ಅರ್ಜಿ ಕರೆಯಲಾಗಿದೆ…
ಈಗ ನಡೆಯುವ ಮೂರು ಕ್ಷೇತ್ರಗಳಿಗೆ ಎಲೆಕ್ಷನ್ನಿಗೆ ಸ್ಪರ್ಧಿಸಲು ಅರ್ಜಿ ಕರೆಯಲಾಗಿದೆ. ಅರ್ಹರು ಇದ್ದರೆ ಕೂಡಲೇ ಅರ್ಜಿ ಸಲ್ಲಿಸಬಹುದು. ನಾವು ಎಲ್ಲ ಪಕ್ಷದವರು ಸೇರಿ ಸಮಿತಿ ರಚಿಸಿಕೊಂಡು ಚರ್ಚೆ ನಡೆಸಿ ಕೆಲವೊಂದು ಮಾನದಂಡಗಳನ್ನು ನಿಗದಿ ಪಡಿಸಿ ಈ ಅರ್ಜಿ ಆಹ್ವಾನಿಸುತ್ತಿದ್ದೇವೆ. ಚುನಾವಣೆಗೆ ನಿಲ್ಲಲು ಕೆಲವೊಂದು ಅರ್ಹತೆ ಬೇಕೇ ಬೇಕು. ನಾವು ವಿಧಿಸಿದ ಷರತ್ತುಗಳಿಗೆ ಅನ್ವಯವಾಗುವಂತಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಟ ಎಂಟನೆಯ ತರಗತಿ ಪಾಸಾಗದಿದ್ದರೂ ಕನ್ನಡ ಓದಲು-ಬರೆಯಲು ಬರುತ್ತಿರಬೇಕು. ಇಂಗ್ಲಿಷ್ ಬರದಿದ್ದರೂ ಇಂಗ್ಲಿಷಿನಲ್ಲಿ ಸ್ಟೈಲ್ ಆಗಿ ಮಾತನಾಡಬೇಕು. ಲಂಚ ಲಾವಣಿಯನ್ನು ಕೈಯಿಂದ ಮುಟ್ಟಲೇಬಾರದು. ಬೇಕಾದರೆ ಕೈ ಚೀಲದಲ್ಲಿ ಹಾಕಿಸಿಕೊಳ್ಳಬಹುದು. ಇತ್ತೀಚಿನ ದಿನಗಳು ಬಲು ಸೂಕ್ಷ್ಮ. ಎಲ್ಲಿಯೂ ಸಿಕ್ಕಿಬೀಳದಂತೆ ಜಾಗೃತಿ ವಹಿಸಬೇಕು. ವಿಡಿಯೋ-ಗಿಡಿಯೋ ಬಹಳ ಮಾಡುತ್ತಿರುತ್ತಾರೆ. ಅದರಿಂದ ತಪ್ಪಿಸಿಕೊಳ್ಳುವಂತಹ ಕೋರ್ಸ್‌ಗಳನ್ನು ಮಾಡಿದ್ದರೆ ಅವರಿಗೆ ಆದ್ಯತೆ ಕೊಡಲಾಗುವುದು. ಅರ್ಜಿದಾರರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕನಿಷ್ಟ ಪಕ್ಷ ಹತ್ತು ಹೊಡೆದಾಟಗಳನ್ನಾದರೂ ಮಾಡಿರಬೇಕು. ಸಪೋರ್ಟ್ ಮಾಡ್ತೀನಿ ಬನ್ನಿ… ಸಪೋರ್ಟ್ ಮಾಡ್ತೀನಿ ಬನ್ನಿ ಎಂದು ಕರೆಯುವಿಕೆಯನ್ನು ಕರಗತ ಮಾಡಿಕೊಂಡಿರಬೇಕು. ಚುನಾವಣೆಗೆ ಎಲ್ಲಿಂದ ದುಡ್ಡು ತರಬೇಕು ಹಾಗೂ ತಂದ ದುಡ್ಡನ್ನು ಹೇಗೆ ವಾಪಸ್ ಕೊಡಬಾರದು ಎಂಬ ಕಲೆ ಗೊತ್ತಿರಬೇಕು. ಆರಿಸಿಬಂದ ಮೇಲೆ ಪಕ್ಷದ ಹಿರಿಯರನ್ನು ಆಡಿಕೊಳ್ಳಬಾರದು. ಒಂದು ವರ್ಷ ಆದ ಮೇಲೆ ಏನು ಬೇಕಾದ್ದು ಬಯ್ಯಬಹುದು. ಅಲ್ಲದೇ ಪ್ರತಿಪಕ್ಷದವರನ್ನು ಹೇಗೆ ಬಯ್ಯಬೇಕು. ಅವರನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಗೊತ್ತಿರಬೇಕು. ಈ ವಿದ್ಯೆಯಲ್ಲಿ ಕ್ರಿಯಾಶೀಲತೆ ಅಗತ್ಯ. ಜನರು ಕೆಲಸ ಮಾಡಿಕೊಡಿ ಎಂದು ಬಂದರೆ ಅವರಿಗೆ ಗೊತ್ತಾಗದಂತೆ ವಸೂಲಿ ಮಾಡಬೇಕು. ಪ್ರತಿಯೊಂದು ಹಂತದಲ್ಲೂ ಬೇರೆಯವರನ್ನು ಸಿಕ್ಕಿಸಲು ಯತ್ನಿಸಬೇಕೆನ್ನುವ ಕೋರ್ಸುಗಳನ್ನು ಮಾಡಿಕೊಂಡಿರಬೇಕು. ಇಷ್ಟೆಲ್ಲ ಇದ್ದರೆ ಕೂಡಲೇ ಆಯಾ ಪಕ್ಷದ ಕಚೇರಿಗೆ ಅರ್ಜಿ ಸಲ್ಲಿಸಿ. ಮೊದಲು ಅರ್ಜಿ ಬಂದವರಿಗೆ ಮೊದಲಾದ್ಯತೆ. ಕೊನೆ ದಿನಾಂಕ ಪತ್ರಿಕೆ, ಟಿವಿಯಲ್ಲಿ ನೋಡಿ ತಿಳಿದುಕೊಳ್ಳಿ.