ಆಮಿಷಕ್ಕೆ ಒಳಗಾಗಬೇಡಿ, ಗೆಲುವು ನಮ್ಮದೇ
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಮೂರೂ ಅಭ್ಯರ್ಥಿಗಳ ಗೆಲುವು ದಾಖಲಿಸುವುದು ಖಚಿತ. ಹಾಗಾಗಿ ಯಾವುದೇ ಸಣ್ಣ ವ್ಯತ್ಯಾಸಗಳಿಗೂ ಅವಕಾಶ ಮಾಡಿಕೊಡದಂತೆ ಶಾಸಕರಿಗೆ ಸಿಎಂ ಹಾಗೂ ಡಿಸಿಎಂ ಕಿವಿಮಾತು ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಎಲ್ಲ ಶಾಸಕರಿಗೂ ಹಿತವಚನ ಹೇಳಿದರು. ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ನಮ್ಮ ಮೂವರೂ ಜಯಗಳಿಸಲಿದ್ದಾರೆ. ಈಗಾಗಲೇ ಹಂಚಿಕೆಯಾಗಿರುವಂತೆ ಶಾಸಕರು ಆಯಾ ಅಭ್ಯರ್ಥಿಯ ಪರವಾಗಿ ಮತಚಲಾಯಿಸಬೇಕು. ವಿಪಕ್ಷಗಳು ಬೇಕೆಂದೇ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸಿವೆ. ಮತದಾನದ ಬಳಿಕ ಅವರು ಭ್ರಮನಿರಸನಕ್ಕೆ ಒಳಗಾಗಲಿದ್ದಾರೆ. ಹಾಗಾಗಿ ನಮ್ಮ ಶಾಸಕರು ಯಾವುದೇ ಆಮಿಷಕ್ಕೂ ಒಳಗಾಗದೆ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳೋಣ ಎಂದು ಇಬ್ಬರೂ ನಾಯಕರು ತಿಳಿಹೇಳಿದ್ದಾರೆ. ಅಡ್ಡಮತದಾನದ ಆತಂಕ ಎದುರಾಗಿರುವ ಕಾರಣಕ್ಕೆ ಆಡಳಿತಪಕ್ಷದ ಎಲ್ಲಾ ಶಾಸಕರಿಗೂ ಸಂಜೆಯೇ ಲಗೇಜ್ ಸಮೇತ ಹೊಟೇಲ್‌ಗೆ ಬರುವಂತೆ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಸಂದೇಶ ನೀಡಿದ್ದರು. ಜೊತೆಗೆ ಶಾಸಕರಿಗೆ ವಿಪ್ ಕೂಡಾ ನೀಡಲಾಗಿದೆ. ಮಂಗಳವಾರ ಬೆಳಿಗ್ಗೆ ಎಲ್ಲಾ ಶಾಸಕರು ಹೋಟೆಲ್‌ನಿಂದ ಬಸ್‌ನಲ್ಲಿ ಮತದಾನ ನಡೆಯುವ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಶಾಸಕಾಂಗ ಸಭೆಯಲ್ಲಿ ಮತದಾನ ಮಾಡುವ ಬಗೆಹೇಗೆ ಎನ್ನುವ ಬಗ್ಗೆಯೂ ಕೆಲವು ಹಿರಿಯ ಸಚಿವರು ಶಾಸಕರಿಗೆ ಹೇಳಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಭ್ಯರ್ಥಿಗಳಾದ ಅಜಯ್ ಮಾಕನ್, ಜಿ.ಸಿ.ಚಂದ್ರಶೇಖರ್ ಹಾಗೂ ನಾಸಿರ್ ಹುಸೇನ್ ಸಭೆಯಲ್ಲಿ ಖುದ್ದಾಗಿ ಶಾಸಕರಿಗೆ ತಮ್ಮಪರ ಮಯಚಲಾಯಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಒಬ್ಬೊಬ್ಬ ಅಭ್ಯರ್ಥಿಗೆ ಹಂಚಕೆ ಮಾಡಿರುವ ಮತಗಳಲ್ಲಿ ಯಾವುದೇ ವ್ಯತ್ಯಾಸ ಆಗಬಾರದು. ಪಕ್ಷೇತರರೂ ಕೂಡಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಭರವಸೆ ಕೊಟ್ಟಿದ್ದಾರೆ. ರಾಜ್ಯದ ಜನತೆ ೧೩೫ ಶಾಸಕರನ್ನು ಆರಿಸುವ ಮೂಲಕ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇದಕ್ಕೆ ಚ್ಯುತಿ ಬರದಂತೆ ರಾಜ್ಯಸಭೆ ಚುನಾವಣೆಯನ್ನು ಗೆಲುವು ದಾಖಲಿಸಿ ಮುಂಬರು ಲೋಕಸಭಾ ಚುನಾವಣೆಯಲ್ಲಿಯೂ ೨೦ಕ್ಕೂ ಅಧಿಕ ಸಂಸದರನ್ನು ಗೆಲ್ಲಿಸಲು ಪ್ರಯತ್ನಿಸೋಣ ಎಂದು ಮುಖಂಡರು ಶಾಸಕರಿಗೆ ಸಲಹೆ ನೀಡಿದ್ದಾಗಿ ತಿಳಿದುಬಂದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಉಪಸ್ಥಿತರಿದ್ದರು.