ಆಯಾ ರಾಜ್ಯಗಳಿಗೆ ಬಿಜೆಪಿಯವರ ಕೊಡುಗೆ ಏನು?
ಕಾಂಗ್ರೆಸ್‌ನಿಂದ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ ಜಾರಿ
ಕಲಬುರಗಿ: ಮಹಾರಾಷ್ಟ್ರ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಉತ್ತಮ ವಾತಾವರಣ ಇದೆ. ಕರ್ನಾಟಕ ಮಾದರಿಯ ಪಂಚ ಗ್ಯಾರಂಟಿ ಯೋಜನೆಗಳನ್ನು ಇತರೆ ರಾಜ್ಯಗಳಲ್ಲೂ ಜಾರಿ ಮಾಡುವ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸ್ಪಷ್ಟ ಭರವಸೆ ಕೊಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಗುರುವಾರ ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದ ಹಿನ್ನೆಲೆಯಲ್ಲಿ ನಮ್ಮ ರಾಜ್ಯಕ್ಕೆ ಏನು ಕೊಡುಗೆ ನೀಡುತ್ತಿರಿ? ಎಂದು ಆಯಾ ರಾಜ್ಯದ ಮತದಾರರು ಬಿಜೆಪಿಯವರಿಗೆ ಪ್ರಶ್ನಿಸುತ್ತಿದ್ದಾರೆ. ಆದರೆ ಸಂವಿಧಾನದ ೩೭೦ ಕಲಂ ಜಾರಿ ಬಗ್ಗೆ ಮಾತನಾಡುವ ಬಿಜೆಪಿಯವರು, ಆಯಾ ರಾಜ್ಯಕ್ಕೆ ಕೊಡುಗೆಗಳ ಬಗ್ಗೆಯೂ ತಿಳಿಸಬೇಕಲ್ಲವೇ? ಎಂದು ಮರು ಪ್ರಶ್ನಿಸಿದರು. ಜಿಎಸ್‌ಟಿ, ರೈತರಿಗೆ ಕೃಷಿ ಉಪಕರಣ, ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಹೀಗೆ ಜನರಿಗೆ ಲಾಭವಾಗುವ ಯೋಜನೆಗಳ ಬಗ್ಗೆ ಸರ್ಕಾರದ ಬಳಿ ಉತ್ತರವೂ ಇಲ್ಲ, ಕೇಂದ್ರ ಎನ್‌ಡಿಎ ಸರ್ಕಾರ ಮೌನವಹಿಸಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಲಾಭವಾಗುವ ದೃಷ್ಟಿಯಿಂದ ಕರ್ನಾಟಕ ಮಾದರಿಯ ಪಂಚ ಗ್ಯಾರಂಟಿಗಳ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ನುಡಿದಂತೆ ನಡೆಯುತ್ತೇವೆ ಎಂದು ಅಭಯ ನೀಡಿದರು.
ಶುಕ್ರವಾರ ಜಾರ್ಖಂಡ ಪ್ರವಾಸ: ಜಾರ್ಖಂಡ್ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಶುಕ್ರವಾರ ಜಾರ್ಖಂಡ್‌ಗೆ ತೆರಳಿದ್ದೇನೆ. ಈಗಾಗಲೆ ಎರಡು ಬಾರಿ ಪ್ರವಾಸ ಕೈಗೊಂಡು ಒಂದು ಹಂತದ ಪ್ರಚಾರ ಮಾಡಲಾಗಿದೆ. ಸದ್ಯದ ಮಟ್ಟಿಗೆ ಆ ರಾಜ್ಯದಲ್ಲೂ ಕಾಂಗ್ರೆಸ್ ಅಲೆ ಎದ್ದಿದೆ ಎಂದರು.
ಅದಾನಿ ಮನೆಯಲ್ಲಿ ಸರ್ಕಾರ ರಚನೆ ಮಾತುಕತೆ: ಉದ್ದಿಮೆದಾರ ಗೌತಮ ಅದಾನಿ ಅವರ ಮನೆಯಲ್ಲಿ ಮಹಾ ಸರ್ಕಾರ ರಚನೆ ಬಗ್ಗೆ ಅಜಿತ್ ಪವಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಅದಾನಿ ಬಗ್ಗೆ ಮಾತಾಡಿದ್ದರೆ ಪದೇ ಪದೇ ಮಾತಾಡುತ್ತಿರಿ ಎಂದು ಗೊಗ್ಗೆರೆಯುತ್ತಾರೆ. ಗೌತಮ ಅದಾನಿ ದೇಶ ಲೂಟಿ ಮಾಡುತ್ತಿದ್ದಾನೆ. ರಿಯಾಕ್ಷನರಿ ಸರ್ಕಾರಗಳಿಗೆ ಬೆಂಬಲಿಸುತ್ತಿರುತ್ತಾನೆ. ಹೀಗಾಗಿ, ಯಾವ ಪಕ್ಷ ತತ್ವ ಸಿದ್ಧಾಂತ ಮೇಲೆ ನಿಂತಿರುವುದಕ್ಕೆ ಅದಕ್ಕೆ ಏನು ಸಂಬಂಧ ಇಲ್ಲ. ಧರ್ಮದ ದೃಷ್ಟಿಯಿಂದ ಒಗ್ಗೂಡಿಸಿ, ಬೆಂಬಲಿಸುವುದಾಗಿದೆ. ಹೀಗಾಗಿ ಕ್ರೋನಿ ಕ್ಯಾಪಿಟಲ್‌ಗೆ ಬೆಂಬಲಿಸುವ ಮೂಲಕ ಹಣ ಪಡೆದು ಚುನಾವಣೆ ನಡೆಸುತ್ತಾರೆ ಎಂದು ಟೀಕಿಸಿದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಸಂಪತ್ತು ಇದ್ದವರಿಗೆ ಬೆಳೆಸಲು ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯೋಗಿ ಹೇಳಿಕೆಗೆ ಖರ್ಗೆ ನಕಾರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೇಳಿಕೆ ಬಗ್ಗೆ ಈಗಾಗಲೇ ಉತ್ತರಿಸಿದ್ದೇನೆ. ಈಗ ಮತ್ತೆ ಆ ಬಗ್ಗೆ ಏನೇನು ಹೇಳಲಿಕ್ಕಾಗದು. ಕಾಂಗ್ರೆಸ್ ನಲ್ಲಿ ಮೀಸಲಾತಿ ಗೊಂದಲದ ಪ್ರಧಾನಿ ಮೋದಿ ಹೇಳಿಕೆ ವಿಚಾರ ಬಗ್ಗೆಯೂ ಪ್ರಸ್ತಾಪಿಸಿದ ಖರ್ಗೆ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಸಂವಿಧಾನ ಒಪ್ಪದೆ ಸಂವಿಧಾನ ಪ್ರತಿ ಸುಟ್ಟು ಹಾಕಿದ್ದಾರೆ. ಸಂವಿಧಾನ ಜಾರಿ ಬಂದ ಮೇಲೂ ಬಿಜೆಪಿಯವರು ಸಂವಿಧಾನದ ಜೊತೆಗೆ ತಿರಂಗಾ ಧ್ವಜಯೂ ಒಪ್ಪುತ್ತಿಲ್ಲ.