ಅನುಕೂಲಸ್ಥನ ಅರಿವಿನ ಪಾದಯಾತ್ರೆ
ರಮೇಶ ಅಳವಂಡಿ
ಹುಬ್ಬಳ್ಳಿ: ದೇಶ ಸುತ್ತು ಕೋಶ ಓದು' ಎಂಬ ಮಾತಿನಂತೆ ದೇಶ ಸುತ್ತಿ ತನ್ನ ದೇಶ, ಜನಜೀವನ ಪದ್ಧತಿ, ಭಿನ್ನ ವಿಭಿನ್ನ ಸಂಸ್ಕೃತಿ, ಪ್ರಕೃತಿ ಸೌಂದರ್ಯ ಹೀಗೆ ಹತ್ತು ಹಲವು ಸಂಗತಿಗಳನ್ನು ತಿಳಿದುಕೊಳ್ಳುವ ಆಶಯದೊಂದಿಗೆ ಪಾದಯಾತ್ರೆ ಕೈಗೊಂಡ ಯುವ ಯಾತ್ರಿ
ಯತಿ ಗೌರ್'.
ಈಗಿನ ಕಾಲದಲ್ಲಿ ಅನೇಕ ಯುವಕರು ಯಾತ್ರೆ ಮಾಡುತ್ತಾರೆ. ಆದರೆ ಯತಿ ಗೌರ್ ಅವರ ಪಾದಯಾತ್ರೆ ಇವರೆಲ್ಲರಿಗಿಂತ ವಿಭಿನ್ನ. ಉತ್ತರಪ್ರದೇಶದ ನೋಯ್ಡಾ ಸಮೀಪದ ಗೌತಮ್ ಬುದ್ಧನಗರದವರಾದ ಯತಿ ಗೌರ್, ಸಿನಿಮಾಟೋಗ್ರಫಿ ಪದವೀಧರರು. ತಂದೆ ಉದ್ಯಮಿ, ಸಹೋದರ ವೈದ್ಯ. ತಾಯಿ ಗೃಹಿಣಿ. ಆರ್ಥಿಕವಾಗಿ ಸ್ಥಿತಿವಂತ ಕುಟುಂಬ.
೨೦೨೨ರ ನವೆಂಬರ್ ೧ರಂದು ಉತ್ತರಖಂಡದ ಬದರೀನಾಥ್‌ನಿಂದ (ಚೀನಾ ಬಾರ್ಡರ್ ಸಮೀಪ) ಪಾದಯಾತ್ರೆ ಆರಂಭಿಸಿದರು. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ್, ಜಾರ್ಖಂಡ್, ಒರಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು ಮೂಲಕ ಕರ್ನಾಟಕ ಪ್ರವೇಶಿಸಿದ್ದು. ಬೆಂಗಳೂರು, ತುಮಕೂರು ಮಾರ್ಗವಾಗಿ ಆಗಮಿಸಿ ಪ್ರಸ್ತುತ ಶಿಕ್ಷಣ ನಗರಿ ಧಾರವಾಡದಲ್ಲಿದ್ದಾರೆ.
ಈವರೆಗೆ ಒಟ್ಟು ೧೩,೦೦೦ ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ಅವರಿಗೆ ಸಾಥಿಯಾಗಿ `ಬಟರ್' ಎಂಬ ಹೆಣ್ಣು ನಾಯಿಯೂ ಇದೆ. ಈ ಬಟರ್ ಯತಿ ಅವರಿಗೆ ಜೊತೆಯಾಗಿದ್ದು ರಾಜಸ್ಥಾನದಲ್ಲಿಯಂತೆ. ಯತಿಯವರು ರಾಜಸ್ಥಾನದಲ್ಲಿ ಒಂದು ಹಳ್ಳಿ ಮಾರ್ಗವಾಗಿ ಸಾಗುವಾಗ ಈ ನಾಯಿ ಮರಿ ಸಿಕ್ಕಿತಂತೆ. ಆ ಮರಿಗೆ ಹಾಲು ಬಿಸ್ಕಟ್ ಹಾಕಿಕೊಂಡು ಯಾತ್ರೆ ಮುಂದುವರಿಸಿದ್ದಾರೆ.
ಪ್ರಸ್ತುತ ಹುಬ್ಬಳ್ಳಿಯಲ್ಲಿ ಒಂದೆರಡು ದಿನ(ಎರಡು ದಿನದ ಹಿಂದೆ) ಪ್ರಾಣಿ ಪ್ರಿಯ ಸ್ನೇಹಿತ ರೋಹನ್ ಅವರ ಪರಿಚಯದಿಂದ ಉಳಿದಿದ್ದರು. ಈ ವೇಳೆ ಸಂಯುಕ್ತ ಕರ್ನಾಟಕ ಅವರ ಯಾತ್ರೆಯ ಕುರಿತು ಮಾತನಾಡಿಸಿದಾಗ ಹೇಳಿದ್ದಿಷ್ಟು.
ಪ್ರಶ್ನೆ : ಈ ಪಾದಯಾತ್ರೆಯ ಉದ್ದೇಶವೇನು?
ಯತಿ: ಈ ಪ್ರಶ್ನೆ ಅನೇಕರು ಕೇಳಿದ್ದಾರೆ. ಈ ನನ್ನ ಯಾತ್ರೆಗೆ ನಿರ್ದಿಷ್ಟ ಉದ್ದೇಶವಿಲ್ಲ. ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ಯಾತ್ರೆಗೆ ಹೊರಟರೆ ನಮ್ಮನ್ನು ನಾವು ಒಂದು ಚೌಕಟ್ಟಿಗೆ ಒಳಪಡಿಸಿಕೊಂಡಂತಾಗಿ ಬಿಡುತ್ತದೆ. ಹೀಗಾಗಿ ಯಾವ ಉದ್ದೇಶವಿಲ್ಲದೇ ಈ ಯಾತ್ರೆ ಆರಂಭಿಸಿದ್ದೇನೆ. ವಿವಿಧತೆಯಲ್ಲಿ ಏಕತೆಯ ನಮ್ಮ ದೇಶವೇ ವಿಶೇಷ. ಅದನ್ನು ಸ್ವತಃ ಕಣ್ಣಾರೆ ಕಂಡು ಅನುಭವಿಸುವ ಕುತೂಹಲವಿದೆ.
ಪ್ರ: ಯಾವ್ಯಾವ ರಾಜ್ಯದಲ್ಲಿ ಏನೇನು ಅನುಭವ?
ಯತಿ: ಈವರೆಗೆ ೧೩೦೦೦ ಕಿ.ಮೀ ಕ್ರಮಿಸಿದ್ದೇನೆ. ಆಂಧ್ರ, ತಮಿಳುನಾಡು, ರಾಜಸ್ಥಾನ, ಒರಿಸ್ಸಾ ಹೀಗೆ ಹತ್ತಾರು ರಾಜ್ಯದಲ್ಲಿ ಸಾಗಿದ್ದೇನೆ. ಭಾಷೆಯ ಸೊಗಡು, ಆಹಾರ ಪದ್ಧತಿ, ಮಾನವೀಯ ಸಂಬಂಧಗಳು ಅದ್ಭುತವಾಗಿವೆ. ಮನುಷ್ಯರ ಸಣ್ಣತನ, ದೊಡ್ಡತನ, ಉದಾರತನ, ಹಳ್ಳಿ ಮತ್ತು ನಗರ ಪ್ರದೇಶದ ಜನರ ಬದುಕು ಕಂಡಿದ್ದೇನೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಅನುಭವ.
ಪ್ರ: ಪ್ರತಿ ದಿನ ಎಷ್ಟು ಕಿ.ಮೀ ಕ್ರಮಿಸುತ್ತೀರಿ? ಎಲ್ಲಿ ಉಳಿದುಕೊಳ್ಳುತ್ತೀರಿ?
ಯತಿ: ಪ್ರತಿ ದಿನ ೨೫ ಕಿ.ಮೀ ಕ್ರಮಿಸುತ್ತೇನೆ. ಬೆಳಿಗ್ಗೆ ೬.೩೦ಕ್ಕೆ ಯಾತ್ರೆ ಆರಂಭವಾದರೆ ಸಂಜೆ ೭.೩೦ಕ್ಕೆ ನಿಲ್ಲಿಸುತ್ತೇನೆ. ಹಳ್ಳಿಯೇ ಇರಲಿ. ನಗರವೇ ಇರಲಿ. ಅಲ್ಲಿಯೇ ಉಳಿದುಕೊಳ್ಳುತ್ತೇನೆ. ಕೆಲವು ಕಡೆ ಪೆಟ್ರೋಲ್ ಪಂಪ್, ದೇವಸ್ಥಾನಗಳಲ್ಲಿ ಉಳಿಯುತ್ತೇನೆ. ನನ್ನಂತೆಯೇ ಯಾತ್ರೆ ಮಾಡುವ ಯುವ ಸಮುದಾಯ, ಪ್ರಾಣಿ ಪ್ರಿಯ ಸಮುದಾಯವಿದೆ. ಸಾಮಾಜಿಕ ಜಾಲ ತಾಣದಲ್ಲಿ ಕನೆಕ್ಟ್ ಆಗಿರುವುದರಿಂದ ಅವರೂ ತಮ್ಮೂರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಪ್ರೀತಿ ಕಾಳಜಿ ಮೆರೆದಿದ್ದಾರೆ. ಇಂಥವರಲ್ಲಿ ಹುಬ್ಬಳ್ಳಿಯ ಪ್ರಾಣಿ ಪ್ರಿಯರಾದ ರೋಹನ್ ಅವರೂ ಒಬ್ಬರೂ ಎಂದರು.
ಪ್ರ: ಯಾತ್ರೆಯಲ್ಲಿ ಬಟರ್‌ಗೆ ತೊಂದರೆ ಆಗಿದೆಯೇ?
ಯತಿ: ಒಂದೆರಡು ಕಡೆ ನಾಯಿಗಳು ಕಡಿದಿದ್ದವು. ಅಪಘಾತವಾಗಿತ್ತು. ಭುವನೇಶ್ವರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ ೨೦ ದಿನ ಅಲ್ಲಿಯೇ ಉಳಿದುಕೊಂಡಿದ್ದೆ. ಗುಣಮುಖವಾದ ಬಳಿಕ ಮತ್ತೆ ಯಾತ್ರೆ ಮುಂದುವರಿಸಿದೆವು. ನನ್ನ ಮಾತು ಕಥೆ ಎಲ್ಲವೂ ಅವಳ (ಬಟರ್) ಜೊತೆಯಲ್ಲೇ.
ಪ್ರ: ಮದುವೆಯಾಗಿದೆಯೇ? ಪೋಷಕರ ಸಂಪರ್ಕ ಹೇಗೆ?
ಯತಿ: ನನಗೀಗ ೨೭ ವರ್ಷ. ದೇಶ ಸುತ್ತುವ ಉಮೇದಿ ಇದೆ. ಮದುವೆ ವಿಚಾರ ಏನೂ ಮಾಡಿಲ್ಲ. ಅದಕ್ಕಿನ್ನೂ ಸಮಯ ಇದೆ. ತಂದೆ, ತಾಯಿ ಮೊಬೈಲ್‌ನಲ್ಲಿ ಮಾತನಾಡುತ್ತಾರೆ. ಮರ‍್ನಾಲ್ಕು ತಿಂಗಳಿಗೊಮ್ಮೆ ನಾನು ಇರುವ ಸ್ಥಳಕ್ಕೇ ಬಂದು ಭೇಟಿ ಮಾಡುತ್ತಾರೆ. ಒಂದೆರಡು ದಿನ ಇದ್ದು ಸಮಯ ಕಳೆಯುತ್ತಾರೆ.