For the best experience, open
https://m.samyuktakarnataka.in
on your mobile browser.

ನಿಮ್ಮ ಇತಿಮಿತಿಗಳನ್ನು ಅರಿತಾಗ…

04:30 AM Nov 23, 2024 IST | Samyukta Karnataka
ನಿಮ್ಮ ಇತಿಮಿತಿಗಳನ್ನು ಅರಿತಾಗ…

ನೀವು ದುಃಖಿಗಳಾದಾಗ, ಅಸಂತುಷ್ಟರಾಗಿದ್ದಾಗ ಅಥವಾ ಗೊಂದಲದಲ್ಲಿದ್ದಾಗ ನಿಮ್ಮ ಗಡಿಯನ್ನು ನೀವು ತಲುಪಿರುತ್ತೀರಿ.
ಆಗೇನು ಮಾಡುವುದು? ಅಂತಹ ಸಮಯಗಳಲ್ಲಿ ನೀವು ಕೃತಜ್ಞರಾದರೆ, ಓಹ್! ಇದು ನನ್ನ ಸೀಮಿತತೆಯನ್ನು ಸೂಚಿಸುತ್ತಿದೆ. ನನ್ನ ಗಡಿಗಳ ಸಂಪರ್ಕ ಉಂಟಾಯಿತಷ್ಟೆ ಎಂದರೆ, ಆಗ ಇಡೀ ಪರಿಸ್ಥಿತಿಯನ್ನು ಒಂದು ಪ್ರಾರ್ಥನೆಯ ಸ್ಥಿತಿಗೆ ಮಾರ್ಪಡಿಸಬಹುದು. ಶಾಂತಿಯಿರಲಿ. ಕೇವಲ ನನ್ನಲ್ಲಿ ಮಾತ್ರವಲ್ಲ, ಎಲ್ಲರಲ್ಲೂ ಶಾಂತಿಯಿರಲಿ' ಎಂದು ಪ್ರಾರ್ಥಿಸುವುದು. ನಿಮ್ಮ ಇತಿಮಿತಿಗಳ ಸಂಪರ್ಕಕ್ಕೆ ಬಂದಾಗ ಪ್ರಾರ್ಥನೆಯ ಕ್ಷಣಗಳುಂಟಾಗುತ್ತವೆ. ನಿಮ್ಮ ಇತಿಮಿತಿಗಳು ಮತ್ತು ಗಡಿಗಳು ನಿಮ್ಮ ಗೊಂದಲಗಳ ನಿಜವಾದ ಕಾರಣಗಳು. ಅವುಗಳ ಸಂಪರ್ಕಕ್ಕೆ ಬರದೆ ಇರುವ ತನಕ ನೀವು ಶಾಂತವಾಗಿರುತ್ತೀರಿ, ಸಂತೋಷವಾಗಿರುತ್ತೀರಿ, ಖುಷಿಯಾಗಿರುತ್ತೀರಿ. ಅವುಗಳ ಸಂಪರ್ಕಕ್ಕೆ ಬಂದೊಡನೆಯೇ ಮನಸ್ಸು ಪ್ರಾರಂಭಿಸಿಬಿಡುತ್ತದೆ. ಓಹ್! ಆ ವ್ಯಕ್ತಿ ಹೀಗೆ ಮಾಡಿದರು, ಇವರು ಹಾಗೆ ಮಾಡಿದರು. ಇದು ಕೆಟ್ಟದ್ದು. ಅದು ಹಾಗಿರಬಾರದು. ವಿಷಯ ಹೀಗಿರಬೇಕು. ಈ ರೀತಿಯಾಗಿ ಇರಲೇಬಾರದು....." ಇಂತಹ ಕ್ಷಣಗಳಲ್ಲಿ ನೀವೇನು ಮಾಡಬಲ್ಲಿರಿ?ಭಗವಂತ. ನನ್ನ ಇತಿಮಿತಿಗಳ ನೆನಪನ್ನು ನೀನು ಮಾಡಿಕೊಟ್ಟೆ. ಈಗ ನೀನೇ ನನಗೆ ಶಾಂತಿಯನ್ನು ತಂದುಕೊಡು. ಇದನ್ನು ನೀನೇ ಮಾಡು. ಇವೆಲ್ಲವನ್ನೂ ನಿನಗೇ ಕೊಟ್ಟು ಬಿಡುತ್ತೇನೆ' ಎಂದು ಹೇಳಿಬಿಡಿ. ಆ ಕ್ಷಣವೇ ಮತ್ತೆ ಮುಗುಳ್ನಗುತ್ತೀರಿ. ಎಂತಹ ಬಿಡುಗಡೆಯ ಅನುಭವ ಸಿಗುತ್ತದೆ! ವಿಷಯಗಳು ಎಷ್ಟೇ ಹದಗೆಟ್ಟಿದ್ದರೂ ಅದರಲ್ಲಿ ನಡೆಯುತ್ತೀರಿ, ಹೊರಬಂದು, ಹಾಡಿ, ನರ್ತಿಸುತ್ತೀರಿ. ಇದೇ ಪ್ರೇಮ!
ಹಿಂದಿಯಲ್ಲಿ ಪ್ರೇಮವನ್ನು ಎರಡೂವರೆ ಅಕ್ಷರಗಳುಳ್ಳ ಪದ ಎನ್ನುತ್ತಾರೆ. `ನಿಜವಾದ ಬುದ್ಧಿವಂತರು ಯಾರು? ಪಂಡಿತರು ಯಾರು? ಬಹಳ ದೊಡ್ಡ ಗ್ರಂಥಗಳನ್ನು ಓದಿರುವವರಲ್ಲ. ಕೇವಲ ಎರಡೂವರೆ ಅಕ್ಷರಗಳುಳ್ಳ ಆ ಪದವನ್ನು ಪೂರ್ಣವಾಗಿ ತಿಳಿದುಕೊಂಡವರೇ ಬುದ್ಧಿವಂತರು!' ಎಂದು ಉತ್ತರ ಭಾರತದಲ್ಲಿ ಹೇಳುತ್ತಾರೆ. ಆ ಎರಡೂವರೆ ಅಕ್ಷರಗಳ ಪದವೇ ವರ್ತಮಾನದ ಕ್ಷಣ; ಅದುವೇ ವರ್ತಮಾನ ಕ್ಷಣದ ಪರೀಕ್ಷೆ.
ನಿಮ್ಮ ಇತಿಮಿತಿಗಳ, ಗಡಿಗಳ ಸಂಪರ್ಕಕ್ಕೆ ಬಂದಾಗ, ಸಣ್ಣ ಪುಟ್ಟ ವಿಷಯಗಳು ನಿಮ್ಮನ್ನು ಪೀಡಿಸಿದಾಗ ಗಮನಿಸಿ…. ನಿಮ್ಮ ಗಡಿಗಳು ನಿಮ್ಮನ್ನು ಬಂಧಿಸಿಬಿಟ್ಟಿದೆಯೆ? ಅಥವಾ ಏನೇ ಆದರೂ ನಿಮ್ಮ ಹೃದಯದೊಳಗೆ ಮುಗ್ಧ ಪ್ರೇಮವನ್ನು, ತೀರ್ಪುರಹಿತವಾದ ಧೋರಣೆಯನ್ನು ನಿಮ್ಮ ಸ್ವಾತಂತ್ರ‍್ಯವನ್ನು ಕಾಯ್ದುಕೊಳ್ಳಬಲ್ಲಿರೆ? ಮತ್ತು ಇದು ಮುಂದುವರಿಯುತ್ತಿದೆಯೆ? ಎರಡನೆಯ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದರೆ ಮತ್ತು ಈ ಗುಣಗಳನ್ನು ನಿಮ್ಮಲ್ಲಿ ಮತ್ತಷ್ಟು ಘನವಾಗಿಸಬಲ್ಲಿರಾದರೆ ನೀವು ಅತೀ ಅದೃಷ್ಟವಂತರು. ಏನೇ ಆಗಲಿ ನಿಮ್ಮ ಶಾಂತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ!