ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅಸಮಾನತೆ ಎಂಬ ಬದಲಾಗದ ವಸ್ತುಸ್ಥಿತಿ

02:28 AM Feb 27, 2024 IST | Samyukta Karnataka

ದೇವರ ದೃಷ್ಟಿಯಲ್ಲಿ ನಾವೆಲ್ಲ ಸಮಾನರು; ಆದರೆ ಸಾಮರ್ಥ್ಯದಲ್ಲಿ ಅಂತರವಿದೆ. ಜೀವನ ಒಂದು, ಆದರೆ ಸಾಮಾಜಿಕಭೇದಗಳು ಅನಿವಾರ್ಯವಾಗಿಬಿಟ್ಟಿವೆ. ವಾಸ್ತವವಾಗಿ ನೋಡಿದರೆ, ಅಸ್ತಿತ್ವದ ಎಲ್ಲ ಮಜಲುಗಳಲ್ಲಿ ಅಸಮಾನತೆ ಇದೆ. ಒಬ್ಬನಲ್ಲಿ ಸಾಮರ್ಥ್ಯವಿದೆ, ಇನ್ನೊಬ್ಬನಲ್ಲಿ ಅದಿಲ್ಲ. ಒಬ್ಬ ನಾಯಕನಾದರೆ, ಮತ್ತೊಬ್ಬ ಅನುಯಾಯಿ. ಒಬ್ಬ ಮಂದಬುದ್ಧಿಯವನು; ಮತ್ತೊಬ್ಬ ಬಹಳ ಸೂಕ್ಷ್ಮ. ಒಬ್ಬ ಚಿತ್ರಬಿಡಿಸುತ್ತಾನೆ; ಮತ್ತೊಬ್ಬ ಅಗೆಯುತ್ತಾನೆ. ಒಬ್ಬ ವಿಜ್ಞಾನಿ; ಮತ್ತೊಬ್ಬ ಜಾಡಮಾಲಿ. ಅಸಮಾನತೆ ಎಂಬುದು ವಸ್ತುಸ್ಥಿತಿ! ಈ ವಸ್ತುಸ್ಥಿತಿಯನ್ನು ಯಾವ ಕ್ರಾಂತಿಗೂ ಬದಲಾಯಿಸಲು ಸಾಧ್ಯವಾಗಿಲ್ಲ. ಕ್ರಾಂತಿಯು ಮನುಷ್ಯನನ್ನು ಗುರಿಸಾಧನೆಯ ಮಾಧ್ಯಮವಾಗಿ ಬಳಸಿಕೊಂಡಿದೆ. ಇಲ್ಲಿ ಗುರಿ ಮುಖ್ಯವಾಗಿದೆಯೇ ವಿನಾ ಮನುಷ್ಯನಲ್ಲ! ಧರ್ಮಗಳು ಶಾಬ್ದಿಕ ನೆಲೆಯಲ್ಲಾದರೂ ಮನುಷ್ಯನೇ ಬಹಳ ಮುಖ್ಯ ಎಂದಿವೆ. ಆದರೆ ಅವು ಕೂಡಾ ನಂಬಿಕೆ ಹಾಗೂ ಮತಾಂಧತೆಯ ಅಭಿವೃದ್ಧಿಗಾಗಿ ಮನುಷ್ಯನನ್ನು ಬಳಸಿಕೊಂಡಿವೆ. ಒಂದು ಉದ್ದೇಶಕ್ಕಾಗಿ ಮನುಷ್ಯನನ್ನು ಬಳಸಿಕೊಳ್ಳುವುದು ಮೇಲು-ಕೀಳು, ಸಮೀಪ-ದೂರ, ಜ್ಞಾನಿ-ಅಜ್ಞಾನಿ ಎಂಬ ಭೇದಕ್ಕೆ ಕಾರಣವಾಗಿದೆ. ಈ ಪ್ರತ್ಯೇಕತೆಯು ಒಂದು ಮಾನಸಿಕ ಅಸಮಾನತೆ. ಈ ಅಂಶವೇ ಈಗಿನ ಸಾಮಾಜಿಕ ವಿಶ್ಲೇಷಣೆಗೆ ಕಾರಣ. ಸಂತೋಷಚಿತ್ತನಾದ ವ್ಯಕ್ತಿ ಮಾತ್ರವೇ ಹೊಸ ಸಾಮಾಜಿಕ ವ್ಯವಸ್ಥೆಯನ್ನು ಸೃಷ್ಟಿಸಬಲ್ಲ. ಆದರೆ ಒಂದು ಸಿದ್ಧಾಂತ ಅಥವಾ ನಂಬಿಕೆಯ ಜೊತೆ ಗುರುತಿಸಿಕೊಂಡ ವ್ಯಕ್ತಿ ಅಥವಾ ಯಾವುದೇ ವ್ಯಕ್ತಿಗತ ಇಲ್ಲವೇ ಸಾಮಾಜಿಕ ಚಟುವಟಿಕೆಯಲ್ಲಿ ಮುಳುಗಿಹೋದ ವ್ಯಕ್ತಿ ಸಂತೋಷವಾಗಿರಲಾರ. ಒಂದು ಗುರಿಯಿಟ್ಟುಕೊಂಡು ಮಾಡುವ ತ್ಯಾಗ ಇನ್ನಷ್ಟು ಸಂಪಾದನೆಗಾಗಿ ಮಾಡುವ ಶರಣಾಗತಿ.
ಮನಸ್ಸೆಂಬುದು ಹಲವು ಪ್ರತಿಕ್ರಿಯೆಗಳ ಸರಣಿ. ಪ್ರತಿಕ್ರಿಯೆಗಳು ಹಾಗೂ ವಿಚಾರಗಳನ್ನು ಆಧರಿಸಿದ ಕ್ರಾಂತಿಯು ಕ್ರಾಂತಿಯೇ ಅಲ್ಲ; ಅದು ಏನಾಗಿದೆಯೋ ಅದರ ಪರಿವರ್ತಿತ ಮುಂದುವರಿಕೆ. ನೀವು ಅದನ್ನು ಕ್ರಾಂತಿ ಎಂದು ಕರೆಯಬಹುದಾದರೂ ಅದಲ್ಲ. ಹಾಗಾದರೆ ಯಾವುದು ಕ್ರಾಂತಿ..? ಜಿಡ್ಡು ಕೃಷ್ಣಮೂರ್ತಿಯವರು ಹೇಳಿರುವಂತೆ; “ಒಂದು ವಿಚಾರವನ್ನು ಆಧರಿಸಿದ ಬದಲಾವಣೆಯು ಕ್ರಾಂತಿಯಲ್ಲ; ಏಕೆಂದರೆ, ವಿಚಾರವು ಸ್ಮೃತಿಯ ಪ್ರತಿಸ್ಪಂದನ; ಸ್ಮೃತಿಯು ಒಂದು ಪ್ರತಿಕ್ರಿಯೆ. ವಿಚಾರಗಳು ಅಮೂಲ್ಯವಾದಾಗ, ಅವು ಸ್ಥಗಿತಗೊಂಡಾಗ ಮೂಲಭೂತ ಕ್ರಾಂತಿ ಸಾಧ್ಯ. ವಿರೋಧದ ನೆಲೆಯಲ್ಲಿ ಹುಟ್ಟಿಕೊಂಡ ಕ್ರಾಂತಿಯು ಕ್ರಾಂತಿ ಎಂದು ಹೇಳಿಸಿಕೊಳ್ಳಲಾರದು. ಅದು ಕೇವಲ ವಿರೋಧ ಮಾತ್ರ ಮತ್ತು ವಿರೋಧ ಎಂದಿಗೂ ಸೃಷ್ಟಿಶೀಲವಲ್ಲ. ಆದರ್ಶವಾದಿಗೆ ಒಂದು ವಿಚಾರವಿರುತ್ತದೆ. ಹಾಗಾಗಿ ಆತ ಕ್ರಾಂತಿಕಾರಿಯಲ್ಲ. ವಿಚಾರಗಳು ವಿಭಜನೆಗೆ ಇಂಬುನೀಡುತ್ತವೆ. ಪ್ರತ್ಯೇಕತೆ ಎಂಬುದು ವಿಘಟನೆ. ಅದೆಂದೂ ಕ್ರಾಂತಿಯಾಗಲಾರದು. ಸಿದ್ಧಾಂತಕ್ಕೆ ಬದ್ಧನಾದ ವ್ಯಕ್ತಿಗೆ ವಿಚಾರಗಳು ಹಾಗೂ ಶಬ್ದಗಳ ಬಗ್ಗೆಯೇ ಕಳಕಳಿಯೇ ಹೊರತು ಪ್ರತ್ಯಕ್ಷ ಕಾರ್ಯಾಚರಣೆಯಲ್ಲಿ ಕಳಕಳಿಯಿಲ್ಲ. ಅತ ಪ್ರತ್ಯಕ್ಷ ಕ್ರಿಯೆಯನ್ನು ನಿವಾರಿಸಿಕೊಳ್ಳುತ್ತಾನೆ. ಪ್ರತ್ಯಕ್ಷ ಕಾರ್ಯಾಚರಣೆಗೆ ಸಿದ್ಧಾಂತವು ಒಂದು ಅಡಚಣೆ. ವಿಚಾರವನ್ನು ಆಧರಿಸಿದ ಕ್ರಾಂತಿಯು ಎಷ್ಟೇ ತರ್ಕಬದ್ಧವಾಗಿರಲಿ ಅಥವಾ ಐತಿಹಾಸಿಕ ಸಾಕ್ಷ್ಯಗಳಿಗೆ ನಿಷ್ಠವಾಗಿರಲಿ, ಅದು ಸಮಾನತೆಯನ್ನು ಉಂಟುಮಾಡಲು ಸಾಧ್ಯವಿಲ್ಲ. ವಿಚಾರದ ಮುಖ್ಯ ಉದ್ದೇಶವೇ ಜನರನ್ನು ಬೇರ್ಪಡಿಸುವುದು! ಒಂದು ವಿಚಾರದ ಸುತ್ತ ಒಂದು ಗುಂಪು ಅಥವಾ ಒಂದು ಸಮಾಜವನ್ನು ರೂಪಿಸುತ್ತೀರಿ, ಅಷ್ಟೇ. ಉತ್ತಮ ಜಗತ್ತಿನ ನಿರ್ಮಾಣದಲ್ಲಿ ಆಸಕ್ತಿಯಿರುವುದಿಲ್ಲ. ಬದಲಾಗಿ ನಿಮ್ಮ ವಿಚಾರಕ್ಕೆ ಹೊಂದುವಂಥ ಜಗತ್ತಿನ ನಿರ್ಮಾಣದಲ್ಲಿ ನೀವು (ಕ್ರಾಂತಿಕಾರಿಗಳು) ಆಸಕ್ತರು. ವಿಚಾರವು ಹೇಗೆ ತಾನೆ ಸಮಾನತೆಯನ್ನು ಸಾಧಿಸೀತು..?
ನಾವು ಅತ್ಯಂತ ಸೂಕ್ಷ್ಮವಾದ ರೀತಿಯಲ್ಲಿ ಅತೀಹೆಚ್ಚಿನ ಸಂವೇದನೆಗಳನ್ನು ಗಳಿಸಲು ಪ್ರಯತ್ನಿಸುತ್ತೇವೆ. ಇದನ್ನೇ ಒಂದು ಹಂತದಲ್ಲಿ 'ಅನುಭವ'ವೆಂದೂ, ಇನ್ನೊಂದು ಹಂತದಲ್ಲಿ 'ಪ್ರಯತ್ನ'ವೆಂದೂ, ಮಗದೊಂದು ಹಂತದಲ್ಲಿ 'ಜ್ಞಾನ'ವೆಂದೂ, ಮತ್ತೊಂದು ಹಂತದಲ್ಲಿ 'ದೇವರ' ಅಥವಾ 'ಸತ್ಯಶೋಧ'ವೆಂದೂ ಕರೆಯುತ್ತೇವೆ. ಪ್ರಯತ್ನ ಎಂದರೆ ತೃಪ್ತಿಕಂಡುಕೊಳ್ಳುವುದು. ತೃಪ್ತಿಯೇ ಸಂವೇದನೆ. ನೀವು ಒಂದು ಮಜಲಿನಲ್ಲಿ ತೃಪ್ತಿ ಕಂಡುಕೊಂಡಿದ್ದೀರಿ; ಈಗ ಇನ್ನೊಂದು ಮಜಲಿನಲ್ಲಿ ಅದನ್ನು ಕಂಡುಕೊಳ್ಳಬಯಸುತ್ತೀರಿ; ಹೀಗೆಯೇ ಪಯಣ ಮುಂದುವರಿಯುತ್ತದೆ……. ತೃಪ್ತಿಯ ಈ ನಿರಂತರ ಬಯಕೆ, ಸಂವೇದನೆಯ ಇನ್ನಷ್ಟು ಸೂಕ್ಷ್ಮರೂಪಗಳು ಇವನ್ನು 'ಪ್ರಗತಿ' ಎನ್ನುತ್ತೇವೆ. ಹೀಗಾಗಿ ಸಂತೋಷಕ್ಕೂ ಕೊನೆಯಿಲ್ಲ.
ಒಂದು ಸಮಾಜದ ಸಂಸ್ಕೃತಿ-ನಾಗರಿಕತೆಗಳನ್ನು ಕಟ್ಟಲು ಬುದ್ಧಿ ಮತ್ತು ಪ್ರತಿಭೆಗಳು ಪರಸ್ಪರ ಕೈಹಿಡಿದು ನಡೆಯಬೇಕಾಗುತ್ತದೆ. ಇವು ಅರಳಲು ಸದಾ ಶ್ರಮದ ತಳಹದಿ ಬೇಕು. ಇಲ್ಲದಿದ್ದರೆ ಕಲ್ಪನಾಶಕ್ತಿ ಕುಂಠಿತವಾಗಿ ಬಡತನ, ಅಸಮಾನತೆ, ಅನೈತಿಕತೆ ಸೃಷ್ಟಿಯಾಗುತ್ತದೆ. ಪ್ರತಿಯೊಂದಕ್ಕೂ ಪರಾವಲಂಬಿಯಾಗಿ, ಅವರಿಗೂ ಭೋಗಕ್ಕೂ ನಿಕಟಸಂಬಂಧವೇರ್ಪಟ್ಟು ನೈತಿಕನೆಲೆಗಟ್ಟು ಕುಸಿಯುತ್ತದೆ. ಯುರೋಪಿನಿಂದ ವಲಸೆಹೋದ ನವಅಮೇರಿಕನ್ನರಿಗೆ ಪ್ರತಿಭೆಯಿತ್ತು; ಆ ಪ್ರತಿಭಾಜನ್ಯವಾದ ಬುದ್ಧಿಯಿತ್ತು; ಬದುಕನ್ನು ಕಟ್ಟಬೇಕೆಂಬ ಛಲವಿತ್ತು; ಅದಕ್ಕಾಗಿ ನಿರಂತರ ೩೦೦ವರ್ಷಗಳ ಕಠಿಣ ದುಡಿಮೆಯನ್ನು ಮಾಡಿದರು; ಜಗತ್ತಿನ ಅತ್ಯುತ್ತಮ ಶ್ರೀಮಂತ ರಾಷ್ಟçವನ್ನಾಗಿ ಕಟ್ಟಿದರು; ಎಲ್ಲರಿಂದ ದೊಡ್ಡಣ್ಣ ಎಂದು ಕರೆಸಿಕೊಂಡರು; ಯಜಮಾನಿಕೆ ನಡೆಸಿದರು. ಆದರೆ ಇಂದೇನಾಗಿದೆ..?
ಅದರ ಅರ್ಥಸೌಧವೇಕೆ ಈ ಪರಿ ಕುಸಿಯುತ್ತಿದೆ..? ಅದಕ್ಕೆ ಮೂಲಕಾರಣ; ಅವರು ಶ್ರಮವನ್ನು ಮರೆಯತೊಡಗಿದ್ದು. ತಮ್ಮಲ್ಲಿ ಶ್ರೀಮಂತಿಕೆಯಿದೆ ಎಂಬ ಅಹಂನಲ್ಲಿ ಕೌಟುಂಬಿಕಮೌಲ್ಯವನ್ನು, ಸಮುದಾಯದ ಮೌಲ್ಯವನ್ನು ಹಾಗೂ ಶ್ರಮದ ಮೌಲ್ಯವನ್ನು ಕಡೆಗಣಿಸಿದರು. ಗುಲಾಮರನ್ನು ನೇಮಿಸಿಕೊಂಡು ದುಡಿಮೆಯ ಮನೋಧರ್ಮವನ್ನು ಕಡಿದುಕೊಂಡರು. ಆಗ ಸಹಜವಾಗಿ ಶ್ರಮದಿಂದ ದೂರಾದ ಪ್ರತಿಭೆಗೆ ಮಂಕುಬಡಿಯಿತು, ಬುದ್ಧಿ ಕುಂಟತೊಡಗಿತು, ಆರ್ಥಿಕ ಕುಸಿತಕ್ಕೆ ಒಳಗಾಗಿ ಚಿಂತಿತರಾದರು. ಈ ದೃಷ್ಟಿಯಿಂದ ನಮ್ಮ ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕತತ್ವದ ನೆಲೆಯನ್ನು ಅರ್ಥಮಾಡಿಕೊಳ್ಳಬೇಕು. ಕಾಯವನ್ನು ಕಾಯಕದಿಂದ ದಂಡಿಸದಿದ್ದಲ್ಲಿ ಮೈಮನಗಳೂ ಅರಳುವುದಿಲ್ಲ; ಸಮಾಜವೂ ಅರಳುವುದಿಲ್ಲ. ನಿರಂತರ ಕಾಯಕದಲ್ಲಿ ನಿರತನಾದಾಗ ಮಾತ್ರವೇ ಪ್ರತಿಭೆಗೆ ಬೆಲೆಬರುತ್ತದೆ. ಕಾಯಕದಿಂದ ಬಾರದ ಅನ್ನ ನಿಕೃಷ್ಟವೆಂಬ ಮನೋಧರ್ಮ ಮೂಡುತ್ತದೆ.
ಜಿಡ್ಡು ಕೃಷಮೂರ್ತಿಯವರು ಹೇಳುವಂತೆ; “ಮನಸ್ಸು ಸಂಗ್ರಹಿಸುವುದನ್ನು ಸ್ಥಗಿತಗೊಳಿಸಿದಾಗ ಬಯಕೆ ಸಾಯುತ್ತದೆ. ಸುಮ್ಮನೆ ಬದುಕುವುದು ಎಷ್ಟು ಸುಲಭ! ಆದರೆ ಅದು ಸ್ಥಾಗಿತ್ಯವಲ್ಲ. ಮನಸ್ಸು ಎಲ್ಲ ಆಲೋಚನೆಗಳಿಂದ ಬಿಡಿಸಿಕೊಂಡಾಗಲೇ ಸೃಷ್ಟಿಯ ಮೌನ ಅಲ್ಲಿರುತ್ತದೆ. ಯಾವುದೋ ಒಂದು ನೆಲೆಗೆ ಬರುವುದಕ್ಕಾಗಿ ಅತ್ತ ಇತ್ತ ಚಲಿಸುವಾಗ ಮನಸ್ಸು ಶಾಂತವಾಗಿರುವುದಿಲ್ಲ. ಏಕೆಂದರೆ, ನೆಲೆಯನ್ನು ತಲುಪುವುದೆಂದರೆ ಯಶಸ್ವಿಯಾಗುವುದು. ಆರಂಭದಲ್ಲೇ ದೊರೆಯಲಿ; ಅಂತ್ಯದಲ್ಲೇ ದೊರೆಯಲಿ, ಯಶಸ್ಸು ಯಶಸ್ಸೇ. ತನ್ನ ಆಗುವಿಕೆಯ ವಿನ್ಯಾಸಗಳನ್ನು ಹೆಣೆಯುತ್ತಿರುವ ಮನಸ್ಸಿಗೆ ಬಿಡುಗಡೆಯಿಲ್ಲ. ಮನಸ್ಸು ಬೇಸರದಿಂದ ಆಸಕ್ತಿಗೆ ಹಾಗೂ ಆಸಕ್ತಿಯಿಂದ ಮತ್ತೆ ಬೇಸರಕ್ಕೆ ಪೂರ್ತಿ ಬಳಲುವ ತನಕ ಸರಿಯುತ್ತಿರುತ್ತದೆ. ಈ ಆಸಕ್ತಿ ಹಾಗೂ ಬಳಲಿಕೆಯ ಸತತ ಅಲೆಗಳನ್ನೇ 'ಅಸ್ತಿತ್ವ' ಎನ್ನಲಾಗುತ್ತದೆ. ಮನಸ್ಸು ತನ್ನನ್ನು ಚುರುಕುಗೊಳಿಸಿಕೊಳ್ಳುತ್ತಾ ಬಳಲುತ್ತದೆ. ಒಂದು ಪೆನ್ಸಿಲನ್ನು ನೀವು ಯಾವಾಗಲೂ ಚೂಪುಮಾಡುತ್ತಿದ್ದರೆ ಕಡೆಗೆ ಏನೂ ಉಳಿಯುವುದಿಲ್ಲ!”
ಮಿಥ್ಯೆಯನ್ನು ಮಿಥ್ಯೆ ಎಂದು ಅನುಭವಿಸುವುದರಲ್ಲಿ ಕ್ಲಿಷ್ಟತೆ ಇದೆ. ಮಿಥ್ಯೆಯನ್ನು ಮಿಥ್ಯೆ ಎಂದು ಅರಿಯುವುದು, ಮಿಥ್ಯೆಯಲ್ಲಿ ಸತ್ಯವನ್ನು ಕಂಡುಕೊಳ್ಳುವುದು ಮತ್ತು ಸತ್ಯವನ್ನು ಸತ್ಯವೆಂದು ಕಾಣುವುದು - ಇದು ಬುದ್ಧಿಶಕ್ತಿಯ, ವಿವೇಕದ ಆರಂಭ. ಸೌಂದರ್ಯವು ಅನುಭವದಲ್ಲಿಲ್ಲ; ಅನುಭವಿಸುವಿಕೆಯಲ್ಲಿದೆ. ಅನುಭವವು ಭೂತಕಾಲಕ್ಕೆ ಸಂಬಂಧಿಸಿದೆ. ಭೂತಕಾಲವು ಅನುಭವಿಸುವಿಕೆಯಲ್ಲ. ಅದು ಬದುಕುವಿಕೆಯಲ್ಲ. ಮನಸ್ಸಿನ ಶುದ್ಧೀಕರಣವೇ ಹೃದಯದ ಪ್ರಶಾಂತತೆ. ವಸ್ತುಗಳು ಸ್ವಾಧೀನತೆಯ ಮೂಲಕ ಹೆಚ್ಚಿನ ಮಹತ್ವಗಳಿಸುತ್ತವೆ. 'ಇದು ನನ್ನದು' ಎಂದು ಹೇಳಿದಾಗ ಆ ವಸ್ತು/ಚಿತ್ರ ಹೆಚ್ಚು ಸುಂದರವಾಗಿ, ಹೆಚ್ಚು ಬೆಲೆಯುಳ್ಳದ್ದಾಗಿ ತೋರುತ್ತದೆ. ಅದು ಆಗ ಹೆಚ್ಚಿನ ನಾಜೂಕುತನ, ಗಾಢತೆ, ಪೂರ್ಣತೆಯನ್ನು ಗಳಿಸುತ್ತದೆಂದು ಕಾಣುತ್ತದೆ. 'ಇದು ನನ್ನದು' ಎಂದು ಹೇಳಿದ ಘಳಿಗೆಯಲ್ಲಿ ಅದು ರಕ್ಷಿಸಬೇಕಾದ, ಕಾಪಾಡಬೇಕಾದ ವಸ್ತುವಾಗಿಬಿಡುತ್ತದೆ.

Next Article