ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅಪಸವ್ಯಗಳು ಕೆಲವು… ಪ್ರಶ್ನೆಗಳು ಹಲವು!

12:05 AM Nov 14, 2024 IST | Samyukta Karnataka

ಇದು ಮನಕಲಕುವ, ಮಾನವ ಕುಲದ ಅಪಮಾನದ, ಸಂವಿಧಾನ ಧಿಕ್ಕರಿಸಿದ, ಎಲ್ಲಕ್ಕೂ ಹೆಚ್ಚಾಗಿ ಆಡಳಿತ ವ್ಯವಸ್ಥೆ ದುರ್ಬಲವಾಗಿರುವುದನ್ನು ತೋರಿಸುವ ಪ್ರಸಂಗ.
ಎಲ್ಲವೂ ಅಸಹ್ಯ ಹುಟ್ಟಿಸುತ್ತಿವೆ. ಪಶ್ಚಾತ್ತಾಪವೂ ಮೂಡುತ್ತಿದೆ…!
ಇದು ತುರುವೇಕೆರೆ ಪಟ್ಟಣದಲ್ಲಿ ತಾಯಿಯೊಬ್ಬಳು ತನ್ನ ಮಗನ ಹತ್ಯೆಗೆ ಅನುಮತಿ ಕೋರಿದ ಕುರಿತ ಪ್ರಕರಣ…! ತಾಯಿ ಕ್ಷಮಯಾಧರಿತ್ರಿ. ಮಕ್ಕಳು ಮಾಡುವ ಎಲ್ಲ ತಪ್ಪುಗಳನ್ನು ಸಹಿಸಿಕೊಂಡು ಮಕ್ಕಳ ರಕ್ಷಣೆಗೆ ಇಳಿಯುತ್ತಾಳೆ. ಆದರೆ ತುರುವೇಕೆರೆಯ ರೇಣುಕಮ್ಮನವರ ಸಂಕಟ ನೋಡಿ. ನನ್ನ ಮಗ ಅಭಿ, ಮಾದಕ ವಸ್ತುಗಳ ದಾಸನಾಗಿದ್ದಾನೆ. ಕೆಟ್ಟವರ ಸಹವಾಸ ಮಾಡಿ ಸದಾ ಮಾರಾಮಾರಿ, ವಂಚನೆ, ಘರ್ಷಣೆ, ಕಳ್ಳತನ, ಮೋಸಗಾರಿಕೆಯೇ ಆತನ ಜೀವನವಾಗಿದೆ. ಈ ಇಪ್ಪತ್ತು ವರ್ಷದ ಅಭಿಯನ್ನು ಒಂದೋ ಹತ್ಯೆ ಮಾಡಲು ಅನುಮತಿ ನೀಡಿ ಇಲ್ಲವೇ ಜೈಲಿನಲ್ಲಿ ಇಟ್ಟುಕೊಳ್ಳಿ. ಅವನಿಂದ ನನ್ನ ಘನತೆ-ಮರ್ಯಾದೆ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಈಗ ಇಪ್ಪತ್ತು ವರ್ಷ. ಮುಂದೆ ಏನೆಲ್ಲ ಅನುಭವಿಸಬೇಕೋ ಗೊತ್ತಿಲ್ಲ. ಚಟಗಳಿಗೆ ದಾಸನಾಗಿರುವ ಈತನ ಉಪಟಳದಿಂದ ಪಾರು ಮಾಡಿ. ಜೈಲಿನಲ್ಲಿ ಇರಿಸಿಕೊಳ್ಳಿ ಎಂದು ಪರಿಪರಿಯಾಗಿ ಕೋರಿ ಮಗನನ್ನು ಠಾಣಾಧಿಕಾರಿ ಮುಂದೆ ನಿಲ್ಲಿಸಿದ್ದಾಳೆ.
ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರುವುದಿಲ್ಲ'. ಪಾಪ.. ರೇಣುಕಮ್ಮ ಅವರ ಗೋಳಿನ ಹಿಂದೆ ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದು ಕೆರ ಹಿಡಿದಿರುವುದು ಸ್ಪಷ್ಟವಾಗುತ್ತದೆ. ತುರುವೇಕೆರೆಯಂತಹ ಪುಟ್ಟ ಪಟ್ಟಣದಲ್ಲಿ ಗಾಂಜಾ, ಡ್ರಗ್, ಸಾರಾಯಿ, ಬ್ರೌನ್ ಶುಗರ್ ಇವೆಲ್ಲ ಹೇರಳವಾಗಿ ದೊರೆತು ಮಕ್ಕಳನ್ನು ಮಾದಕ ವಸ್ತುಗಳ ದಾಸರನ್ನಾಗಿಸಿಬಿಟ್ಟಿವೆ. ಯುವಕರು, ವಿದ್ಯಾರ್ಥಿಗಳು ಡ್ರಗ್ಸ್ ಚಟಕ್ಕೆ ಬಿದ್ದು ಬದುಕು ಕಳೆದುಕೊಳ್ಳುತ್ತಿದ್ದಾರೆ. ಹೆತ್ತ ತಂದೆ ತಾಯಿಗಳ ಮುಂದೆ ತೇಲಾಡುತ್ತಾ, ಓಲಾಡುತ್ತಾ, ಘರ್ಷಣೆಗೆ ಇಳಿಯುತ್ತಾ, ಸಮಾಜಘಾತುಕ ಶಕ್ತಿಗಳೊಂದಿಗೆ ಬೆರೆಯುತ್ತಾ ಕಂಟಕಪ್ರಾಯರಾಗಿದ್ದಾರೆ. ಪೋಷಕರ ಮಾತು ಕೇಳುವ ಸ್ಥಿತಿಯಲ್ಲೂ ಇಲ್ಲ. ದೊಡ್ಡವರಾದ ಮಕ್ಕಳನ್ನು ಹೊಡೆದು ಬುದ್ಧಿ ಹೇಳಲಾದೀತೇ? ಇಡೀ ಊರಿಗೆ ಊರೇ ಕಲಿತವರಿರುವಾಗ ತಮ್ಮ ಮಕ್ಕಳನ್ನು ಕಾಪಾಡಿ ಎಂದು ಹೇಳುವುದು ಹೇಗೆ? ಕೇಳುವುದು ಯಾರನ್ನು? ರೇಣುಕಮ್ಮನವರ ಗೋಳೂ ಇದೆ. ಕೂಲಿ ನಾಲಿ ಮಾಡುತ್ತ ಮರ್ಯಾದೆಯಾಗಿ ಬದುಕು ಕಟ್ಟಿಕೊಂಡಿರುವ ಬಡ ಪೋಷಕರ ಗೋಳು ಕೇವಲ ರೇಣುಕಮ್ಮನವರದ್ದಷ್ಟೇ ಅಲ್ಲ. ಇದು ಇಡೀ ರಾಜ್ಯದಲ್ಲಿ ಕೇಳಿಬರುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಕರ್ನಾಟಕ ಕೂಡ ಮಾದಕ ವ್ಯಸನಿಗಳ ನಾಡಾದೀತೇ ಎನ್ನುವ ಆತಂಕ ಮನೆ ಮಾಡಿದೆ. ಹಳ್ಳಿ ಹಳ್ಳಿಗಳಲ್ಲಿ ಗಾಂಜಾ, ಅಫೀಮು ದೊರೆಯುತ್ತಿರಬೇಕಾದರೆ, ಓಣಿ ಓಣಿಯಲ್ಲಿ ಸಾರಾಯಿ ಅಂಗಡಿಗಳು ಕಾಣುತ್ತಿರಬೇಕಾದರೆ ಮಕ್ಕಳಿಗೆ ಸ್ಕೂಲು, ಕಾಲೇಜು ಆಕರ್ಷಿಸುತ್ತವೆಯೇ? ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಾದ್ಯಂತ ಮದ್ಯವ್ಯಸನಿಗಳು, ಮಾದಕ ವ್ಯಸನಿಗಳನ್ನು ಚಟದಿಂದ ಮುಕ್ತಿಗೊಳಿಸುವ ಕೇಂದ್ರಗಳು ಸಾವಿರಾರು ಸಂಖ್ಯೆಯಲ್ಲಿ ತಲೆ ಎತ್ತಿವೆ. ಅವೆಲ್ಲ ವ್ಯಸನ ಮುಕ್ತಿ ಚಿಕಿತ್ಸೆ ನೀಡಲು ಸಾವಿರಾರು ರೂಪಾಯಿ ಪೀಕಿಸುತ್ತವೆ. ಅಲ್ಲಿ ವ್ಯಸನ ಬಿಡುವ ವ್ಯಕ್ತಿಗಳು ಮತ್ತೆ ಸಮಾಜದ ಮುಖ್ಯ ವಾಹಿನಿಗೆ ಬಂದಾಗ ಅದರ ದುಪ್ಪಟ್ಟು ವ್ಯಸನಗಳ ದಾಸರಾಗುತ್ತಿದ್ದಾರೆ. ವ್ಯಸನ ಮುಕ್ತ ಸಮಾಜಕ್ಕಾಗಿ ಜ್ಞಾನಿಗಳು, ಸಂತರು, ಮಠ-ಮಂದಿರ, ಚರ್ಚುಗಳು ವಿಶೇಷ ಶಿಬಿರಗಳನ್ನು ಆಯೋಜಿಸುತ್ತಿವೆ. ಆದರೆ ಮಾದಕ ವ್ಯಸನ ಇವೆಲ್ಲವನ್ನೂ ಮೀರಿ ಎಲ್ಲೆಡೆ ತಮ್ಮ ಕಬಂಧ ಬಾವುಗಳನ್ನು ಚಾಚಿದೆ. ಪೊಲೀಸ್ ಅಧಿಕಾರಿಗಳು ಅಲ್ಲಿ ಇಲ್ಲಿ ದಾಳಿ ನಡೆಸಿ ಫೋಟೊ ಪ್ರಕಟಿಸಿಕೊಂಡಿದ್ದಷ್ಟೇ ಆಯಿತು. ಆ ನಂತರ ಅದೇ ಪುನರಾರ್ವತನೆ. ಆಗಂತುಕರು ದುರವಸ್ಥೆಯ ಪಾಲುದಾರರಾಗಿ ಆಡಳಿತ ಯಂತ್ರಕ್ಕೆ ಕಪ್ಪ ಕಾಣಿಕೆ ಸಲ್ಲಿಸುವ ವ್ಯಕ್ತಿಗಳಾಗಿದ್ದಾರೆ. ನನ್ನ ಮಗನನ್ನು ಸಾಯಿಸಲು ಪರ್ಮಿಷನ್ ಕೊಡಿ.. ಇಲ್ಲ ನಾನು ಸಾಯ್ತೀನಿ... ಇಲ್ಲ, ಜೈಲಿನಲ್ಲಿ ಶಾಶ್ವತವಾಗಿಟ್ಟುಕೊಳ್ಳಿ ... ಎಂದು ಅಂಗಲಾಚುವ ರೇಣುಕಮ್ಮನವರ ಅಳಲಿಗೆ ಅದೇ ಜಿಲ್ಲೆಯವರಾದ ಗೃಹ ಮಂತ್ರಿಗಳು ಯಾವ ಸಾಂತ್ವನ, ಉತ್ತರ ನೀಡಿಯಾರು? ಜವಾಬ್ದಾರಿ ಅವರದ್ದಲ್ಲವೇ? ಇದೇ ಮತ್ತೊಂದು ಮುಖ... ಮಂಡ್ಯ ಜಿಲ್ಲೆಯದ್ದು... ಹನಗೆರೆ ಗ್ರಾಮದ ಶ್ರೀ ಕಾಲಭೈರವೇಶ್ವರದ ದೇವಸ್ಥಾನಕ್ಕೆ ದಲಿತರನ್ನು ಬಿಡುವುದಿಲ್ಲ ಎಂದು ಕೆಲವರು ವರಾತ ಶುರು ಮಾಡಿದರು. ಸಂವಿಧಾನ ಇದೆ. ಕಾನೂನು ಕಟ್ಟಲೆಗಳಿವೆ. ಇವ್ಯಾವುಗಳ ಭಯವೂ ಇಲ್ಲದೇ, ಮನುಷ್ಯ-ಮಾನವಕುಲಕ್ಕೆ-ಸಮಾಜಕ್ಕೆ ಅನಿಷ್ಟವಾಗಿರುವ ಅಸ್ಪೃಶ್ಯತೆ, ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸುವ, ದೇವರ ಕೈಂಕರ್ಯಕ್ಕೆ ಅವಕಾಶ ನೀಡದ ಘಟನೆ ಇನ್ನೂ ನಡೆಯುತ್ತಿದೆಯಲ್ಲ... ಇದು ಕಲ್ಯಾಣ ರಾಜ್ಯದ ಸಾಮರಸ್ಯ ಬದುಕಿಗೇ ಸವಾಲು ಎಂದು ಈ ಸರ್ಕಾರ ಮತ್ತು ಸಮಾಜಕ್ಕೆ ಅನಿಸಲೇ ಇಲ್ಲ! ಗ್ಯಾನಿ ಜೈಲ್‌ಸಿಂಗ್ ರಾಷ್ಟ್ರಪತಿಯಾಗಿದ್ದಾಗ ದೇವಸ್ಥಾನಕ್ಕೆ ಹೋಗುತ್ತಾರೆ. ಆ ದೇವಾಲಯದ ಪ್ರವೇಶದ್ವಾರದ ಮುಂದೆ ನಿಂತಾಗ ಅವರಿಗೆ ಗೊತ್ತಾಗುತ್ತದೆ, ಈ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವಿಲ್ಲ ಎನ್ನುವುದು.. ತಕ್ಷಣಅಸ್ಪೃಶ್ಯರಿಗೆ ಪ್ರವೇಶವಿಲ್ಲದ, ದೇವಾಲಯದೊಳಗೆ ನಾನು ಪ್ರವೇಶಿಸುವುದಿಲ್ಲ' ಎಂದು ಹಿಂತಿರುಗಿಬಿಡುತ್ತಾರೆ.. ಇದು ರಾಷ್ಟçದ ಪ್ರಥಮ ಪ್ರಜೆ ಸಂವಿಧಾನದ ಆಶಯಕ್ಕೆ ಬದ್ಧವಾಗಿ ನಡೆದುಕೊಂಡ ಅಪೂರ್ವ ಘಟನೆ.
ಎಲ್ಲರಿಗೂ ದೇವಾಲಯಕ್ಕೆ ಹೋಗುವ ಹಕ್ಕಿದೆ. ದೇವಾಲಯ, ದೇವರು, ಎಲ್ಲ ಸಮಾಜ ಒಪ್ಪಿಕೊಂಡಿರುವ ಮತ್ತು ಸಾಂವಿಧಾನಿಕ ಹಕ್ಕು ಕೂಡ. ಹನಗೆರೆ ಗ್ರಾಮದ ಶ್ರೀ ಕಾಲಭೈರವೇಶ್ವರನೇನೂ ದಲಿತರನ್ನು ಒಳಗೆ ಬಿಡಬೇಡಿ ಎಂದು ಹೇಳಿಲ್ಲ. ಕಾಲಭೈರವೇಶ್ವರನೇ ದುಷ್ಟರ ಸಂಹಾರ, ಅನ್ಯಾಯ ಅಕ್ರಮಗಳನ್ನು ಮೆಟ್ಟಿ ನಿಂತು ಅವುಗಳ ನಿರ್ಮೂಲನೆಗೆ ಇಳಿದ ದೈವ. ಶ್ರೀ ಕಾಲಕಾಲೇಶ್ವರನ ಸನ್ನಿಧಿ ಎಲ್ಲರಿಗೂ ಮುಕ್ತವಾಗಿರಬೇಕಾದ್ದೇ. ಕೆಂಪೇಗೌಡ, ಅಣ್ಣ ಬಸವಣ್ಣನ ನಾಡಿನಲ್ಲಿ ಇನ್ನೂ ವರ್ಣಭೇದ, ದೇವಾಲಯಕ್ಕೆ ಪ್ರವೇಶ ನಿಷೇಧ… ದೇವರ ದರ್ಶನಕ್ಕೆ ಅವಕಾಶ ಇಲ್ಲ… ಮತಭೇದ… ಇವೆಲ್ಲದರ ಹಿಂದೆ ರಾಜಕೀಯ ತಂತ್ರ, ಷಡ್ಯಂತ್ರಗಳೇ ಅಡಗಿವೆ.
ಛೀ… ಕಳೆದ ಐವತ್ತು ವರ್ಷಗಳಿಂದ ನಡೆದ ಸಾಮಾಜಿಕ ಕ್ರಾಂತಿ, ಜಾಗೃತಿ, ಕಾನೂನು ಕಟ್ಟಳೆಗಳ ಪರಿಣಾಮವಾಗಿ ದೇವಸ್ಥಾನ, ಸಾಮಾಜಿಕ ಸ್ಥಳ, ಅಂಗಡಿ, ಹೋಟೆಲ್, ಸಾರ್ವಜನಿಕ ಸ್ಥಳ, ತಾಣಗಳು, ಉದ್ಯೋಗ ಇವೆಲ್ಲವುಗಳಲ್ಲಿ ಮತ-ಜಾತಿಭೇದ ಇಲ್ಲವಾಗುವ ಮಟ್ಟಕ್ಕೆ ಬಂದಿರುವಾಗ ದೇವಾಲಯಕ್ಕೆ ಪ್ರವೇಶ ನಿಷೇಧಿಸುವ ಕ್ರಮ ಒಪ್ಪಿತವಲ್ಲ. ಅದೂ ಮಂಡ್ಯ, ಮೈಸೂರಿನಂತಹ ಅತ್ಯಂತ ಜಾಗೃತ, ಚಿಂತಕರ ನಾಡಿನಲ್ಲಿ…. ಅಚ್ಚರಿಯೇ ಸರಿ.
ಪಕ್ಕದ ಚನ್ನಪಟ್ಟಣದ ಚುನಾವಣಾ ಕಾವು ಇದರ ಹಿಂದಿರಬಹುದು. ಆದರೆ ಸ್ಥಳೀಯರೇ ಸೌಹಾರ್ದವಾಗಿ ವಿವಾದವನ್ನು ಬಗೆಹರಿಸಿಕೊಂಡಿದ್ದಾರೆ. ಇಷ್ಟರಮಟ್ಟಿಗೆ ಇದು ಸ್ವಾಗತಾರ್ಹ. ಆದರೆ ಆಡಳಿತ ವ್ಯವಸ್ಥೆಯ ಹಿನ್ನೆಲೆಯಲ್ಲಿ ಸಾಂವಿಧಾನಿಕ ಹಕ್ಕು ಮತ್ತು ಆದ ಅಪಮಾನ, ಘಟನೆಯನ್ನು ಪ್ರಶ್ನಿಸಲೇಬೇಕಾಗಿದೆ. ಆಡಳಿತ ನಡೆಸುವವರೇ ಕೀಳು ಅಭಿರುಚಿಯ ಕುತ್ಸಿತ ಮನಸ್ಸಿನವರಾದರೆ ಇವೆಲ್ಲ ಸಾಧ್ಯ.!
ರಾಜ್ಯ ಮಂತ್ರಿಯೊಬ್ಬ ಇನ್ನೊಬ್ಬ ನಾಯಕನನ್ನು ಕುರಿತು ಅವನ ಬಣ್ಣ ನೋಡಿ ಕರಿಯ, ಕಾಲಾ ಎಂದು ಟೀಕಿಸಿದರೆ ಇದೆಂತಹ ಆಡಳಿತ? ವರ್ಣಭೇದವಲ್ಲವೇ? ಮಾತು ಬರೀ ರಾಜಕಾರಣಕ್ಕಷ್ಟೇ ಇರಬಾರದು ಅಥವಾ ತಾತ್ಪೂರಿಕ ಲಾಭಕ್ಕಾಗಿ ಮಾತ್ರ ಇರಬಾರದು. ಅದರ ಪರಿಣಾಮ ಏನಾದೀತೆಂಬ ಪ್ರಜ್ಞೆ ಕೂಡ ಇರಬೇಕು. ಕೇಂದ್ರ ಮಂತ್ರಿ ಕುಮಾರಸ್ವಾಮಿಯವರನ್ನು ಕರಿಯ ಎಂದು ಮೂದಲಿಸಿರುವ ಜಮೀರ್ ಅಹಮದ್ ಖಾನ್‌ಗೆ ಬಹುಶಃ ಇವ್ಯಾವುವೂ ಇದ್ದಂತಿಲ್ಲ.
ಈ ದೇಶದ ಕಾನೂನು ಕಟ್ಟಳೆ ಯಾವುದರ ಅರಿವೂ ಇದ್ದಂತಿಲ್ಲ. ನಂತರ ಕ್ಷಮೆ ಕೇಳಿದರೂ ಅಷ್ಟೇ. ಆತ ಆಡಿದ ಮಾತು, ವರ್ಣಭೇದ, ಮತಭೇದ, ಜನಾಂಗೀಯ ಭಾವನೆಗಳ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿ ಶಿಕ್ಷೆ ವಿಧಿಸಬೇಕು. ಹಿಂದೆ ಅವರು ಕುಳ್ಳ ಎಂದರೆಂದು ಈಗ ಕರಿಯ ಎನ್ನಬೇಕಿಲ್ಲವಲ್ಲ!?
ಜಮೀರ್‌ಗೆ ಗೊತ್ತಿಲ್ಲವೇ? ತಮ್ಮ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮುನಿಯಪ್ಪ ಅವರಾದಿಯಾಗಿ ಎಲ್ಲರ ಬಣ್ಣವೂ ಕಪ್ಪು, ದ್ರಾವಿಡರೆಲ್ಲ ಮುಖಚರ್ಯೆ ಕಪ್ಪು ಎಂದು? ಯಾರೂ ಹುಟ್ಟುವಾಗ ಬಿಳಿ ಬಣ್ಣದಲ್ಲೇ ಹುಟ್ಟಿಸು, ಕಪ್ಪು ಬಣ್ಣದಲ್ಲಿ ಹುಟ್ಟಿಸಬೇಡ ಎಂದು ದೇವರಲ್ಲಿ ಕೇಳಿರುವುದಿಲ್ಲ ಎಂಬುದು ತಿಳಿಯದೇ? ಇಂತಹುದೇ ಜಾತಿ ಅಥವಾ ಬಣ್ಣದಲ್ಲಿ ಹುಟ್ಟಿಸುವಂತೆ ಕೇಳಲಾದೀತೇ?
`ಅವರಿಬ್ಬರೂ ಬಹಳ ಸ್ನೇಹಿತರು, ಏನಾದರೂ ಕರೆದುಕೊಳ್ಳಲಿ ಬಿಡಿ' ಎಂದು ಗೃಹ ಮಂತ್ರಿಯಾದಿಯಾಗಿ ಜಮೀರ್ ಸ್ನೇಹಿತರು ಹೇಳುವುದು ಈಗ ಇನ್ನಷ್ಟು ಮಂದಿಗೆ ಬಣ್ಣ, ಜಾತಿ, ಅಸ್ಪೃಶ್ಯತೆ, ಜನಾಂಗೀಯ ದ್ವೇಷಕ್ಕೆ ಪ್ರಚೋದನೆ-ಪ್ರೋತ್ಸಾಹ ನೀಡಿದಂತಾಗುವುದಿಲ್ಲವೇ?
ದಲಿತ ನಾಯಕ ಅಂಬೇಡ್ಕರ್ ಮುಸ್ಲಿಂರಾಗಲು ಹೊರಟಿದ್ದರು. ಹಿಂದೂ ಧರ್ಮದ ದಲಿತರಿಗೆ ಅಸ್ಪೃಶ್ಯತೆ ಮತ್ತು ಕೀಳು ಮನೋಭಾವದಿಂದ ಕಂಗೆಟ್ಟಿದ್ದ ಅಂಬೇಡ್ಕರ್ ಮುಸ್ಲಿಮರಾಗಿದ್ದರೆ ಯಾವೆಲ್ಲ ನಾಯಕರು ಯಾವರೀತಿ ನಾಮಾಂಕಿತರಾಗಿರುತ್ತಿದ್ದರೆಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಚುನಾವಣಾ ಭಾಷಣದಲ್ಲಿ ಹೇಳಿದ್ದು ಬೆಂಕಿ ಮತ್ತಷ್ಟು ಉರಿಯುವಂತೆ ಮಾಡಿದ್ದು ವಾರದ ಇನ್ನೊಂದು ನಕಾರಾತ್ಮಕ ವಿದ್ಯಮಾನ.
ಒಂದು ಉಪ ಚುನಾವಣೆ ಕಳೆದ ಇಪ್ಪತ್ತೈದು ದಿನಗಳಿಂದ ಇಡೀ ರಾಜ್ಯವನ್ನು ಅಸಂಸ್ಕೃತಿ, ದ್ವೇಷಾಸೂಯೆ, ಜಾತಿ ಜನಾಂಗಗಳ ಘರ್ಷಣೆ ಎಲ್ಲವನ್ನೂ ಹುಟ್ಟು ಹಾಕಿದೆ. ಇದು ಚುನಾವಣೆ ನಂತರವೂ ಬೆಳೆದರೆ ಅಪಾಯ ಭೀಕರ.
ಬೇಕಿತ್ತಾ ಇದೆಲ್ಲ…? ಸಮಾಜವನ್ನು ಒಡೆಯುವ, ಕಂದಕ ಸೃಷ್ಟಿಸುವ, ಈ ಕಾಲಾ-ಕರಿಯ, ಅಂತೆಯೇ ಜಾತಿ ಧರ್ಮದ ಮಾತು? ಇಂತಹ ಮಾತುಗಳ ಮೇಲೆ ಸ್ವಯಂ ನಿಯಂತ್ರಣವಿಲ್ಲದವರು, ಸಮೂಹ ಪ್ರಜ್ಞೆ, ಸಾಮಾಜಿಕ ಸ್ಥಿತಿಗತಿಯ ಅರಿವು ಇಲ್ಲದೇ, ಜನರ ಬಗ್ಗೆ ಕಳಕಳಿ ಹೊಂದದವರು ಪುಢಾರಿಗಳಾಗಿ ಆಡಳಿತ ಚುಕ್ಕಾಣಿ ಹಿಡಿದರೆ ಆಗುವುದು ಇಂತಹುದ್ದೇ!!

Next Article