For the best experience, open
https://m.samyuktakarnataka.in
on your mobile browser.

ಅಸನ್ಯಾ ಯಾರು ಗೊತ್ತ?

02:30 AM Sep 06, 2024 IST | Samyukta Karnataka
ಅಸನ್ಯಾ ಯಾರು ಗೊತ್ತ

ಸೋದಿ ಮಾಮಾ ಅವರಿಗೆ ಲೊಂಡೆನುಮನ ಶಿ.ಸಾ ನಮಸ್ಕಾ ರಗಳು. ಈಗ ಜರೂರಾಗಿ ಇದನ್ನು ಬರೆಯಲು ಕಾರಣವೇನೆಂದರೆ…. ನೀವು ಮೊನ್ನೆ ನಮ್ಮ ರಿಲೇಷನ್‌ನ ಊರಾದ ಬ್ರುನೈಗೆ ಹೋಗಿಬಂದಿದ್ದು ಅತೀವ ಸಂತಸವಾಯಿತು. ನೀವು ಹೋಗುವ ವಿಷಯ ಮೊದಲೇ ಗೊತ್ತಿದ್ದರೆ ನಾನು ನಿಮಗೆ ಒಂದು ಕೆಲಸ ಹೇಳುತ್ತಿದ್ದೆ. ನೀವು ಅದನ್ನು ಮಾಡುತ್ತಿದ್ದಿರಿ ಎಂಬ ನಂಬಿಕೆಯೂ ನನಗೆ ಇತ್ತು. ಹೋಗಲಿ ಬಿಡಿ… ಅಂದಹಾಗೆ ಬ್ರುನೈ ದೊರೆ ಸುಲ್ತಾನ್ ಅಸನಲ್ ಮೋಕಿಯಾ ಇದಾನಲ್ಲ… ಆತನ ಬಗ್ಗೆ ನಿಮಗೆ ಗೊತ್ತಿಲ್ಲ. ಹೇಳುತ್ತೇನೆ ಕೇಳಿ…. ನಮ್ಮ ಕಿವುಡನುಮಿಯ ದೊಡ್ಡಪ್ಪ ಕಿವುಡನ್ಮಂತ ಇದಾನಲ ಅವನ ಹೆಂಡತಿಯ ತಂಗಿಯ ಸೋದರ ಸೊಸೆಯ ಮಗನೇ ಆತ. ಮೊದಲು ನಮ್ಮ ಹಾಗೆಯೇ ಆಡು ಮೇಯಿಸುತ್ತಿದ್ದ. ನಾವೆಲ್ಲ ಆತನನ್ನು ಅಸನ್ಯಾ.. ಅಸನ್ಯಾ ಎಂದು ಕರೆಯುತ್ತಿದ್ದರು. ಒಂದು ದಿನ ಹೊಲದಲ್ಲಿ ಆಡು ಮೇಯಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಣೆಯಾದ. ಎಲ್ಲೆಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಕೊನೆಗೆ ರಸ್ತೆ ಮೇಲೆ ಜೀಪು ನಿಲ್ಲಿಸಿ ಅವನನ್ನು ಹಿಡಿದುಕೊಂಡು ಹೋಗಿದ್ದಾರೆ ಎಂಬ ಸುದ್ದಿ ಬಂತು. ಪೊಲೀಸರಿಗೆ ದೂರು ನೀಡಲಾಯಿತು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅಸಲಿ ವಿಷಯ ಏನೆಂದರೆ….. ಅವತ್ತು ಜೀಪಿನಲ್ಲಿ ಆತನನ್ನು ಹಾಕಿಕೊಂಡು ಹೋದವರು ಎಲ್ಲೂ ನಿಲ್ಲಿಸದೇ ಸೀದಾ ಬ್ರುನೈಗೆ ಹೋದರು. ಅಲ್ಲಿ ವಯಸ್ಸಾದ ರಾಜ ಆಳುತ್ತಿದ್ದ. ನಾನು ಸಾಯುವುದರೊಳಗೆ ಯಾರನ್ನಾದರೂ ಪಟ್ಟಗಟ್ಟಬೇಕು ಎಂದು ಅಂದಾಗ ಅವರ ಮಕ್ಕಳು ನಾನು… ನಾನು ನನ್ನ ಪಟ್ಟಗಟ್ಟು ಎಂದು ಜಗಳವಾಡಿದರು. ಈ ಜಗಳದಿಂದ ಬೇಸತ್ತ ರಾಜನು ನಾನು ಯಾವನಾದರೂ ಆಡು ಮೇಯಿಸುವವನಿಗೆ ಪಟ್ಟಗಟ್ಟುತ್ತೇನೆ ಎಂದು ಘೋಷಿಸಿದ. ಅಲ್ಲಿಯೇ ಇದ್ದ ಮಂತ್ರಿಗಳು ಮಾತಾಡಿಕೊಂಡು ಆಡು ಮೇಯಿಸುವನನ್ನು ಹಿಡಿದುಕೊಂಡು ಬರೋಣ. ಅವನಿಗೆ ಪಟ್ಟಗಟ್ಟಿದರೆ… ನಮ್ಮದೇ ಆಗುತ್ತದೆ ಎಂದು ಆಡುಮೇಯಿಸುತ್ತಿದ್ದ ಅಸನ್ಯಾನನ್ನು ಹಿಡಿದುಕೊಂಡು ಹೋಗಿ ಆ ರಾಜನ ಮುಂದೆ ನಿಲ್ಲಿಸಿ ಇವನು ಆಡುಮೇಯಿಸುತ್ತಿದ್ದ ಪಟ್ಟಗಟ್ಟಬಹುದು ಎಂದು ಹೇಳಿದರು. ಆ ರಾಜನು ಆತನಿಗೆ ಪಟ್ಟಗಟ್ಟಿದ. ಮುಂದೆ ರಾಜ ಸತ್ತುಹೋದ. ಆತನ ಮಕ್ಕಳಿಗೆ ಹತ್ತು ಹತ್ತು ಎಕರೆ ಭೂಮಿ ಕೊಟ್ಟು ಕಳಿಸಿದ. ತಾನು ಈಗ ದೊಡ್ಡ ರಾಜನಾಗಿದ್ದಾನೆ. ಊರು ಮರೆತಿದ್ದಾನೆ. ನೀವು ಮುಂದಿನ ಬಾರಿ ಹೋದಾಗ ನೆನಪು ಮಾಡಿ ಇಷ್ಟೇ ಮನವಿ.