For the best experience, open
https://m.samyuktakarnataka.in
on your mobile browser.

ಅವನ ವಿಸ್ಮರಣೆಯಿಂದ ಕಳೆದುಹೋಗದಿರಲಿ…

05:00 AM Sep 17, 2024 IST | Samyukta Karnataka
ಅವನ ವಿಸ್ಮರಣೆಯಿಂದ ಕಳೆದುಹೋಗದಿರಲಿ…

ಸತತ ಭಗವಂತನ ಸ್ಮರಣೆ ಬಹಳ ಮುಖ್ಯ. ಅವನ ಸ್ಮರಣೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು. ಈ ನಿರಂತರತೆಯಿಂದಲೇ ದುರ್ಲಭ ವಾದುದು ಸುಲಭವಾಗುತ್ತದೆ. ಭಕ್ತರು ಈ ನಿರಂತರತೆಯನ್ನು ಎಷ್ಟು ಬೆಳೆಸಿಕೊಂಡಿರುತ್ತಾರೆಂದರೆ ಒಂದು ಕ್ಷಣ ಭಗವಂತನ ವಿಸ್ಮರಣೆಯಾಯಿತೆಂದರೆ ದೊಡ್ಡ ಸಂಪತ್ತು ಕಳೆದು ಹೋದಂತೆ ಅವರಿಗೆ ಅನುಭವ ಆಗುತ್ತದೆ.
ಭಗವದ್ಗೀತೆಯ ಎಂಟನೇ ಅಧ್ಯಾಯದಲ್ಲಿ ಯೋಗಿಗಳು ಶರೀರವನ್ನು ತ್ಯಜಿಸಿ, ಊರ್ಧ್ವಗತಿಯ ಮೂಲಕ ಪರಮಾತ್ಮನನ್ನು ಪಡೆಯುವ ಕ್ರಮವನ್ನು ತಿಳಿಸಿದ್ದಾರೆ. ಆ ಕ್ರಮದಂತೆ ಮರಣ ಪ್ರಕ್ರಿಯೆಯಾಗಲು ತುಂಬಾ ದೃಢವಾದ ಸಾಧನೆ ಬೇಕು. ಆದುದರಿಂದ ಸುಲಭವಾದ ಉಪಾಯವನ್ನು ಅಲ್ಲಿಯೇ ಮುಂದೆ ಭಗವಂತನೇ ಕೊಟ್ಟಿದ್ದಾನೆ.
ಅನನ್ಯ ಚೇತಾಃ ಸತತಂ ಯೋಮಾಂ ಸ್ಮರತಿ ನಿತ್ಯಶಃ | ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ ||' ಬೇರೆ ವಿಷಯಗಳಿಗೆ ಮನಸ್ಸು ಕೊಡದೆ ಸತತ ಅವನ ಸ್ಮರಣೆಯಲ್ಲಿ ನಿಂತಿರುವವನಿಗೆ ಅವನು ಸುಲಭ. ಅಂದರೆ ಪ್ರಾಣಾಯಾಮಾದಿ ಸಾಧನೆಗಳಿಂದ ಬ್ರಹ್ಮನಾಡಿಯ ಮೂಲಕ ಶರೀರವನ್ನು ತ್ಯಜಿಸಿ ಕ್ರಮೇಣ ಪರಮಾತ್ಮನನ್ನು ತಲುಪುವ ಸಾಮರ್ಥ್ಯ ಸತತ ಸ್ಮರಣೆಯಿಂದಲೇ ಬರುತ್ತದೆ. ಮೈ ಮರೆಯುವಂತೆ, ಸುತ್ತಲಿನ ಪ್ರಪಂಚವನ್ನು ಮರೆತು ಹೋಗುವಂತೆ, ದೀರ್ಘಕಾಲ ನಿರಂತರ ಶ್ರದ್ಧಾ - ಭಕ್ತಿಯಿಂದ ಅವನ ಸ್ಮರಣೆ ಸಾಧ್ಯವಾಗಬೇಕು. ಭಗವಂತನಲ್ಲಿ ಹಾರ್ದಿಕ ಪ್ರೀತಿಯುಳ್ಳ ಭಕ್ತರು ಅವನ ಒಂದು ಕ್ಷಣದ ವಿಸ್ಮರಣೆಯನ್ನು ಕೂಡ ಸಹಿಸಿಕೊಳ್ಳುವುದಿಲ್ಲ. ಇದು ಭಗವಂತನಲ್ಲಿ ಅವರಿಗಿರುವ ಭಕ್ತಿಯ ದೃಢತೆಯನ್ನು ಸೂಚಿಸುತ್ತದೆ.ಸ ಹಾನಿಸ್ತನ್ಮಹ ಚ್ಛಿದ್ರಂ ಸ ಮೋಹಃ ಸ ಚ ವಿಭ್ರಮಃ | ಯನ್ಮುಹೂರ್ತಂ ಕ್ಷಣಂ ವಾಪಿ ವಾಸುದೇವೋ ನ ಚಿಂತ್ಯತೇ ||' ಒಂದು ಮುಹೂರ್ತ ಅಥವಾ ಒಂದು ಕ್ಷಣದಷ್ಟು ಕಾಲ ವಾಸುದೇವನ ಸ್ಮರಣೆ ಬಿಟ್ಟು ಹೋದರೆ ಅದೇ ದೊಡ್ಡ ಹಾನಿ, ಅದೇ ದೊಡ್ಡ ಲೋಪ, ಅದೇ ಅವಿವೇಕ, ಅದೇ ದೊಡ್ಡ ಭ್ರಾಂತಿ. ಅಂತಹ ಭಕ್ತರು ಭಗವಂತನ ವಿಸ್ಮರಣೆಯಿಂದ ಆದ ಶೂನ್ಯತೆಯನ್ನು ಹೀಗೆ ಅನುಭವಿಸುತ್ತಾರೆ.
ಯಾಕೆ ಅವನ ಸ್ಮರಣೆಯ ನಿರಂತರತೆಗೆ ಇಷ್ಟೊಂದು ಮಹತ್ವ? ನಮ್ಮ ಅಂತಃಕರಣದಲ್ಲಿ ಅನಾದಿಕಾಲದಿಂದ ಕೂಡಿಕೊಂಡು ಬಿದ್ದಿರುವ ವಾಸನೆಗಳನ್ನು ಕಳೆದುಕೊಂಡು ಭಗವಂತನ ಸಾನ್ನಿಧ್ಯವನ್ನು ಸೇರಲು ಇಷ್ಟು ನಿರಂತರತೆ ಬೇಕಾಗುತ್ತದೆ. ವಾಸನೆಗಳ ರಾಶಿ ಅಷ್ಟು ದೃಢವಾಗಿದೆ, ದೊಡ್ಡದಾಗಿದೆ. ಒಂದೊಂದು ಕ್ಷಣವನ್ನೂ ಆ ವಾಸನೆಗಳನ್ನು ತೊಳೆದುಕೊಳ್ಳಲು ವಿನಿಯೋಗಿಸಬೇಕಾಗಿದೆ. ಹೀಗೆ ತೊಳೆದುಕೊಳ್ಳಲು ಹಿಂದೆ ಬಿದ್ದಷ್ಟು ಅವನ ಸಾನ್ನಿಧ್ಯದ ಪ್ರಾಪ್ತಿಯು ದೂರವಾಗುತ್ತ ಹೋಗುತ್ತದೆ. ವಿದ್ಯೆಯನ್ನು ಕಲಿಯಲೇ ಬೇಕೆಂಬ ತೀವ್ರ ಆಸಕ್ತಿಯ ವಿದ್ಯಾರ್ಥಿಗೆ ಒಂದು ಕ್ಷಣವನ್ನೂ ಹಾಳು ಮಾಡುವ ಇಷ್ಟ ಇರುವುದಿಲ್ಲ. ಹಣ ಗಳಿಸಬೇಕೆಂಬ ತೀವ್ರ ಹಪಹಪಿಕೆಯುಳ್ಳ ಉದ್ಯೋಗಿಗೆ ಒಂದೊಂದು ಕ್ಷಣವೂ ಅಮೂಲ್ಯ. ಹಾಗೆಯೇ ಭಗವಂತನ ಸಾನ್ನಿಧ್ಯವನ್ನು ಪಡೆಯಬೇಕೆಂಬ ತೀವ್ರ ಹಂಬಲವುಳ್ಳವನಿಗೆ ಒಂದೊಂದು ಕ್ಷಣವು ಬಹಳ ಮುಖ್ಯ.