ಅಸೀನಕ್ಕಾ-ಇಲ್ಲಿಗೆ ಬಂದುಬುಡಕ್ಕಾ…
ಅಸೀನಕ್ಕಾ…ಅಸೀನಕ್ಕಾ ನೀ ಎಲ್ಲಿಗೂ ಓಗಬೇಡಕ್ಕಾ… ನೀ ಇಲ್ಲಿಗೆ ಬಂದುಬುಡಕ್ಕಾ ಎಂದು ಮದ್ರಾಮಣ್ಣನವರು ಸೇಕಸೀನಾ ಅಕ್ಕನಿಗೆ ಈ ನಮೂನಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರಂತೆ. ಹೌದೇನ್ರೀ ಅಂತ ಅವರಿಗೆ ಕೇಳಿದರೆ ಅದರಲ್ಲೇನಿದೆ ತಪ್ಪು? ಪಾಪ ಆ ಯಮ್ಮ ಇಲ್ಲೇ ಡೆಲ್ಲಿನಲ್ಲೇ ಓದಿದ್ದು…ಅಲ್ಲಿಯೇ ಕುಂತು ಬರದಿದ್ದು. ಇಲ್ಲಿದೆಲ್ಲವೂ ಆಕೆಗೆ ಗೊತ್ತು. ನಾವೆಲ್ಲ ಮೊದಲಿನಿಂದಲೂ ಆಕೆಯನ್ನು ಅಕ್ಕಾ ಎಂದೇ ಕರೆಯುತ್ತೇವೆ. ಈಗ ಲಂಡನ್ನೋ..ಪಂಡನ್ನೋ ಅಂತ ಓಗದಕ್ಕಿಂತ ಇಲ್ಲೇ ನಮ್ಕಡೆ ಇದ್ದು ಕಾಲಕಳೀಲಿ ಎಂದು ಬಲವಾಗಿ ಸಮರ್ಥಿಸಿಕೊಂಡರೆನ್ನುವುದು ಕಿವುಡನುಮಿ ತನ್ನ ಮುಖವಾಣಿ ಆನಿಕಿವಿ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದುಕೊಂಡಿದ್ದಾಳೆ. ಅವರು ಬರೆಯುತ್ತ ಬರೆಯುತ್ತ…ಅಸೀನಕ್ಕಗೂ ಇಲ್ಲಿನವರಿಗೂ ಅವಿನಾಭಾವ ಸಂಬಂಧ ಇದೆ. ಅಸೀನಕ್ಕ ಯಾವ ಕಾರಣಕ್ಕೆ ಡೆಲ್ಲಿಗೆ ಬಂದಿದ್ದಳು ಎಂದು ಗೊತ್ತೇ ಇದೆ. ಪಾಪ ಇಂಥವಳಿಗೆ ನಾವು ಸಪೋಲ್ಟ್ ಮಾಡಲೇಬೇಕು. ಆಕೆಗೆ ವಿದ್ಯೆ-ಬುದ್ಧಿ ಸಕಲಗಳನ್ನು ಕೊಟ್ಟಿದ್ದಾಗಿದೆ. ಆಕೆ ಡೆಲ್ಲಿಯಲ್ಲಿ ಓದುತ್ತಿರುವಾಗ ಇಲ್ಲಿಗೆ ಎಕ್ಸಕರ್ಷನ್‌ಗೆ ಬಂದಿದ್ದಳು. ವಿಧಾನಸೌಧ ನೋಡಿ ಬಾಪರೇ ಅಂದಿದ್ದಳು. ಲಾಲ್‌ಬಾಗ್ ನೋಡಿ…ಬಾಗೋಮೆ ಎಂದು ಹಾಡು ಬರೆದಿದ್ದಳು. ಕಬ್ಬನ್‌ಪಾರ್ಕ್ ನೋಡಿ…ಕಣ್ಣಿಗೆ ಕಾಣುವ ಕಬ್ಬನ್ ಪಾರ್ಕು ಎಂದು ಕಾವ್ಯ ರಚಿಸಿದ್ದಳು. ಮೈಸೂರಿನ ಬೃಂದಾವನ ನೋಡಿ ಹತ್ತು ನಿಮಿಷ ಮಾತೇ ಆಡದೇ ಕಣ್ಣಲ್ಲಿ ಧಾರಾಕಾರವಾಗಿ ನೀರು ತಂದಿದ್ದಳು. ಎಲ್ಲ ಊರಿನ ರಾಜಕಾಲುವೆಗಳನ್ನು ನೋಡಿ…ಕ್ಯಾ ಹೈ ಸ್ವಿಮ್ಮಿಂಗ್‌ಪೂಲ್ ಎಂದು ಖುಷಿ ಪಟ್ಟಿದ್ದಳು. ಅದು ಬೇಸಿಗೆ ಕಾಲ. ಬಳ್ಳಾರಿ, ಗುಲ್ಬರ್ಗ ಕಡೆಗೆ ಅಡ್ಡಾಡಿಬಂದು..ಆಹಾ…ನಾನು ಜೀವನಪರ್ಯಂತ ಬಿಸಿಲೇ ಕಾಯಿಸಿಕೊಳ್ಳಲ್ಲ. ಅಷ್ಟೊಂದು ಬಿಸಿಲು ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಳು. ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ…ಕಂಹಾ ಹೈ ಜೀ ಸಿದ್ಧಾರೂಢಜೀ ಎಂದು ಜೋರಾಗಿ ಕೂಗಿ ಕರೆದಿದ್ದಳು. ಈಗಿನ ದೊಡ್ಡ, ದೊಡ್ಡ ರಾಜಕಾರಣಿಗಳು ಆಕೆ ಇಲ್ಲಿಗೆ ಬಂದಾಗ ಇನ್ನೂ ಚಿಕ್ಕವರು. ಹೇಗಿದ್ದೀರೋ….ಆಪ್ ಆಗೆ ಬಡನಾ ಎಂದು ಹೇಳಿದ್ದಳು. ಈಗ ದೊಡ್ಡ ಸ್ಥಾನಕ್ಕೆ ಬಂದಿದ್ದಾರೆ. ಅದನ್ನೇ ನೆನಪಿಟ್ಟುಕೊಂಡ ಇಲ್ಲಿನವರೆಲ್ಲ ಆಕೆಗೆ ಅಕ್ಕಾ..ಅಕ್ಕಾ ಎಂದು ಕರೆಯುತ್ತಿದ್ದಾರೆ. ಶೇಷಮ್ಮನ ಹೋಟೆಲ್‌ನ ಮಂಡಾಳೊಗ್ಗಣ್ಣಿ ಮಿರ್ಚಿ ಅಂದರೆ ಆಕೆಗೆ ಈಗಲೂ ಬಲು ಇಷ್ಟವಂತೆ. ಕಾಲಘಟ್ಟ ಬದಲಾಯಿತು ಆಕೆ ಬಾಂಗ್ಲಾಕ್ಕೆ ಹೋದ ಮೇಲೆ ಸಮಗ್ರ ಸಂಪುಟ ಮಾಡಿ ಅದರಲ್ಲಿ ಇಲ್ಲಿನ ಎಲ್ಲವನ್ನೂ ದಾಖಲಿಸಿದ್ದಾಳೆ. ಈಗ ಅರ‍್ಯಾರೋ ಹುಡುಗರು ಏನೋ ಗದ್ದಲ ಮಾಡಿದರಂತೆ ಈಕೆ ಬಿಟ್ಟು ಹೋಗುತ್ತಾಳಂತೆ. ಅಯ್ಯೋ ಅಂತವುಕ್ಕೆಲ್ಲ ಅಂಜಬಾರದು ಅಕ್ಕಾ….ಈಗ ನನ್ನ ಬಗ್ಗೆ ಪಾದಯಾತ್ರೆ ಮಾಡುತ್ತಿಲ್ಲವಾ? ನಾನೇನು ಒಂಟ್‌ಬುಟ್ಟಿನಾ? ಏನಿಲ್ಲವಲ್ಲ…? ಅದಕ್ಕೆ ಏಳೋದು ಅಕ್ಕಾ…ನೀನು ಎಲ್ಲಿಗೂ ಓಗಬೇಡ ಇಲ್ಲಿಗೇ ಬಾ….ನೀನೊಬ್ಬಳ್ಳೇ ಬಾ. ನಿನ್ನ ಅಣ್ತಂಬ್ರನ್ನ ಮಾತ್ರ ಕರಕಂಡು ಬರಬೇಡ..ಕರಕಂಡು ಬರಬೇಡ ಎಂದು ಮದ್ರಾಮಣ್ಣನವರು ಮಾರ್ಮಿಕವಾಗಿ ಹೇಳಿದ್ದಾರೆ ಎಂದು ಮುಖವಾಣಿಯಲ್ಲಿ ಬರೆಯಲಾಗಿದೆ.