ಅಮ್ಮ ನೊಂದ್ಕೊಳ್ತಾಳೆ ಎನ್ನುವ ತರ್ಕ
ಕೆಲವು ವಿದ್ಯಾರ್ಥಿಗಳ ಆಪ್ತ-ಸಮಾಲೋಚನೆ ಮಾಡುವಾಗ ಅವರ ಪೋಷಕರಿಗೆ ಹೇಳಿ ಮಾಡುವುದು ವಾಡಿಕೆ. ಸಾಮಾನ್ಯವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹದಿನೆಂಟರ ಮೇಲಿನ ವಯಸ್ಸಿನವರಾಗಿದ್ದರೂ ಅಲ್ಲೊಮ್ಮೆ ಇಲ್ಲೊಮ್ಮೆ ಕಡಿಮೆ ವಯಸ್ಸಿನವರೂ ಇರುತ್ತಾರೆ. ಇನ್ನು ಕೆಲವರು ಅವರಾಗೇ ಬರುವುದರಿಂದ ನಮಗೆ ಪೋಷಕರೊಂದಿಗೆ ಮಾತನಾಡುವ ಅವಶ್ಯಕತೆ ಇರುವುದಿಲ್ಲ. ಆದರೆ ಹಾಗೆ ಬರುವವರಲ್ಲಿ ಅಳುಕು ಮನಸ್ಸಿನವರಿದ್ದರೆ, ನಿರ್ಧಾರಗಳಲ್ಲಿ ಅಸ್ಪಷ್ಟತೆಯಿದ್ದರೆ, ಅಂಥವರ ಪೋಷಕರೊಂದಿಗೆ ಚರ್ಚಿಸಿ ಮುಂದುವರಿಯಬೇಕಾಗುತ್ತದೆ.
ಕಳೆದ ತಿಂಗಳು ಆಪ್ತ-ಸಮಾಲೋಚನೆಗೆ ಬಂದ ಹುಡುಗಿಯೊಬ್ಬಳು ಉತ್ತರ ಕರ್ನಾಟಕದವಳು. ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿದ್ದರಿಂದ ಅವಳ ತರಗತಿಯ ಶಿಕ್ಷಕರು ಅವಳನ್ನು ನನ್ನ ಬಳಿ ಕಳುಹಿಸಿದ್ದರು. ಬಂದು ಕುಳಿತುಕೊಂಡವಳೇ ಕಣ್ಣಲ್ಲಿ ನೀರು ತುಂಬಿಕೊಂಡು, ಸರ್, ದಯವಿಟ್ಟು ನನ್ನ ತಾಯಿಯವರಿಗೆ ಹೇಳಬೇಡಿ, ಈ ಸಲ ಯಾಕೋ ಚೆನ್ನಾಗಿ ಆಗಲಿಲ್ಲ, ಮುಂದಿನ ಟೆಸ್ಟ್‌ನಲ್ಲಿ ಚೆನ್ನಾಗಿ ಮಾಡುತ್ತೇನೆ'' ಎಂದಳು. ಅಲ್ಲಮ್ಮ, ಕಡಿಮೆ ಅಂಕ ಬಂದಿರುವುದು ನಿಮ್ಮ ತಾಯಿಗೆ ಗೊತ್ತಾದರೆ ಏನಾಗುತ್ತೆ, ಇದು ಕಿರು ಪರೀಕ್ಷೆ ಅಷ್ಟೆ. ಅದನ್ನು ಹೇಳಿಕೊಳ್ಳಲು ಹಿಂಜರಿಕೆಯಾ, ಅದೂ ನಿಮ್ಮ ತಾಯಿಯ ಬಳಿಯಲ್ಲಿ, ಯಾಕೋ ನನಗೆ ಅರ್ಥವಾಗುತ್ತಿಲ್ಲ,
ಸರ್, ನನ್ನ ಅಮ್ಮ ತುಂಬಾ ಕಟ್ಟು ನಿಟ್ಟು. ಅವರಿಗೆ ಸಾಧಾರಣವಾಗಿ ಇರುವುದು ಇಷ್ಟ ಆಗೋಲ್ಲ, ತುಂಬಾ ಕೋಪಿಸಿಕೊಂಡು ಬಯ್ಯುತ್ತಾರೆ''.
ನನಗೆ ಅರ್ಥವಾಗುತ್ತೆ, ಆದರೆ ನಿಮ್ಮ ಫಲಿತಾಂಶವನ್ನು ಅವರ ಬಳಿ ಮುಚ್ಚಿಟ್ಟು ಪ್ರಯೋಜನವಿಲ್ಲ. ನೀನು ಹೆದರಿಕೊಳ್ಳುವ ಅಗತ್ಯವಿಲ್ಲ, ನಾನು ಅವರ ಬಳಿ ಮಾತನಾಡುತ್ತೇನೆ. ನಾಳೆ ಅವರಿಗೆ ಬಂದು ನನ್ನ ನೋಡಲಿಕ್ಕೆ ಹೇಳು, ನಿನ್ನ ಫಲಿತಾಂಶದ ಬಗ್ಗೆ ಏನೂ ಹೇಳಬೇಡ ಅಂತ ಹೇಳಿ ಕಳುಹಿಸಿದೆ.
ಆಕೆಯ ತಾಯಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಸರ್ಕಾರದ ಅಡಿಯಲ್ಲಿ ಬರುವ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು. ಅವರಿಗೆ ಅವರದೇ ಆದ ಜವಾಬ್ದಾರಿಗಳಿದ್ದರೂ ಬಂದು ನನ್ನ ಭೇಟಿ ಮಾಡಿದರು. ತುಂಬಾ ತಾಳ್ಮೆಯಿಂದಲೇ ಮಾತನಾಡಿದರು. ತುಂಬಾ ಶಿಸ್ತಿನ ವ್ಯಕ್ತಿಯಾಗಿದ್ದರೂ ಅವರಿಗೆ ಮಗಳ ಬಗೆಗಿನ ವಾತ್ಸಲ್ಯದಲ್ಲಿ ವ್ಯತ್ಯಾಸವಿರಲಿಲ್ಲ. ಗಂಡನಿಂದ ದೂರವಾಗಿರುವ ಅವರೇ ಮಗಳನ್ನು, ಮಗನನ್ನು ಏಕಾಂಗಿಯಾಗಿಯೇ ಬೆಳೆಸುತ್ತಿದ್ದರು. ಅವರೇ ಹೇಳಿಕೊಂಡ ಹಾಗೆ ಅವರಿಗಿದ್ದ ಭಯ, ಆತಂಕ ಮತ್ತು ಕಾಳಜಿಯನ್ನು ತನ್ನ ಮಕ್ಕಳ ಬಳಿ ಹೇಳಿಕೊಳ್ಳಲಾಗದೇ, ಒತ್ತಡದಲ್ಲಿ, ಕೋಪವನ್ನು ಮಾತ್ರ ವ್ಯಕ್ತಪಡಿಸುತ್ತಿದ್ದರು. ಇಂದಿನಿಂದ ಮಗಳನ್ನು ಗೆಳತಿಯಾಗಿ ನೋಡಲು ಹೇಳಿ, ಅವರ ಎಲ್ಲ ಭಯ-ದುಃಖಗಳನ್ನು ಮಗಳೊಂದಿಗೆ ಹಂಚಿಕೊಳ್ಳಲು ಹೇಳಿ, ನಂತರ ಮಗಳ ಫಲಿತಾಂಶವನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ವಿಧಾನಗಳನ್ನು, ಆಕೆಯ ಅಧ್ಯಯನದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳನ್ನು ತಿಳಿಸಿಕೊಟ್ಟೆ. ಹೊರಡುವಾಗ ಇಬ್ಬರೂ ನಗುಮುಖದಿಂದಲೇ ಹೋಗಿರುವುದು ಬಹುಶಃ ಅವರ ಇಬ್ಬರ ಮಾತುಕತೆಗಳಲ್ಲಿ ಮೊದಲಿರಬೇಕು.
ಇನ್ನೊಂದು ಘಟನೆ. ಕೆಲವು ವರ್ಷಗಳ ಮುಂಚೆ ಒಬ್ಬ ಹುಡುಗ ಬಂದಿದ್ದ. ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿದ್ದ. ಕಲಬುರ್ಗಿ ಕಡೆಯ ಹಳ್ಳಿಯವನು. ಕನ್ನಡ ಮಾಧ್ಯಮದಿಂದ ಬಂದವನಾಗಿದ್ದರಿಂದ ಇಂಜಿನಿಯರಿಂಗ್ ಕಷ್ಟವಾಗುತ್ತಿತ್ತು. ಆದರೂ ಸುಮಾರು ೯ಕ್ಕಿಂತಲೂ ಹೆಚ್ಚು ಜಿಪಿಎ ಗಳಿಸಿದ್ದ ಅವನು ಒಂದು ಕಿರು ಪರೀಕ್ಷೆಯ ದಿನ ಜ್ವರದಿಂದ ಬಳಲುತ್ತಿದ್ದ. ಆದರೂ ಪರೀಕ್ಷೆ ಬರೆಯಬೇಕೆಂಬ ಹಠದಿಂದ ಹೋಗಿ ಸ್ವಲ್ಪ ಹೊತ್ತಾದ ನಂತರ ಸುಸ್ತಾಗಿ ಬಿದ್ದು ಬಿಟ್ಟಿದ್ದ. ನಂತರ ಆಪ್ತ-ಸಮಾಲೋಚನೆಯಲ್ಲಿ ನನಗೆ ತಿಳಿದದ್ದು, ಅವನ ತಾಯಿ ನೊಂದು ಕೊಳ್ತಾರಂತೆ. ಅದಕ್ಕಾಗಿಯೇ ಕಷ್ಟವಾದರೂ ಪರೀಕ್ಷೆ ಬರೆಯಲು ಬಂದಿದ್ದ. ಕೊನೆಗೆ ನಾನೇ ಆ ಹುಡುಗನ ತಾಯಿಯ ಬಳಿ ಮಾತನಾಡಿ ಅವನ ಆತಂಕವನ್ನು ದೂರ ಮಾಡಿದ್ದಾಯಿತು.
ಪ್ರತಿ ಪರೀಕ್ಷೆಯಲ್ಲೂ ವಿಶಿಷ್ಟ ಶ್ರೇಣಿಯಲ್ಲೇ ಉತ್ತೀರ್ಣನಾಗಬೇಕು, ಅದರಲ್ಲಿ ಯಾವುದೇ ಸಡಿಲಿಕೆಯಿರದು ಎನ್ನುವುದು ಆ ಮಹಾ ತಾಯಿಯ ಕಟ್ಟಾಜ್ಞೆ, ಆದರೆ, ನಮ್ಮ ಕೈಯಲ್ಲಿ ಇಲ್ಲದ, ಜ್ವರ, ಖಾಯಿಲೆಗಳು ಬಂದಾಗಲೂ ಅದೇ ಫಲಿತಾಂಶವಿರಬೇಕು ಎನ್ನುವುದು ಅತಾರ್ಕಿಕ-ಅವಾಸ್ತವಿಕ ನಿರ್ಧಾರ ಎನ್ನುವುದು ನನ್ನ ಮನೋವಿಜ್ಞಾನದ ಸಾಮಾನ್ಯ ಜ್ಞಾನ.
ಈ ರೀತಿಯ ವಿಪರೀತ ತರ್ಕಗಳು ಯಾವ ಮಟ್ಟದಲ್ಲಿ ಇರುತ್ತವೆಯೆಂದರೆ ನನಗೆ ಪರಿಚಯವಿರುವ ಚಿಕಿತ್ಸಾ ಮನೋವಿಜ್ಞಾನಿಯೊಬ್ಬರು ಹೇಳುವುದು: ನಾವು ಮಾಡುವ ಯಾವುದೇ ಕೆಲಸವು ಕೈಗೂಡದಿದ್ದರೆ ಅಥವಾ ಅದಕ್ಕೆ ವಿಘ್ನಗಳು ಬಂದರೆ, ಅದನ್ನು ಮಾಡಲು ನಮ್ಮ ಸುಪ್ತ ಮನಸ್ಸಿಗೆ ಇಷ್ಟವಿಲ್ಲ ಎನ್ನುವ ಕಲ್ಪನೆ! ಅದಕ್ಕೆ ಅವರು ಯಾವುದೋ ಮನೋವೈಜ್ಞಾನಿಕ ಸಿದ್ಧಾಂತದ ಕಲ್ಪನೆಯನ್ನು ಹೇಳುತ್ತಾರೆ!
ನಾನು ದಾರಿಯಲ್ಲಿ ಬರುವಾಗ ನನ್ನ ಬೈಕ್ ಕೆಟ್ಟು ಹೋಗಿದ್ದರೆ ಅದಕ್ಕೆ ಕಾರಣ ನನ್ನ ಸುಪ್ತ ಮನಸ್ಸಿನಲ್ಲಿ ನನಗೆ ಇವತ್ತು ಕೆಲ್ಸಕ್ಕೆ ಬರಲು ಇಷ್ಟವಿರದೇ ಇರುವುದು ಎನ್ನುವುದು ಅವರ ತರ್ಕ! ಇವರ ವಿಪರೀತ ತರ್ಕಗಳು ಇಷ್ಟಕ್ಕೇ ನಿಲ್ಲುವುದಿಲ್ಲ. ಅದನ್ನವರು ಮಾನವರಿಗೆ ಅನುಭವವಾಗದ ಅತೀಂದ್ರಿಯ ಆಯಾಮಗಳಲ್ಲಿ ನಡೆಯುವ ಪ್ರಕ್ರಿಯೆ ಅಂತಲೂ ಹೇಳುತ್ತಾರೆ.
ಮೊದಲ ಘಟನೆಯಲ್ಲಿ ಹುಡುಗಿಯ ಅಮ್ಮ ಹೇಳಿರುವುದು ಉತ್ತಮ ಅಂಕಗಳನ್ನು ಗಳಿಸುವುದು ಗುರಿಯಾಗಿರಬೇಕು, ಆದರೆ ಕೆಲವೊಮ್ಮೆ ಅದು ಆಗದಿದ್ದರೆ ಅಮ್ಮ ಪ್ರೀತಿಸುವುದಿಲ್ಲ, ಅಮ್ಮನ ಪ್ರೀತಿ ಸಿಗುವುದಿಲ್ಲ ಎನ್ನುವುದು ಅತಾರ್ಕಿಕ ಯೋಚನೆ. ಹಾಗೆ ಕೋಪದಲ್ಲಿ ಹೇಳಿದ್ದರೂ ಅವರ ಉದ್ದೇಶ ಮಗಳು/ಮಗ ಉತ್ತಮವಾಗಿ ಓದಬೇಕೆನ್ನುವುದೇ ಹೊರತು ಬೇರೆ ಉದ್ದೇಶ, ಅರ್ಥದಿಂದಲ್ಲ, ಅಮ್ಮನ ಪ್ರೀತಿ ಒಂದು ಘಟನೆಯ ಮೇಲೆ ನಿಂತಿರಲಾರದು, ಅದು ಯಾವ ಷರತ್ತುಗಳಿಗೆ ಒಳ ಪಟ್ಟಿರದ ಸಹಾನುಭೂತಿಯ ಸ್ಥಿತಿ. ಹಾಗೆಯೇ, ಒಂದು ಕೆಲಸವು ಸಂಪನ್ನವಾಗುವುದು ನಮ್ಮ ಒಬ್ಬರ ಸುಪ್ತ ಮನಸ್ಸಿನ ಪ್ರಭಾವದಿಂದಲ್ಲ, ಅದು ಅನೇಕ ಅಂಶಗಳಿಗೆ ಒಳಪಟ್ಟಿರುತ್ತದೆ. ಕೆಲಸವು ಸಂಪನ್ನವಾಗಿ ಆಗಲಿ ಅಂತ ಅಂದುಕೊಳ್ಳುವುದು ಸಕಾರಾತ್ಮಕ ಮನಃಸ್ಥಿತಿ. ಆದರೆ ಆಗಿಯೇ ತಿರಬೇಕು ಎನ್ನುವುದು ಅತಾರ್ಕಿಕ ಕಲ್ಪನೆ, ಅದು ಮಾನವರಿಗೆ ಅಸಂಭವ, ಬಹುಶಃ ಸರ್ವಶಕ್ತ ಅಂತ ಒಂದು ಕಲ್ಪನೆಯಿದ್ದರೆ ಅದಕ್ಕೆ ಸಂಭವವಾಗುವ ಪ್ರಕ್ರಿಯೆ. ಆದರೆ ಆ ರೀತಿಯ ಸರ್ವಶಕ್ತ ಅಂಶ ಇದೆ ಎನ್ನುವುದು ನಮ್ಮ ಊಹೆಯೇ ಹೊರತು ನಮ್ಮ ಅನುಭವದ ಆಧಾರವಿಲ್ಲ, ಆದರೆ ಎಲ್ಲವೂ ನಮ್ಮ ಅನುಭವಕ್ಕೇ ಬರಬೇಕು, ನಿಲುಕಬೇಕು ಎನ್ನುವ ಕಲ್ಪನೆಯೂ ಅತಾರ್ಕಿಕ ಕಲ್ಪನೆ ಎನ್ನುವುದು ಭಾರತೀಯ ಋಷಿಗಳ, ಉಪನಿಷತ್ಕಾರರ ನಿಲುವು! ಹಾಗಂತ ಎಲ್ಲವನ್ನೂ ಎಲ್ಲದಕ್ಕೂ ತಳುಕು ಹಾಕುವುದು ಅತಾರ್ಕಿಕ ಎನ್ನುವುದು ನನ್ನ ನಂಬಿಕೆ.