ವಿದ್ಯೆಯ ಪಟ್ಟಿಯನ್ನು ಅಲ್ಲಿ ಕೊಟ್ಟಿದೆ. ನಾಲ್ಕು ವೇದಗಳು ಮತ್ತು ವೇದಗಳ ಆರು ಅಂಗಗಳು(ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ) ಇವುಗಳನ್ನು ಅಪರವಿದ್ಯೆ ಎಂಬುದಾಗಿ ಅಲ್ಲಿ ಹೇಳಲಾಗಿದೆ. ಅಧ್ಯಾತ್ಮ ವಿದ್ಯೆಗೆ ಪರವಿದ್ಯೆ ಎಂಬ ಹೆಸರು ಬರಲು ಕಾರಣವೇನು? ಅಧ್ಯಾತ್ಮ ವಿದ್ಯೆ ಶ್ರೇಷ್ಠವೆನ್ನಲು ಅದು ಮೋಕ್ಷಕ್ಕೆ ನೇರವಾಗಿ ಸಾಧನವಾಗಿರುವುದೇ ಕಾರಣ. ಉಳಿದ ವಿದ್ಯೆಗಳು ಅಧ್ಯಾತ್ಮ ವಿದ್ಯೆಯ ಮೂಲಕ ಕಾರಣವಾಗುತ್ತದೆ. ಉಳಿದ ವಿದ್ಯೆಗಳೆಂದರೆ ನಾಲ್ಕು ವೇದಗಳು ಆರು ಅಂಗಗಳು, ಪುರಾಣ, ನ್ಯಾಯ, ಮೀಮಾಂಸಾ ಮತ್ತು ಧರ್ಮಶಾಸ್ತ್ರ ಎಂಬುದಾಗಿ ಬೇರೆಕಡೆ ಹೇಳಿದೆ. (ಪುರಾಣ-ನ್ಯಾಯ-ಮೀಮಾಂಸಾ-ಧರ್ಮಶಾಸ್ತ್ರಾಂಗ ಮಿಶ್ರೀತಾಃ ವೇದಾಃ ಸ್ಥಾನಾನಿ ವಿದ್ಯಾನಾ ಧರ್ಮಶಾಸ್ತ್ರ ಚ ಚತುರ್ದಶ). ಈ ಲೆಕ್ಕದಲ್ಲಿ ಒಟ್ಟು ಹದಿನಾಲ್ಕು ವಿದ್ಯೆಗಳು ಆಗುತ್ತವೆ. ವಿದ್ಯಾಸ್ಥಾನಗಳನ್ನೇ ವಿದ್ಯೆ ಎಂಬುದಾಗಿ ಕರೆದಿದೆ. ಒಟ್ಟು ಅರವತ್ನಾಲ್ಕು ವಿದ್ಯೆಗಳು ಎಂಬುದಾಗಿ ಹೇಳುವುದೂ ಇದೆ. ವಿದ್ಯೆಗಳ ಸಂಖ್ಯೆ ಹತ್ತಾಗಲಿ, ಹದಿನಾಲ್ಕಾಗಲಿ, ಅರವತ್ನಾಲ್ಕಾಗಲಿ ಎಲ್ಲ ವಿದ್ಯೆಗಳಿಗಿಂತಲೂ ಅಧ್ಯಾತ್ಮ ವಿದ್ಯೆ ಶ್ರೇಷ್ಠ ಎಂಬುದು ನಿರ್ವಿವಾದ. ಯಾಕೆಂದರೆ ಅದು ಪರಮ ಪುರುಷಾರ್ಥವೆನಿಸಿದ ಮೋಕ್ಷಕ್ಕೆ ನೇರವಾಗಿ ಸಾಧನ. ಮುಂಡಕೋಪನಿಷತ್ತು ಇದನ್ನೇ ಇನ್ನೊಂದು ಶಬ್ದದಲ್ಲಿ ಹೇಳುತ್ತದೆ.ಅಥ ಪರಾ ಯಯಾ ತದಕ್ಷರಮಧಿಗಮ್ಯತೇ' ಯಾವ ವಿದ್ಯೆಯಿಂದ ಅಕ್ಷರ' ನೆಂಬ ಪರಮಾತ್ಮನ ದರ್ಶನ ಮತ್ತು ಪ್ರಾಪ್ತಿಯಾಗುವುದೋ ಅದು ಪರ ವಿದ್ಯೆ. ಅಧ್ಯಾತ್ಮ ವಿದ್ಯೆ ಎಂದರೇನು?ತನಗೆ' ಅಂದರೆ ನನಗೆ' ಸಂಬಂಧಿಸಿದ ಸೂಕ್ಷ್ಮ ವಿಷಯಗಳು ಆ ಶರೀರದೊಳಗಿರುವ ನನಗೆ ಸಂಬಂಧಿಸಿದ ವಿದ್ಯೆ. ಪರಮಾತ್ಮನು ಜೀವಾತ್ಮನಾಗಿ ಬದಲಾವಣೆ ಹೊಂದಿ ಅವಿದ್ಯೆ-ಕಾಮ-ಕರ್ಮಗಳಿಂದ ಶರೀರ ಧರಿಸಿ ಬರುತ್ತಾನೆ. ಅವನು ತಿರುಗಿ ವಿದ್ಯೆ ಯಿಂದ ಪರಮಾತ್ಮ ಭಾವವನ್ನು ಪಡೆದುಕೊಳ್ಳುವವರೆಗಿನವಿಷಯಗಳ' `ಸ್ವಭಾವೋಧ್ಯಾತ್ಮ ಉಚ್ಚ್ಯತೇ' ಎಂಬ ಗೀತಾವಾಕ್ಯದಲ್ಲಿ ಇದು ಸ್ಪಷ್ಟಪಟ್ಟಿದೆ. ಇಂತಹ ಅಧ್ಯಾತ್ಮವಿದ್ಯೆ ಶ್ರೇಷ್ಠ. ಉಳಿದ ವಿದ್ಯೆಗಳೆಲ್ಲ ನಿಷ್ಪ್ರಯೋಜನ ಎಂದು ಅರ್ಥವಲ್ಲ. ಅವುಗಳಿಂದ ಪಡೆಯುವ ಪ್ರಯೋಜನಗಳೂ ಮತ್ತು ಪುರುಷಾರ್ಥಗಳೂ ಇವೆ. ಪರಮ ಪುರುಷಾರ್ಥಕ್ಕೆ ಸಾಧನವಾಗಿ ಇರುವುದರಿಂದ ಅಧ್ಯಾತ್ಮ ವಿದ್ಯೆ ಶ್ರೇಷ್ಠ.