ಅವರಿಗೂ ಬಂತಂತೆ ಪ್ರಶಸ್ತಿ….
ಈಬಾರಿ ಲೊಂಡೆನುಮನಿಗೆ ಪ್ರಶಸ್ತಿ ಗ್ಯಾರಂಟಿ ಎಂಬ ಸುದ್ದಿ ಅಡ್ವಾನ್ಸ್ ಆಗಿ ಹತ್ತು ಹರದಾರಿವರೆಗೆ ಹಬ್ಬಿತ್ತು. ಇರಪಾಪುರ-ಹೊಸಗುಡ್ಡ, ವರ್ನಖ್ಯಾಡೆ, ಲಾದುಂಚಿ ಮಂದಿಯೆಲ್ಲ ಆಕಾಶಮಲ್ಲಿಗೆ ಹೂವಿನಿಂದ ಗುಚ್ಚ ಕಟ್ಟಿಕೊಂಡು ಬಂದು ಆತನಿಗೆ ಕೊಟ್ಟರು. ಲಾದುಂಚಿ ರಾಜನಂತೂ ಹಿಂದೆ ತನಗೆ ಹಿರೇಆಟದಲ್ಲಿ ಹಾಕಿದ್ದ ಶಾಲನ್ನೇ ತೆಗೆದುಕೊಂಡು ಬಂದು ಲೊಂಡೆನುಮನಿಗೆ ಹೊದೆಸಿ ಸನ್ಮಾನ ಮಾಡಿ ಮೊಬೈಲ್‌ನಲ್ಲಿ ಫೋಟೊ ತೆಗೆಸಿಕೊಂಡು ಹೋಗಿದ್ದ. ಲೊಂಡೆನುಮ ಅಭಿನಂದನೆಗಳು ಎಂದು ಕರಿಭಾಗೀರತಿ ಗೋಡೆಯ ಮೇಲೆ ಇಜ್ಜಲಿನಿಂದ ಬರೆಯಲಾಗಿತ್ತು. ಶಾಲೆಗಳ ಶಿಕ್ಷಕರು ಮಾಡಿದರೆ ಲೊಂಡೆನುಮನ ಹಾಗೆ ಸಾಧನೆ ಮಾಡಬೇಕು ಎಂದು ಹೇಳಿ ಹೊಗಳಿದ್ದರು. ಇನ್ನೂ ಲಿಸ್ಟ್ ಆಗಿಲ್ಲ ಈಗಲೇ ಅವನಿಗೆ ಹೇಗೆ ಗೊತ್ತಾಯಿತು? ಎಂದು ತಿಗಡೇಸಿ ಪ್ರಶ್ನೆ ಮಾಡಿದ್ದ. ನಿಂದು ಬರೀ ನೆಗೆಟಿವ್ವೇ ಆಯಿತು ಸುಮ್ಮನಿರು ಎಂದು ಎಲ್ಲರೂ ಬೈದು ಸುಮ್ಮನೇ ಕೂಡಿಸಿದ್ದರು. ಮೊದಲೇ ಇದು ಮದ್ರಾಮಣ್ಣನ ಸರ್ಕಾರ. ಕೊನೆವರೆಗೆ ಏನು ಆಗುತ್ತದೋ ನೋಡೊಣ ಎಂದು ಸಮಾಧಾನಪಟ್ಟುಕೊಂಡಿದ್ದ. ಪ್ರತಿದಿನ ಲೊಂಡೆನುಮನ ಮನೆಗೆ ಬರು ಹೋಗುವವರ ಸಂಖ್ಯೆ ಹೆಚ್ಚಾಯಿತು. ಆಡಿನ ಲಚುಮವ್ವನ ಮಗ ಯಮನೂರಿಯಂತೂ ಭಯಂಕರ ಖುಷಿಯಾಗಿ ಗೆಳೆಯರಿಗೆ ಮಂಡಾಳೊಗ್ಗಣ್ಣಿ ಮಿರ್ಚಿ ತಿನಿಸಿದ್ದ. ಲೊಂಡೆನುಮನಿಗೆ ವಿಶ್ ಮಾಡಲು ಬರುವವರೆಲ್ಲ ಯಾವಾಗ ಸ್ವೀಟು ಎಂದು ಕೇಳತೊಡಗಿದ್ದರು. ಯಾರಿಗೂ ಒಂದು ಮಾತು ಕೇಳದ ಮುದಿಗೋವಿಂದಪ್ಪ ಅವತ್ತು ಲೊಂಡೆನುಮ ನೀನು ಜೆಲ್ಸಾ ಕೊಡಬೇಕು ಎಂದು ಕೇಳಿದ. ಶೇಷಮ್ಮನ ಹೊಟೆಲ್‌ಗೆ ಹೋಗಿ ನೋಡವ ನನಗೆ ಪ್ರಶಸ್ತಿ ಬಂದಿದೆ. ಎಲ್ಲರಿಗೂ ಒಗ್ಗಣ್ಣಿ ಪಾರ್ಟಿ ಕೊಡಬೇಕು ಹಾಗಾಗಿ ಅವತ್ತು ಮಂಡಾಳೊಗ್ಗಣ್ಣಿ ಚಹ ಮಾಡು ನಿನಗೆ ನಾನು ಪ್ರಶಸ್ತಿ, ಹಣ ಬಂದಕೂಡಲೇ ವಾಪಸ್ ಮಾಡುತ್ತೇನೆ ಎಂದು ಹೇಳಿದಳು. ಆಕೆ ಎಸ್ ಅಂದಳು. ಎರಡು ದಿನಗಳಾದ ಮೇಲೆ ಎಲ್ಲರನ್ನೂ ಕರೆದು ಒಗ್ಗಣ್ಣಿ ಪಾರ್ಟಿಕೊಟ್ಟ. ಎಲ್ಲರೂ ತಿಂದು ವರ‍್ಹೆ ವ್ಹಾ ಅಂದು ಮತ್ತೊಮ್ಮೆ ವಿಶ್ ಮಾಡಿ ಹೋದರು. ಪ್ರಶಸ್ತಿ ಲಿಸ್ಟ್ ಇವತ್ತು ಅಥವಾ ನಾಳೆ ಅನೌನ್ಸ್ ಆಗುತ್ತೆ ಎಂದು ತಿಗಡೇಸಿ ಹೇಳಿದ್ದ. ಅವತ್ತು ಎಲ್ಲರೂ ಕಾಯುತ್ತಿದ್ದರು. ಮಧ್ಯಾಹ್ನದ ಹೊತ್ತು ಲಿಸ್ಟ್ ಬಂತು ಎಂಬ ಸುದ್ದಿ ಹರಿದಾಡತೊಡಗಿತ್ತು. ಅವರಿವರಿಗೆ ಹೇಳಿ ಲಿಸ್ಟ್ ತರಿಸಿಕೊಂಡು ನೋಡಿದಾಗ ಲೊಂಡೆನುಮನ ಹೆಸರು ಇರಲಿಲ್ಲ. ಶೇಷಮ್ಮ ನನ್ನ ಉದ್ರಿಹಣ ಕೊಡು ಎಂದು ಗಂಟುಬಿದ್ದಳು.