ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಗೆಲ್ಲುತ್ತಾರೆ
ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. ಮೂರು ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಜನರಿಂದ ವ್ಯಕ್ತವಾದ ಬೆಂಬಲದಿಂದ ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಗೆಲ್ತಾರೆ ಅನ್ನುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲ್ಲುತ್ತಾರೆ. ಎರಡು ಕಡೆ ಬಿಜೆಪಿ, ಒಂದು ಕಡೆ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ನಾನು ಎಕ್ಸಿಟ್ ಪೋಲ್ ನಂಬಿ ಮಾತಾಡುತಿಲ್ಲ. ಕಾಂಗ್ರೆಸ್ ನವರು ನಾಳೆವರೆಗೂ ತಾವೆ ಗೆಲ್ಲುತ್ತೇವೆಂದು ಹೇಳುತ್ತಾರೆ. ಆದರೆ, ಈ ಸರ್ಕಾರದ ವಿರುದ್ದ ಬಡವರು, ದಲಿತರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ, ನಾನು ಎಕ್ಸಿಟ್ ಪೋಲ್ ನಂಬಿ ಮಾತನಾಡಲ್ಲ. ನಮಗೆ ಮೂರು ಕ್ಷೇತ್ರದಲ್ಲಿ ಗೆಲ್ತೀವಿ ಅನ್ನೋ ವಿಶ್ವಾಸ ಇದೆ. ಅದೇ ರೀತಿ
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ನಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದರು.
ಯು ಟರ್ನ್ ಸರ್ಕಾರ
ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ನಿರ್ಧಾರ ಹಿಂಪಡೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಯುಟರ್ನ್ ಸರ್ಕಾರ. ದಿಕ್ಕು ದೆಸೆಯಿಲ್ಲದೆ ನಿರ್ಣಯ ಮಾಡುತ್ತಾರೆ. ಸರ್ಕಾರಕ್ಕೆ ದಿಕ್ಕು ಇಲ್ಲ, ದೆಸೆ ಇಲ್ಲ..
ಯಾವ ನಾಯಕತ್ವವೂ ಇಲ್ಲ. ಜನರು ಪ್ರತಿರೋಧ ವ್ಯಕ್ತಪಡಿಸಿದಾಗ ವಾಪಸ್ ಪಡೆದರು. ಮುಡಾದಲ್ಲಿ ಸೈಟ್ ಪಡೆದರು ವಾಪಸ್ ಕೊಟ್ಟರು, ವಕ್ಪ್ ನೋಟಿಸ್ ಕೊಟ್ಟರು ವಾಪಸ್ ಪಡೆದರು, ಅಲ್ಪ ಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಮುಂದಾಗಿದ್ದರು. ವಿರೋಧ ವ್ಯಕ್ತವಾದ ಕೂಡಲೆ ತಡೆ ಹಿಡಿದರು. ಬಡವರ ವಿರುದ್ದ ನಿರ್ಣಯ ತೆಗೆದುಕೊಳ್ಳುತ್ತಾರೆ. ಹಾಗಾಗಿ ಇದೊಂದು ಯುಟರ್ನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಬಜೆಟ್ ನಲ್ಲಿ ಸುಮಾರು 15 ಸಾವಿರ ಕೋಟಿ ರೂ. ಜನರ ಮೇಲೆ ತೆರಿಗೆ ಹೊರೆ ಹಾಕಿದರು. ಬಜೆಟ್ ನಲ್ಲಿ ಸ್ಟಾಂಪ್ ಡ್ಯೂಟಿ, ಅಬಕಾರಿ ತೆರಿಗೆ ಹೆಚ್ಚಳ ಮಾಡಿದರು. ಮೋಟಾರು ನೋಂದಣಿ ಶುಲ್ಕ ಹೆಚ್ಚಳ ಮಾಡಿದರು. ಬಜೆಟ್ ನಂತರ ಹಾಲಿನ ದರ, ಅಲ್ಕೊ ಹಾಲಿನ ದರ ಹೆಚ್ಚಳ ಮಾಡಿದರು. ಇದೀಗ ಆಸ್ಪತ್ರೆ ಸೇವೆಗೆಳ ಹೆಚ್ಚಳ ಮಾಡುತ್ತಿದ್ದಾರೆ. ಶಾಲೆಗಳ ಶಿಕ್ಷಕರ ವೇತನ ಕೊಡಲು ಹಣ ಇಲ್ಲ. ಈ ಸರ್ಕಾರದ ಬಳಿ ದುಡ್ಡಿಲ್ಲ. ಸರ್ಕಾರ ದಿವಾಳಿಯಾಗಿದೆ. ತೆರಿಗೆ ಹೊರೆ ಭ್ರಷ್ಟಚಾರದ ಹೊರೆ ಆಗಿದೆ ಎಂದು ಆರೋಪಿಸಿದರು.