ಅಯ್ಯೋ ಹೊಸಗುಡ್ಡದ ಕರಿಬಂಟನ ಮಗಳು…
ನನಗೆ ಮೋಸ್ಟ್ಲಿ ಕಾಶ್ಮೀರದಲ್ಲಿ ಯಾವುದಾದರೊಂದು ಕ್ಷೇತ್ರಕ್ಕೆ ಟಿಕೆಟ್ ಕೊಡಬಹುದು ಎಂದು ಕರಿಭೀಮವ್ವ ಮನಸ್ಸಿನಲ್ಲಿ ಮಂಡಿಗೆ ತಿಂದಿದ್ದಳು. ನಮ್ಮದು ಮೂಲ ಕಾಶ್ಮೀರ. ನಮ್ಮ ಅಜ್ಜ-ಮುತ್ತಜ್ಜ ಎಲ್ಲರೂ ಮೂಲತಃ ಕಾಶ್ಮೀರದವರೇ. ವ್ಯಾಪಾರ ಮಾಡುತ್ತ.. ಮಾಡುತ್ತ ಬಂದು ಈ ಊರಿಗೆ ಸೆಟ್ಲ್ ಆದರು. ಎಲ್ಲ ಮಕ್ಕಳ ಮದುವೆಯನ್ನೂ ಇಲ್ಲಿಯೇ ಮಾಡಿದರು. ಅದಕ್ಕೆ ನಾವು ಇಲ್ಲಿಯ ವಾತಾವರಣದ ಹಾಗೆ ಈ ಬಣ್ಣ ಇದೆ. ಈ ಬಗ್ಗೆ ನೀವು ತಪ್ಪು ತಿಳಿದುಕೊಳ್ಳದೇ ನನಗೊಂದು ಟಿಕೆಟ್ ದಯಪಾಲಿಸಬೇಕು. ಬರೀ ಹೆಣ್ಣುಸಂತಾನ ಇರುವ ನಮ್ಮ ಅಪ್ಪ ಹಾಗೂ ಅಜ್ಜನ ಹೆಸರನ್ನು ನಾನು ಉಳಿಸಬೇಕಿದೆ. ಆದ್ದರಿಂದ ನನಗೆ ನಿಮ್ಮ ಪಕ್ಷದಿಂದ ಟಿಕೆಟ್ ಕೊಡಬೇಕು. ಇದು ಆಗ್ರಹ ಪೂರ್ವಕ ಎಂದು ಸೋದಿಮಾಮಾನಿಗೆ ಇಷ್ಟುದ್ದ ಮೆಸೇಜ್ ಕಳುಹಿಸಿದಳು. ಅದನ್ನು ಓದಿದ ಮಾಮಾ ಅವರು ಅಲೆಲೆಲೆ…ಅಲ್ಲಿಂದ ಬಂದು ಇಲ್ಲೇ ಸೆಟ್ಲ್ ಆಗಿದಾರೆ ಎಂದು ಹೇಳಿಕೊಂಡಿದ್ದಾಳೆ. ಆಕೆಯ ಪೂರ್ವಜರು ನಿಜವಾಗಿಯೂ ಅಲ್ಲಿಯವರೇ? ಇದನ್ನು ತಿಳಿದುಕೊಂಡು ಬರಲು ಗುಪ್ತಚರ ಅಧಿಕಾರಿಗಳಿಗೆ ಸೂಚಿಸಿದರು. ಅವರು ವ್ಯಾಪಾರಿಗಳ ವೇಷ ಧರಿಸಿ ಕರಿಭೀಮವ್ವ ನೆಲೆಸಿದ ಊರಿಗೆ ಹೋದರು. ಮೊದಲು ಆಕೆಯ ಮನೆಯ ಮುಂದೆ ತಿರುಗಾಡಿದರು. ಅಂಗಳದಲ್ಲಿ ಎರಡು ಎಮ್ಮೆ ಕಟ್ಟಿದ್ದರು. ಆ ಕಡೆ ಮೂಲೆಯಲ್ಲಿ ಕಟ್ಟಿದ್ದ ಮೇಕೆಗೆ ಹಸಿವಾಗಿತ್ತೋ ಏನೋ ಒಂದೇ ಸಮನೆ ಕಿರುಚಿಕೊಳ್ಳುತ್ತಿತ್ತು. ಆದರೂ ಕರಿಭೀಮವ್ವ ಹೊರಗೆ ಬರಲೇ ಇಲ್ಲ. ಬೇರೆಯವರನ್ನು ಕೇಳೋಣ ಎಂದು ಕೇಳಿದರೆ ಊರಿನಲ್ಲಿ ಕೆಲವರು ಹೌದು ಹಿಂದೆ ಅವರು ಯಾವುದೋ ಕಡೆಯಿಂದ ಬಂದು ಸೆಟ್ಲಾದರು ಎಂದು ನಮ್ಮ ತಾತ ಹೇಳುತ್ತಿದ್ದ ಎಂದು ಅನ್ನುತ್ತಿದ್ದರು. ಕರಿಭೀಮವ್ವನ ಅಜ್ಜ ಕರಿಬಸ್ಸಪ್ಪ ಇಲ್ಲಿ ಬೇಜಾರಾದಾಗ ನಮ್ಮ ಊರಿಗೆ ಹೋಗಿ ಬರುತ್ತೇನೆ ಎಂದು ಹದಿನೈದು ದಿನಗಳ ಕಾಲ ಹೋಗುತ್ತಿದ್ದ. ಆತ ಕಾಶ್ಮೀರಕ್ಕೆ ಹೋಗುತ್ತಿದ್ದನೋ ಎಲ್ಲಿಗೆ ಹೋಗುತ್ತಿದ್ದನೋ ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದು ನಮ್ಮ ತಾತನ ತಮ್ಮ ಹೇಳಿದ ನೆನಪು ಇದೆ ಎಂದು ಕಂಟ್ರಂಗಮ್ಮತ್ತಿ ಹೇಳಿದಳು. ವ್ಯಾಪಾರಿಗಳಿಗೆ ದಿಗಿಲಾಯಿತು. ಸರಿಯಾಗಿ ತಿಳಿದುಕೊಂಡು ಹೋಗದಿದ್ದರೆ ಮಾಮಾರು ಸುಮ್ಮನೇ ಬಿಡುವುದಿಲ್ಲ ಎಂದು ಅಂದುಕೊಂಡು.. ಅದ್ಹೇಗೋ ಕರಿಭೀಮವ್ವನ ಗಂಡನ ದೋಸ್ತಿ ಮಾಡಿಕೊಂಡರು. ಆತನಿಗೆ ಪಾನಕ ಗೀನಕ ಕುಡಿಸಿ ಅದು ಇದು ಮಾತಾಡಿ… ಹೌದೂ… ನಿಮ್ಮ ಮನೆಯವರು ಯಾವ ಊರಿನವರು ಎಂದು ಕೇಳಿದಳು. ಅಯ್ಯೋ ಅದಾ… ಇಲ್ಲೇ ಹೊಸಗುಡ್ಡದ ಕರಬಂಟ ಇದಾನಲ್ಲ ಅವನ ಮಗಳು… ಬಣ್ಣ ನೋಡಿದ್ರಾ ನಕ್ಕರೆ ಬರೀ ಹಲ್ಲು ಕಾಣುತ್ತವೆ… ಅದಕ್ಕೆ ರಾಜಕೀಯ ಹುಚ್ಚು. ನಮ್ಮ ತಾತ ಅಲ್ಲಿಯವನು… ನಮ್ಮ ಅಜ್ಜಿ ಇಲ್ಲಿಯವಳು ಎಂದು ಹೇಳಿಕೊಂಡು ತಿರುಗಾಡುತ್ತದೆ ಎಂದು ಹೇಳಿದ. ಅಂದೇ ರಾತ್ರಿ ಮಾರು ವೇಷದ ಅಧಿಕಾರಿಗಳು ಸೋದಿ ಮಾಮಾನ ಹತ್ತಿರ ಹೋದರು.