ಆತಂಕ ಸೃಷ್ಟಿಸಿದ ಇಲೆಕ್ಟ್ರಾನಿಕ್ ಟ್ರ್ಯಾಕರ್ ಚಿಪ್ ಹೊಂದಿದ ರಣಹದ್ದು
ಕಾರವಾರ: ಬೆನ್ನ ಮೇಲೆ ಇಲೆಕ್ಟಾçನಿಕ್ ಚಿಪ್ ಇರುವ ರಣಹದ್ದಿನ ಜಾತಿಯ ಬೃಹತ್ ಗಾತ್ರದ ಪಕ್ಷಿಯೊಂದು ಕಾರವಾರ ನಗರ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು ಕೆಲ ಕಾಲ ಗೂಢಚಾರಿಕೆ ಆತಂಕ ಮೂಡುವಂತಾಗಿತ್ತು.
ನಗರದ ಕೋಡಿಬಾಗ ನದಿವಾಡಾದಲ್ಲಿ ರಣಹದ್ದು ಕಾಣಿಸಿಕೊಂಡಿತ್ತು. ಈ ಪಕ್ಷಿಯ ಕಾಲುಗಳಿಗೆ ಪ್ರತ್ಯೇಕ ಬಣ್ಣದ ಇಂಗ್ಲೀಷ್ ಅಕ್ಷರ ಮತ್ತು ಸಂಖ್ಯೆ ಬರೆದಿರುವ ಪಟ್ಟಿ ಕಟ್ಟಲಾಗಿದೆ. ನೋಡಲು ರಣಹದ್ದಿನಂತೆ ಕಾಣುವ ಈ ಪಕ್ಷಿ ಜನವಸತಿ ಇರುವಲ್ಲಿಯೇ ಬಂದು ಇರುತ್ತದೆ. ಪಕ್ಷಿಯ ಬೆನ್ನ ಮೇಲೆ ಸೋಲಾರ ಪ್ಲೇಟ್ ನಂತೆ ಕಾಣುವ ಇಲೆಕ್ಟ್ರಾನಿಕ್ ಚಿಪ್ ಇದೆ. ಇದರಿಂದ ಇದು ಶತ್ರು ದೇಶದಿಂದ ಕಳುಹಿಸಿರುವ ಪಕ್ಷಿ ಇರಬಹುದೇ ಎಂಬ ಸಂಶಯ ಜನರಲ್ಲಿ ವ್ಯಕ್ತವಾಗಿತ್ತು.
ಅಲ್ಲದೆ ದೇಶದ ಪ್ರತಿಷ್ಠಿತ ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ ಇರುವುದರಿಂದ ಚಿಪ್ ಇರುವ ಪಕ್ಷಿ ಕಾಣಿಸಿಕೊಂಡಿರುವುದು ಸಹಜವಾಗಿ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.
ಆದರೆ ಈ ಬಗ್ಗೆ ಕಾರವಾರ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದು, ಜಿಪಿಎಸ್ ಟ್ರ್ಯಾಕರ್ ಮೇಲೆ ಮಹಾರಾಷ್ಟ್ರ ಅರಣ್ಯ ಇಲಾಖೆಯ ಹೆಸರು ಇದೆ. ಮಹಾರಾಷ್ಟ್ರ ಅರಣ್ಯ ಇಲಾಖೆಯಿಂದ ಸಂಶೋಧನೆಗೆ ಒಳಪಟ್ಟಿದ್ದ ಈ ರಣಹದ್ದು ಚಳಿಗಾಲದಲ್ಲಿ ವಲಸೆ ಬಂದಿದೆ ಎಂದು ಪರಿಶೀಲನೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಮಾಡಿದ್ದಾರೆ. ಬಳಿಕ ರಣಹದ್ದಿಗೆ ಏನೂ ಮಾಡದೆ ಹಾಗೆಯೇ ಹಾರಲು ಬಿಡಲಾಗಿದೆ.