For the best experience, open
https://m.samyuktakarnataka.in
on your mobile browser.

ಅಯೋಧ್ಯ ಶ್ರೀರಾಮನ ನಿಂದಿಸಿದ ಶಿಕ್ಷಕಿ ವಜಾ

07:51 PM Feb 12, 2024 IST | Samyukta Karnataka
ಅಯೋಧ್ಯ ಶ್ರೀರಾಮನ ನಿಂದಿಸಿದ ಶಿಕ್ಷಕಿ ವಜಾ

ಮಂಗಳೂರು: ಅಯೋಧ್ಯೆ ಶ್ರೀರಾಮನ ನಿಂದನೆ, ಮೋದಿ ಅವಹೇಳನ ಮಾಡಿದ ಜೆಪ್ಪುವಿನಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿ. ಪ್ರಭಾ ಅವರನ್ನು ಆಡಳಿತ ಮಂಡಳಿ ವಜಾಗೊಳಿಸಿದೆ.
ಜೆರೋಸಾ ಶಾಲೆಯ ಏಳನೇ ತರಗತಿ ಶಿಕ್ಷಕಿ ಸಿ. ಪ್ರಭಾ ವಿದ್ಯಾರ್ಥಿಗಳಿಗೆ ‘ವರ್ಕ ಈಸ್ ವರ್ಸಿಫ್’ ಪಠ್ಯ ಬೋಧಿಸುವಾಗ ಅಯೋಧ್ಯೆ ಶ್ರೀರಾಮ ಹಾಗೂ ಪ್ರಧಾನಿ ಮೋದಿಯವರನ್ನು ನಿಂದಿಸಿದ ವಿಚಾರ ಬಹಿರಂಗೊಂಡು ವಿದ್ಯಾರ್ಥಿಗಳ ಪೋಷಕರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಫೆ.೧೦ರಂದು ಶಾಲೆಗೆ ಮುತ್ತಿಗೆ ಹಾಕಿ ಶಿಕ್ಷಕಿ ಅಮಾನತಿಗೆ ಆಗ್ರಹಿಸಿದ್ದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸಹಿತಿ ಇಂದು ಶಾಲೆಯ ಮುಂಭಾಗ ನೂರಾರು ಸಂಖ್ಯೆಯಲ್ಲಿ ಪೋಷಕರು ಮತ್ತು ಹಿಂದೂ ಸಂಘಟನೆಗಳು ಕಾರ್ಯಕರ್ತರು ಜಮಾಯಿಸಿ ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಶಾಲೆ ಗೇಟ್ ಮುಂಭಾಗ ಶಾಸಕ ಹಾಗೂ ಪೋಷಕರನ್ನು ಪೊಲೀಸರು ತಡೆದರು.ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕಿಯನ್ನು
ವಜಾ ಮಾಡಿದ್ದಾಗಿ ತಿಳಿಸಿದೆ.
ಶಾಲೆಯ ಮುಂಭಾಗ ಜಮಾವಣೆಗೊಂಡ ಪೋಷಕರು ಶಿಕ್ಷಕಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದಾಗ ಮುಖ್ಯ ಶಿಕ್ಷಕಿಯೊಬ್ಬರು ಶಿಕ್ಷಕಿ ಸಿ. ಪ್ರಭಾರನ್ನು ಅಮಾನತುಗೊಳಿಸಿದ ಆದೇಶವನ್ನು ಓದಿ ಹೇಳಿದರು.
ಆದೇಶ ಓದುವ ವೇಳೆ ಹಿಂದೂ ಕಾರ್ಯಕರ್ತರು ಹಾಗೂ ಪೋಷಕರು ಮತ್ತೆ ರೊಚ್ಚಿಗೆದ್ದು ಶಾಲೆಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಧರ್ಮ ಸೂಕ್ಷ್ಮತೆಯನ್ನು ಮರೆತು ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಮುಗ್ಧ ವಿದ್ಯಾರ್ಥಿಗಳ ಮುಂದೆ ಅವಹೇಳನಕಾರಿಯಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿದ ಶಿಕ್ಷಕಿಯ ನಡೆ ಖಂಡನೀಯವಾಗಿದ್ದು, ಘಟನೆ ತೀವ್ರ ಸ್ವರೂಪ ಪಡೆದಿದ್ದರೂ ಸಂತ ಜೆರೋಸಾ ಶಿಕ್ಷಣ ಸಂಸ್ಥೆ ಇಂತಹ ಶಿಕ್ಷಕಿಯನ್ನು ರಕ್ಷಿಸಲು ಯತ್ನಿಸಿದ್ದಂತೂ ಅತ್ಯಂತ ಹೇಯ ಎಂದು ಆಕ್ರೋಶ ವ್ಯಕ್ತಪಡಿಸಿದರು.