ಅಲ್ಪಸಂಖ್ಯಾತರ ಕಣ್ಣೊರೆಸುವ ತಂತ್ರವಷ್ಟೇ
ಹುಬ್ಬಳ್ಳಿ: ಹಳೆಹುಬ್ಬಳ್ಳಿ ಗಲಭೆಗೆ ಸಂಬಂಧಪಟ್ಟ ಪ್ರಕರಣಗಳನ್ನು ವಾಪಸ್ ಪಡೆಯುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವು ಅಲ್ಪಸಂಖ್ಯಾತರ ಕಣ್ಣೊರೆಸುವ ತಂತ್ರ ಅಷ್ಟೇ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿವಾರ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಹೇಳಿಕೆ ನೀಡಿದ್ದಾರೆ. ಕೋರ್ಟ್ ಒಪ್ಪಿಗೆ ಕೊಟ್ಟರೆ ಮಾತ್ರ ಪ್ರಕರಣ ಹಿಂದಕ್ಕೆ ಪಡೆಯಲು ಬರುತ್ತದೆಯಂತೆ. ಕೋರ್ಟ್ ಇಂತಹ ಪ್ರಕರಣಗಳಲ್ಲಿ ಯಾವತ್ತೂ ಹಿಂದಕ್ಕೆ ಪಡೆಯಲು ಅವಕಾಶ ಕೊಡುವುದಿಲ್ಲ. ಸ್ವತಃ ವಕೀಲರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಲ್ಲವೂ ಗೊತ್ತಿರುವ ವಿಚಾರವೇ. ಆದಾಗ್ಯೂ ಅಲ್ಪಸಂಖ್ಯಾತರ ಒಲೈಕೆಗಾಗಿ ಮತ್ತು ಅವರನ್ನು ದಿಕ್ಕು ತಪ್ಪಿಸಲು ಪ್ರಕರಣ ವಾಪಸ್ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂದು ಟೀಕಿಸಿದರು.
ಇದೊಂದು ಗಂಭೀರ ಪ್ರಕರಣ. ಕಾನೂನು ಮತ್ತು ಗೃಹ ಇಲಾಖೆ ಅಭಿಪ್ರಾಯ ಪ್ರಕರಣ ವಾಪಸ್ ಪಡೆಯುವುದಕ್ಕೆ ವಿರುದ್ಧವಾಗಿಯೇ ಇರುತ್ತದೆ. ಅದನ್ನು ಮೀರಿ ಸಚಿವ ಸಂಪುಟದ ಉಪಸಮಿತಿ, ಸಚಿವ ಸಂಪುಟ ಪ್ರಕರಣ ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.