ಆದೇಶ ಧಿಕ್ಕರಿಸಿ ನಿವೃತ್ತ ನೌಕರರ ಮರುನೇಮಕ: ಸಿಎಂಗೆ ಪರೋಕ್ಷ ಸಂದೇಶ
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಮುಖ್ಯಮಂತ್ರಿಗಳ ಆದೇಶವನ್ನು ಧಿಕ್ಕರಿಸಿ ಪರೋಕ್ಷ ಸಂದೇಶ ರವಾನಿಸಿದ್ದಾರಾ
ಬೆಂಗಳೂರು: ಇಂಧನ ಸಚಿವ ಕೆ.ಜೆ.ಜಾರ್ಜ್ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರಾ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶಕ್ಕೂ ಕ್ಯಾರೆ ಎನ್ನದ ಹೈಕಮಾಂಡ್ ಆಪ್ತ, ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು, ಕೆಪಿಟಿಸಿಎಲ್ ನಲ್ಲಿ 60 ನಿವೃತ್ತ ಎಂಜಿನಿಯರ್ ಗಳನ್ನು ನೇಮಕ ಮಾಡಿಕೊಂಡಿದ್ದಾರೆ.
ನಿವೃತ್ತ ನೌಕರರನ್ನು ನೇಮಿಸಿಕೊಂಡರೆ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗುವುದರ ಜೊತೆಗೆ ಕಾರ್ಯಕ್ಷಮತೆ, ಗುಣಮಟ್ಟ, ಉತ್ತರದಾಯಿತ್ವಕ್ಕೂ ಧಕ್ಕೆಯಾಗುತ್ತದೆ ಎನ್ನುವ ನಿಟ್ಟಿನಲ್ಲಿ ನಿವೃತ್ತರನ್ನು ಬಿಡುಗಡೆ ಮಾಡಬೇಕು, ಖಾಲಿ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಮುಖ್ಯ ಕಾರ್ಯದರ್ಶಿಗಳ ಮೂಲಕ ಸೂಚನೆ ನೀಡಿದ್ದರು.
ಆದರೆ ನಕಲಿ ಗಾಂಧಿ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಮುಖ್ಯಮಂತ್ರಿಗಳ ಆದೇಶವನ್ನು ಧಿಕ್ಕರಿಸಿ ₹80,000- ₹1 ಲಕ್ಷ ರೂಪಾಯಿ ಮಾಸಿಕ ವೇತನ ನಿಗದಿ ಮಾಡಿ 60 ನಿವೃತ್ತ ಎಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ ಎಂದಿದ್ದಾರೆ.