For the best experience, open
https://m.samyuktakarnataka.in
on your mobile browser.

ಅಮಲುಗಾರರ ಬ್ಯಾಂಕಾಕ್ ಕಥನ

09:42 PM Jan 26, 2024 IST | Samyukta Karnataka
ಅಮಲುಗಾರರ ಬ್ಯಾಂಕಾಕ್ ಕಥನ

ಸಿನಿಮಾ: ಬ್ಯಾಚುಲರ್ ಪಾರ್ಟಿ
ನಿರ್ದೇಶನ: ಅಭಿಜಿತ್ ಮಹೇಶ್
ತಾರಾಗಣ: ಯೋಗಿ, ದಿಗಂತ್, ಅಚ್ಯುತ್ ಕುಮಾರ್, ಸಿರಿ ರವಿಕುಮಾರ್, ಶೋಭರಾಜ್, ಬಾಲಾಜಿ ಮನೋಹರ್, ಪ್ರಕಾಶ್ ತುಮ್ಮಿನಾಡು ಮೊದಲಾದವರು.
ರೇಟಿಂಗ್ಸ್: 3.5

-ಜಿ.ಆರ್.ಬಿ

ಕೌಟುಂಬಿಕ ಜೀವನದಲ್ಲಿ ‘ಖುಷಿ’ಯನ್ನೇ ಮರೆತಿರುವ ಸಂತೋಷ್. ಚಿಕ್ಕಂದಿನಿಂದಲೂ ಕಿತಾಪತಿ ಮಾಡುತ್ತಲೇ ಖ್ಯಾತಿಯಾಗಿರುವ ಮ್ಯಾಡಿ. ಮಗ ಇದ್ದರೂ ಏಕಾಂಗಿ ಜೀವನ ನಡೆಸುತ್ತಿರುವ ನಿವೃತ್ತ ದೈಹಿಕ ಶಿಕ್ಷಕ. ಈ ಮೂವರೂ ‘ಬ್ಯಾಚುಲರ್ ಪಾರ್ಟಿ’ಯ ಕೇಂದ್ರ ಬಿಂದುಗಳು. ಈಗಷ್ಟೇ ದಾಂಪತ್ಯಕ್ಕೆ ಕಾಲಿಡಲು ಮುಂದಾಗುತ್ತಿರುವ ‘ಅಶೋಕ’ನಿಂದ ಅಸಲಿ ‘ಪಾರ್ಟಿ’ ಶುರುವಾಗುತ್ತದೆ.

ಸದಾ ಕುಡಿದ ಮತ್ತಿನಲ್ಲೇ ತೇಲಾಡುವ ಮೂವರ ಕಥೆ-ವ್ಯಥೆಯೇ ‘ಬ್ಯಾಚುಲರ್ ಪಾರ್ಟಿ’ಯ ಪ್ರಮುಖ ಕಥಾಹಂದರ. ಅಮಲಿನಲ್ಲೇ ತೇಲುವ ತ್ರಿವಳಿಗಳು ಮಾಡುವ ಅವಾಂತರ, ನಂತರದ ರೂಪಾಂತರಗಳೇ ಅವರನ್ನು ಪೇಚಿಗೆ ಸಿಲುಕುವಂತೆ ಮಾಡುತ್ತದೆ. ಮದ್ಯಪಾನ ಮಾಡುವ ದೃಶ್ಯಗಳನ್ನು ಯಥೇಚ್ಛವಾಗಿ ಬಳಸದೇ ಕಥೆಯ ಹಿನ್ನೆಲೆಯಲ್ಲಿ ಬಳಸಿಕೊಂಡಿರುವುದು ನಿರ್ದೇಶಕರ ಜಾಣ್ಮೆಯನ್ನು ಎತ್ತಿ ಹಿಡಿದಿದೆ.

ಬೆಂಗಳೂರಿನಲ್ಲಿ ಟೇಕಾಫ್ ಆಗುವ ಕಥೆ ಬ್ಯಾಂಕಾಂಕ್‌ನಲ್ಲಿ ಲ್ಯಾಂಡ್ ಆಗುತ್ತದೆ. ‘ಸುಖಕರ ಪಯಣ’ ಎನಿಸುವಷ್ಟು ಆಹ್ಲಾದಕರ ಜರ್ನಿ ‘ಬ್ಯಾಚುಲರ್ ಪಾರ್ಟಿ’. ಕಾಮಿಡಿ ಎಂದಾಕ್ಷಣ ಡಬಲ್ ಮೀನಿಂಗ್ ತೂರಿಕೊಳ್ಳುತ್ತದೆ. ಅದಕ್ಕೆ ಅವಕಾಶ ಮಾಡಿಕೊಡದೇ ಸ್ವಾಭಾವಿಕವಾಗಿಯೇ ಸರಳ ಸಂಭಾಷಣೆಯ ಮೂಲಕವೂ ಕಚಗುಳಿ ಇಡಬಹುದು ಎಂಬುದನ್ನು ನಿರ್ದೇಶಕ ಅಭಿಜಿತ್ ಮಹೇಶ್ ನಿರೂಪಿಸಿದ್ದಾರೆ.

ಯುವಸಮೂಹ ಅಥವಾ ಗೃಹಸ್ಥರ ಬಾಳಿನಲ್ಲೇ ಏನೆಲ್ಲ ಸಂಭವಿಸಬಹುದೋ ಅದನ್ನು ಮನರಂಜನೆಯ ಫ್ರೇಮ್‌ನಲ್ಲಿ ಕಟ್ಟಿಕೊಡಲಾಗಿದೆ. ಆಗಾಗ ಹಾಡಿನ ಒಗ್ಗರಣೆ, ‘ಸಂಸಾರವೆಂದರೆ ಹೀಗಿಗೆ…’ ಎಂಬ ವಿವರಣೆ ಚಿತ್ರದಲ್ಲಿ ಅಲ್ಲಲ್ಲಿ ಕೇಳಿಸಿಕೊಳ್ಳಬೇಕಾಗುತ್ತದೆ. ಅದನ್ನು ಹೊರತುಪಡಿಸಿದರೆ, ತೇಲಿಸಿಕೊಂಡು ಹೋಗುವ ತಾಕತ್ತು, ಶಕ್ತಿ ಕಥೆಯಲ್ಲಿ ಅಡಕವಾಗಿಸಿ ನಿರೂಪಿಸಿದ್ದಾರೆ ಅಭಿ.

ಇನ್ನು ನಟನೆಯ ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದಂತಿದೆ. ಯೋಗಿ, ದಿಗಂತ್ ಹಾಗೂ ಅಚ್ಯುತ್ ಪಾತ್ರವೂ ಸರಿಸಮಾನ, ನಟನೆಯೂ… ಸಿರಿ ರವಿಕುಮಾರ್, ಶೋಭರಾಜ್, ಬಾಲಾಜಿ ಮನೋಹರ್, ಪ್ರಕಾಶ್ ತುಮ್ಮಿನಾಡು ಮೊದಲಾದವರ ನಟನೆ ಗಮನ ಸೆಳೆಯುತ್ತದೆ. ‘ಮಠ’ ಗುರುಪ್ರಸಾದ್, ಲುಸಿಯಾ ಪವನ್, ವಿಕ್ಕಿಪೀಡಿಯಾ ಮೊದಲಾದವರು ವಿಶೇಷ ಪಾತ್ರಗಳ ಮೂಲಕ ಬಂದು ಹೋಗುತ್ತಾರೆ. ಅರವಿಂದ್ ಕ್ಯಾಮೆರಾ ಕೆಲಸ, ಅರ್ಜುನ್ ರಾಮು ಹಾಡುಗಳು ‘ಪಾರ್ಟಿ’ ರಂಗು ಹೆಚ್ಚಿಸಿವೆ.