For the best experience, open
https://m.samyuktakarnataka.in
on your mobile browser.

ಆತಂಕ ಸೃಷ್ಟಿಸಿದ ಅನಾಮಧೇಯ ವ್ಯಕ್ತಿಯ ಸಂದೇಶ...

01:36 PM Nov 28, 2024 IST | Samyukta Karnataka
ಆತಂಕ ಸೃಷ್ಟಿಸಿದ ಅನಾಮಧೇಯ ವ್ಯಕ್ತಿಯ ಸಂದೇಶ

ಸಿಸಿ ಟಿವಿ ಇರುವ ಕಡೆ ಕಾರು ನಿಲ್ಲಿಸಲು ಚಾಲಕನಿಗೆ ಸೂಚನೆ: ಕಲಬುರಗಿ ಸೆಂಟ್ರಲ್ ಜೈಲಾಧಿಕಾರಿ ಕಾರು ಸ್ಫೋಟಿಸುವ ಬೆದರಿಕೆ

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಬೆನ್ನಲ್ಲೇ ಜೈಲಿನ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೊಟಿಸುವುದಾಗಿ ಬೆದರಿಕೆ ಸಂದೇಶ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಧೀಕ್ಷಕಿರವರ ಕಾರು ಸ್ಫೊಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಆಡಿಯೋ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದ್ದು, ಕಾರು ಸ್ಫೊಟಿಸುವ ಮೂಲಕ ಅನಿತಾ ಹತ್ಯೆಗೆ ಸಂಚು ಹೂಡಲಾಗಿದೆಯೇ ಎಂಬ ಅನುಮಾನ ಮೂಡಿದೆ.
ನಗರದ ಪೊಲೀಸ್ ಇನ್ಸ್ಪೆಕ್ಟರ್ ಮೊಬೈಲ್‌ಗೆ ಆಡಿಯೋ ಸಂದೇಶ ಬಂದಿದ್ದು, ಅವರು ಈ ಬಗ್ಗೆ ಸೂಪರಿಂಟೆಂಡೆಂಟ್ ಗಮನಕ್ಕೆ ತಂದಿದ್ದಾರೆ. ಇದೀಗ ಬೆದರಿಕೆ ಸಂದೇಶದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅನಿತಾ, ಸಿಸಿಟಿವಿ ಕಣ್ಗಾವಲಿನಲ್ಲೇ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಒಂದೂವರೆ ತಿಂಗಳ ಹಿಂದೆಯಷ್ಟೆ ಅನಿತಾ ಕಲಬುರಗಿ ಜೈಲಿಗೆ ವರ್ಗಾವಣೆಯಾಗಿ ಬಂದಿದ್ದರು. ಅಧಿಕಾರ ಸ್ವೀಕಾರ ಮಾಡಿದ ದಿನವೇ ಜೈಲಿನಲ್ಲಿ ಕೈದಿಗಳು ಹೈಫೈ ಜೀವನ ನಡೆಸುತ್ತಿರುವುದು ಕಂಡು ಬಂದಿತ್ತು. ಇದನ್ನು ಅವರು ಗಂಭೀರವಾಗಿ ಪರಿಗಣಿಸಿದ ಅವರು, ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದ್ದರು. ಇದರಿಂದ ಕೆರಳಿದ ಕೈದಿಗಳೇ ಬೆದರಿಕೆ ಸಂದೇಶ ಕಳುಹಿಸಿದರೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ.
ಜೈಲಿನಲ್ಲಿ ಬಿಡಿ, ಗುಟ್ಕಾ, ಸಿಗರೇಟ್ ಬಂದ್ ಮಾಡಿದಕ್ಕೆ ಅನಿತಾ ವಿರುದ್ಧ ಬುಧವಾರವಷ್ಟೇ ಕೈದಿಗಳು ಪ್ರತಿಭಟನೆ ಮಾಡಿದ್ದರು. ಇದಕ್ಕೆ ತಲೆಕೆಡಿಸಿಕೊಳ್ಳದಕ್ಕೆ ಜೈಲಿನಲ್ಲಿರುವ ಕೆಲವರು ಉದ್ದೇಶಪೂರ್ವಕವಾಗಿ ಬೆದರಿಕೆ ತಂತ್ರ ಹೂಡಿದರೇ ಎಂಬ ಅನುಮಾನ ಮೂಡಿದೆ. ಅದೇಲ್ಲ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.