For the best experience, open
https://m.samyuktakarnataka.in
on your mobile browser.

ಕ್ಷಮಾಶೀಲರಾದರೆ ಮಾತ್ರ ಗೌರವ, ಅಧಿಕಾರ

04:51 AM Nov 22, 2024 IST | Samyukta Karnataka
ಕ್ಷಮಾಶೀಲರಾದರೆ ಮಾತ್ರ ಗೌರವ  ಅಧಿಕಾರ

ನಾವು ಅನೇಕ ಸಲ ಕೇಳಿದ್ದೇವೆ. ತಪ್ಪು ಮಾಡುವುದು ಮಾನವನ ಸಹಜ ಸ್ವಭಾವ. ಅದು ಮಾನವನ ಗುಣ, ಆದರೆ ಕ್ಷಮಿಸುವುದು ದೈವಗುಣ. ತಿಳಿಯದೆ ಮಾಡಿದ ತಪ್ಪಿಗೆ ಕ್ಷಮಾರ್ಹತೆ. ತಿಳಿದು ತಿಳಿದು ಮಾಡಿದ ತಪ್ಪಿಗೆ ದಂಡನಾರ್ಹತೆ.
ಕ್ಷಮಾ ಗುಣಗಳನ್ನು ಪಾಲಿಸಿದ ಅನೇಕ ಮಹಾಪುರುಷರ, ದೇವಾಂಶ ಪುರುಷರ ಚರಿತ್ರೆಯಿಂದ ನಮಗೆ ತಿಳಿಯುತ್ತದೆ. ಅಲ್ಲದೆ ಅನೇಕ ಧಾರ್ಮಿಕ ಗ್ರಂಥಗಳು ಕ್ಷಮಾಶೀಲತೆಗೆ ಒತ್ತು ಕೊಟ್ಟು ಕ್ಷಮಿಸುವವನೇ ಬಲಾಢ್ಯ ಎಂಬ ವ್ಯಾಖ್ಯಾನವನ್ನು ಮಾಡಿದೆ.
ಕ್ಷಮೆ ಕುರಿತು ಕುರಾನಿನ ಅನೇಕ ಅಧ್ಯಾಯಗಳ ೪೦ ಪ್ರಸಂಗಗಳಲ್ಲಿ ದೇವಾಜ್ಞೆ, ದೇವೋಪದೇಶ ಹಾಗೂ ದೇವ ದರ್ಶನಗಳನ್ನು ಉಲ್ಲೇಖಿಸಿದೆ. (ಅಲ್ ಬಕರ, ಅಲಿ ಇಮ್ರಾನ್, ಅರಾಫ, ಆತ್ತೌಬ, ಅಲ್ ಹಜ್, ಅನ್ನಿಸಾ, ಅರ್ ಅದ್ರ. ಮುಂತಾದವುಗಳು) ಇವೆಲ್ಲವುಗಳ ಸಾರ ಜನರನ್ನು ಕ್ಷಮಿಸಲು ಕಲಿಯಿರಿ. ಕ್ಷಮಿಸುವುದು ನ್ಯಾಯ ಪಾಲಿಸುವುದು ಉತ್ತಮ ನಡವಳಿಕೆಯಾಗಿದೆ. ಹಜರತ್ ಅಲಿ ಅವರು ಹೇಳುತ್ತಾರೆ. ಶಕ್ತಿ ಅಧಿಕಾರ ಇದ್ದರೂ ಕ್ಷಮಿಸುವವನು ದೊಡ್ಡವನು...' ಎಂದು. ಕ್ಷಮಿಸುವುದರಿಂದ ಸಮಾಜವನ್ನು ಕಟ್ಟಬಹುದು. ಆದಿಯಿಂದಲೂ ಮಾನವ ತಪ್ಪುಗಳನ್ನು ಮಾಡುತ್ತಲೆ ಬಂದಿದ್ದಾನೆ. ತಪ್ಪು ಮಾಡಿದ ಮನುಷ್ಯನೇ ಇಲ್ಲವೆಂದು ಹೇಳಬಹುದು. ಆದರೆ ಈ ತಪ್ಪುಗಳನ್ನು ಮನ್ನಿಸುವುದರಿಂದ ಸಮಾಜದ ಸ್ವಾಸ್ಥ್ಯಕ್ಕೆ ಅಡಿಪಾಯ ಹಾಕಿದಂತಾಗುತ್ತದೆ. ಪ್ರವಾದಿವರ್ಯ ಮುಹಮ್ಮದ (ಸ) ಅವರ ಈ ವಚನ ನೋಡಿ...ನನ್ನ ಪ್ರಭು ನಿನ್ನ ದಾಸರ ಪೈಕಿ ನಿನ್ನ ದೃಷ್ಟಿಯಲ್ಲಿ ಪ್ರತಿಷ್ಠಿತ ವ್ಯಕ್ತಿ ಯಾರು ಎಂದು ಕೇಳಿದಾಗ ಅಲ್ಲಾಹನು ಹೇಳಿದನು ಸಾಮರ್ಥ್ಯವಿದ್ದು ಕ್ಷಮಿಸಿ ಬಿಡುವವನು…' ಎಂದು. ಈ ವಚನದಿಂದ ಒಬ್ಬನು ಇನ್ನೊಬ್ಬನನ್ನು ಕಷ್ಟಕೋಟಲೆ ಕೊಟ್ಟು ಸತಾಯಿಸಿದ್ದು ಅದರ ಪ್ರತೀಕಾರ ತೀರಿಸುವ ಸಾಮರ್ಥ್ಯ ಹೊಂದಿದ್ದರೂ ಅವನಿಗೆ ಪ್ರತಿಕಾರ ಮಾಡದೆ ಕ್ಷಮಿಸಿದರೆ ಅವನು ಚಾರಿತ್ರ‍್ಯದಲ್ಲಿ ದೇವನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತ ನಾಗುತ್ತಾನೆ.
(ಶುಅಬುಲ್ ಈಮಾನ್) ಅಬು ಹುರೈರಾ ಅವರು ಪ್ರವಾದಿವರ್ಯರ ಇನ್ನೊಂದು ವಚನವನ್ನು ವರದಿ ಮಾಡುತ್ತಾರೆ. ಒಬ್ಬನು ಕ್ಷಮೆ ನೀಡಿದರೆ ಅಲ್ಲಾಹನು ಅವನ ಗೌರವವನ್ನು ಹೆಚ್ಚಿಸುತ್ತಾನೆ. ಹೇಗೆ ದಾನ ನೀಡುವುದರಿಂದ ಸಂಪತ್ತು ಹೆಚ್ಚುತ್ತದೆಯೊ ಹಾಗೆ........(ಮುಸ್ಲಿಂ) ಕ್ಷಮೆ ಕುರಿತು ಕುರಾನಿನ ಈ ಕೆಲವು ವಚನಗಳನ್ನು ಗಮನಿಸೋಣ (ಅಲಿ ಇಮ್ರಾನ್ ೩:೧೫೯).ನೀವು ಅವರನ್ನು ಕ್ಷಮಿಸಿರಿ ಅವರ ಕ್ಷಮೆಗಾಗಿ ಪ್ರಾರ್ಥಿಸಿರಿ'. ಇನ್ನೊಂದು ಅಧ್ಯಾಯ ಅರಾಫ (೭:೧೯೯). ನೀವು ಜನರನ್ನು ಕ್ಷಮಿಸಿ ಒಳಿತನ್ನು ಆದೇಶಿಸಿರಿ'. ಅನ್ನೂರ ಅಧ್ಯಾಯದ ೨೪.೨೨ ರ ವಚನದಲ್ಲಿ ಕ್ಷಮಿಸಬೇಕು ಇತರರ ತಪ್ಪುಗಳನ್ನು ಕಡೆಗಣಿಸಬೇಕು..' ಎಂದಿದೆ. ಬಹಳ ದುಷ್ಟ ಮನುಷ್ಯನೆಂದರೆ ಯಾರನ್ನೂ ಕ್ಷಮಿಸಲಾರದವ. ಒಬ್ಬ ವಿದ್ವಾಂಸರು ಹೇಳುತ್ತಾರೆನನ್ನ ಜೀವನದಲ್ಲಿ ನಾನು ಪ್ರಾರಂಭದಲ್ಲಿಯೇ ಕ್ಷಮಾಶೀಲತೆಯ ಕಾಣಿಕೆಯನ್ನು ಪಡೆದಿದ್ದೆ' ಎಂದು.
ಕ್ಷಮಾಶೀಲತೆಯ ಪರಾಕಾಷ್ಠೆಯ ಈ ಕೆಲವು ಪ್ರಸಂಗಗಳಲ್ಲಿ ಪ್ರವಾದಿವರ್ಯರು ತೋರಿಸಿದ ಔದಾರ್ಯ ಕ್ಷಮಾ ಗುಣಗಳು ಗಮನೀಯವಾಗಿವೆ. ಮೆಕ್ಕಾದ ಯುದ್ಧದಲ್ಲಿ ವೈರಿ ಸೇನೆಯಲ್ಲಿದ್ದ ಉತಬಾ ಮತ್ತು ಮುಅತಬ್ ಅವರು ಪ್ರವಾದಿವರ್ಯರ ಇಬ್ಬರು ಪುತ್ರಿಯರಾದ ರುಕಯ್ಯಾ (ರ) ಮತ್ತು ಉಮೆಕುಲ್ಸುಮ್ (ರ) ರ ಶಿರಚ್ಛೇದ ಮಾಡಿದ್ದರು. ಮಕ್ಕಾ ವಿಜಯದ ನಂತರ ಪ್ರವಾದಿವರ್ಯ ಮೊಹಮ್ಮದ್ (ಸ) ಅವರಿಬ್ಬರನ್ನೂ ಕ್ಷಮಿಸಿ ಅಭಯ ನೀಡುತ್ತಾರೆ.
ಇನ್ನೊಂದು ಪ್ರಸಂಗ ನೋಡಿ. ಹಿರಿದ್ ಬಿನ್ ಉತ್ಬಾ ಎಂಬ ಮಹಿಳೆ ಉಹುದ್ ಯುದ್ಧದಲ್ಲಿ ಪ್ರವಾದಿವರ್ಯರ ಸಂಬಂಧಿಕರೊಬ್ಬರ ಪಾರ್ಥಿವ ಶರೀರವನ್ನು ಸೀಳಿ ಕರುಳನ್ನು ತೆಗೆದು ಜಗಿಯುತ್ತಾಳೆ. ಇಂತಹ ಕ್ರೂರಿ ಮಹಿಳೆ ಯುದ್ಧದಲ್ಲಿ ಬಂಧಿಯಾಗಿ ಪ್ರವಾದಿವರ್ಯರ ಎದುರು ನಿಂತಾಗ; ಪ್ರವಾದಿವರ್ಯರು ಆಕೆಯನ್ನು ನೋಡಿ ಕ್ಷಮಿಸಿ ಅಭಯ ನೀಡುತ್ತಾರೆ. ತಮಗೆ ತಮ್ಮ ಕುಟುಂಬದವರಿಗೆ ಅನುಯಾಯಿಗಳಿಗೆ ಯುದ್ಧ ಮಾಡಿ ಹಿಂಸಿಸಿದವರಿಗೆ ಪ್ರವಾದಿವರ್ಯರ ಔದಾರ್ಯದ ಬಾಗಿಲು ಮುಕ್ತವಾಗಿತ್ತು. ಕ್ಷಮಾಶೀಲರಾದರೆ ನಮಗೆ ಶಕ್ತಿ, ಗೌರವ, ಅಧಿಕಾರ ತನ್ನಿಂದ ತಾನೇ ಸಿಗುತ್ತವೆ ಎಂಬ ಮಾತನ್ನು ಮೆಲುಕು ಹಾಕಬೇಕು.