ಅಲೆಗಳಿಗೆ ಸವಾಲೊಡ್ಡುವ ಪ್ರಾಪ್ತಿ
ಮಂಗಳೂರು: ಪುರುಷನಿಗೆ ಮಹಿಳೆ ಸಮಾನ. ಅವಕಾಶ ದೊರೆತರೆ ಸಾಧಿಸಿ ತೋರಿಸುತ್ತೇವೆ ಎಂಬ ಛಲ ಮಹಿಳೆಯರಲ್ಲಿದೆ. ಅಬ್ಬರದ ಅಲೆಗಳನ್ನು ಎದುರಿಸಿ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವುದು ಒಂದು ಸವಾಲು. ಜೀವದ ಹಂಗು ತೊರೆದು ಮೀನು ಬೇಟೆ ನಡೆಸುವುದು ಸುಲಭವಲ್ಲ. ಇಂತಹ ಸವಾಲಿನ ಕೆಲಸವನ್ನು ಮಂಗಳೂರಿನ ಯುವತಿಯೊಬ್ಬರು ಮಾಡುತ್ತಿದ್ದಾರೆ.
ಸ್ನಾತಕೊತ್ತರ ಪದವೀಧರೆಯಾದರೂ ಯಾವುದೇ ಹಮ್ಮು ಬಿಮ್ಮಿಲ್ಲದೆ ತಂದೆಯ ಜೊತೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದು, ಮೀನುಗಾರಿಕೆಗೆ ತೆರಳುವ ಮೊದಲ ಯುವತಿಯಾಗಿದ್ದಾಳೆ.
ಈಕೆ ಹೆಸರು ಪ್ರಾಪ್ತಿ ಮೆಂಡನ್, ಸ್ನಾತಕೋತ್ತರ ಪದವೀಧರೆ/ಮಂಗಳೂರಿನ ಮತ್ಸ್ಯೋದ್ಯಮಿ ಕ್ಯಾಪ್ಟನ್ ಜಯಪ್ರಕಾಶ್ ಮೆಂಡನ್ ಹಾಗೂ ಕಲಾವತಿ ದಂಪತಿಯ ಪುತ್ರಿಯಾಗಿರುವ ಪ್ರಾಪ್ತಿ, ಮಂಗಳೂರು ಫಿಶರೀಸ್ ಕಾಲೇಜಿನಲ್ಲಿ ಫಿಶರೀಸ್ ಪದವಿ ಪಡೆದಿದ್ದಾರೆ. ಸದ್ಯ ಫಿಶರೀಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಫೈನಲ್ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ. ಸಮುದ್ರದ ಅಲೆ ಎದುರಿಸಿ ಮುನ್ನುಗುವ ಸಾಹಸ ಬೆಳೆಸಿಕೊಂಡಿರುವ ಪ್ರಾಪ್ತಿ, ಮುಂಜಾನೆ ೪ ಗಂಟೆಗೆ ತಂದೆಯೊಂದಿಗೆ ದೋಣಿ ಏರಿ ಮೀನುಗಾರಿಕೆಗೆ ನಡೆಸುತ್ತಾರೆ. ಈಕೆ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಮೊದಲ ಯುವತಿಯಾಗಿದ್ದು, ಮಳೆಗಾಲದ ಅಪಾಯಕಾರಿ ಮೀನುಗಾರಿಕೆಯಲ್ಲೂ ಬೆಂಗ್ರೆಯ ಮೊಗವೀರ ಸಮಾಜದ ಯುವತಿ ಪ್ರಾಪ್ತಿ ಸೈ ಎನಿಸಿಕೊಂಡಿದ್ದಾರೆ. ಮೀನುಗಾರಿಕೆ ಕಾಲೇಜಿನಲ್ಲಿ ಪ್ರಾಧ್ಯಾಪಕರೂ ಆಗಿರುವ ತನ್ನ ತಂದೆ ಕ್ಯಾಪ್ಟನ್ ಜಯಪ್ರಕಾಶ್ ಮೆಂಡನ್ ಪ್ರೋತ್ಸಾಹದಿಂದ ಪ್ರಾಪ್ತಿ ೧೪ನೇ ವಯಸ್ಸಿನಿಂದ ಮೀನುಗಾರಿಕೆಗೆ ತೆರಳುತ್ತಾ ಬಂದಿದ್ದಾರೆ. ತಂದೆಯ ಮಾಲೀಕತ್ವದ ‘ಜೈ ವಿಕ್ರಾಂತ್ ಬೆಂಗ್ರೆ’ ರಾಣಿ ಬಲೆ ತಂಡದ ಜತೆಗೆ ಪ್ರಾಪ್ತಿ ಮೀನುಗಾರಿಕೆಗೆ ತೆರಳುತ್ತಿದ್ದಾರೆ. ಹತ್ತು ವರ್ಷದಿಂದ ಮೀನುಗಾರಿಕೆಗೆ ತೆರಳುತ್ತಿರುವ ಪ್ರಾಪ್ತಿ, ಮಹಿಳೆ ಸಮುದ್ರಕ್ಕೆ ಹೋಗಲು ಹಿಂಜರಿಕೆ ಬೇಡ. ಪ್ರೋತ್ಸಾಹ ಇದ್ದರೆ ಎಲ್ಲವೂ ಸಾಧ್ಯ ಎಂದು ಹೇಳುತ್ತಾರೆ. ಸಮುದ್ರದ ಅಲೆಗಳಿಗೆ ಹೆದರದೆ ಮಹಿಳೆಯೂ ಕೂಡ ಮೀನುಗಾರಿಕೆ ನಡೆಸಬಹುದು ಎಂದು ತೋರಿಸಿಕೊಟ್ಟಿರುವ ಪ್ರಾಪ್ತಿ ಮಹಿಳೆಯರೂ ಪುರುಷರಂತೆ ಎಲ್ಲಾ ಕ್ಷೇತ್ರಗಳಲ್ಲೂ ದುಡಿಯಲು ಸಿದ್ಧ ಎಂಬುದಕ್ಕೊಂದು ನಿದರ್ಶನ.