ಹೆಣ್ಣುಮಕ್ಕಳ ಶೋಷಣೆ ತಡೆಯಲು ಕಮಿಟಿ ಮಾಡಿದಾಗ ಇನ್ನಷ್ಟು ತೊಂದರೆ
ಮಂಗಳೂರು: ಸಿನಿಮಾ ರಂಗದಲ್ಲಿ ಹೆಣ್ಣುಮಕ್ಕಳ ಶೋಷಣೆ ತಡೆಯಲು ಕೇರಳ ಮಾದರಿ ಕಮಿಟಿ ರಚಿಸಲು ಕೇಳಿಬಂದಿರುವ ಒತ್ತಾಯ ಕುರಿತಂತೆ ಮಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಂಗೀತ ನಿರ್ದೇಶಕ ಡಾ.ಗುರುಕಿರಣ್, ಈಗಾಗಲೇ ಚಿತ್ರರಂಗದಲ್ಲಿ ಸಾಕಷ್ಟು ನಿಯಮ ಹೇರಲಾಗಿದೆ. ಇನ್ನು ಅದಕ್ಕೊಂದು ಕಮಿಟಿ ಮಾಡಿದಾಗ ಇನ್ನಷ್ಟು ತೊಂದರೆ ಆಗಲಿದೆ ಎಂದಿದ್ದಾರೆ.
ಹುಡುಗಿಯರ ಶೋಷಣೆ ಚಿತ್ರರಂಗದಲ್ಲಿ ಮಾತ್ರ ನಡೆಯುತ್ತಿದೆಯಾ? ಕಾಲೇಜ್, ಪ್ರೆಸ್, ಫ್ಯಾಕ್ಟರಿ, ಆಫೀಸ್ ಎಲ್ಲ ಕಡೆಗಳಲ್ಲಿ ನಡೆಯುತ್ತಿದೆ. ಇದನ್ನು ಸಿನಿಮಾದಲ್ಲಿ ಮಾತ್ರ ಎಂದು ತೋರಿಸುವುದು ಕಷ್ಟ. ಬೇರೆ ಫೀಲ್ಡ್‌ಗಳಲ್ಲಿ ಟಚ್ ಮಾಡಬೇಕೆಂದು ಇಲ್ಲ. ಆದರೆ ಸಿನಿಮಾದಲ್ಲಿ ಹಾಗೆ ಆಗುವುದಿಲ್ಲ. ಸಿನಿಮಾದಲ್ಲಿ ಕಲಾವಿದರ ವಿಚಾರ ಬಂದಾಗ ಪ್ರತಿಕ್ರಿಯಿಸಬೇಕಾಗುತ್ತದೆ ಎಂದರು.
ಸಿನಿಮಾ ರಂಗ ಬಹಳ ವರ್ಷದಿಂದ ಇದೆ. ಪ್ರತ್ಯೇಕ ಕಮಿಟಿ ಮಾಡಿದಾಗ ಇದಕ್ಕೊಂದು ನೇಮಕ ಮಾಡಿದ ಮಹಿಳೆ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಬಂದು ಕೂರುತ್ತಾರೆ. ಅದಕ್ಕೆ ನಿರ್ಮಾಪಕನೇ ಹಣ ಕೊಡಬೇಕು. ಅಂಥದ್ದು ಆಗುವುದಿಲ್ಲ ಎಂಬ ಗ್ಯಾರಂಟಿ ಯಾರು ಕೊಡುತ್ತಾರೆ? ಇದರಲ್ಲಿ ಮೂರು ಬಿಟ್ಟವರು ಕೆಲವರು ಇರುತ್ತಾರೆ. ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದರೆ ಏನು ಮಾಡುವುದು? ಪ್ರತಿಯೊಂದು ಕಾನೂನಿನಲ್ಲಿ ಎಷ್ಟೊಂದು ಲೋಪದೋಷ ಇಲ್ಲ ಹೇಳಿ. ದೌರ್ಜನ್ಯ, ಅತ್ಯಾಚಾರ ಯತ್ನ, ಪೋಕ್ಸೋ ಇವುಗಳಲ್ಲಿ ಶೇ. 30ರಷ್ಟು ಸುಳ್ಳು ಪ್ರಕರಣಗಳಿರುತ್ತದೆ. ಮೊದಲೇ ಸಿನಿಮಾರಂಗದಲ್ಲಿ ಸಾಕಷ್ಟು ತೊಂದರೆಗಳಿವೆ. ಮತ್ತೆ ಇನ್ನೊಂದು ಯಾರು ಬಂದು ಕೂರುತ್ತಾರೆ ಎಂದರೆ ಅಲ್ಲೂ ಭ್ರಷ್ಟಾಚಾರ ಪ್ರಾರಂಭ ಆಗುತ್ತದೆ ಎಂದರು.
ಸಿನಿಮಾದಲ್ಲಿ ತೊಂದರೆ ಆಗುತ್ತದೆ ಎಂದರೆ, ಅದನ್ನು ನಿರೂಪಿಸಬೇಕು. ಅದಕ್ಕಾಗಿ ಕೋರ್ಟ್ ಸೇರಿದಂತೆ ನಿಯಮಿತ ವ್ಯವಸ್ಥೆ ಇದೆ. ಪ್ರತಿಯೊಂದಕ್ಕೂ ಕಮಿಟಿ ಮಾಡಿದರೆ ಕೆಲಸ ಮಾಡಲು ಆಗುವುದಿಲ್ಲ. ಅಲ್ಲಿಂದಲೇ ಸಮಸ್ಯೆಗಳು ಶುರುವಾಗುತ್ತದೆ. ಆಗ ಜನತೆ ಪೂರ್ತಿ ಸಿನಿಮಾ ರಂಗವನ್ನು ಸಂಶಯದಲ್ಲಿ ನೋಡಲು ಶುರು ಮಾಡುತ್ತಾರೆ. ಹೊರಗಡೆ ಒಂದು ಸರ್ಕಲ್ ಇದೆ. ಅವರು ಯಾರೂ ಸಿನಿಮಾ ಮಾಡುವುದಿಲ್ಲ. ಅವರು ಈ ರೀತಿ ವಂಚನೆ ಮಾಡುತ್ತಾ ಇದ್ದಾರೆ. ಕಮಿಟಿ ರಚಿಸಲು ಕೆಲಸ ಇಲ್ಲದವರು ಒತ್ತಾಯಿಸುತ್ತಿದ್ದಾರೆ. ಕೆಲಸ ಇದ್ದವರು ಯಾರೂ ಇಂತಹ ಒತ್ತಾಯ ಮಾಡುವುದಿಲ್ಲ. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಾರೆ. ನಾಯಕ ಆಗಬೇಕು ಎಂದು ಮಾಡುವವರೂ ಇದ್ದಾರೆ ಎಂದರು.
ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ: ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್‌ನ ವೈಯಕ್ತಿಕ ವಿಚಾರ. ಸಿನಿಮಾಕ್ಕೂ ಅದಕ್ಕೂ ಸಂಬಂಧ ಇಲ್ಲ. ಸಿನಿಮಾ ನಟ ಆಗಿದ್ದಕ್ಕೆ ಮಾಡಿದ ಕೊಲೆ ಅಲ್ಲ. ಅದು ಅವರದ್ದು ವೈಯಕ್ತಿಕ ಎಂದು ಗುರುಕಿರಣ್ ಪ್ರತಿಕ್ರಿಯಿಸಿದರು.
ರಾಜ್ ಕುಮಾರ್ ಅವರು ನಿಯಮಾವಳಿ ರೂಪಿಸಿದ್ದರು. ಹಾಗಾಗಿ ಇವತ್ತಿಗೂ ಎಲ್ಲರೂ ರಾಜ್ ಕುಮಾರ್ ಅವರಿಗೆ ಗೌರವ ಕೊಡುತ್ತಾರೆ. ಹಾಗೆಂದು ಎಲ್ಲರೂ ರಾಜ್ ಕುಮಾರ್ ಆಗೋದಿಕ್ಕೆ ಆಗುವುದಿಲ್ಲ. ದರ್ಶನ್ ವಿಷಯದಲ್ಲಿ ಕೋಪ ಸ್ವಲ್ಪ ಮಿತಿ ಮೀರಿತು ಎಂದು ಅನಿಸುತ್ತದೆ. ಜನರಿಗೆ ಒಳ್ಳೆಯದು ಬೇಡ, ಕೆಟ್ಟದ್ದು ಬೇಕು. ದರ್ಶನ್ ಕೇಸಿನಲ್ಲೂ ಅಷ್ಟೇ, ವೀವ್ಸ್ ಸಿಗುತ್ತದೆ, ಪ್ರಚಾರ ಸಿಗುತ್ತದೆ. ಈಗ ಜೈಲಿಗೆ ಎಲ್ಲರೂ ಭೇಟಿಯಾಗಲು ಹೋಗುತ್ತಾರೆ.
ಘಟನೆ ಸಂದರ್ಭ ಅಲ್ಲಿ ಏನು ನಡೆದಿದೆ ಎಂದು ಗೊತ್ತಿಲ್ಲ. ಕಾನೂನು, ತನಿಖೆ ಮೂಲಕ ಸತ್ಯ ಹೊರಗೆ ಬರುತ್ತದೆ. ಪೊಲೀಸರು ಸೆಲೆಬ್ರಿಟಿ ಎಂದು ನೋಡದೆ ಉತ್ತಮ ಕೆಲಸ ಮಾಡಿದ್ದಾರೆ. ದರ್ಶನ್ ಹೊರಗಡೆ ಬಂದರೆ ನಮಗೂ ಖುಷಿ. ತಪ್ಪಿತಸ್ಥ ಎಂದಾದರೆ ಈ ಮಣ್ಣಿನ ಕಾನೂನು ಗೌರವಿಸಬೇಕು ಎಂದು ಗುರುಕಿರಣ್ ಹೇಳಿದರು.