For the best experience, open
https://m.samyuktakarnataka.in
on your mobile browser.

ಆಸಿಡ್ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ೪ ಲಕ್ಷ ಪರಿಹಾರ

06:27 PM Mar 05, 2024 IST | Samyukta Karnataka
ಆಸಿಡ್ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ೪ ಲಕ್ಷ ಪರಿಹಾರ

ಮಂಗಳೂರು: ಕಡಬದ ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಾಗಿ ೪ ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.
ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಮಕ್ಕಳಲ್ಲಿ ಮನೋಧೈರ್ಯ ಜಾಸ್ತಿ ಇದೆ. ಒಮ್ಮೆ ಕನ್ನಡ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿಯರು ಮತ್ತೆ ಕನ್ನಡ ಪರೀಕ್ಷೆ ಬರೆಯಬೇಕಾ ಅಂತಾ ಪ್ರಶ್ನಿಸಿದ್ದಾರೆ. ಮಕ್ಕಳಿಗೆ ಬಾಕಿ ಉಳಿದ ಪರೀಕ್ಷೆ ಮಾಡುವ ಬಗ್ಗೆ ಶಿಕ್ಷಣ ಸಚಿವರ ಬಳಿ ಮಾತನಾಡುತ್ತೇವೆ ಎಂದರು.
ಘಟನೆಯಲ್ಲಿ ಒಬ್ಬಳು ವಿದ್ಯಾರ್ಥಿನಿಗೆ ಹೆಚ್ಚು ಗಾಯಗಳಾಗಿದ್ದು, ಇನ್ನಿಬ್ಬರಿಗೆ ಕಡಿಮೆ ಗಾಯಗಳಾಗಿವೆ. ಇಬ್ಬರಿಗೆ ಪ್ಲಾಸ್ಟಿಕ್ ಸರ್ಜರಿ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂದಿನ ಎರಡು ವಾರದ ಚಿಕಿತ್ಸೆ ಬಳಿಕ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ. ಪ್ಲಾಸ್ಟಿಕ್ ಸರ್ಜರಿಗೆ ೨೦ ಲಕ್ಷದ ತನಕವೂ ಚಿಕಿತ್ಸಾ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು.
ಆರೋಪಿ ಆಸಿಡ್‌ನ್ನು ಪ್ಲಾಸ್ಟಿಕ್ ಬಾಟಲ್‌ನಲ್ಲಿ ತಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆಸಿಡ್ ತೀವ್ರ ಪ್ರಮಾಣದ್ದು ಆಗಿದ್ದರೆ ದೊಡ್ಡ ಮಟ್ಟದ ಗಾಯಗಳಾಗುತ್ತಿತ್ತು. ಎಲ್ಲಾ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು.