For the best experience, open
https://m.samyuktakarnataka.in
on your mobile browser.

ಅಸೂಯೆಯಿಂದ ಆಯುಷ್ಯ ಕಡಿಮೆ

05:14 AM May 31, 2024 IST | Samyukta Karnataka
ಅಸೂಯೆಯಿಂದ ಆಯುಷ್ಯ ಕಡಿಮೆ

ಅಸೂಯೆಯಿಂದ ದೂರವಿರಿ, ಬೆಂಕಿಯು ಮರವನ್ನು ಸುಟ್ಟು ಹಾಕುವಂತೆ ಅದು ನಿಮ್ಮ ಎಲ್ಲ ಒಳ್ಳೆಯ ಕೆಲಸಗಳನ್ನು ನಾಶಪಡಿಸುತ್ತದೆ' ಪ್ರವಾದಿವರ್ಯ ಮಹಮ್ಮದ್(ಸ) ಅವರ ಈ ಎಚ್ಚರಿಕೆ ಅವರ ಅನೇಕ ವಚನಗಳಲ್ಲಿಯ ಪ್ರಮುಖ ವಿಷಯಗಳಲ್ಲಿ ಒಂದು ಅಸೂಯೆ. ಅಷ್ಟೇ ಅಲ್ಲ ಅವರ ವಿವಿಧ ವಚನಗಳು, ಹದೀಸ್‌ಗಳಲ್ಲಿಅಸೂಯೆಯಿಂದ ನಿಮ್ಮ ಘನತೆ-ಗೌರವಗಳಿಗೆ ಕುಂದುಂಟಾಗುತ್ತದೆ' ಎಂದು ವರದಿಯಾಗಿದೆ. ಇನ್ನೊಬ್ಬರಿಗೆ ದೀರ್ಘಾಯುಷ್ಯವನ್ನು ಬಯಸುವವರು, ದೀರ್ಘಾಯುಷ್ಯಗಳಾಗಿಯೇ ಇರುತ್ತಾರೆ. ತಮಗಿಂತ ಕಡಿಮೆ ವಯಸ್ಸಿನವರಿಗೆ ಆಯುಷ್ಮಾನ್ ಭವ ಎಂದು ಹರಸುವವರು ಅಸೂಯೆ, ಈರ್ಷೆ, ಮಾತ್ಸರ್ಯ, ಹೊಟ್ಟೆಕಿಚ್ಚಿನಿಂದ ದೂರವಿರುತ್ತಾರೆ. ಅಸೂಯೆ ಅಂದರೆ ಸಂಕುಚಿತ ದೃಷ್ಟಿ ಹಾಗೂ ಕೀಳು ಭಾವನೆಗಳ ಪ್ರತಿಕವಾಗಿದೆ. ಹಿರಿಯರು ಇದೊಂದು ದುರ್ಗುಣ ಎಂದು ಕರೆದಿದ್ದಾರೆ.
ಕುರಾನಿನ ಅನೇಕ ಅಧ್ಯಾಯಗಳಲ್ಲಿ ಅಸೂಯೆಯ ಕೆಟ್ಟ ಪರಿಣಾಮಗಳನ್ನು ಹೇಳುತ್ತ ಮಾನವರು ಈ ದುರ್ಗುಣದಿಂದ ದೂರವಿರಬೇಕೆಂದು ಎಚ್ಚರಿಸಿದೆ. ಈ ಕೆಲವು ಅಧ್ಯಾಯಗಳನ್ನು ನೋಡಿ.
ಅಧ್ಯಾಯ ಅನ್ನಿಸಾ (೨:೩೨): ಅಲ್ಲಾಹನು ನಿಮ್ಮಲ್ಲಿ ಕೆಲವರಿಗೆ ಮತ್ತೆ ಕೆಲವರಿಗಿಂತ ಹೆಚ್ಚಾಗಿ ದಯಪಾಲಿಸಿರುವ ಅನುಗ್ರಹಕ್ಕಾಗಿ ಆಸೆ ಪಡಬೇಡಿರಿ. ಅಲ್ಲಾಹನ ಅನುಗ್ರಹ ಬೇಡಿರಿ.' ಅಲ್ಲಾಹನು ಮಾನವರನ್ನು ಒಂದೇ ರೀತಿಯಲ್ಲಿ ಸೃಷ್ಟಿಸಲಿಲ್ಲ. ಅವರೊಳಗೆ ಹಲವಾರು ತಾರತಮ್ಯಗಳನ್ನು ಇರಿಸಿದ್ದಾನೆ. ಈ ತಾರತಮ್ಯಗಳಲ್ಲಿಯೇ ನಾಗರಿಕತೆಯ ವೈವಿಧ್ಯತೆ ಇದೆ. ಒಬ್ಬನು ಯಾವುದಾದರೊಂದು ವಿಧದಲ್ಲಿ ತನಗಿಂತ ಮೇಲಾಗಿರುವುದನ್ನು ಕಂಡಾಗ ಅವನಲ್ಲಿ ಉಂಟಾಗುವ ವ್ಯಾಕುಲತೆಯಿಂದ ಹೊಟ್ಟೆ ಕಿಚ್ಚು,, ಅಸೂಯೆ ಹುಟ್ಟುತ್ತದೆ. ಇನ್ನೊಂದು ಅಧ್ಯಾಯ ಅಜ್ ಜುಷ್ರ್ (೪೩:೩೨):ಇಹಲೋಕದ ಜೀವನದಲ್ಲಿ ಅವರ ಆದಾಯವನ್ನು ಅವರ ನಡುವೆ ನಾವೇ ವಿತರಿಸುತ್ತೇವೆ. ನಾವೇ ಅವರಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಹೆಚ್ಚಿನ ಸ್ಥಾನಮಾನವನ್ನು ನೀಡುತ್ತೇವೆ. ಅವರು ಪರಸ್ಪರರಿಂದ ಸೇವೆ ಪಡೆಯಲೆಂದು…' ಅಧ್ಯಾಯ ಅಲ್ ಫಲಕ್ (೧೧೩:೫) ಅಸೂಯೆ ಪಡುವವನು ಅಸೂಯೆ ಪಡುವಾಗ ಅವನ ಕೆಡಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಕೋರುತ್ತೇನೆ ಎಂದು ಪ್ರಾರ್ಥಿಸಿರಿ.
ನಮ್ಮ ಸಾಮರ್ಥ್ಯ, ನಮ್ಮ ಬವಣೆ, ನಮ್ಮ ಪ್ರಯತ್ನ ಇದ್ದು ಅದರಲ್ಲಿಯೇ ನಾವು ನಮ್ಮ ಸುಖವನ್ನು ಕಂಡಾಗ ನಾವು ಅಸೂಯೆಯಿಂದ ದೂರವಾಗುತ್ತೇವೆ. ಇನ್ನೊಬ್ಬರ ಸುಖ ನಮ್ಮ ಸುಖ ಎಂದು ತಿಳಿಯಬೇಕು. ಕುರಾನಿನ ಈ ಆಜ್ಞೆ ನೋಡಿ. `ಅಲ್ಲಾಹನು ಇತರರಿಗಿಂತ ಹೆಚ್ಚು ಸಂಪತ್ತು, ಬುದ್ಧಿವಂತಿಕೆ, ಸೌಂದರ್ಯ ಶಕ್ತಿ ಮುಂತಾದವುಗಳನ್ನು ನೀಡಿರುತ್ತಾನೆ. ಅಲ್ಲಾಹನಲ್ಲಿ ದೃಢ ವಿಶ್ವಾಸವಿದ್ದವರು ನೀಡಿರುವುದರಲ್ಲಿಯೇ ತೃಪ್ತಿ ಪಡೆಯ ಬೇಕೆಂಬ ಕರೆ ನೀಡಿದೆ.'
ನಿಮ್ಮ ಮೇಲಿನವರನ್ನು ನೋಡದೆ ನಿಮ್ಮ ಕೆಳಗಿನವರನ್ನು ನೋಡಿರಿ. ಆಗ ನಿಮಗೆ ಅಲ್ಲಾಹನ ಅನುಗ್ರಹ ನಿಮ್ಮ ಮೇಲೆ ಎಷ್ಟಿದೆ ಎಂಬುವುದರ ಅರಿವು ಉಂಟಾಗುತ್ತದೆ. ನಮ್ಮ ನೆರೆಯ ಮನೆಯೊಳಗಿನ ದೀಪದ ಬೆಳಕು ಝಗಝಗಿಸಿ ನಮ್ಮ ಕಣ್ಣು ಕುಕ್ಕಿದರೂ ನಮ್ಮ ಅಂಗಳದಲ್ಲಿ ಬೆಳಕು ಬಿತ್ತಲ್ಲ ಅನ್ನುವ ಸಂತೋಷ, ಸಮಾಧಾನ ಇದ್ದರೆ ಅಸೂಯೆ, ಈರ್ಷೆ, ಮಾತ್ಸರ್ಯ, ಹೊಟ್ಟೆಕಿಚ್ಚಿಗೆ ಜಾಗ ಎಲ್ಲಿ……..?