For the best experience, open
https://m.samyuktakarnataka.in
on your mobile browser.

ಅನುಷ್ಠಾನಕ್ಕೆ ಬಂದಿರುವುದು ಕರ್ನಾಟಕದಲ್ಲಿ ಮಾತ್ರ

07:22 PM Sep 27, 2024 IST | Samyukta Karnataka
ಅನುಷ್ಠಾನಕ್ಕೆ ಬಂದಿರುವುದು ಕರ್ನಾಟಕದಲ್ಲಿ ಮಾತ್ರ

ಬೆಂಗಳೂರು: ಕೈಗಾರಿಕಾ ನಿವೇಶನಕ್ಕೆ ಶೇಕಡಾ 75ರಷ್ಟು ಸಹಾಯಧನ ನೀಡಲಾಗುತ್ತಿದೆ. ಇವೆಲ್ಲವೂ ಅನುಷ್ಠಾನಕ್ಕೆ ಬಂದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ‘‘ಕರ್ನಾಟಕದಲ್ಲಿ ಪರಿಶಿಷ್ಟರ ನಿಧಿಯಲ್ಲಿ ಹಗರಣವಾಗಿದೆ’’ ಎಂದು ಆರೋಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ದಲಿತರ ಬಗ್ಗೆ ಅಷ್ಟೊಂದು ಕಾಳಜಿ ನಿಮಗಿದ್ದರೆ ನಮ್ಮಲ್ಲಿರುವಂತೆ ರಾಷ್ಟ್ರಮಟ್ಟದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (ಎಸ್ ಸಿಎಸ್‌ಪಿ/ಟಿಎಸ್ ಪಿ) ಕಾಯ್ದೆಯನ್ನು ಜಾರಿಗೆ ತಂದು, ದಲಿತರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಡಿ, ಅದರ ನಂತರ ನಮ್ಮ ದಲಿತ ಕಾಳಜಿಯನ್ನು ಪ್ರಶ್ನಿಸಿ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಬೇಕೆಂದು ಕಳೆದ ಹತ್ತು ವರ್ಷಗಳಿಂದ ನಾವು ಕೇಂದ್ರ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿದ್ದರೂ ಒಪ್ಪಿಕೊಳ್ಳದ ನರೇಂದ್ರ ಮೋದಿಯವರು ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಕಣ್ಣೀರು ಹಾಕುತ್ತಿರುವುದು ಹಾಸ್ಯಾಸ್ಪದವಾಗಿದೆ. ಪ್ರಸಕ್ತ ಸಾಲಿನ ನಮ್ಮ ಸರ್ಕಾರದ ಬಜೆಟ್ ಗಾತ್ರ ರೂ.3.71,383 ಕೋಟಿ, ಅದರಲ್ಲಿ ರೂ.39,121 ಕೋಟಿಯನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟಿದ್ದೇವೆ. ಪ್ರಸಕ್ತ ಸಾಲಿನ ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್ ರೂ.48.21 ಲಕ್ಷ ಕೋಟಿಯಾಗಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ನೀಡಿರುವ ಅನುದಾನ ರೂ.2,90,401 ಕೋಟಿ ಮಾತ್ರ. ಪ್ರಧಾನಿ ನರೇಂದ್ರ ಮೋದಿ ಅವರೇ, ಇದು ನಿಮ್ಮ ಸರ್ಕಾರದ ದಲಿತ ಕಾಳಜಿ.ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಗಿಂತ ಮೊದಲು ರಾಜ್ಯದಲ್ಲಿ ದಲಿತ ಸಮುದಾಯದ ಕಲ್ಯಾಣಕ್ಕಾಗಿಯೇ ಜಾರಿಯಲ್ಲಿದ್ದ ವಿಶೇಷ ಘಟಕ ಯೋಜನೆಯನ್ವಯ 2013-14ರ ಸಾಲಿನಲ್ಲಿ ನೀಡಲಾಗಿದ್ದ ಅನುದಾನ ರೂ.8,616 ಕೋಟಿಯಾಗಿದ್ದರೆ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಜಾರಿಯಾದ ವರ್ಷ (2014-2015)ರ ಸಾಲಿನಲ್ಲಿ ನೀಡಲಾಗಿದ್ದ ಅನುದಾನ ರೂ.15,894 ಕೋಟಿ. ಈ ಮೊತ್ತ ಈಗ ಹೆಚ್ಚು ಕಡಿಮೆ 40,000 ಕೋಟಿ ರೂಪಾಯಿಗೆ ತಲುಪಿದೆ. ಇದು ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಇರುವ ದಲಿತರ ಬಗೆಗಿನ ಕಾಳಜಿ. ಇಷ್ಟು ಮಾತ್ರವಲ್ಲ, ನಮ್ಮ ಸರ್ಕಾರ ನ್ಯಾ.ಹೆಚ್. ಎನ್. ನಾಗಮೋಹನ್ ದಾಸ್ ಸಮಿತಿ ಶಿಫಾರಸಿನನ್ವಯ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡಾ 15ರಿಂದ 17ಕ್ಕೆ ಮತ್ತು ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ 3ರಿಂದ 7ಕ್ಕೆ ಹೆಚ್ಚಿಸಿದೆ, ಒಂದು ಕೋಟಿ ರೂಪಾಯಿ ವರೆಗಿನ ಸರ್ಕಾರಿ ಗುತ್ತಿಗೆಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಗುತ್ತಿಗೆದಾರರಿಗೆ ಶೇಕಡಾ 24.1ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಗುತ್ತಿಗೆ ಆಧಾರದ ನೇಮಕಾತಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾತಿ ಅನ್ವಯಿಸಲು ನಿರ್ಧರಿಸಲಾಗಿದೆ. ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ಸರ್ಕಾರ ಮಂಜೂರು ಮಾಡಿದ ಜಮೀನುಗಳ ಅನಧಿಕೃತ ಪರಭಾರೆಯನ್ನು ತಡೆಯಲು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಹಂಚಿಕೆಯಾಗುವ ಕೈಗಾರಿಕಾ ನಿವೇಶನಕ್ಕೆ ಶೇಕಡಾ 75ರಷ್ಟು ಸಹಾಯಧನ ನೀಡಲಾಗುತ್ತಿದೆ. ಇವೆಲ್ಲವೂ ಅನುಷ್ಠಾನಕ್ಕೆ ಬಂದಿರುವುದು ಕರ್ನಾಟಕದಲ್ಲಿ ಮಾತ್ರ ನರೇಂದ್ರ ಮೋದಿ ಅವರೇ. ಕರ್ನಾಟಕದಲ್ಲಿ ಎಸ್‌ಸಿ‌ಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತರಲು ದೊಡ್ಡ ಮಟ್ಟದ ಜನಾಂದೋಲಗಳೇನು ನಡೆದಿರಲಿಲ್ಲ. ರಾಜ್ಯದ ಕಾಂಗ್ರೆಸ್ ಪಕ್ಷವು ದಲಿತ ಸಮುದಾಯದ ಮೇಲಿನ ಪ್ರಾಮಾಣಿಕ ಕಾಳಜಿಯ ಕಾರಣಕ್ಕಾಗಿ ಸ್ವಯಂ ಇಚ್ಛೆಯಿಂದ 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಅಧಿಕಾರಕ್ಕೆ ಬಂದ ನಂತರ 2014-15ರಲ್ಲಿ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದು ನಾವು ನುಡಿದಂತೆ ನಡೆದಿದ್ದೆವು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ, ಈಗಲೂ ಕಾಲ ಮಿಂಚಿಲ್ಲ, ರಾಷ್ಟ್ರಮಟ್ಟದಲ್ಲಿ ಎಸ್‌ಸಿ‌ಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ನಿಮ್ಮ ದಲಿತ ಕಾಳಜಿಯನ್ನು ಸಾಬೀತುಪಡಿಸಿ ಎಂದಿದ್ದಾರೆ,

Tags :