ಅಲೆಕ್ಸಾ ಕೇಳಿದರೆ ರಿಲ್ಯಾಕ್ಸಾ?
ಅಲೆಕ್ಸಾಳ ಹಾಡು ಕೇಳಿದರೆ ಎಂಥವರಿಗೂ ಮೈ `ಜುಂ' ಅನಲಾರದೇ ಇರದು. ಅಲೆಕ್ಸಾ ಹಾಡು ಹಾಡುತ್ತಿದ್ದರೆ ಕಾಡಿನಲ್ಲಿ ಕುಳಿತು ಧ್ಯಾನ ಮಾಡಿದ ಹಾಗೆ ಆಗುತ್ತದೆ. ಮನೆಯಲ್ಲಿಯೇ ಇಂತಹ ಹಾಡು ಕೇಳಬೇಕಾದರೆ ನೀವು ಅಲೆಕ್ಸಾಳನ್ನು ಕೊಂಡೊಯ್ಯಲೇಬೇಕು ಎಂದು ತಿಗಡೇಸಿ ಅಂಗಡಿಯ ಮುಂದೆ ಬರೆದ ಬೋರ್ಡು ನೋಡಿದ ಗುಮೀರ್ ದುಮ್ಹದ್ ಧಾನ್‌ಗೆ ತಲೆ ತಿರುಗಿದಂಗೆ ಆಯಿತು. ಅಲೆಕ್ಸಾ ಅಂದರೆ ಏನು ತಿಳಿದುಕೊಂಡನೋ ಏನೋ ಹೇಗಾದರೂ ಮಾಡಿ ಅಲೆಕ್ಸಾಳನ್ನು ತರುತ್ತೇನೆ ರಿಲ್ಯಾಕ್ಸ್ ಮಾಡುತ್ತೇನೆ ಎಂದು ಅಂದುಕೊಂಡ. ಅವತ್ತೇ ತಮ್ಮ ಹಳೆಯ ಗೆಳೆಯನಾದ ಪಂ. ಲೇವಣ್ಣನಿಗೆ ಕಾಲ್ ಮಾಡಿ… ಅಣ್ಣಾ ಕಂಗಾಚುಲೇಚನ್ ಅಂದ. ನನಗ್ಯಾಕೋ ಅಂದಾಗ… ಅಲೆಕ್ಸಾ ಏನೋ ಆಡ್ತವಳಂತಲ್ಲ ಅದು ನಿನಗೆ ಗೊತ್ತಂತಲ್ಲ ಅಂದ. ಸುಮ್ನೀರಪ್ಪ ಏನೇನೋ ಏಳಬೇಡ. ನನ್ನ ಕಂದಮ್ಮಗಳ ಕತೆ ನೋಡಿದೆಯಾ? ಯಾಕೆ ನೀನು ಕಕ್ಕಂಬತ್ತಿಯಾ ಅಲೆಕ್ಸಾನ್ನ ಅಂದಾಗ ಊಂ ಕಣಣ್ಣ ಅಂದ. ಆಯಿತು ಎಂದು ಕರೆ ಕಟ್ ಮಾಡಿದ. ಇವನೊಬ್ಬನನ್ನು ಕೇಳಿದರೆ ಹೇಗೆ ಬಾಸ್ ಮದ್ರಾಮಣ್ಣನವರನ್ನು ಕೇಳುತ್ತೇನೆ ಎಂದು ಅವರಿಗೆ ಕಾಲ್ ಮಾಡಿದ… ಆ ಕಡೆಯಿಂದ ಏಳಪಾ ಗುಮೀರಾ ಅಂದಾಗ ಏನಿಲ್ಲ ಸಾಮಿ… ಅದೇನೋ ಅಲೆಕ್ಸಾ ತಗ ಅಂತಿದಾರೆ… ತಗಳ್ಳಾ? ಎಂದು ಕೇಳಿದ. ಅದಕ್ಕೆ ಏನದು ಅಲೆಕ್ಸಾ? ಅಂದಾಗ ಸಾಮಿ ಅದು ಆಡುತ್ತೆ.. ನಲಿಯುತ್ತೆ ಎಂದು ಹೇಳಿದ. ಅದಕ್ಕೆ ಮದ್ರಾಮಣ್ಣೋರು.. ಏಯ್ ಅದನ್ನೂ ನನ್ ಮೇಲೆ ಆಕೇಕಾನ? ಉಸಾರು ಕಣ್ರಪ್ಪ ನೀವು ಇಂತವೆಲ್ಲ ಮಾಡ್ತೀರಾ ಅದು ನನ್ನ ಮೇಲೆ ಬರುತ್ತೆ ಎಂದಾಗ.. ಅಂಗೇನಿಲ್ಲ ಸಾಮಿ, ಉಷಾರಾಗಿ ಹಾಡಸ್ತೇನೆ ಎಂದು ಹೇಳಿದ. ಮರುದಿನವೇ ಮಾರುಕಟ್ಟೆಗೆ ಹೋದ. ತಿಗಡೇಸಿಯ ಅಂಗಡಿಗೆ ಹೋಗಿ ಅಲೆಕ್ಸಾ ಇದೆಯಾ ಅಂದಾಗ… ಓಗಣ್ಣೋ ಗುಮೀರಾ ಇನ ಬುಟ್ಟಿಲ್ಲವೇನು? ಅದ್ಯಾಕೆ ನನ್ನ ಕಡೆ ಇರುತ್ತೆ ಓಗ್ ಓಗ್ ಎಂದು ಕಳುಹಿಸಿದ ಅಲಾ ಇವ್ನ ಇಲ್ಲ ಅಂದರೆ ಇಲ್ಲ ಅನ್ನಬೇಕು ಇವನೇನು ಅಂದು ಅಲ್ಲಿ ಕೇಳಿದ. ಅಲ್ಲಿಯೂ ಇಲ್ಲಿಲ್ಲ ಅಂಥದ್ದೇನಿಲ್ಲ ಅಂದ. ಕನ್ನಾಳ್ಮಲ್ಲನ ಅಂಗಡಿಗೆ ಹೋಗಿ ಅಲೆಕ್ಸಾ ಕೊಡಿ ಅಂದಾಗ. ಓಯ್ ನಿಂಗೆ ಜಗಳ ಸಿಕ್ಕಿಲ್ವ? ಅಲೆಕ್ಸಾ ನನ್ನ ಕಡೆ ಯಾಕೆ ಇರ್ತಾಳೆ ನಡಿ ಅತ್ಲಾಗೆ ಎಂದು ಕಳುಹಿಸಿದ. ಹೀಗೆ ಸುಮಾರು ಏಳೆಂಟು ಅಂಗಡಿಗಳನ್ನು ಸುತ್ತಾಡಿದರೂ ಅಲೆಕ್ಸಾ ಸಿಗಲೇ ಇಲ್ಲ. ಯಾಕೆಂದರೆ ಮದ್ರಾಮಣ್ಣೋರು… ನೋಡು ಇಂಗಿಂಗೆ ಗುಮೀರಾ ಅಲೆಕ್ಸಾಳನ್ನು ಉಡಿಕ್ಯಂಡು ಬತ್ತಾನೆ… ಕೊನೆಗೆ ಅದು ನನ್ನ ಮೇಲೆ ಬರ್ತದೆ. ಆದ್ದರಿಂದ ಅವನು ಬಂದರೆ ಯಾರೂ ಕೊಡಬೇಡಿ ಎಂದು ಸ್ಟ್ರಿಕ್ಟ್ ಫಾರ್ಮಾನು ಹೊರಡಿಸಿದ್ದರು.