For the best experience, open
https://m.samyuktakarnataka.in
on your mobile browser.

ಅವೈಜ್ಞಾನಿಕ ಅಭಿವೃದ್ಧಿ-ಪ್ರಕೃತಿಗೆ ನೇಣಿನ ಕುಣಿಕೆ

06:20 AM Jul 18, 2024 IST | Samyukta Karnataka
ಅವೈಜ್ಞಾನಿಕ ಅಭಿವೃದ್ಧಿ ಪ್ರಕೃತಿಗೆ ನೇಣಿನ ಕುಣಿಕೆ

ಈಗ ಮಳೆ, ಭೂಕುಸಿತ, ಅವಘಡ, ಅವಾಂತರದ ಕಾಲ. ಮಂಗಳವಾರ ಒಂದೇ ದಿನ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಕಡೆ ಭೂ ಕುಸಿತ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೊಂದೇ ಎಂಟು ಕಡೆ ಭೂಮಿ, ಗುಡ್ಡ ಬಿರುಕು ಬಿಟ್ಟು ಅನಾಮತ್ತಾಗಿ ಕುಸಿದು ಬಿದ್ದಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಶಿವಮೊಗ್ಗ ಮಲೆನಾಡು ಭಾಗದ ಬಹುತೇಕ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಎಂಟರಿಂದ ಮೂವತ್ತು ಗಂಟೆಗಳ ಕಾಲ ಸ್ಥಗಿತಗೊಂಡಿದ್ದವು.
ಭೂಮಿ ಸಡಿಲಗೊಂಡಿತೇ? ಶತಮಾನಗಳ ಅಲ್ಲ, ಸಹಸ್ರಮಾನಗಳಿಂದ ಗಟ್ಟಿಯಾಗಿ ಬಿಗಿದಪ್ಪಿಕೊಂಡಿದ್ದ ಭೂಮಿ, ಗುಡ್ಡ ತನ್ನ ಹಿಡಿತವನ್ನು ಬಿಟ್ಟು ಈ ಮಳೆಗೆ ಸಡಿಲಗೊಂಡಿತೆ?
ಈ ವರ್ಷದ ಮಳೆಗಾಲ ಆರಂಭವಾದಗಿದಿನಿಂದ ರಾಜ್ಯದಲ್ಲೊಂದೇ ಆರವತ್ತಕ್ಕೂ ಹೆಚ್ಚು ಸಾವು ಸಂಭವಿಸಿರಬಹುದು. ನೂರಾರು ಮಂದಿ ಸಂತ್ರಸ್ತರಾಗಿದ್ದಾರೆ.
ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಂಘರ್ಷ ಎನ್ನೋಣವೇ? ಪ್ರಕೃತಿಯ ರಚನೆ, ಸಮತೋಲನ ಗೊತ್ತಿಲ್ಲದ ಅಜ್ಞಾನದ ಪರಿಣಾಮವೇ? ಅಭಿವೃದ್ಧಿಯ ಅವೈಜ್ಞಾನಿಕತೆಯೇ? ಅಥವಾ ಭ್ರಷ್ಟ ವ್ಯವಸ್ಥೆಯ ಕರಾಳ ರೂಪವೇ?
ಎಲ್ಲವೂ ಆದೀತು.
ಹಾಗೆಯೇ, ಅಭಿವದ್ಧಿ ಯಾರಿಗೆ? ಯಾರಿಗಾಗಿ ಅಭಿವೃದ್ಧಿ? ಯಾರ ಅಭಿವೃದ್ಧಿ…? ಈ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ
ಕೊಡಗು ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆ ಸಂಭವಿಸಿದ ಮಹಾನ್ ಪ್ರಪಾತ ಎಲ್ಲರನ್ನೂ ಆಘಾತಗೊಳಿಸಿತ್ತು. ಅಲ್ಲಿ ಮನೆ, ತೋಟ, ದನಕರುಗಳಿದ್ದವೆಂಬ ಕುರುಹು ಕಾಣದಷ್ಟು ಇಡೀ ಕೊಡಗು ಜಿಲ್ಲೆ ಸರ್ವನಾಶವಾಗಿತ್ತು. ಅಲ್ಲಿಯ ಗುಡ್ಡಗಳು ಎಲ್ಲವನ್ನೂ ಆಪೋಷಣ ಪಡೆದಿದ್ದವು.
೨೦೨೧ರಲ್ಲಿ ಉತ್ತರ ಕನ್ನಡವೂ ಸುರಕ್ಷಿತವಲ್ಲ ಎಂದು ಕಳಚೆ, ಗೇರುಸೊಪ್ಪ, ಬಂಡಲ, ದೇವಿಮನೆ, ಅರಬೈಲುಗಳಲ್ಲಿ ಗುಡ್ಡ ಬಿರಿದು ಬಾಯ್ದೆರಾಗ ಗೊತ್ತಾಗಿತ್ತು. ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು, ಮೂಡಬಿದರೆ ಭಾಗದ ತೋಟ ಪಟ್ಟಿಗಳು, ಗುಡ್ಡದಂಚಿನ ಮನೆಗಳು ನೆಲಸಮವಾಗಿದ್ದವು.
ಈಗ ಸಂಭವಿಸಿರುವುದು ಹೆದ್ದಾರಿ ಮತ್ತು ಬೃಹತ್ ಯೋಜನೆಗಳ ಅಕ್ಕಪಕ್ಕ. ಹಾಗೂ ನಗರದ ಸಮೀಪ.
ಮಲೆನಾಡಿನ ಜನರಿಗೆ ಈ ಪ್ರಕೃತಿ ವರವೂ ಹೌದು. ಶಾಪವೂ ಹೌದು. ಮಡಿಲ ಮಕ್ಕಳಿಗೆ ಪ್ರಕೃತಿ ಎಲ್ಲವನ್ನೂ ಕೊಟ್ಟಿದೆ. ಆದರೆ ಸೌಲಭ್ಯ, ಅಭಿವೃದ್ಧಿಯ ಫಲ ಯಾವುವೂ ದೊರೆತಿಲ್ಲ.
ಹಾಗಂತ, ಜನರಿಗೆ ಸೌಲಭ್ಯ ದೊರೆಯದಿದ್ದರೂ, ಜನರಿಗಾಗಿ, ಜನರ ನೆಪದಲ್ಲಿ ಬೃಹತ್ ಯೋಜನೆಗಳನ್ನು ಅದೇ ಪರಿಸರವನ್ನು ನಾಶ ಮಾಡಿ, ಸಾಕಷ್ಟು ಬಗೆದು ವಿಕೃತಗೊಳಿಸಿ ಕೈಗೊಳ್ಳಲಾಗಿದೆ.
ಗುಜರಾತಿನ ಗಡಿಯಿಂದ ಕೇರಳದ ಅಂಚಿನವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಮಡಿಲಲ್ಲಿ ಈಗ ಬೃಹತ್ ಜಲಾಶಯಗಳು, ಉದ್ಯಮಗಳು, ನೂರಾರು ನಗರಗಳು, ಅಣುಸ್ಥಾವರದಂತಹ ಸದಾ ಬಾಂಬ್ ಉಂಡೆಗಳು, ರಕ್ಷಣೆಯ ನೆಪದಲ್ಲಿ ನಾಲ್ಕು ಡಿಫೆನ್ಸ್ ಪ್ರಾಜೆಕ್ಟ್ಗಳು, ಇವುಗಳೊಟ್ಟಿಗೆ ಹೆದ್ದಾರಿ, ಟೌನ್‌ಶಿಪ್, ವಿದ್ಯುತ್ ಜಾಲ ಈ ಏನೆಲ್ಲವೂ ಕಳೆದ ಆರವತ್ತು ವರ್ಷದಲ್ಲಿ ಒಡಿಲು ಬಗೆದ ಪರಿಣಾಮ ಈಗ ಪ್ರಶ್ನೆ ಎದ್ದಿರುವುದು ಭೂಮಿ ಸಡಿಲಾಯಿತೇ? ಎನ್ನುವುದು.
ಉತ್ತರ ಕನ್ನಡದ, ಮೊನ್ನೆ ನಡೆದ ದುರಂತ ಅವಲೋಕಿಸಿ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳಬೇಕು. ಅದು ಉತ್ತಮ ಮಟ್ಟದಲ್ಲಿ ಇರಬೇಕು. ವಾಹನಗಳ ಸಂಚಾರಕ್ಕೆ ಸುರಳಿತವಾಗಿರಬೇಕು ಎನ್ನುವ ಕಾರಣಕ್ಕೆ ಹತ್ತು ವರ್ಷಗಳಿಂದ ಹೆದ್ದಾರಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿತ್ತು.
ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಇಷ್ಟೂ ಯೋಜನೆಯ ಕೆಲಸ ಸಂಪೂರ್ಣವಾಗಿ ಅವೈಜ್ಞಾನಿಕ, ಪರಿಸರದ್ರೋಹಿ ಆಗಿರುವ ಕಾರಣಕ್ಕೇ ಅಂಕೋಲಾ, ಕಾರವಾರ, ಚೆಂಡಿಯಾ, ಹೊನ್ನಾವರ ಮತ್ತು ಭಟ್ಕಳ ಭಾಗಗಳಲ್ಲಿ ಗುಡ್ಡ ಕುಸಿತ, ಅಪಘಾತಗಳ ಸರಮಾಲೆ ಸಂಭವಿಸುತ್ತಿವೆ.
ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭವಾದ ಮೇಲೆ ಸುಮಾರು ೧೩೦ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಮಹಾರಾಷ್ಟç ಮೂಲದ, ದೆಹಲಿ ಕಂಪನಿ ಐಆರ್‌ಬಿ, ಕಾಮಗಾರಿಯ ಗುತ್ತಿಗೆ ಪಡೆದಿದೆ. ಅವರ ದೃಷ್ಟಿಯಲ್ಲಿ ಕಾಮಗಾರಿ ಮುಗಿದು ಎರಡು ವರ್ಷಗಳಾಗಿವೆ. ಆದರೆ ಸ್ಥಳೀಯರ ಪ್ರಕಾರ, ಯೋಜನಾ ವಿಶ್ಲೇಷಕರ ಪ್ರಕಾರ ಇನ್ನೂ ಶೇಕಡಾ ೩೦ರಷ್ಟು ಕೆಲಸ ಬಾಕಿ ಇವೆ.
ನಿಜ. ಹೆದ್ದಾರಿ ಕಾಮಗಾರಿ ಇನ್ನೂ ಮುಗಿದಿಲ್ಲ. ಆದರೆ, ಈಗಾಗಲೇ ಎರಡು ವರ್ಷದಿಂದ ಟೋಲ್ ಸಂಗ್ರಹಿಸಲಾಗುತ್ತಿದೆ. ಗುತ್ತಿಗೆ ಪಡೆದ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಗ್ರಹಿಸಿರುವ ಸುಂಕದ ಪ್ರಮಾಣ ೪೦೦ ಕೋಟಿ ರೂಪಾಯಿಗಳು ! ಹೇಗಿದೆ ನೋಡಿ, ಬರೆ ಎಳೆದ ರೀತಿ ?
ಅದೂ ಗುತ್ತಿಗೆ ಮತ್ತು ಹೆದ್ದಾರಿ ಪ್ರಾಧಿಕಾರದ ಪ್ರಶ್ನೆಯಾದೀತು. ಆದರೆ ಒಮ್ಮೆ ಗೋವಾ ಗಡಿಯಿಂದ ದಕ್ಷಿಣ ಕನ್ನಡದ ಗಡಿಯವರೆಗೆ ಓಡಾಡಬೇಕು. ಯಾರಪ್ಪ ಇದಕ್ಕೆ ಒಪ್ಪಿಗೆ ಕೊಟ್ಟವರು ಅನಿಸುತ್ತದೆ. ಸಾವಿರಾರು ಮರಗಳನ್ನು ಕಡಿದು, ಗುಡ್ಡ ಬಗೆದು ಹೆದ್ದಾರಿ ನಿರ್ಮಿಸಲಾಗಿದೆ. ಆದರೆ ಬಗೆದ ಗುಡ್ಡದಿಂದ ಹೆದ್ದಾರಿಗೆ ರಕ್ಷಣೆ ಇಲ್ಲ!.
ನೀರಿನ ಒರತೆ, ಮಳೆಗಾಲದ ನೀರಿನ ಓಟ, ದಾರಿ, ಹರಿವು ಎಲ್ಲವೂ ಕೂಡ ಬಂದ್. ಮಳೆಗಾಲ ಅಂತ ಅಲ್ಲ. ಬೇಸಿಗೆಯಲ್ಲಿ ಕೂಡ ಎಲ್ಲಿ ಗುಡ್ಡ- ಬಂಡೆ ಉದುರುತ್ತವೋ ಎನ್ನುವ ಭಯ.
ಇದರ ನಡವೆ ಕೈಗಾ ಅಣುಸ್ಥಾವರದ ವಿದ್ಯುತ್ ಲೈನ್, ಟೌನ್‌ಶಿಪ್. ಇದಕ್ಕೆ ಓಡಾಡುವ ಬೃಹತ್ ಟ್ರಕ್ಕುಗಳು. ಪಕ್ಕದಲ್ಲೇ ಕೊಡಸಳ್ಳಿ ಆಣೆಕಟ್ಟು. ಇತ್ತ ಸೀಬರ್ಡ್ ನೌಕಾನೆಲೆ ಸಾಮ್ರಾಜ್ಯ. ಅಲ್ಲಿಯ ಕಾಮಗಾರಿಗಳಿಗೂ-ಪ್ರಕೃತಿಗೂ- ಜನತೆಗೂ ಸಂಬಂಧವೇ ಇಲ್ಲ. ತಮ್ಮ ಪ್ರದೇಶಕ್ಕೆ ದೊಡ್ಡ ಗೋಡೆ ಕಟ್ಟಿಕೊಂಡು ಕಾರವಾರದಿಂದ ಅಂಕೋಲಾವರೆಗಿನ ಹೆದ್ದಾರಿ ತುಂಬ ಗುಡ್ಡದ ನೀರು ಗಾಳಿಗೂ ಕೂಡ ಪ್ರವೇಶ ನೀಡದ ವಿಚಿತ್ರ ಶಿಸ್ತು ಯೋಜಕರು !
ಪರಿಣಾಮ ಚಿಕ್ಕ ಮಳೆಗೂ ಹೆದ್ದಾರಿಯಲ್ಲಿ ಅಡಿಗಟ್ಟಲೇ ನೀರು ನಿಲ್ಲುತ್ತದೆ. ವಾರವಾದರೂ ನೀರು ಇಂಗುವುದಿಲ್ಲ. ಅಲ್ಲಿ ನೂರಾರು ವರ್ಷಗಳಿಂದ ಹಳ್ಳಿಗಳಿದ್ದವು. ಎಂದೂ ನೆರೆ ಹಾವಳಿ ಸಂಭವಿಸಿದ್ದಿಲ್ಲ. ನೀರು ನಿಂತದ್ದಿಲ್ಲ. ಚಂಡಿಯಾ, ಅರಗಾ, ಅವರ್ಸಾ ಎಲ್ಲ ಕಡೆಯೂ ಎಷ್ಟೇ ಮಳೆಯಾದರೂ ಸರಾಗವಾಗಿ ನೀರು ಸಮುದ್ರ ಸೇರುತ್ತಿತ್ತು. ಈಗ ಸಮುದ್ರವೇ ಬೇರೆ. ಗುಡ್ಡ- ಮಳೆ ನೀರೇ ಬೇರೆ. ಯೋಚಿಸಿ. ಪ್ರಕೃತಿಯ ಸಂರಚನೆಯನ್ನು ಈ ರೀತಿ ಕೆಡೆಸಿದರೆ ಪ್ರವಾಹವಾಗದೇ ಉಳಿದೀತೇ?
ಇದೇ ಸ್ಥಿತಿ ಉಡುಪಿ, ದಕ್ಷಿಣ ಕನ್ನಡದ ಕೊನೆಯವರೆಗೂ ಇದೆ.
ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡದ ಮಲೆನಾಡು ಪ್ರದೇಶದಲ್ಲಿ ಗುಡ್ಡ ಕುಸಿತಗಳ ಅಧ್ಯಯನಕ್ಕೆ ಹಿಂದಿನ ಸರ್ಕಾರ ಎರಡು ಅಧ್ಯಯನ ಸಮಿತಿಗಳನ್ನು ನೇಮಕ ಮಾಡಿತ್ತು. ಅವು ವರದಿ ಕೊಟ್ಟಿವೆ ಎಂದು ಸಮಿತಿ ಪ್ರಮುಖರು ಹೇಳುತ್ತಾರೆ. ಆದರೆ ಸರ್ಕಾರ ಕಣ್ಣೆತ್ತಿ ನೋಡಿಲ್ಲ. ಜನತೆಗೂ ಪರಿಹಾರ- ಪುನರ್ವಸತಿ ದೊರೆತಿಲ್ಲ.
ಅಧ್ಯಯನ ಸಮಿತಿಯ ವರದಿ ಪ್ರಕಾರ ಅತಿಯಾದ ಪ್ರಕೃತಿ ಶೋಷಣೆ, ಅವೈಜ್ಞಾನಿಕ ಅಭಿವೃದ್ಧಿ ಕಾರ್ಯ, ಇದರೊಟ್ಟಿಗೆ ಏನೆಲ್ಲ ಯೋಜನೆಗಳನ್ನು ಇಲ್ಲಿಗೆ ತರಬಾರದಿತ್ತೋ ಅವೆಲ್ಲವನ್ನೂ ತುರುಕಿದ್ದು ಅವಘಡಗಳಿಗೆ ಕಾರಣ. ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ಎಲ್ಲೆಂದರಲ್ಲಿ ಬೃಹತ್ ಕಟ್ಟಡಗಳು, ರೆಸಾರ್ಟ್ಗಳು, ಪ್ರವಾಸೋದ್ಯಮದ ನೆಪದಲ್ಲಿ ರಸ್ತೆ, ಹೋಟೆಲ್- ಮೊಟೆಲ್‌ಗಳು ಹಾಗೇ ಗಣಿಗಾರಿಕೆ. ಇವುಗಳಿಂದಾಗಿ ಮಲೆನಾಡು ಕಂಪಿಸುತ್ತಿದೆ.
ದುರಂತ ಎಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಪ್ರತಿಷ್ಠೆ ಪೈಪೋಟಿ ನೆರಳು ಈ ಭಾಗದ ಮೇಲೆ ಬಿದ್ದಿದೆ. ಇದರಿಂದ ಈ ಭಾಗದ ಜನತೆ ಮತ್ತು ಪ್ರಕೃತಿ ಹಣ್ಣಾಗಿದ್ದಾರೆ.
ಹೆದ್ದಾರಿಯದ್ದೇ ಉದಾಹರಣೆ ತೆಗೆದುಕೊಳ್ಳಿ. ವಿಧಾನಸಭೆಯಲ್ಲಿ ಅಲ್ಲಿಯ ಶಾಸಕರು ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯ ಕುರಿತು ಗೋಳು ತೋಡಿಕೊಂಡರು. ನಾನು ಬಿಡಿ. ಜಿಲ್ಲಾಡಳಿತಕ್ಕೂ ಈ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸೀಬರ್ಡ್ ನೌಕಾನೆಲೆಯ ಅಧಿಕಾರಿಗಳು ಎಲ್ಲಕ್ಕೂ ದೆಹಲಿಯತ್ತ ಬೊಟ್ಟು ಮಾಡಿ ಕ್ಯಾರೇ ಎನ್ನುವುದಿಲ್ಲ. ಹೆದ್ದಾರಿ ಕಾಮಗಾರಿ ನಡೆಸುವವರು ತಮ್ಮ ಕಂಪನಿ ಮುಖ್ಯಸ್ಥರು ಮತ್ತು ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಾರೆ ಎಂದು ತಮ್ಮ ಗೋಳು ತೋಡಿಕೊಂಡರೆ, ರಾಜ್ಯ ಸರ್ಕಾರ ಕೂಡ ಅಷ್ಟೇ ಅಸಹಾಯಕತೆ ವ್ಯಕ್ತಪಡಿಸಿತು.
ಹಾಗಂತ ಇದೇ ರಾಜ್ಯ ಸರ್ಕಾರಗಳು ಎಲ್ಲೆಂದರಲ್ಲಿ ಹೋಟೆಲ್, ಬೃಹತ್ ಕಟ್ಟಡಗಳು, ಅಡವಿ ಮಧ್ಯೆಯೇ ಮರ ಕಟಾವು, ಮೊನೊಕಲ್ಚರ್ ಇತ್ಯಾದಿ ಘಾತುಕ ಕೆಲಸಗಳಿಗೆ ಪರವಾನಗಿ ನೀಡಿವೆ.
ಸ್ಥಳೀಯ ಪರಿಸರದ ಜೊತೆ ಮಾನವನ ಜೀವವೂ ಈ ಪ್ರದೇಶದಲ್ಲಿ ಅಗ್ಗವಾಗಿದೆ. ಪ್ರತಿ ಯೋಜನೆಯಲ್ಲೂ ಕೂಡ ಭ್ರಷ್ಟಾಚಾರದ ಕರಿನೆರಳು. ಕೈಗಾ ಅಣುಸ್ಥಾವರ ಸ್ಥಾಪನೆ ವೇಳೆ ಮೊದಲ ಗುಮ್ಮಟ ಕುಸಿದಾಗ ಇಡೀ ದೇಶ ತಲ್ಲಣಗೊಂಡು ಕಳಪೆ ಕಾಮಗಾರಿಯ ಮುಖವನ್ನು ಬೆತ್ತಲೆಗೊಳಿಸಿತ್ತು.
ಪ್ರಕೃತಿ ನಾಶ ಮಾಡಿ ಕೈಗೊಳ್ಳುವ ಕಳಪೆ ಕಾಮಗಾರಿಗಳ ಕತೆ ಏನೆಂಬುದನ್ನು ಬಿಹಾರದಲ್ಲಿ, ಹದಿನೈದು ದಿನದಲ್ಲಿ ಒಂಬತ್ತು ಸೇತುವೆಗಳು ಕುಸಿದಿರುವುದು ತೋರಿಸುತ್ತದೆ. ಪ್ಲೈ ಓವರ್‌ಗಳು, ಕಟ್ಟಡಗಳು, ಸರ್ಕಾರಿ ಕಾಮಗಾರಿಗಳ ಕಳಪೆತನ ದೇಶಾದ್ಯಂತ ಕಳೆದೊಂದು ತಿಂಗಳಿನಿಂದ ಸುದ್ದಿಯಾಗುತ್ತಿದೆ.
ಆದಾಗ್ಯೂ ಪರಸ್ಪರ ಐವತ್ತು- ಆರವತ್ತು ಪರ್ಸೆಂಟ್ ದೋಷಾರೋಪಣೆ ಬಿಟ್ಟರೆ ಕ್ರಮವಿಲ್ಲ. ಅಮಾಯಕ ಜೀವಗಳು ಬಲಿಯಾದವೇ ವಿನಾ ಲೂಟಿಕೋರರು ಚೆನ್ನಾಗಿಯೇ ಇದ್ದಾರೆ.
ಈ ರೀತಿ ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳುವರ ಬಗ್ಗೆ ಇಂತಹ ಸಡಿಲು ಧೋರಣೆಯೇ ಭೂಮಿ ಸಡಿಲಿಗೆ ಕಾರಣ. ಇನ್ನು, ಮಲೆನಾಡು ಮತ್ತು ಪಶ್ಚಿಮ ಘಟ್ಟದ ಧಾರಣಾ ಶಕ್ತಿ ಮತ್ತು ಆ ಪ್ರದೇಶದಲ್ಲಿ ಏನು ಕೈಗೊಳ್ಳಬೇಕು, ಯಾವುದನ್ನು ನಿಷೇಧಿಸಬೇಕು? ಪರಿಸರ ನಾಶ ಮಾಡುವುದನ್ನು ನಿರ್ಬಂಧಿಸುವುದು ಹೇಗೆ ಎನ್ನುವ ಬಗ್ಗೆ ಸಾಕಷ್ಟು ಅಧ್ಯಯನ, ಪರಿಸರ ತಜ್ಞರ, ವಿಜ್ಞಾನಿಗಳ ವರದಿ ಎಲ್ಲವೂ ಲಭ್ಯವಿವೆ. ಕಣ್ಣೆತ್ತಿ ನೋಡುವವರು ಬೇಕಲ್ಲ… !?
ದುಡ್ಡು, ಗುತ್ತಿಗೆ ಎದುರು ಅಮಾಯಕ ಜನ, ಮಲೆನಾಡಿನ ಮರ- ಗಿಡ ಕಂದಕಗಳು, ನೀರು- ತೊರೆಗಳು ಸಾಯುತ್ತಿವೆ. ನರಳುತ್ತಿವೆ. ಪರಿಸರವಾದಿಗಳ ಕೂಗಂತೂ ಎಂದೋ ಸತ್ತು ಹೋಗಿದೆ. ಆ ಸಂಬಂಧ ಹೋರಾಡುವವರಿಗೆ ಅಭಿವೃದ್ಧಿ ವಿರೋಧಿಗಳು ಎಂಬ ಪಟ್ಟ ಬೇರೆ. ಇದು ಆರಂಭವೋ, ಅಂತ್ಯವೋ, ವಿನಾಶ ಕಾಲವೋ ಗೊತ್ತಿಲ್ಲ…!!