For the best experience, open
https://m.samyuktakarnataka.in
on your mobile browser.

ಆರ್‌ಟಿಓ ಕೆಲಸ ಆನೆಗಳೇಕೆ ಮಾಡ್ತಾ ಇವೆ?

04:09 AM Jan 29, 2025 IST | Samyukta Karnataka
ಆರ್‌ಟಿಓ ಕೆಲಸ ಆನೆಗಳೇಕೆ ಮಾಡ್ತಾ ಇವೆ

ವಿಶ್ವ ದಿನ ಪತ್ರಿಕೆ ನೋಡಿ, ಬೇಸರ ಮಾಡಿಕೊಂಡು,
“ಛೇ ಛೇ ಛೇ” ಎಂದ.
“ಯಾಕ್ ವಿಶ್ವ ಮೂರ್ ಛೇ? ನಿನ್ನ ದಿನ ಭವಿಷ್ಯ ಚೆನ್ನಾಗಿಲ್ವಾ?” ಎಂದು ಕೇಳಿದೆ.
“ನನ್ನ ದಿನ ಭವಿಷ್ಯ ವಿಶಾಲು ಕೈಲಿದೆ, ಆದರೆ ನಮ್ಮ ರಾಜ್ಯದ ಭವಿಷ್ಯನೇ ಚೆನ್ನಾಗಿಲ್ಲ!” ಎಂದು ಸಾರಸಗಟಾಗಿ ಹೇಳಿದ. ವಿಶಾಲು ಗಂಡನನ್ನು ಕೇಳಿದಳು.
“ರೀ, ಏನ್ ಆಯಿತು ತೊಂದರೆ ಈಗ?”
“ಇನ್ ಏನ್ ಆಗಬೇಕು ವಿಶಾಲು, ಮೈಸೂರಿಂದ ಹೊರಟಿದ್ದ ಕಾರ್‌ನ ಮುಸುಕು ಧಾರಿಗಳು ದಾರೀಲೇ ನಿಲ್ಸಿ ಹಾಡುಹಗಲೇ ದರೋಡೆ ಮಾಡಿದ್ದಾರೆ, ಈ ಥರ ಯಾವತ್ತೂ ಆಗರ‍್ಲಿಲ್ಲ” ಎಂದ.
“ಹೌದೌದು ನಾನು ಟಿ.ವೀ.ಲಿ ನೋಡಿದೆ, ಬಹಳ ಭಯಂಕರವಾಗಿತ್ತು ಆ ದೃಶ್ಯ” ಎಂದೆ.
“ಬೀದರ್‌ನಲ್ಲಿ ಬ್ಯಾಂಕ್ ಹಣದ ಲೂಟಿ, ಮಂಗಳೂರಿನಲ್ಲಿ ಚಿನ್ನಾಭರಣ ಲೂಟಿ, ಇಂತಹ ಸುದ್ದಿ ಪ್ರತಿನಿತ್ಯ ಬರ‍್ತಾ ಇದ್ಯಲ್ಲ, ಪೊಲೀಸ್ ಇಲಾಖೆ ನಿದ್ದೆ ಮಾಡ್ತಿದೆಯೋ ಅಥವಾ ಮಂತ್ರಿಗಳಿಗೆ ರಕ್ಷಣೆ ಕೊಡೋದು ಮಾತ್ರ ತಮ್ಮ ಕರ್ತವ್ಯ ಅಂತ ತಿಳಿದಿದೆಯೋ?” ಎಂದು ವಿಶ್ವ ಕೇಳಿದ.
“ಇದನ್ನೆಲ್ಲ ನೋಡ್ತಾ ಇರೋ ಕಾಡು ಪ್ರಾಣಿಗಳು ಈ ಕೃತ್ಯಗಳಿಂದ ಸ್ಫೂರ್ತಿ ಪಡೆದು ಅವುಗಳೂ ಕೂಡ ಲೂಠಿಗಿಳಿದಿವೆ” ಎಂಬ ಹೊಸ ವಿಚಾರವನ್ನು ಚರ್ಚೆಗೆ ತಂದೆ.
“ಉದಾಹರಣೆ ಕೊಡಿ” ವಿಶಾಲು ಕೇಳಿದಳು.
“ಆನೆಗಳು ಲಾರಿಗಳನ್ನು ತಡೆದು ತರಕಾರಿ ಮೂಟೆ ಇದ್ರೆ ಲೂಠಿ ಮಾಡ್ತಾ ಇವೆ” ಎಂದಾಗ ವಿಶ್ವನಿಗೆ ಆಶ್ಚರ್ಯವಾಯ್ತು.
“ನಾನು ನಂಬೊಲ್ಲ, ಆನೆ ಹೆಂಗ್ ಲೂಠಿ ಮಾಡುತ್ತೆ?” ಎಂದ ವಿಶ್ವನಿಗೆ ಪತ್ರಿಕೆಯಲ್ಲಿ ಬಂದಿದ್ದ ಸುದ್ದಿ ತೋರಿಸಿದೆ.
“ಬಂಡೀಪುರದ ಹತ್ತಿರ ಆನೆ ದಾಳಿ ಆಗ್ತಿರುತ್ತೆ, ತರಕಾರಿ ತುಂಬಿರೋ ಲಾರಿಗಳು ಆ ರಸ್ತೇಲಿ ಬಂದ್ರೆ ಅವಕ್ಕೆ ವಾಸನೆಯಿಂದ ಗೊತ್ತಾಗುತ್ತೆ, ಬಂದು ಲಾರಿನ ಅಟ್ಯಾಕ್ ಮಾಡಿ ತರಕಾರಿ ಮೂಟೇನ ಕಸಿದುಕೊಂಡು ಹೋಗಿವೆ” ಎಂದೆ.
“ಕಾಡಲ್ಲಿ ಅವಕ್ಕೆ ತಿನ್ನೋಕೆ ಏನೂ ಸಿಗ್ಲಿಲ್ಲಾಂದ್ರೆ ಮತ್ತೇನ್ ಮಾಡುತ್ತೆ? ಬಿಸಿಲು ಕಾಲ ಶುರುವಾಯ್ತು, ಅವಕ್ಕೂ ಹಸಿವು ನೀರಡಿಕೆ ಆಗುತ್ತಲ್ಲ. ಆನೆ ಓಡಾಡೋ ಜಾಗದಲ್ಲಿ ರೆಸಾರ್ಟ್‌ಗಳು ಕಟ್ಟೋಕೆ ರ‍್ಮಿಷನ್ ಕೊಡ್ತಾರೆ!” ಎಂದು ವಿಶಾಲು ಆನೆ ಪರ ವಕಾಲತ್ತು ವಹಿಸಿದಳು.
“ಚಾಮರಾಜನಗರ ಜಿಲ್ಲೇಲಿ ಸಫಾರಿ ಕೇಂದ್ರ ಇದೆ, ಅಲ್ಲಿ ನನ್ನ ಫ್ರೆಂಡ್ ಜೀಪ್‌ನ ಅಟ್ಯಾಕ್ ಮಾಡಿದೆ ಪುಂಡ ಆನೆ” ಎಂದೆ.
“ಜೀಪ್‌ನ ಅಟ್ಯಾಕ್ ಮಾಡಿ ನಗ ಕೇಳ್ತಾ ನಾಣ್ಯ ಕೇಳ್ತಾ? ಆಹಾರ ಕೊಟ್ಟಿದ್ರೆ ಸುಮ್ಮನಾಗಿರೋದು” ಎಂದಳು ವಿಶಾಲು.
ಘೀಳಿಡ್ತಾ ಬಿಸ್ಕೆಟ್ ಕೊಡಿ, ನೀರು ಕೊಡಿ ಅಂತು, ಕೊಟ್ಮೇಲೆ ಕಾಡಿಗೆ ಹೋಯ್ತಂತೆ” ಎಂದು ಮಸಾಲೆ ಹಾಕಿ ಹೇಳಿದೆ.
“ಅಷ್ಟು ದೊಡ್ಡ ಶರೀರಕ್ಕೆ ಇಷ್ಟು ಪುಟ್ಟ ಬಿಸ್ಕೆಟ್ ಸಾಕಾ? ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಂತ ಗಾದೆ ಇದೆ” ಎಂದಳು ವಿಶಾಲು.
“ಬಿಸ್ಕತ್ತು, ರಸ್ಕು ಅಂತ ಏನೋ ಒಂದು ಹೊಸ ವೆರೈಟಿ ಸಿಗುತ್ತಲ್ಲ, ಅದನ್ನೇ ತಿನ್ನುತ್ತೆ”.
“ಆನೆಗಳಿಗೆ ಎಂದಾದರೂ ಸಿಟ್ಟು ಬಂದ್ರೆ ಮನುಷ್ಯನ್ನ ಅಟ್ಟಿಸಿಕೊಂಡು ಹೋಗುತ್ತೆ,… ಅದನ್ನ ಕೇಳಿದ್ದೀನಿ… ಆದ್ರೆ ಹೋಗ್ತಾ ಇರೋ ತರಕಾರಿ ಲಾರಿನ ನಿಲ್ಲಿಸಿ ಅಟ್ಯಾಕ್ ಮಾಡೋದನ್ನ ಎಲ್ಲಿಂದ ಕಲೀತು” ಎಂದು ವಿಶ್ವ ಆಲೋಚಿಸಿದ.
“ಆರ್.ಟಿ.ಓ. ಅಧಿಕಾರಿಗಳು ಲಾರಿಗಳ್ನ ನಿಲ್ಲಿಸಿ ತನಿಖೆ ಮಾಡೋದನ್ನ ನೋಡಿಕೊಂಡಿರುತ್ತೆ, ಅವರು ಮಾಡೋ ಕೆಲ್ಸಾನಾ ಆನೆಗಳು ಮಾಡ್ತಾ ಇವೆ ಅಷ್ಟೆ, ಯಾರೋ ಒಬ್ರು ಲೂಟಿ ಮಾಡಿದ್ದು ನೋಡಿದ ಮೇಲೆ ಆನೆಗೂ ಐಡಿಯಾ ಬಂದಿರುತ್ತೆ, ಒಟ್ನಲ್ಲಿ ಕಾಡು ರಸ್ತೆಗಳಲ್ಲಿ ಕಾರುಗಳಲ್ಲಿ ಹೋಗೋದು ಸಹ ಅಪಾಯ ಆಗೋ ಕಾಲ ಬಂದಿದೆ” ಎಂದೆ.
“ಆನೇನ ಬೈಬೇಡಿ, ಜನರಿಗಿಂತ ದೊಡ್ಡ ಕಳ್ಳರು ಯಾರಿದ್ದಾರೆ?” ಎಂದು ವಿಶಾಲು ದಬಾಯಿಸಿದಳು.
“ಬೇರೆ ದೇಶಗಳಿಂದ ಬಂದ ಜನ ಕರ್ನಾಟಕದಲ್ಲಿ ಸೆಟಲ್ ಆಗ್ತಿದ್ದಾರೆ, ಕ್ರೈಂ ಮಾಡಿ ಸಿಕ್ಕಿ ಬಿದ್ದವರಲ್ಲಿ ಹೆಚ್ಚಿನವರು ಬಾಂಗ್ಲಾ ಪ್ರಜೆಗಳು, ಮೊನ್ನೆ ಸೈಫ್ ಆಲಿ ಖಾನ್‌ನ ಕೊಲೆ ಮಾಡೋಕೆ ಹೋದವನೂ ಕೂಡ ಬಾಂಗ್ಲಾದಿಂದ ಬಂದಿದ್ದವ, ಅವ್ನು ಭಾರತಕ್ಕೆ ಹೆಂಗ್ ಬಂದ? ಮುಂಬೈನಲ್ಲಿ ಹೆಂಗ್ ಸೆಟಲ್ ಆದ? ಯಾರೂ ಕೇಳಲಿಲ್ಲ, ನುಸುಳಿ ಬಂದು ದರೋಡೆ ಮಾಡೋದನ್ನ ಯಾಕೆ ನಾವು ತಡೀತಿಲ್ಲ?” ಎಂದೆ.
“ಇದಕ್ಕೆ ಸರ್ಕಾರದ ಕುಮ್ಮಕ್ಕು ಇದೆ” ಎಂದ ವಿಶ್ವ.
“ಇಲ್ಲದೇ ಇರುತ್ತಾ, ಹ್ಯಾಗೋ ಬಾಂಗ್ಲಾದಿಂದ ತಪ್ಪಿಸಿಕೊಂಡು ಬಂದು ಬಿಡುತ್ತಾರೆ, ಬೆಂಗಳೂರಿನಲ್ಲಿ ಅಂತಹ ಲಕ್ಷಾಂತರ ಜನ ಇದ್ದಾರೆ, ಅವರನ್ನ ವಾಪಸ್ ಕಳಿಸೊಲ್ಲ, ಅವರಿಗೆ ಓಟರ್ ಐಡಿ ಮಾಡಿಸಿ ಕೊಡ್ತೀವಿ, ರೇಷನ್ ಕಾರ್ಡ್ ಮಾಡಿಸಿ ಕೊಡ್ತೀವಿ, ಓಟ್‌ಗೋಸ್ಕರವಾಗಿ ನಾವು ಏನ್ ಮಾಡೋಕ್ಕೂ ಸಿದ್ಧ, ರಾಜೀವ್ ಗಾಂಧೀನ ಕೊಂದ ಮೂವರು ಕೊಲೆಗಡುಕರಿಗೆ ಕೋಣನಕುಂಟೇಲಿ ಬಾಡಿಗೆ ಮನೆ ಕೊಟ್ಟ ಉದಾರಿಗಳು ನಾವು” ಎಂದೆ.
“ತಡೆಯೋದು ನಮ್ಮ ಕೈಲಿ ಸಾಧ್ಯ ಇಲ್ಲ, ಇದಕ್ಕೆ ಬಹಳ ಕಠಿಣವಾದ ಕಾನೂನು ತರಬೇಕು. ಅರೆಸ್ಟ್ ಆದವರು ಮೂರು ತಿಂಗಳಲ್ಲಿ ಜಾಮೀನಿನ ಮೇಲೆ ಆಚೆಗೆ ಬರಬಾರದು, ವರ್ಷದಲ್ಲಿ ಕೇಸ್ ಮುಗೀಬೇಕು” ಎಂದೆ.
“ಹ್ಯಾಗೆ ಸಾಧ್ಯ” ಎಂದಳು ವಿಶಾಲು.
“ಬೇರೆ ದೇಶದಿಂದ ಕದ್ದು ಓಡಿ ಬಂದಿರೋ ಪ್ರಜೆ ಅಂತ ತಿಳಿದಾಗ ಅಂತವರನ್ನ ಇಲ್ಲಿರೋಕೆ ಬಿಡಬಾರದು, ನಾವು ಪೊಲೀಸರಿಗೆ ಇನ್ಫಾರ್ಮ್ ಮಾಡಬೇಕು ಅದು ನಮ್ಮ ಜವಾಬ್ದಾರಿ” ಎಂದೆ.
“ಆದರೆ ಓಟ್ ರಾಜಕೀಯ ಇದ್ಯಲ್ಲ” ಎಂದಳು ವಿಶಾಲು.
“ಓಟಿಗೋಸ್ಕರ ಅವನಿಗೆ ಎಲ್ಲಾ ಸೌಲಭ್ಯಾನೂ ಮಾಡ್ತಿದ್ದರೆ ಭಾರತೀಯರ ಗತಿ ಏನು? ಇಂತಹ ಅದೆಷ್ಟು ಲಕ್ಷ ಜನ ಇದ್ದಾರೆ ಗೊತ್ತಾ? ಬೇರೆ ಕಡೆಯಿಂದ ಹೇಗೋ ಬಂದರೆ. ಮಾದಕ ವಸ್ತುಗಳ ವ್ಯಾಪಾರದಲ್ಲಿ ಆಫ್ರಿಕದವರೇ ಜಾಸ್ತಿ ಇದ್ದಾರೆ, ಅವರೇ ಡ್ರಗ್ಸ್ ತರುತ್ತಾರೆ, ಮರ‍್ತಾರೆ, ಓದೋಕೆ ಬಂದು ಸೆಟಲ್ ಆಗಿ, ವೀಸಾ ಎಕ್ಸ್ಪೈರ್ ಆದ ಮೇಲೂ ರಾಜಾರೋಷವಾಗಿ ಬರ‍್ತಾರೆ. ನಮ್ಮ ಹುಡುರ‍್ನ ಕೆಡಿಸ್ತಾರೆ” ಎಂದೆ.
“ನಮ್ಮ ಕತೆ ಹೇಳಿ ಮುಂದೇನು ಮಾಡಬೇಕು?” ಎಂದು ವಿಶಾಲು ಕೇಳಿದಳು.
“ನಾವು ಕಾರ್‌ನಲ್ಲಿ ಓಡಾಡುವಾಗ ಹಿಂದೊಂದು ಮುಂದೊಂದು ಕಾರ್‌ ಸೆಕ್ಯೂರಿಟಿ ವೆಹಿಕಲ್ ಥರ ಇಟ್ಕೋಬೇಕು, ಮಿನಿಸ್ಟರ್‌ಗಳು ಮಾಡ್ತಾರಲ್ಲ ಹಾಗೆ! ಒಂಟಿ ಕಾರಲ್ಲಿ ಓಡಾಡಿದರೆ ಕಷ್ಟ, ಕಾಡಿನ ರಸ್ತೆಯುಲ್ಲಿ ಓಡಾಡುವಾಗ ಚಕ್ಲಿ, ಕೋಡ್ಬಳೆ ಇವನ್ನೆಲ್ಲ ಕಾರಲ್ಲಿ ಇಟ್ಕೋಬಾರದು, ಘಂ ಅಂತ ಪರಿಮಳ ಬಂದ್ರೆ ಕೋಡ್ಬಳೆ ಆಸೆಗೆ ಕಾಡು ಪ್ರಾಣಿಗಳು ಬಂದು ಯಾವಾಗ ಅಟ್ಯಾಕ್ ಮಾಡುತ್ತೋ ಯಾರಿಗೆ ಗೊತ್ತು?” ಎಂದಾಗ ವಿಶಾಲು ಒಪ್ಪಿದಳು.
“ಕುರುಕಲು ತಿಂಡಿಗಳನ್ನ ನಮ್ಮ ಯಜಮಾನರಿಗೆ ಸಿಗದಂತೆ ಮುಚ್ಚಿಡ್ತಿದ್ದೆ, ಇನ್ನು ಮುಂದೆ ಪ್ರವಾಸ ಮಾಡುವಾಗ ಕಾಡು ಪ್ರಾಣಿಗಳಿಗೂ ಸಿಗದಂತೆ ಎಚ್ಚರ ವಹಿಸಬೇಕಾಗುತ್ತೆ” ಎಂದಳು.