ಆಚಾರ, ಅನುಸಂಧಾನದಿಂದ ಲಿಂಗದ ಅರಿವು
ಪ್ರತೀಕಾತ್ಮಕ ಮತ್ತು ಪ್ರತಿಮಾತ್ಮಕವಾದ ದೈವವನ್ನು ಭಾರತೀಯರು ಪೂಜೆ ಅನುಸಂಧಾನ ಪೂರ್ವಕವಾಗಿ ಮಾಡುತ್ತ ಬಂದಿದ್ದಾರೆ.
ಹೀಗೆ ಲಿಂಗಪೂಜೆ ಎಂದರೆ ಬಹುತೇಕವಾಗಿ ಅದೊಂದು ಭಕ್ತಿ ಕ್ರಿಯೆಯಾಗಿದೆ. ಆದರೆ ಯಾಂತ್ರಿಕವಾದ ಕೆಲಸ ಖಂಡಿತವಲ್ಲ. ಲಿಂಗವನ್ನು ಅರಿಯುವದು ಎಂದರೆ ಅದು ಮಹತ್ತರವಾದ ವಿಷಯವೇ ಆಗಿದೆ. ಹೀಗಾಗಿ ಸಿದ್ಧಾಂತ ಶಿಖಾಮಣಿ ಸ್ವಯಸ್ಥಲದಲ್ಲಿ
ತದ್ಭಾವಜ್ಞಾಪಕ ಜ್ಞಾನಂ ಯತ್ರ ಜ್ಞಾನೇ ಲಯಂ ವ್ರಜೇತ್|
ತದ್ವಾನೇಶ ಸಮಾಖ್ಯಾತಃ ಸ್ವಾಭಿಧಾನೋ ಮನೀಷಿಭಿಃ|
ಅಂದರೆ ಭಾವಲಿಂಗ ಪ್ರಕಾಶವಾದ ಜ್ಞಾನವು ಜ್ಞಾನದಲ್ಲಿ ಲಯಹೊಂದಬೇಕು. ಅಂತಹ ಸ್ಥಿತಿಯುಳ್ಳವನ ಸ್ವಯವೆಂದು ಅಂತಹ ಸ್ವಯಲಿಂಗವೆಮದು ಮನಿಷಿಭಿಗಳಾದ ಶಿವಜ್ಞಾನಿಗಳು ಹೇಳುತ್ತಾರೆ.
ಲಿಂಗ ಮಧ್ಯೇ ಜಗತ್ ಸರ್ವಂ ಎಂದು ಹೇಳಿದಂತೆ ಆಚಾರವಂತ ಶಿವಭಕ್ತನು ಇಷ್ಟಾನುಸಾರ ಆಚರಣೆಗಳಲ್ಲಿ ಸಂತುಷ್ಟನಾಗಿರುತ್ತಾನೆ. ಜ್ಞಾನಲಿಂಗಕ್ಕೆ ಜ್ಯೋತಿರ್ಲಿಂಗವೆಂತಲೂ ಕರೆಯುವದಾಗಿದ್ದರಿಂದ ಅದು ಜ್ಯೋತಿಯು ಜ್ಞಾನದ ಸಂಕೇತವಾಗಿದೆ. ಈ ಜ್ಞಾನದ ಸಂಕೇತವೇ ಜ್ಯೋತಿರ್ಲಿಂಗದ ನಿಷ್ಠನಾಗಿ ಅನುಸಂಧಾನಪೂರ್ವಕವಾಗಿಯೇ ಅರ್ಚಿಸಬೇಕಾಗುತ್ತದೆ. ಇಂಥ ಸನ್ನಿವೇಶದಲ್ಲಿ ಲಿಂಗದ ಮಹತೋಮಹೀಯನ್ ಎಂಬ ವಿಚಾರವನ್ನು ತಂದುಕೊಳ್ಳಬೇಕಿದೆ. ಅಲ್ಲದೇ ಪ್ರಪಂಚದ ಎಲ್ಲ ಆಕಾರಗಳಲ್ಲಿಯೂ ಕೂಡ ಲಿಂಗವನ್ನು(ಜ್ಞಾನವನ್ನು) ಅಡಗಿಸಿಕೊಂಡ ಮುನಿಶ್ರೇಷ್ಠನೇ ಸ್ವಯಂಸ್ಥಲೀಯ ಎಂದು ಕರೆಯಲಾಗುತ್ತದೆ.
ಇಂಥ ಮುನಿಗೆ ಅಥವಾ ಭಕ್ತನಿಗೆ ನಿರ್ಮೋಹವಿರಬೇಕು. ಮಮಕಾರ ರಹಿತನಾಗಿರಬೇಕು. ಅಲ್ಲದೇ ನಿರಂಹಕಾರಿಯೂ ಆಗಿರಬೇಕು. ಭಿಕ್ಷಾಹಾರವನ್ನು ಸೇವಿಸುವವನಾಗಿದ್ದು, ಸರ್ವರಲ್ಲಿ ಸಮಬುದ್ಧಿಯುಳ್ಳವನಾಗಿರಬೇಕು. ಜಿತೇಂದ್ರಿಯನೂ ಆಗಿರಬೇಕು. ಭಾವಲಿಂಗ ಅಥವಾ ಜ್ಞಾನಲಿಂಗದ ಅರಿವು ಉಂಟಾಗಬೇಕಾದಲ್ಲಿ ಜ್ಞಾನದ ಜತೆ ಜತೆಗೆ ಸಾಮಾನ್ಯವಾಗಿ ಅವನ ಆಚರಣೆಯೂ ಕೂಡ ಅಷ್ಟೇ ಪ್ರಮುಖವಾಗಿದೆ.