ಅರಮನೆಗಳು ಅಳಿದರೂ ಉಳಿದ ಗುರುಮನೆಗಳು
ಭಾರತ ದೇಶದ ಇತಿಹಾಸದಲ್ಲಿ ಪ್ರಮುಖವಾಗಿ ಎರಡು ಪರಂಪರೆಗಳು ದೀರ್ಘಕಾಲ ಇದ್ದದ್ದು ಕಂಡುಬರುತ್ತದೆ. ಒಂದು ರಾಜ ಪರಂಪರೆ ಇನ್ನೊಂದು ಗುರು ಪರಂಪರೆ. ಪರಂಪರೆ ಒಬ್ಬರಿಂದ ಇನ್ನೊಬ್ಬರಿಗೆ ಕೊಡಲ್ಪಟ್ಟು ಮುಂದುವರಿದುಕೊಂಡು ಬಂದಿರುವ ಸರಪಳಿ. ಉದಾ: ರಾಜನು ತನ್ನ ಮಗ ಅಥವಾ ಉತ್ತರಾಧಿಕಾರಿಗೆ ರಾಜ್ಯಭಾರ ವಹಿಸುತ್ತ, ಆ ಉತ್ತರಾಧಿಕಾರಿ ಕಾಲ ನಂತರದಲ್ಲಿ ಮುಂದಿನ ಮತ್ತೊಬ್ಬ ಉತ್ತರಾಧಿಕಾರಿಗೆ ವಹಿಸುತ್ತಾನೆ. ಹೀಗೆ ಪರಂಪರೆ ಮುಂದುವರಿಯುತ್ತದೆ. ಗುರುಪರಂಪರೆಯಲ್ಲಿ ಮಗನ ಸ್ಥಾನದಲ್ಲಿ ಶಿಷ್ಯನು ಉತ್ತರಾಧಿಕಾರಿ.
ಇಂದು ರಾಜ ಪರಂಪರೆ ಇಲ್ಲವಾಗಿದೆ. ಆದರೆ ಗುರು ಪರಂಪರೆಗಳು ಉಳಿದುಕೊಂಡಿವೆ. ಅರಮನೆಗಳು ಅಳಿದಿವೆ, ಗುರುಮನೆಗಳು ಉಳಿದಿವೆ. ಇದಕ್ಕೆ ಕಾರಣ ರಾಜ ಪರಂಪರೆಗಳು ಲೌಕಿಕ ಶಕ್ತಿಗಳನ್ನೇ ಅವಲಂಬಿಸಲು ಪ್ರಾರಂಭ ಮಾಡಿದ್ದು. ಗುರು ಪರಂಪರೆಗಳಾದರೋ ಆಧ್ಯಾತ್ಮಿಕ ಶಕ್ತಿಗಳನ್ನು ಅವಲಂಬಿಸಿವೆ.
ಆಧ್ಯಾತ್ಮಿಕ ಶಕ್ತಿಯನ್ನು ತನ್ನ ಮೂಲಾಧಾರವಾಗಿ ಇಟ್ಟುಕೊಂಡ ಯಾವುದೇ ಪರಂಪರೆ ಶಾಶ್ವತವಾಗಿ ಉಳಿಯುತ್ತವೆ. ಇದಕ್ಕೆ ಎರಡು ಉದಾಹರಣೆಗಳನ್ನು ಕೊಡಬಹುದು. ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ. ಶಾಸ್ತ್ರೀಯ ಸಂಗೀತವು ಸಾಮವೇದದಿಂದ ಪ್ರಾರಂಭಗೊಂಡು ಗಾಂಧರ್ವ ವೇದವಾಗಿ ಮುಂದುವರಿದು ತಾನ್‌ಸೇನ್ (ಅಕ್ಬರನ ಆಸ್ಥಾನದಲ್ಲಿದ್ದ ಇತಿಹಾಸ ಪ್ರಸಿದ್ಧ ಸಂಗೀತಗಾರ) ನಂತಹ ಸಂಗೀತ ದಿಗ್ಗಜಗಳ ಮೂಲಕ ಬೆಳವಣಿಗೆ ಹೊಂದಿ ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಭಾವಕ್ಕೆ ತಕ್ಕ ರಾಗಗಳ ಜೋಡಣೆ ಸಂಗೀತದಲ್ಲಿ ತುಂಬಾ ಮುಖ್ಯ. ಆ ರಾಗಗಳನ್ನು ಹಾಡಿದಾಗ ಮನಸ್ಸಿನಲ್ಲಿ ಆ ಭಾವ ಬಂದೇ ಬರುತ್ತದೆ. ಭಕ್ತಿ, ತ್ಯಾಗ, ದಯೆ ಮುಂತಾದ ಸದ್ಭಾವಗಳನ್ನು ಸಂಗೀತದ ನಿರ್ದಿಷ್ಟ ರಾಗಗಳು ಮನಸ್ಸಿನ ಮೂಲೆಗಳಿಂದ ಬಡಿದೆಬ್ಬಿಸುತ್ತದೆ. ಇದೇ ಶಾಸ್ತ್ರೀಯ ಸಂಗೀತದ ಆಧ್ಯಾತ್ಮಿಕ ಶಕ್ತಿ.
ಇನ್ನೊಂದು ಉದಾಹರಣೆ ಭರತನಾಟ್ಯ. ಭರತ ಎಂಬ ಮುನಿಯಿಂದ ಪ್ರಣೀತವಾದದ್ದು. ಇಂದಿಗೂ ಪ್ರಾಚೀನ ಪರಂಪರೆಯನ್ನೇ ಮುಂದುವರಿಸುತ್ತಿದೆ. ಭರತನಾಟ್ಯದಲ್ಲಿ ಬರುವ ಮುದ್ರೆಗಳು ಪೂಜೆಗಳಲ್ಲಿಯೂ ಬರುತ್ತವೆ. ಮುದ್ರೆ ಎಂದರೆ ಮನಸ್ಸಿನ ಭಾವದ ಆವಿರ್ಭಾವದ ಚಿಹ್ನೆಗಳು. ಆ ಚಿಹ್ನೆಗಳನ್ನು ಕೈಗಳ ಮೂಲಕ ಅಥವಾ ಶರೀರದ ಮೂಲಕ ಅಭಿನಯಿಸಿದಾಗ ಕ್ರಮೇಣ ಮನಸ್ಸಿನಲ್ಲಿಯೂ ಅದೇ ಭಾವ ಜಾಗೃತವಾಗುತ್ತದೆ. ಹೀಗೆ ಜಾಗ್ರತವಾಗಲು ದೀರ್ಘಕಾಲ ಬೇಕಾಗಬಹುದು. ಕೆಲವು ಮುದ್ರೆಗಳು ಶೀಘ್ರ ಪರಿಣಾಮಕಾರಿಯಾಗಿರುವುದು ಅನುಭವದಲ್ಲಿದೆ. ಉದಾಹರಣೆ ಆರೋಗ್ಯಕ್ಕೆ ಸಂಬಂಧಪಟ್ಟ ಮುದ್ರೆಗಳು. ಮುದ್ರೆಗಳು ಶರೀರದ ಒಳಗೆ ಪ್ರಭಾವ ಬೀರುತ್ತವೆ. ಅದೇ ಮುದ್ರೆಗಳು ಆಧ್ಯಾತ್ಮಿಕ ಶಕ್ತಿ. ಇಂತಹ ಮುದ್ರೆಗಳನ್ನು ಕೊಟ್ಟಿರುವುದು ನಾಟ್ಯ ಶಾಸ್ತ್ರದ ಅಧ್ಯಾತ್ಮಿಕ ಶಕ್ತಿ.
ಹೀಗೆ ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು. ಆಧ್ಯಾತ್ಮಿಕ ಶಕ್ತಿ ಒಳಗಡೆ ಸೇರಿಕೊಂಡಿದ್ದರೆ ಆ ಪರಂಪರೆ ಶಾಶ್ವತವಾಗುತ್ತದೆ.