For the best experience, open
https://m.samyuktakarnataka.in
on your mobile browser.

ಆಂಧ್ರಕ್ಕೆ ಅನುದಾನದ ಮಹಾಪೂರ

01:31 AM Jul 24, 2024 IST | Samyukta Karnataka
ಆಂಧ್ರಕ್ಕೆ ಅನುದಾನದ ಮಹಾಪೂರ

ಕೇಂದ್ರ ಬಜೆಟ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳು ಅಧಿಕಾರದಲ್ಲಿರುವ ಅಂದರೆ ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಅನುದಾನದ ಮಹಾಪೂರವನ್ನೇ ಹರಿಸಿ ಪ್ರಥಮಾದ್ಯತೆ ನೀಡಲಾಗಿದೆ.
ತೆಲಗು ದೇಶಂ ಪಾರ್ಟಿ (ಟಿಡಿಪಿ) ಅಧಿಕಾರದಲ್ಲಿರುವ ಆಂಧ್ರಪ್ರದೇಶಕ್ಕೆ ಬಂಪರ್ ಕೊಡುಗೆ ನೀಡಲಾಗಿದ್ದು, ಇದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದೆಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಲ್ಲದೇ ಆಂಧ್ರ ಸರ್ಕಾರ ತನ್ನ ರಾಜಧಾನಿಯನ್ನು ಅಭಿವೃದ್ಧಿಪಡಿಸಲು ೧೫ ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನ ಪಡೆದುಕೊಳ್ಳಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ೧೫ ಸಾವಿರ ಕೋಟಿ ರೂ. ನೀಡಲಾಗುವುದಲ್ಲದೇ ಬರುವ ವರ್ಷಗಳಲ್ಲಿಯೂ ಹೆಚ್ಚುವರಿ ಹಣಕಾಸು ವ್ಯವಸ್ಥೆ ಮಾಡಲಾಗುವುದೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದಲ್ಲದೇ ವಿಶಾಖಪಟ್ಟಣ-ಚೆನ್ನೈ ಕೈಗಾರಿಕಾ ಕಾರಿಡಾರ್, ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಿಸಲಾಗುವುದು ಎಂದಿದ್ದಾರೆ.
ಆಂಧ್ರದ ಜೀವನಾಡಿಯಾಗಿರುವ, ರೈತರಿಗೆ ವರದಾನವಾಗಿರುವ ಪೋಲಾವರಂ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಅಗತ್ಯ ಅನುದಾನ ನೀಡಲಾಗುವುದು ಎಂದೂ ನಿರ್ಮಲಾ ಹೇಳಿದ್ದಾರೆ. ಪೋಲಾವರಂ ಯೋಜನೆ ದೇಶದ ಆಹಾರ ಭದ್ರತೆಗೆ ಕೊಡುಗೆ ನೀಡಲಿದೆ ಎಂದೂ ಅವರು ಹೇಳಿದ್ದಾರೆ.
ಆಂಧ್ರಪ್ರದೇಶ ಪುನರ್ವಿಂಗಣಾ ಕಾಯ್ದೆಯಡಿ ಕೈಗಾರಿಕಾ ಅಭಿವೃದ್ಧಿಗೆ ಅನುದಾನ, ನೀರು, ವಿದ್ಯುತ್, ರೈಲ್ವೆ ಮತ್ತು ರಸ್ತೆಯಂಥ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಅನುದಾನ ನೀಡಲಾಗುತ್ತದೆಂದು ಪ್ರಕಟಿಸಿದ್ದಾರೆ.
ವಿಶಾಖಪಟ್ಟಣಂ-ಚೆನ್ನೈ ಕೈಗಾರಿಕಾ ಕಾರಿಡಾರ್, ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ, ೨೬ ಸಾವಿರ ಕೋಟಿ ರೂ. ವೆಚ್ಚದಲ್ಲಿ ರೈಲು ಯೋಜನೆಗಳ ಆರಂಭ, ಅಲ್ಲದೇ ಆಂಧ್ರಪ್ರದೇಶದ ಆರ್ಥಿಕ ಬೆಳವಣಿಗೆ, ಸರ್ವಾಂಗೀಣ ಅಭಿವೃದ್ಧಿಗೆ ಬಂಡವಾಳ ಹೂಡಿಕೆಗೆ ಹೆಚ್ಚುವರಿ ಅನುದಾನ ಕಲ್ಪಿಸಲಾಗುವುದು ಎಂದಿದ್ದಾರೆ.