ಆಂಗಿಕ ಭಾಷೆ ಮನಸ್ಸು-ದೇಹದ ಸಂಗಮ
ಬಾಡಿ ಲಾಂಗ್ವೇಜ್ ಅಂಡ್ ಹೋಮಿಯೋಪತಿ' ಎಂಬ ತಮ್ಮ ಕೃತಿಯ ಮುನ್ನುಡಿಯಲ್ಲಿ ಡಾ. ಅಜಿತ್ ಕುಲಕರ್ಣಿಯವರು ರೋಗಿಯ ಕುರಿತು ಹೀಗೆ ಬರೆಯುತ್ತಾರೆ: ರೋಗಿ ಒಬ್ಬ ಹೆಚ್ಚುವರಿ ಮನುಷ್ಯ. ಈ ವಾಕ್ಯವು ಅಸಹಜ ಮತ್ತು ವಿಚಿತ್ರವೆನಿಸಬಹುದು; ಆದರೆ ಆಳ ಮತ್ತು ವಿಸ್ತಾರದಲ್ಲಿ ಇದು ನಿಜ. ರೋಗಿಯು ವ್ಯಕ್ತಿತ್ವ, ನಡವಳಿಕೆ, ಕ್ರಿಯೆಗಳು ಇತ್ಯಾದಿ ಎಲ್ಲಾ ಅಂಶಗಳನ್ನು ಹೊಂದಿರುವ ಮನುಷ್ಯನಂತೆ ಇರುತ್ತಾನೆ. ಆದರೆ ಅವನನ್ನು ಮನುಷ್ಯನಿಂದ ಪ್ರತ್ಯೇಕಿಸುವ ಮತ್ತು ಹೆಚ್ಚುವರಿ ಏನನ್ನಾದರೂ ಸೇರಿಸುವ ಏಕೈಕ ವಿಷಯವೆಂದರೆ, ಅವನಲ್ಲಿರುವ ಈ ಎಲ್ಲಾ ಅಂಶಗಳು ರೋಗಗ್ರಸ್ತ ಶಕ್ತಿಯಿಂದ ದಿಕ್ಕುತಪ್ಪಿದವನಾಗಿ ರೋಗಿ ಎಂದೆನಿಸಿರುತ್ತಾನೆ......' ರೋಗಿಯು ಇತಿಹಾಸವನ್ನು ಪದಗಳ ರೂಪದಲ್ಲಿ ಹೇಳಲು ಪ್ರಾರಂಭಿಸುತ್ತಾನೆ. ಆದರೆ ಅವನ ಇಡೀ ದೇಹವು ಅವನು ಏನು ಹೇಳುತ್ತಾನೋ ಅದನ್ನು ಪ್ರತಿಧ್ವನಿಸುತ್ತದೆ. ಅವನ ಮುಖಭಾವಗಳು, ಕೈಕಾಲುಗಳ ಸನ್ನೆಗಳು, ಅವನ ಭಂಗಿಯ ಬದಲಾವಣೆಗಳು ಮತ್ತು ಅವನ ಕಣ್ಣುಗಳ ಚಲನೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ವೈದ್ಯರಿಗೆ ಸುಪ್ತ ಸಂದೇಶಗಳನ್ನು ರವಾನಿಸುತ್ತವೆ. ಈ ಸಂದೇಶಗಳು ಅವನ ಮಾತಿನ ಪದಗಳನ್ನು ಬಲಪಡಿಸಬಹುದು ಅಥವಾ ವಿರೋಧಿಸಬಹುದು. ರೋಗಿಯು ಏಕಕಾಲದಲ್ಲಿ ಮಾತನಾಡದ ಮತ್ತು ಮಾತನಾಡುವ ಭಾಷೆಯ ಹೊಸ ದಿಗಂತಕ್ಕೆ ಪ್ರವೇಶಿಸುತ್ತಾನೆ. ಒಬ್ಬನು ತನ್ನ ಮಾತುಗಳ ಮೇಲೆ ನಿಯಂತ್ರಣವನ್ನು ಹೊಂದಬಹುದು ಆದರೆ; ಅವನ ದೈಹಿಕ ಅಭಿವ್ಯಕ್ತಿಗಳ ಮೇಲೆ ಅಲ್ಲ. ಏಕೆಂದರೆ, ಅವು ಯಾವಾಗಲೂ ಪ್ರತಿಬಂಧಿಸದ ಮತ್ತು ಸ್ಪಷ್ಟವಾದ ಸತ್ಯ. ದೇಹವು ಮೌಖಿಕ ಮಿದುಳಿನ ಆಳ್ವಿಕೆಯ ಅಡಿಯಲ್ಲಿ ವಿಧೇಯತೆಯಿಂದ ಏನನ್ನು ವ್ಯಕ್ತಪಡಿಸುತ್ತದೆ ಅಂತೆಯೇ ಅವನ ಸನ್ನೆಗಳು ಚಾಲನೆಯನ್ನು ಪಡೆಯುತ್ತವೆ. ಹೀಗೆ ಆಂತರಿಕ ಭಾವನೆಗಳು ಬಾಹ್ಯ ಅಭಿವ್ಯಕ್ತಿಗಳನ್ನು ಸಂಯೋಜಿಸುತ್ತವೆ. ಹೀಗಾಗಿ ದೇಹದ ಎಲ್ಲಾ ಭಾಗಗಳು ಅದು ಕೈಗಳು, ಬೆರಳುಗಳು, ತಲೆ, ಕಣ್ಣುಗಳು, ಮುಖ ಅಥವಾ ಕಾಲುಗಳಾಗಿರಬಹುದು; ಅದು ಒಳಗಿನ ಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತದೆ. ಸಂವಹನ ಕ್ಷೇತ್ರದಲ್ಲಿನ ಸಂಶೋಧನೆಯು ದೇಹಭಾಷೆಯ (ಆಂಗಿಕ ಭಾಷೆ) ಆಳವಾದ ಉಪಯುಕ್ತತೆಯನ್ನು ಪ್ರದರ್ಶಿಸಿದೆ. ನಮ್ಮ ಸಂವಹನದ ಶೇ. ೩೫ರಷ್ಟು ಮೌಖಿಕವಾಗಿದ್ದರೆ; ಶೇ. ೬೫ ದೈಹಿಕವಾಗಿರುತ್ತದೆ. ಹಾಗಾದರೆ ಶ್ರೀಮಂತವಾಗಿರುವ ಈ ಪ್ರಮುಖ ಶೇ. ೬೫ ಭಾಗವನ್ನು ನಿರ್ಲಕ್ಷಿಸುತ್ತಿದ್ದೇವೆಯೇ? ಆಂಗಿಕ ಭಾಷೆ ಮನಸ್ಸು ಮತ್ತು ದೇಹದ ಸಂಗಮವಾಗಿದೆ. ಇದು ಮನಸ್ಸು ಮತ್ತು ದೇಹದ ಕಾರ್ಯನಿರ್ವಹಣೆಯನ್ನು ಸಂಯೋಜಿಸುವ ಜೀವಂತ ಸಂಶ್ಲೇಷಣೆಯನ್ನು ಪ್ರತಿನಿಧಿಸುತ್ತದೆ. ಮನಸ್ಸು ಪ್ರಬಲವಾಗಿದೆ ಏಕೆಂದರೆ, ಅದು ಶಕ್ತಿ ಮತ್ತು ವೇಗದಲ್ಲಿ ಅಸಾಮಾನ್ಯವಾಗಿದೆ. ಮನಸ್ಸು ನಿರ್ದೇಶಿಸುತ್ತದೆ; ದೇಹವು ಅದನ್ನು ಪಾಲಿಸುತ್ತದೆ. ದೇಹವು ಮನಸ್ಸನ್ನು ವ್ಯಕ್ತಪಡಿಸುತ್ತದೆ. ದೇಹವು ಬುದ್ಧಿವಂತವಾಗಿದೆ. ದೇಹದ ಕೋಟ್ಯಂತರ ಜೀವಕೋಶಗಳು ಪರಿಪೂರ್ಣ ಸಾಮರಸ್ಯ ಮತ್ತು ಏಕತೆಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳು ತಮ್ಮ ಕಾರ್ಯ, ರೂಪ, ರಚನೆ, ವ್ಯಾಪ್ತಿ, ಗಡಿ ಮತ್ತು ಮಿತಿಯನ್ನು ತಿಳಿದಿವೆ. ಜೀವಕೋಶಗಳು ಮಾನವ ಪ್ರಯೋಗಾಲಯವನ್ನು(ದೇಹ) ಹುಟ್ಟಿನಿಂದ ಸಾವಿನವರೆಗೆ ಆರೋಗ್ಯಸ್ಥಿತಿಯಲ್ಲಿ ನಿರ್ವಹಿಸಲು ಹೋರಾಡುತ್ತವೆ. ಬುದ್ಧಿವಂತರಾಗಿರುವುದರಿಂದ ದೇಹಕ್ಕೆ ಯಾವಾಗ ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ತಿಳಿದಿವೆ ಮತ್ತು ಸೂಕ್ಷ್ಮವಾಗಿ ಹಾಗೂ ಸಂವೇದನಾಶೀಲವಾಗಿ ಪ್ರತಿಕ್ರಿಯಿಸುತ್ತವೆ. ದೇಹವು ಚಲನೆಯಿಲ್ಲದೆ ನಿಲ್ಲಲು ಸಾಧ್ಯವಿಲ್ಲ. ಅದು ಭಾವನೆಗಳೊಂದಿಗೆ, ಪ್ರಚೋದಕ ಶಕ್ತಿಗಳೊಂದಿಗೆ ಕ್ರಿಯಾತ್ಮಕವಾಗಿ ಮತ್ತು ನಿರ್ಧಿಷ್ಟ ಪ್ರಜ್ಞೆಯೊಂದಿಗೆ ಚಲಿಸುತ್ತಲೇ(ಕಂಪಿಸುತ್ತಲೇ) ಇರುತ್ತದೆ. ಪ್ರಜ್ಞೆ ಚಲಿಸುತ್ತದೆ ಮತ್ತು ಚಲನೆಗೆ ಚಾಲನೆ ನೀಡುತ್ತದೆ. ಆರೋಗ್ಯ, ಅನಾರೋಗ್ಯ ಮತ್ತು ರೋಗಗುಣಪಡಿಸುವಿಕೆಯ ಸ್ಥಿತಿಯಲ್ಲಿ ಪ್ರಜ್ಞೆಯ ಚಲನೆ ತನ್ನದೇ ಆದ ವೈಯಕ್ತಿಕತೆಯನ್ನು ಹೊಂದಿದೆ. ದೇಹಭಾಷೆ ವ್ಯಕ್ತಿಯ ನಿಜವಾದ ಭಾಷೆಯಾಗಿದೆ. ವಾಸ್ತವವಾಗಿ ಇದು ನಮ್ಮ ವ್ಯಕ್ತಿತ್ವದ ಕನ್ನಡಿಯಿದ್ದಂತೆ. ಸಂವಹನ ಮಾಡುವಾಗ ನಾವು ತಿಳಿದಿರಬೇಕು ಏಕೆಂದರೆ; ದೇಹವು ಎಂದಿಗೂ ಸುಳ್ಳು ಹೇಳುವುದಿಲ್ಲ ಮತ್ತು ದೇಹವು ಎಂದಿಗೂ ತಟಸ್ಥ ಅಥವಾ ಶಾಂತವಾಗಿರುವುದಿಲ್ಲ. ದಾರ್ಶನಿಕರೊಬ್ಬರು ಹೇಳಿರುವಂತೆ;
ನೀವು ಪದಗಳಲ್ಲಿ ವೇಗವಾಗಿ ಮತ್ತು ಸಡಿಲವಾಗಿ ಆಡಬಹುದು ಆದರೆ, ಸನ್ನೆಗಳೊಂದಿಗೆ ಮಾಡುವುದು ಹೆಚ್ಚು ಕಷ್ಟ.' ನಾವು ನಮ್ಮ ಧ್ವನಿತಂತುಗಳೊಂದಿಗೆ ಮಾತನಾಡುತ್ತೇವೆ ಎಂಬುದೇನೋ ನಿಜ ಆದರೆ; ನಾವು ನಮ್ಮ ಮುಖದ ಅಭಿವ್ಯಕ್ತಿಗಳು, ನಮ್ಮ ಧ್ವನಿ ಮತ್ತು ಇಡೀ ದೇಹದೊಂದಿಗೆ ಸಂವಹನ ನಡೆಸುತ್ತೇವೆ. ಪ್ರತಿಯೊಂದು ಸಣ್ಣ ಸನ್ನೆ, ಮುಖಭಾವ, ಕೈ, ಬೆರಳುಗಳು ಮತ್ತು ಕಾಲುಗಳ ಚಲನೆಯು ನೋಡುಗರಿಗೆ ಅವ್ಯಕ್ತ ಸಂದೇಶವನ್ನು ಕಳುಹಿಸುತ್ತದೆ. ದೇಹಭಾಷೆಯು ಜಾತಿ, ಪಂಥ, ಸಂಸ್ಕೃತಿ, ಜನಾಂಗ ಇತ್ಯಾದಿಗಳ ತಡೆಗೋಡೆಗಳನ್ನು ಮುರಿಯುತ್ತದೆ. ಇದು ಈ ಮಿತಿಗಳು ಮತ್ತು ವ್ಯತ್ಯಾಸಗಳನ್ನು ಮೀರುತ್ತದೆ ಮತ್ತು ನಮ್ಮ ಭಾವನೆಗಳು, ಉದ್ದೇಶಗಳು, ಸೌಕರ್ಯ, ಅಸ್ವಸ್ಥತೆ, ನಿರಾಕರಣೆ, ಖಿನ್ನತೆ, ಸಂತೋಷದ ಬಗ್ಗೆ ಸಾರ್ವತ್ರಿಕ ನಿರೂಪಣೆಯನ್ನು ಒದಗಿಸುತ್ತದೆ. ಲಿಖಿತ ಅಥವಾ ಮಾತನಾಡುವ ಭಾಷೆ ನಮಗೆ ಅರ್ಥವಾಗದಿರಬಹುದು ಆದರೆ; ದೇಹದ ಅಭಿವ್ಯಕ್ತಿಗಳು ಖಂಡಿತವಾಗಿಯೂ ಮನಸ್ಸಿನ ಸ್ಥಿತಿಯ ಬಗ್ಗೆ ತಿಳಿಸುತ್ತವೆ. ಸಾಮಾನ್ಯವಾಗಿ ಮಾತನಾಡುವ ಭಾಷೆಯ ಬಲವಾದ ಕೋಟೆಯ ಹಿಂದೆ ಅಡಗಿರುವ ನೈಜವ್ಯಕ್ತಿತ್ವದ ವಾಸ್ತವಚಿತ್ರವನ್ನು ಗ್ರಹಿಸಲು ಇದು ಸಹಾಯ ಮಾಡುತ್ತದೆ.
ಆಳವಾದ ಮನಸ್ಸು ಮತ್ತು ಅದೃಶ್ಯ ಆತ್ಮವು ದೇಹದಲ್ಲಿದೆ. ಕ್ರಿಯಾತ್ಮಕ ಆತ್ಮವು ಭೌತಿಕ ದೇಹವನ್ನು ಜೀವಂತವಿರಿಸುತ್ತದೆ; ಬುದ್ಧಿವಂತ ಮನಸ್ಸು ಕ್ರಿಯೆಗಳನ್ನು ಕಾರ್ಯಗತಗೊಳಿಸುತ್ತದೆ. ದೇಹವು ಅದರ ಸೃಷ್ಟಿಯ ಆರಂಭದಿಂದಲೇ ನಮ್ಮ ಅಸ್ತಿತ್ವದ ಅವಿಭಾಜ್ಯ ಅಂಗವಾಗಿದೆ. ಕ್ರಿಯೆಯು ಮೊದಲು ದೇಹಭಾಷೆಗೆ ಒಳಪಡುತ್ತದೆ ಮತ್ತು ಇದನ್ನು ನಂತರ ಮೌಖಿಕಭಾಷೆ ಅನುಸರಿಸುತ್ತದೆ. ನಮ್ಮ ದೇಹವು ನಮಗೆ ವಿಶಿಷ್ಟ ಗುರುತನ್ನು ನೀಡುತ್ತದೆ ಮತ್ತು ಅದರ ಮೂಲಕವಾಗಿಯೇ ನಾವು ಬಾಹ್ಯಪ್ರಪಂಚದಲ್ಲಿ ಗುರುತಿಸಲ್ಪಡುತ್ತೇವೆ. ದೇಹಭಾಷೆಯನ್ನು ಸಂಕೇತಭಾಷೆಯಿಂದ ಬಳಸುಭಾಷೆಗೆ ಪರಿವರ್ತಿಸುವ(ಡಿಕೋಡಿಂಗ್) ಕಲೆಯು ದೇಹದ ಸಂಕೇತಗಳ ವೀಕ್ಷಣೆ ಮತ್ತು ವಿಶ್ಲೇಷಣೆಯೊಂದಿಗೆ ಮನಸ್ಸನ್ನು ಓದುವ ಕಲೆಯಾಗಿ ವಿಸ್ತರಿಸುತ್ತಿದೆ. ನಮ್ಮ ಸಮಾಜ ಮತ್ತು ವ್ಯಕ್ತಿಗಳಾಗಿ ನಮ್ಮನ್ನು ಕಾಡುವ ಅನೇಕ ಸಮಸ್ಯೆಗಳಿಗೆ ಸಂವಹನವು ಪರಿಹಾರವಾಗಿದೆ. ಮನುಷ್ಯ ಸಂಘಜೀವಿ. ಪರಸ್ಪರ ಸಂಪರ್ಕ-ಸಂವಹನ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ. ನಾವು ಇತರರೊಂದಿಗೆ ಸಂಪರ್ಕದಲ್ಲಿದ್ದಾಗಲೇ ಸಂವಹನ ಏರ್ಪಡುವುದು. ಸಂವಹನ ಸಂಭವಿಸಿದಾಗ ಸಾಮಾನ್ಯವಾಗಿ ಲಿಖಿತ ಅಥವಾ ಮಾತನಾಡುವ ಭಾಷೆಯನ್ನು ಬಳಸುತ್ತೇವೆ. ಭಾಷಾಶಾಸ್ತ್ರಜ್ಞರು ಹಿಂದೆಲ್ಲಾ ಭಾಷೆಯ ಮೇಲೆ ಗಮನಕೇಂದ್ರೀಕರಿಸಿದ್ದರು. ಆದರೆ ಈಗ ಅವರುಗಳ ಗಮನ ದೇಹಭಾಷೆಯ ಅಧ್ಯಯನಕ್ಕೆ ತಿರುಗುತ್ತಿದೆ. ಲಕ್ಷಾಂತರ ವರ್ಷಗಳಿಂದ ಮಾನವ ಮೌನಭಾಷೆ ಅಥವಾ ಆಂಗಿಕ ಭಾಷೆಯನ್ನೇ ಮಾತನಾಡಿದ್ದ!