ತಲೀಗೊಂದು ಮಾತಾಡಿ ಕನ್ಫ್ಯೂಸ್ ಮಾಡ್ತಾವೆ…..
ಅನೇಕ ಬೆಳವಣಿಗೆಗಳಿಂದ ಬೇಜಾರಾಗಿದ್ದ ರಾಜ್ಯ ಕಮಲೇಶ್ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರು ಏನು ಮಾಡುವುದು ಎಂದು ತಲೆಮೇಲೆ ಕೈ ಹೊತ್ತು ಕುಳಿತಿದ್ದರು. ಹಗಲು ರಾತ್ರಿ ಹನ್ನೆರಡು ತಾಸುಗಳ ಕಾಲ ಏನು ಮಾಡಲಿ? ಏನು ಮಾಡಲಿ ಎಂಬ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದರು. ಹೆಂಗೋ ಕಾಲ ಕಳೆದರಾಯಿತು ಎಂದು ಮನಸ್ಸು ಗಟ್ಟಿ ಮನಸ್ಸು ಮಾಡಿಕೊಂಡೇನೋ ಇದ್ದರು. ಆದರೆ ಆ ಚಿಕ್ಮಗಳೂರಿನ ಕಡ್ಡಿ ಪೈಲವಾನ ಸುಮ್ಮಿರಲಾರದೇ ಆ ಯಮ್ಮನಿಗೆ ಅದೇನಂದನೋ ಏನೋ ಈಗ ಅವು ಊರ ಮಂದಿ ಕೇಳೋ ಹಾಗೆ ಬಾಯಿ ಮಾಡುತ್ತವೆ…. ಏನೇನೋ ಅನ್ನುತ್ತವೆ…. ಹೆಂಗೆಂಗೋ ಹೇಳುತ್ತವೆ… ಇವೆಲ್ಲ ಕೇಳಿಸಿಕೊಂಡು ಸಾಕಾಗಿದೆ… ಮಾಮಾರಿಗೇ ಒಂದು ಮಾತು ಕೇಳಿಬಿಡುತ್ತೇನೆ ಎಂದುಕೊಂಡು ಸಿಟ್ಯೂರಪ್ಪಗೆ ಕಾಲ್ ಮಾಡಿದರು… ಆ ಕಡೆಯಿಂದ ಹಲೋ ಅಂದಾಕ್ಷಣ… ಸಾರ್ ಸ್ವಲ್ಪ ಮಾಮಾರಿಗೆ ಕಾನ್ಪರನ್ಸ್ ಆಕಿ ಅಂದರು. ತಡಿ ಎಂದು ಸಿಟ್ಯೂರಪ್ಪ ಮಾಮಾರಿಗೆ ಕಾನ್ಫರನ್ಸ್ ಹಾಕಿ… ಸಾಹೇಬ್ರೆ ಹುಡ್ರು ಮಾತಾಡ್ತಾವೆ ನೋಡಿ ಅಂದರು…
ಹುಡುಗ ೧: ಸಾರ್ ನಾವೂ
ಸೋದಿ; ನಾವು ಅಂದ್ರ ಯರ‍್ರೋ?
ಹುಡುಗ ೨: ಅದೇ ಮಾಮೋರೆ…ಮೊನ್ನೆ ಎಸ್‌ಎಂಎಸ್ ಆಕಿದ್ನ್ಯಲ್ಲ…
ಸೋದಿ; ಗೊತ್ತಾಗ್ತಾ ಇಲ್ಲ… ಇರಲಿ ಏನೇಳಿ?
ಹುಡುಗ೩; ಏನಿಲ್ಲ ಮಾಮಾ ನಮ್ ಪೈಲವಾನ ಅಂಗ ಅನ್ಲೇ ಇಲ್ಲ..ಸುಳ್ ಸುಳ್ಳೇ ಇವರು… ಅನ್ನುತ್ತಿದ್ದಂಗೆ ಅದ್ಯಾರೋ ಗುತ್ನಾಳ್‌ಗೆ ಕಾನ್ಫರನ್ಸ್ ಹಾಕಿಬಿಟ್ಟರು….
ಗುತ್ನಾಳ; ಯಾರೋ ಮಾರಾಯ… ಒಂದ್ ಪೋನ್ ಇಟ್ಕಂಡು ಎಷ್ಟಮಂದಿ ಮಾತಾಡಕತ್ತೀರಿ.. ಏನ್ರೋ ಅಂದ..
ಸೋದಿ; ಏನ್ರೀ ಗುತ್ನಾಳ್ ನಾನು ಸೋದಿ ಮಾಮೋರು….
ಗುತ್ನಾಳ; ನಮಸ್ಕರ‍್ರೀ…
ಸೋದಿ; ಹಾಂ.. ಹೇಳಪ…
ಗುತ್ನಾಳ; ಮಾಮೋರೆ ಈ ಕಾನ್ಫರನ್ಸನ್ಯಾಗ ಬ್ಯಾಡ… ತಲೀಗೊಂದು ಮಾತಾಡಿ ಕನ್ಫ್ಯೂಸ್ ಮಾಡ್ತಾವ… ಅದಕ್ಕ ನಾ ಆಮ್ಯಾಲಿಂದ ನಿಮಗ ಕಾಲ್ ಮಾಡ್ತೀನಿ… ಈ ಪೈಲವಾನ… ಪೂಜ್ಯ ಡ್ಯಾಡಿ… ಪುಟ್ಟ.. ಎಲ್ಲರ ಬಗ್ಗೆನೂ ಹೇಳ್ತೀನಿ…. ಈಗ ಕಟ್ ಮಾಡಿ ಸ್ವಿಚ್ಡಾಫ್ ಮಾಡಿಬುಡ್ರಿ… ಅಂತ ಕಾಲ್ ಕಟ್ ಮಾಡಿದ ಗುತ್ನಾಳ.