For the best experience, open
https://m.samyuktakarnataka.in
on your mobile browser.

ಅಭಿವೃದ್ಧಿ ಶೂನ್ಯ ಬಜೆಟ್‌ನಿಂದ ರಾಜ್ಯಕ್ಕೆ ದುರ್ಗತಿ

10:39 PM Feb 21, 2024 IST | Samyukta Karnataka
ಅಭಿವೃದ್ಧಿ ಶೂನ್ಯ ಬಜೆಟ್‌ನಿಂದ ರಾಜ್ಯಕ್ಕೆ ದುರ್ಗತಿ

ವಿಧಾನಸಭೆ: ರಾಜ್ಯದ ಹಣಕಾಸು ಶಿಸ್ತು ಸಂಪೂರ್ಣ ಹಳಿ ತಪ್ಪಿದ್ದು, ಇದೇ ಮೊದಲ ಬಾರಿಗೆ ಸಾಲದ ಪ್ರಮಾಣ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದೇ ರೀತಿ ಅಸಮರ್ಪಕ ನಿರ್ವಹಣೆ ಮುಂದುವರಿದರೆ ಸಂಬಳ ಕೊಡುವುದಕ್ಕೂ ಹಣ ಇರುವುದಿಲ್ಲ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಎಚ್ಚರಿಸಿದರು.
ವಿಪಕ್ಷದ ಪರವಾಗಿ ಬಜೆಟ್ ಮೇಲಿನ ಚರ್ಚೆಯನ್ನು ಆರಂಭಿಸಿದ ಅವರು ಸಿದ್ದರಾಮಯ್ಯನವರದ್ದು ಅಭಿವೃದ್ಧಿ ಶೂನ್ಯ ಬಜೆಟ್ ಎಂದರು.
ರಾಜಸ್ವ ಕೊರತೆಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು, ಜನಕಲ್ಯಾಣದ ವಿಷಯವನ್ನು ಮುಂದೊಡ್ಡಿ ಇದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಆದಾಯ ಕ್ರೋಢೀಕರಣ ಮಾಡಿ, ಪುನಃ ಸರ್‌ಪ್ಲಸ್ (ಮಿಗತೆ ಅಥವಾ ಹೆಚ್ಚುವರಿ) ಬಜೆಟ್ ಮಂಡನೆಯ ಬಗ್ಗೆ ಆಲೋಚನೆ ಕಾಣುತ್ತಿಲ್ಲ. ದೂರದೃಷ್ಟಿಯ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದರು.
ತೆರಿಗೆ ಸಂಗ್ರಹದಲ್ಲಿ ೧೨ ಸಾವಿರ ಕೋಟಿ ಸಂಗ್ರಹ ಕಡಿಮೆ ಆಗುವ ಅಂದಾಜಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಸಾಮಾಜಿಕ ವಲಯಗಳ ಕಲ್ಯಾಣ ವೆಚ್ಚ ಕಡಿಮೆಯಾಗಿದೆ. ಆರ್ಥಿಕ ವಲಯದ ಖರ್ಚು ೪ ಸಾವಿರ ಕೋಟಿಯಷ್ಟು ಕಡಿಮೆಯಾಗಿದೆ ಎಂದು ಎತ್ತಿ ತೋರಿಸಿದರು.
ರಾಜ್ಯಕ್ಕೆ ಬರಬೇಕಾಗಿದ್ದ ವಿದೇಶಿ ನೇರ ಹೂಡಿಕೆಯಲ್ಲಿ (ಎಫ್‌ಡಿಐ) ಶೇಕಡಾ ೪೦ರಷ್ಟು ಕಡಿಮೆಯಾಗಿದೆ. ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ನೋಂದಣಿಯಾಗಿ ಕೇಂದ್ರ ಕಚೇರಿ ಹೊಂದಿದ್ದ ೩೦ಕ್ಕೂ ಹೆಚ್ಚು ಕಂಪನಿಗಳು ಸಿಂಗಪೂರ ಸೇರಿದಂತೆ ಬೇರೆ ಕಡೆಗೆ ವಲಸೆ ಹೋಗಿವೆ. ಇದರಲ್ಲಿ ಐಟಿ-ಬಿಟಿ ಕಂಪನಿಗಳೂ ಸೇರಿವೆ. ನಷ್ಟವನ್ನು ಕರ್ನಾಟಕ ಅನುಭವಿಸುತ್ತಿದೆ.
ಸೆಸ್ ಮತ್ತು ಸರ್‌ಚಾರ್ಜ್ನಲ್ಲಿ ರಾಜ್ಯದ ಪಾಲು ಬರುತ್ತಿಲ್ಲ ಎಂದಿರುವ ಸಿಎಂ ನಡೆಯನ್ನು ಖಂಡಿಸಿದರು. ಕೇಂದ್ರ ವಿವಿಧ ವಲಯಗಳ ಮೇಲೆ ವಿಧಿಸುವ ಸೆಸ್‌ಗಳ ಪಾಲು ಕೇಳುವುದು ತಪ್ಪು ಎಂದರು.
ಕಾಯಕ ಮುಖ್ಯ: ಗ್ಯಾರಂಟಿಗಳಿಗೆ ಮೀಸಲಿಟ್ಟಿರುವ ೫೨ ಸಾವಿರ ಕೋಟಿ ರೂಪಾಯಿಗಳನ್ನು ಆದಾಯ ಕ್ರೋಢೀಕರಣದ ಮೂಲಕ ಸರಿ ಹೊಂದಿಸುವುದಕ್ಕೆ ಯೋಜನೆ ರೂಪಿಸಿ. ಇಲ್ಲವಾದರೆ ಕರ್ನಾಟಕವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದ ಅಪಖ್ಯಾತಿಗೆ ಪಾತ್ರರಾಗುತ್ತೀರಿ ಎಂದು ಬೊಮ್ಮಾಯಿ ಸಿಎಂ ಉದ್ದೇಶಿಸಿ ಕಿವಿಮಾತು ಹೇಳಿದರು. ಕಾಯಕ ಇಲ್ಲದ ದಾಸೋಹಕ್ಕೆ ಅರ್ಥವಿಲ್ಲ ಎಂದೂ ನುಡಿದರು.